ಅಂಕಣ ಸಂಗಾತಿ
ಒಲವ ಧಾರೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ
ಮಗಳೆಂಬ ಮಲ್ಲಿಗೆ ಅರಳಿ ನಿಂತಾಗ
ಮಗಳೆಂಬ ಮಲ್ಲಿಗೆ ಅರಳಿ ನಿಂತಾಗ…
ಒಲವಿನ ಸಂಗೀತವೇ ಮಗಳು..!! ಮಗಳೆಂದರೆ ಮಮತೆ, ಮಮತೆ ಎಂದರೆ ತಾಯಿ, ತಾಯಿಯ ಪ್ರೀತಿಯನ್ನು ನೀಡುವ ಸಂಬಂಧವೆಂದರೇ ಅದು ಮಗಳು..!!
ಮಗಳು ಹುಟ್ಟುತ್ತಲೇ ಸಮಾಜದೆದುರು ಅಪ್ಪನಿಗೆ ಅಪಮಾನದ ಬರೆಯ ಎಳೆ. ಹೆಣ್ಣು ಹೆತ್ತವನೆನ್ನುವ ಅವಮಾನ..! ಒಳಗೊಳಗೆ ಪ್ರೀತಿಯ ಮಗಳ ಮುಖ ನೋಡಿದ ತಕ್ಷಣವೇ ಲೋಕದ ಅವಮಾನಗಳನ್ನು ಸಹಿಸಿಕೊಂಡು ಅಪ್ಪ ನಗುತ್ತಾನೆ. ಆದರೆ ಸಮಾಜ ಹೆಣ್ಣು ಹೆತ್ತವನು ಎನ್ನುವ ಅಪವಾದ ಮತ್ತೆ ಮತ್ತೆ ಕೊಡುತ್ತಲೇ ಹೋಗುತ್ತದೆ. ಲೋಕಕ್ಕೆ ಗೊತ್ತಿದ್ದರೂ ಗೊತ್ತಿಲ್ಲದಂತೆ ನಟಿಸುತ್ತಲೇ ಹೋಗುತ್ತದೆ. ಹೆಣ್ಣು ಜಗದ ಕಣ್ಣು, ಹೆಣ್ಣಿನಿಂದಲೇ ಲೋಕ, ಹೆಣ್ಣು ಇಲ್ಲವೆಂದರೆ ಲೋಕದ ಸೃಷ್ಟಿಯಾಗುವುದಾದರೂ ಹೇಗೆ..?? ಕೇವಲ ಗಂಡಿನಿಂದ ಜಗತ್ತು ಎನ್ನುವ ಭ್ರಮೆಯಲ್ಲಿ ಬದುಕುವ ಇಂದಿನ ಸಂಬಂಧಗಳು. ಕೇವಲ ಹಣ, ದ್ರವ್ಯ, ಸಂಪತ್ತಿನ ಹಿಂದೆ ಬಿದ್ದಿವೆ.
ಆದರೆ ಮಗನ ಕಕ್ಕುಲತೆಗಿಂತಲೂ ಮಗಳ ಕಕ್ಕುಲತೆಯೇ ಹೆಚ್ಚು. ಅಪ್ಪನಿಗೆ ಮಗಳು ಹುಟ್ಟಿದ ತಕ್ಷಣ ಹೊಸ ಲೋಕದ ದೃಷ್ಟಿ. ಕಣ್ಣೆದುರು ಮಗಳು ಆಡುತ್ತ, ಹಾಡುತ್ತ, ನಲಿಯುತ್ತಾ ಲೋಕದ ವ್ಯವಹಾರಗಳನ್ನು ತಿಳಿಯುವ ಮೊದಲೇ ಬಳ್ಳಿಯೊಳಗಿನ ಮೊಗ್ಗು ಹೂವಾಗಿ ಅರಳುವ ಸಮಯ ಬಂದು ಬಿಡುತ್ತವೆ. ಆಗ ಅಪ್ಪ ಒಳಗೊಳಗೆ ಕಮರುತ್ತಾನೆ. ‘ಅಯ್ಯೋ ನನ್ನ ಮಗು ಇನ್ನೂ ಚಿಕ್ಕದು’ ಈ ಲೋಕದ ಮುಂದೆ ಅರಳಿ ನಿಂತಿದೆಯಲ್ಲ ಎನ್ನುವ ಆತಂಕ.. ಒಂದೆಡೆಯಾದರೆ, ಅರಳದೆ ಮೊಗ್ಗಾಗಿ ಬಾಡಿ ಹೋದರೆ..? ಎನ್ನುವ ಆತಂಕ ಮತ್ತೊಂದೆಡೆ. ಈ ಲೋಕದ ಮಧ್ಯದಲ್ಲಿಯೇ ಎಲ್ಲಾ ನೋವುಗಳನ್ನು ಸಹಿಸುತ್ತಲೇ ಅಪ್ಪ ಬದುಕನ್ನು ಅನುಭವಿಸುತ್ತಾನೆ.
