ಅಷನುವಾದ ಸಂಗಾತಿ
Malayalam poem of #Shehrazad
Kannada translation by Therly N Shekhar
(ಇತ್ತೀಚೆಗೆ ಕೇರಳದಲ್ಲಿ ನಡೆದ ರಾಜ್ಯಮಟ್ಟದ “ಶಾಲಾ ಕಲೋತ್ಸವ”ದಲ್ಲಿ ಏರ್ಪಡಿಸಲಾಗಿದ್ದ ”ಕಾವ್ಯ ರಚನಾ ಸ್ಪರ್ಧೆ”ಯಲ್ಲಿ ಇಡೀ ರಾಜ್ಯದಲ್ಲೇ ‘A’ ಶ್ರೇಣಿಯೊಂದಿಗೆ ಪ್ರಥಮಸ್ಥಾನ ಗಳಿಸಿದ ಕು. ಷೆಹ್ರಜ಼ದ್(Shehrazad)
ಎಂಬ ಹನ್ನೊಂದನೇ ತರಗತಿಯ ವಿದ್ಯಾರ್ಥಿನಿ (A. V.
HIGHER SECONDARY SCHOOL, PONNANI, Malappuram District, Kerala) ಬರೆದ ”ಪಾಠಂ
ಒನ್ನು ಎಳಿಮ”ಎಂಬ ಮೂಲ ಮಲಯಾಳಂಕವಿತೆಯ ಕನ್ನಡ ಅನುವಾದ)
ಪಾಠಒಂದು_ನಮ್ರತೆ
೧
ಕಿಟಕಿ ಬಾಗಿಲುಗಳಿಲ್ಲದ, ಶಾಲೆಯ
ಹವಾನಿಯಂತ್ರಿತ ತರಗತಿಯ ಕೊಠಡಿಯೊಂದರಲ್ಲಿ
ಸೀರೆ ಉಟ್ಟ ಯಂತ್ರಮಾನವ
ಅವತ್ತಿನ ಪಾಠಗಳನ್ನು ಫಾರ್ ವರ್ಡ್ ಮಾಡಿತು.
‘ಬೆಳಕಿನ ಪೆಟ್ಟಿಗೆ’ಯತ್ತ ಎಮೆಯಿಕ್ಕದೆ ನೋಡುತ್ತಿದ್ದ
ಗೋಣುಮುರಿದ ವಿದ್ಯಾರ್ಥಿಗಳು
‘ನಮ್ರತೆ’ ಎಂಬ ಹೆಸರಿನ ಫೋಲ್ಡರ್
‘ಡೌನ್ ಲೋಡ್’ ಮಾಡಿ ಕಲಿಯಲಾರಂಭಿಸಿದರು.
ತರಗತಿ ಕೊಠಡಿಯ ಗೋಡೆಮೇಲೆ
ಶಿಲುಬೆಗೇರಿಸಿ ತೂಗುಹಾಕಿದ
ಬಿಳಿ ಪರದೆಯ ಮೇಲೆ
ಆತ್ಮಹತ್ಯೆಗೆ ಸಜ್ಜಾಗುತ್ತಿರುವ ಪ್ರೊಜೆಕ್ಟರ್
ವಿಜಯಚಿಹ್ನೆಯನ್ನು ಬೆಳಗಿಸಿತು.
೨
ಗ್ರಂಥಾಲಯಕ್ಕೆ ಪ್ರವೇಶ ಪಡೆದ
ಪುಸ್ತಕಗಳೆಲ್ಲವೂ
ಪಂಕ್ತಿ ಎಡವಟ್ಟು ಮಾಡದೆ, ಸಾಲುಸಾಲಾಗಿ
ಕಂಪಿಸುತ್ತ ನಿಂತವು.
ದುರುಗುಟ್ಟುವ ಕಣ್ಣುಗಳ ದಡೂತಿ ಬೆತ್ತ
ಪರಿಶೋಧನೆಗಳನ್ನಾರಂಭಿಸಿತು.
ಚಿಗುರಿದ ಮೀಸೆಗಳನ್ನು ಬೋಳಿಸಲಾದ
ಬಂಡೆದ್ದ ನುಡಿಗಳನ್ನು ಕಿತ್ತುಹಾಕಲಾದ
ಇತಿಹಾಸದ ಕಥೆಗಳನ್ನು ತಿದ್ದಿಬರೆಯಲಾದ
ಪುಸ್ತಕಗಳೆಲ್ಲವೂ ಒಳ ಹೊಕ್ಕವು.
ಗ್ರಂಥಾಲಯಕ್ಕೆ ಪ್ರವೇಶ ಪಡೆದ
ಓದುಗರ ಆಗಮನ ಕಾಯುತ್ತ
ಗಾಜಿನ ಕಪಾಟುಗಳಲ್ಲಿ ಪುಸ್ತಕಗಳೆಲ್ಲವೂ
ಹಲ್ಲುಗಿಂಜುತ್ತ ಸಾಲುಗಟ್ಟಿದವು.
೩
ಕಂಡಿದ್ದು ಕಂಡಂತೆ ಇತರರಿಗೆ ಚಿಲಿಪಿಲಿಗುಟ್ಟಿದ
ಬಂಡುಖೋರ ಗಿಣಿಗಳನ್ನು ಗಲ್ಲಿಗೇರಿಸಿದ ರಾತ್ರಿಯಲ್ಲಿ
ತಾಯಿಗುಬ್ಬಚ್ಚಿ ಗೂಡಿನ ಹೆಣ್ಣುಮೊಟ್ಟೆಗಳಿಗೆ
ನಮ್ರತೆಯ ಪಾಠಗಳನ್ನು ಹೇಳಿಕೊಟ್ಟಿತು.
ಹೆಣ್ಣುಹಕ್ಕಿಗೆ ದರುಶನ ನಿಷೇಧಿಸಿದ
ಚಂದಿರನ ಬೆಳುದಿಂಗಳು ತಾಗದಂತೆ
ಅದು ಕಣ್ಣೀರು ನೆಂದ ರೆಕ್ಕೆಗಳಿಂದ
ಮೊಟ್ಟೆಗಳನ್ನು ಹೊದ್ದಿಸಿ ತನ್ನೆಡೆಗೆ
ಬಾಚಿ ಒತ್ತರಿಸಿಕೊಂಡಿತು.
ಮಲಯಾಳಂ ಮೂಲ : ಷೆಹ್ರಜ಼ದ್
ಅನುವಾದ : ತೇರಳಿಎನ್ಶೇಖರ್
Wow