ಲಹರಿ
ಮರೆವೆಂಬ ಹಿತಶತ್ರು
ಲತಾಶ್ರೀಈಶ್ವರ್
ಹೋಯ್ ಹೋಯ್ … ಲತಾ ಆಂಟೀ…. ಇರುವುದರೊಳಗೇ ಇನ್ನೊಂದಿಷ್ಟು ಗುಡಾಣವಾಗಿ ಕಾಣುವಂತೆ ಜರಿ ರೇಶ್ಮೆ ಸೀರೆ ಉಟ್ಟ ನಾನು, ಅದರ ಮೇಲೆ ಬಂಗಾರದ ಸರ, ಒಂದಿಷ್ಟು ಮೇಕಪ್ಪು, ಜೊತೆಗೊಂದಿಷ್ಟು ಮ್ಯಾಚೇ ಆಗದ ಲಿಪ್ಸ್ಟಿಕ್ಕು ಜೊತೆಗೆ ಮಲ್ಲೆ ಮುಡಿದ ನಾನು, ಮದುವೆ ಛತ್ರದಲ್ಲಿ ಅಪರೂಪಕ್ಕೆ ಸಿಕ್ಕ ಅತ್ಮೀಯ ನೆಂಟರ ಜೊತೆ, ನಮ್ಮ ನಮ್ಮ ಮನೆ, ಮಕ್ಕಳ ಕತೆಗಳ ವಿನಿಮಯದ ಸಂದರ್ಭದಲ್ಲಿ ಅದರಲ್ಲೂ ಜೊತೆಗೆ ಹೂ ಕಣ್ರೀ.. ಅದೇ ಇಷ್ಟು ದಪ್ಪ ಹೆಂಗಾದೆ ಅಂತನೇ ಗೊತ್ತಿಲ್ಲ , ಕರಿದದ್ದು , ಹಾಳು ಮೂಳೂ ಜಾಸ್ತಿ ತಿನ್ನಲ್ಲ, ಕಣ್ರೀ, ಆದರೂ 8 kg ಜಾಸ್ತಿ ಆಗಿದ್ದೀನಿ ಅಂತ ಅವರು.
ನಾನು ಮಹಾನ್ ವೈದ್ಯರ ತರ ಅಯ್ಯೋ ಬಿಡ್ರೀ.. ನಮಗೆಲ್ಲ ಈಗ ಮೆನೋಪಾಸ್ ಟೈಂ ಅಲ್ವ ? ಹಂಗಾಗಿ ಹೀಗೆಲ್ಲ ದಪ್ಪ ಆಗ್ತೀವಿ. ನೋಡಿ ಈಗ ನಮಗಿಂತ ಚಿಕ್ಕವರೂ ನಮ್ಮಷ್ಟೇ ದಪ್ಪ ಇದ್ದಾರೆ ಬಿಡಿ. ನಾವೆಲ್ಲ ಹಿಂಗ್ ಇದ್ರೇನೆ ಚೆನ್ನ. ಎನ್ನುತ್ತಾ ಸಮಾನ ದುಃಖಿಗಳ ತರ ಮುಖಬಾವ ಹೊತ್ತು, ಮನದೊಳಗೆ ಹೊ…. ಇವರಿಗೂ ನನ್ನ ತರನೇ ಸಂಕಟ ಉಂಟು, ಅಂತ ಒಂತರಾ ಖುಷಿಯಿಂದ ಮಾತಾಡ್ತಾ ಇದ್ದಾಗ, ಒಂದು ದನಿ ನಮ್ಮಿಬ್ಬರ ಮದ್ಯೆ ತೂರಿ ಬಂತು,
ಹೋಯ್ ಹೋಯ್ ಲತಾ ಆಂಟಿ.. ಎಂತ, ನಗಿಸಿದ್ರು ನಗಸ್ದೇ ಹೋದ್ರಲ್ಲ? ಎಂತ ಬೆಂಗಳೂರಿನವರಪ್ಪಾ?….. ಅನ್ನುವ ಧ್ವನಿ ಕೇಳಿ, ಮನದಲ್ಲೆ ಅಯ್ಯೋ ದೇವ್ರೇ ನನ್ ಜೊತೆ ಬೆಂಗಳೂರೆಂಬ ಉದ್ಯಾನ ನಗರಿ, ಅದರಲ್ಲೂ ಯಾರು ಬಂದರೂ ಆಶ್ರಯ ಕೊಟ್ಟು ಸಲಹುವ ಸುಂದರ ನಗರ ಬೆಂಗಳೂರನ್ನು ಸೇರಿಸಿ, ನನ್ನ ಮೇಲೆ ಆಪಾದನೆ ಮಾಡೋರು ಯಾರಪ್ಪಾ? ಅಂತ ತಿರುಗಿ ನೋಡಿದೆ. ನಮಗಿಂತ ವಯಸ್ಸಿನಲ್ಲಿ ತುಸು ಸಣ್ಣವಳು ತುಸು ನಗು, ತುಸು ಕೋಪದಿಂದ ನಿಂತಿದ್ದಾಳೆ. ಎಲ್ಲೋ ನೋಡಿದ ನೆನಪು, ಊಹ್ಹೂ….. ನೆನಪಾಗೊಲ್ದು.. ಯಾರೀಕೆ? ನೆಂಟರ ಮುಖ ನೋಡಿದೆ. ಅವರಿಗೆ ಪರಿಚಯವಿಲ್ಲ ಎನ್ನುವ ಮುಖಭಾವ.