ಅರಳಿದ ಇಂತಹ ಮಗಳನ್ನು ಬೆಳೆಸುವ ಗುರುತರ ಜವಾಬ್ದಾರಿ ಅಪ್ಪ ಹೊರುತ್ತಲೇ ಹೋಗುತ್ತಾನೆ.ಅರಳಿ ನಿಂತ ಹೂವನ್ನು ಅಪ್ಪ ನೋಡಿದಾಗ ಖುಷಿಪಡುತ್ತಾನೆ. ಸಂತೋಷಪಡುತ್ತಾನೆ. ಒಳಗೊಳಗೆ ಹೆಮ್ಮೆ ಪಡುತ್ತಾನೆ. ಇಷ್ಟೊಂದು ದಿವಸ ಈ ಮಲ್ಲಿಗೆಯ ಗಿಡಕ್ಕೆ ಗೊಬ್ಬರ ಹಾಕಿ ಹುಲಸಾಗಿ ಮಲ್ಲಿಗೆಯ ಬಳ್ಳಿ ಬೆಳೆಯುವಂತೆ.. ಮಾಡಿದ್ದು.. ಮಲ್ಲಿಗೆ ಮೊಗ್ಗು ಬಿರಿದು ಇವತ್ತು ಹೂ ನೀಡುವ ಸಂಭ್ರಮ..!!
ಆದರೆ ಅಪ್ಪನಿಗಿದ್ದ ಆ ಸಂಭ್ರಮ ಕೇವಲ ಕೆಲವೇ ಕೆಲವು ದಿನಗಳು ಎನ್ನುವ ವಾಸ್ತವ ಅರಿತಾಗ ಅಪ್ಪ ಮಮ್ಮಲ ಮರಗುತ್ತಾನೆ. ನನ್ನ ಜವಾಬ್ದಾರಿಯಲ್ಲಿದ್ದ ಮಗಳೆಂಬ ಮಲ್ಲಿಗೆಯೂ ಇವತ್ತು ಅರಳಿ ಬೇರೆಯವರ ಪಾಲಾಗುತ್ತಾಳೆ ಎನ್ನುವ ಲೋಕದ ಸತ್ಯವನ್ನು ತಿಳಿದ ಅಪ್ಪ ಒಳಗೊಳಗೆ ಹೃದಯವನ್ನು ಹಿಂಡಿಕೊಳ್ಳುತ್ತಾನೆ. ಸಮಾಜದ ಎದುರು ಯಾವುದನ್ನೂ ಹೇಳದೆ ಮೌನವಾಗುತ್ತಾನೆ. ಅರಳಿನಿಂತ ಮಲ್ಲಿಗೆಯನ್ನು ಬೇರೆಯವರಿಗೆ ಜವಾಬ್ದಾರಿತವಾಗಿ ಕೊಡುವಾಗ ಮಲ್ಲಿಗೆಗೆ ಎಲ್ಲಿ ನೋವಾಗುತ್ತದೆ ಎನ್ನುವ ಆತಂಕ. ಮಲ್ಲಿಗೆಗೆ ಸಾರ್ಥಕ ಸಿಗಬೇಕಾದರೆ ಅದು ಪ್ರಕೃತಿದತ್ತವಾಗಿ ತನ್ನ ಸಂತೋಷವನ್ನು ಲೋಕಕ್ಕೆ ಹಂಚಬೇಕು. ಅಪ್ಪನಿಗೆ ಸಾರ್ಥಕ ಭಾವ..!! ಅವ್ವನಿಗೆ ಜವಾಬ್ದಾರಿಯ ಭಾವ.
