ಕಾವ್ಯ ಸಂಗಾತಿ
ಗಜಲ್
ಹಮೀದಾ ಬೇಗಂ ದೇಸಾಯಿ
ಕತ್ತರಿಸಿ ಬಿಟ್ಟೆಯಲ್ಲಾ ಕನಸಿನ ರೆಕ್ಕೆಗಳನು ಹಾರಲಿ ಹೇಗೆ ಹೇಳು
ಚೂರಾಗಿ ಒಡೆದೆಯಲ್ಲಾ ಮನಸಿನ ಕನ್ನಡಿಯನು ನೋಡಲಿ ಹೇಗೆ ಹೇಳು
ಒಲವಿನ ವೀಣೆಯ ಶ್ರುತಿ ಗೊಳಿಸಿ ಎದೆಯ ಗೂಡಲಿ ಇಟ್ಟೆ ಏಕೆ
ನಿರ್ದಯದಿ ಮುರಿದೆಯಲ್ಲಾ ಭಾವದ ತಂತಿಗಳನು ಹಾಡಲಿ ಹೇಗೆ ಹೇಳು
ಉದುರಿದ ರಾತ್ರಿಯ ತುಣುಕುಗಳನು ಜೋಡಿಸಿ ಕಾಪಿಟ್ಟೆ ಸಂಭ್ರಮಿಸಿ ಖುಷಿಯಲಿ
ಭರವಸೆಯ ಸೀಳಿದೆಯಲ್ಲಾ ಬೆಳಕಿನ ದಾರಿಯ ಸೇರಲಿ ಹೇಗೆ ಹೇಳು
ಸುರಿಸುತಿದೆ ಬೆಂಕಿ ಮಳೆ ಯನು ಹುಣ್ಣಿಮೆಯ ಬೆಳದಿಂಗಳು ಅಣಕಿಸಿ ನನ್ನನು
ಹರಿತಕತ್ತಿ ಆಡಿಸಿದೆಯಲ್ಲಾ ಕೆದರಿ ಗಾಯಗಳನು ತಾಳಲಿ ಹೇಗೆ ಹೇಳು
ಮೋಜು ನೋಡಿದೆ ನಗುತ ನೀನು ಪ್ರೀತಿಯ ಮುಖವಾಡ ಧರಿಸಿ
ಬೇಗಂಳ ಬೇಯಿಸಿ ದೆಯಲ್ಲಾ ಉರಿಸಿ ನೋವುಗಳನು ಬದುಕಲಿ ಹೇಗೆ ಹೇಳು
ವಾಹ್ ವಾಹ್, ಬಹುತ್ ಖೂಬ್ ಜೀ…..