ಶಾಲಿನಿ ಕೆಮ್ಮಣ್ಣು ಕವಿತೆ-ಜೀವನ ಜೋಕಾಲಿ

ಕಾವ್ಯ ಸಂಗಾತಿ

ಜೀವನ ಜೋಕಾಲಿ

ಶಾಲಿನಿ ಕೆಮ್ಮಣ್ಣು

ಕಲಿ ಮನವೇ
ತನ್ನ ಪ್ರೀತಿಸುವುದ
ಜನುಮವನು ಒಪ್ಪುವುದ
ಜಗವನು ಅಪ್ಪುವುದ
ಕಲಿಮಗಳೇ
ತಲೆಎತ್ತಿ ಬದುಕುವುದ
ಹೆಜ್ಜೆ ಗುರುತ ಮೂಡಿಸುವುದ

ಬಾನುಂಟು ಭುವಿಯುಂಟು
ಜಗವುಂಟು ಜನವುಂಟು
ನೀನೊಂದು ಮರಿ ಚುಕ್ಕಿ
ಸೃಷ್ಟಿಯ ಮಡಿಲಲ್ಲಿ
ಗಗನದ ಅಡಿಯಲ್ಲಿ
ಮನಸಿರಲು ಮಾರ್ಗವುಂಟು
ದಾರಿಯಲಿ ಕವಲುಂಟು
ತೆರೆದಷ್ಟು ಬಾಗಿಲುಂಟು
ತೇದಷ್ಟು ಗಂಧವುಂಟು
ಬೆಳಕುಂಟು ನಶೆಯುಂಟು
ತೃಪ್ತಿಯ ನಗು ಉಂಟು
ಬೇಸರದ ಕಳೆ ಉಂಟು
ನೆಮ್ಮದಿಯ ನೆರಳುಂಟು
ಅಪವಾದದ ಸುಳಿ ಉಂಟು
ಅವಮಾನದ ಸರಿದಿಯುಂಟು
ಕಲಿಮನವೇ
ತಾಳುವುದ
ಸಹಿಸಿ ಮುನ್ನುಗ್ಗುವುದ
ಕಲಿ ಮಗಳೇ
ಕಷ್ಟಗಳ ಕಳೆಯುವುದ
ಇಷ್ಟಗಳ ಗುಣಿಸುವುದ

ಬರುವಾಗ ಗೊತ್ತಿಲ್ಲ
ಹೋಗುತ್ತಾ ಗುರಿಯಿಲ್ಲ
ಸಿಹಿ ಕಹಿಯ ಮಾರ್ದನಿಯ
ನಿಟ್ಟುಸಿರ ಬೇಗುದಿಯ
ಅರಿವಿಲ್ಲ ಭಯವಿಲ್ಲ
ಬಂಧಗಳ ಬಂಧನದ
ಹಂಗುಗಳ ತೊರೆಯುತ್ತಾ
ಭಾವನೆಯ ಸಂಕೋಲೆ
ಹೊಡೆತಗಳ ಸರಮಾಲೆ
ಬದಲಾವಣೆಯ ಹೂಮಾಲೆ
ಹೊತ್ತ ತಂಗಾಳಿಯ ಜೊತೆ
ಕಲಿಮನವೇ
ಸಾಗುವುದ
ಈಜಿ ದಡ ಸೇರುವುದ
ಕಲಿ ಮಗಳೇ
ಹೊಸ ರಾಗಹಾಡುವುದ
ತಾಳಮೇಳಗಳ
ರಾಗದಲಿ ಹೊಂದಿಸುವುದ

ಮಾತಿನಲಿ ಮೌನದಲಿ
ನಿನಗೆ ನೀ ಜೊತೆಯಾಗು
ಸೋಲಿನಲಿ ಗೆಲುವಿನಲಿ
ದಿಟ್ಟ ಸಾರಥಿಯಾಗು
ನಿನಗಾಗಿ ನೀ ಬಾಳು
ಒಂದಿಷ್ಟು ದಿನದ ಗೋಳು
ಜೀವನ ಜೋಕಾಲಿ
ತೂಗುತ್ತಾ ನೀ ನಲಿ
ಕಲಿಮನವೇ
ಎಲ್ಲವ ಮರೆಯುವುದ
ದೋಷಗಳ ಕ್ಷಮಿಸುವುದ
ತಲೆ ಬಾಗಿ ನಡೆಯುವುದ
ಕಲಿ ಮಗಳೇ
ನಿನ್ನ ಜಾತಕವ ರಚಿಸುವುದ
ತಿದ್ದಿ ತೀಡಿ ನಡೆಯುವುದ
ಆನಂದದಿ ಸೊನ್ನೆಯಲಿ ಸೇರುವುದ


Leave a Reply

Back To Top