ಹೋದವರ್ಷ ಶ್ರಿಂಗೇರಿ ಮದುವೆಲಿ ಸಿಕ್ಕಿದ್ರಲ್ಲ. ಮರೆತು ಹೋಯ್ತಾ? ಮತ್ತೆ ಬಂತು ಮಾತಿನ ಬಾಣ. ದೇವರೇ ನೆನಪಿಸಪ್ಪಾ? ಮನದಲ್ಲೆ ಮುಗಿದೆ ಕೈ. ಆದರೆ, ಯಾಕೋ ಆ ದೇವರು ಕೊಟ್ಟ ಕೈ. ಇನ್ನು ಮಾತೇ ಮುತ್ತಾಗಲಿ ಅಂದು ಕೊಳ್ಳುತ್ತಾ, ತಕ್ಷಣವೇ ಸಾವರಿಸಿಕೊಂಡು , ಹೋ ಚೆನ್ನಾಗಿದ್ದೀಯಾ? ಆಗ ನೀನು ಬೇರೆಯವರಿಗೆ ನಗಿಸಿದ್ದು ಅಂದು ಕೊಂಡೆ ಮರಾಯ್ತಿ, ಇರಲಿ.. ಮಕ್ಕಳು ಏನು ಓದ್ತಾರೆ ? ನಿಧಾನವಾಗಿ ಬಿಟ್ಟೆನೊಂದು ಮಾತಿನ ಬಾಣ. ಅವಳು ಮಕ್ಕಳ ಬಗ್ಗೆ ಮಾತಾಡ್ತಾ, ಗಂಡನ ಜೊತೆ ಮಕ್ಕಳನ್ನು ಬಿಟ್ಟು ಬಂದಿದ್ದೇನೆ, ಅನ್ನುತ್ತಾ ತನ್ನ ಗಂಡನ busy office schedule ಬಗ್ಗೆ ಹೇಳುವಾಗ, ಆಗ ಮೆಲ್ಲನೆ ನೆನಪಾಯ್ತು ಯಾರೀಕೆ ಎಂದು. ಇವಳ ಯಜಮಾನರು ನಮ್ಮ ದೂರದ ಬಂಧು, ಅವರ ಪತ್ನಿ ಈಕೆ. ಮನದಲ್ಲೆ ನನ್ನ ಮರೆವಿನ ಬಗ್ಗೆ ನನಗೇ ಬೇಸರ, ನಾಚಿಕೆ ಆದರೂ ತೋರ್ಪಡಿಸದೇ , ಕುಶಲ ಮಾತುಕತೆಯಲ್ಲಿ ತಲ್ಲೀನರಾಗಿದ್ದೆವು. ಅಷ್ಟು ಹೊತ್ತಿಗೆ ನನ್ನ ಯಜಮಾನರ ಸವಾರಿ ನಾನು ಯಾರ ಹತ್ತಿರನೋ ಮಾತನಾಡುವುದನ್ನು ನೋಡಿ ನನ್ನ ಹತ್ತಿರ ಬಂದರು. ಬಂದವರೆ ಅವಳಿಗೆ ನೀನು ಕೇಶವನ ಹೆಂಡ್ತಿ ಅಲ್ವ? ಅಂದರು. ಅವಳು ಖುಷಿಯಿಂದ ಹೌದು ಅಂದಳು. ತಕ್ಷಣವೇ ನನ್ನವರು ನನ್ನ ಕಡೆ ತಿರುಗಿ ಇವಳ ತಂದೆ ಯಾರು ಗೊತ್ತಾ? ನಿನಗೆ ಗೊತ್ತು, ಅವತ್ತು ಪರಿಚಯ ಮಾಡಿಸಿದ್ದೆ, ಹೇಳು ನೋಡೋಣ ಅಂದರು…. (ಓ ದೇವರೇ ನನ್ನ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ.)