ಕಾವ್ಯ ಸಂಗಾತಿ
ಕನಸಿಲ್ಲದ ಕವನ
ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ
ನಾನು ಕನಸಿಲ್ಲದ ಕವನ
ಮನಸಿಲ್ಲದೆ ಬರೆಯುವೆ
ಎಂದಾಗ ನಕ್ಕವು ಭಾವನೆಗಳು
ಮುನಿಸಿಗೊಂಡ ಬಿಳಿ ಕಾಗದ
ಹಾರಾಡಿತು ಗಾಳಿಯಲಿ
ಮನ್ನಿಸಲೆಂತು ಲೇಖನಿಯನು
ಬುದ್ಧಿ ಹೇಳಿತು ಬೇಡ ಒತ್ತಡ
ನನಸಾಗದ ಕನಸುಗಳು ಬೇಕೆ
ಸುಮ್ಮನೆ ಗೀಚುತ ಹೋಗೆಂದಿತು
ಓಡೋಡಿ ಬಂದವು ಶಬ್ದಗಳು
ನಾ ಮುಂದು ತಾ ಮುಂದೆಂದು
ಮುಖ ನೋಡಿ ಮೌನವಾದವು
ಬಿಳಿ ಹಾಳೆಯ ಮೇಲೆ ಗೀಚಿದೆ
ಪಕ ಪಕನೆ ನಕ್ಕವು ಅಕ್ಷರಗಳು
ಮಿಡುಕಿದೆ ಸಿಡುಕಿದೆ ಶೀರ್ಷಿಕೆಗೆ
ಸುಂದರ ಕನಸುಗಳ ಮರೆಸಿ
ಕವಿ ಮನದ ಸಂವೇದನೆ ಕರೆಸಿ
ಹರಸಿ ಬರೆಸಿತು ಕನಸಿಲ್ಲದ ಕವನ-
ಪ್ರತಿ ಕವನವೇ..ಒಂದು ಭಾವಗನಸೂ….