ಮಗಳು ಬೆಳೆದು ನಿಂತಿದ್ದಾಳೆ. ಲೋಕದ ಮುಂದೆ ತನ್ನ ಅನುಭವಗಳನ್ನು ಹಂಚಿಕೊಳ್ಳುತ್ತಾಳೆ. ಪ್ರಕೃತಿ ಬದಲಾವಣೆಗಳನ್ನು ಅನುಭವಿಸುತ್ತಾಳೆ. ಬಾಲ್ಯದಲ್ಲಿದ್ದ ಅಪ್ಪನ ಮಾತಿಗೆ ಎದುರಾಡದ ಮಗಳು ಇವತ್ತು ಎದುರುಡುತ್ತಾಳೆ..!!ಅಪ್ಪ ಅದನ್ನು ಸಹಿಸಿಕೊಳ್ಳಲೇಬೇಕು. ‘ಅಯ್ಯೋ ಬಾಲ್ಯದಿಂದಲೂ ನನ್ನ ಮಾತನ್ನು ಕೇಳುವ ಮಗಳು ಇಂದು ಹೀಗೇಕೆ ಎಂದು ನೊಂದುಕೊಳ್ಳುತ್ತಾನೆ ಅಪ್ಪ.ಆದರೆ ಮಗಳೆಂಬ ಮಗಳು ತನ್ನ ಬದುಕನ್ನು ತಾನು ಆರಿಸಿಕೊಳ್ಳುವ ಹಕ್ಕನ್ನು ಚಲಾಯಿಸಲು ಧಾವಿಸುತ್ತಾಳೆ.ಇದು ಅನಿವಾರ್ಯ..
ಬದುಕೇ ಹೀಗೆ… “ಯಾರು ಯಾರಿಗೂ ಸೋಲಬೇಕೆನ್ನುವ ಅಥವಾ ನನ್ನ ಮಾತನ್ನೇ ಕೇಳಬೇಕು” ಎನ್ನುವ ಹಠ ಒಳ್ಳೆಯದಲ್ಲ. ಅವರ ಬದುಕು ಅವರಿಗೆ. ನಾವು ಹಾರೈಸಬೇಕಷ್ಟೇ..!! “ಬಾಳಿನಿದ್ದಕ್ಕೂ ಮಗಳು ಚೆನ್ನಾಗಿರಲಿ” ಎನ್ನುವ ಆತ್ಮತೃಪ್ತಿಯಿಂದಲೇ ದುಡಿದು ಗಳಿಸಿದ ಸಂಪತ್ತು, ಮಗಳ ದೃಷ್ಟಿಯಲ್ಲಿ ಅದು ಏಕಶ್ಚಿತವಾಗಿ ಕಾಣುತ್ತದೆ..!! ಅಪ್ಪನಿಗೆ ಅದು ಒಂದೊಂದು ಬೆವರಿನ ಹನಿಯ ಅನಘ್ಯ೯ ರತ್ನದ ಸಂಕೇತವಾಗುತ್ತದೆ.
ಅಪ್ಪನ ಬೆವರು ಮಗಳ ಆಯ್ಕೆ ಎರಡು ಒಂದುಗೂಡಬೇಕು. ಮಗಳ ಪ್ರೀತಿಯ ಒಲವಧಾರೆಯನ್ನು ನಾವು ಅವರು ಆಯ್ದ ಬದುಕಿಗೆ ಸಹಕರಿಸಬೇಕು. “ಅವಳ ಸಂತೋಷವೇ ಅಂತಿಮ” ಎನ್ನುವಾಗ ಅವಳ ಸಂತೋಷಕ್ಕಾಗಿ ಅಪ್ಪಂದಿರಾದ ನಾವು ಸೋಲಲೇಬೇಕು. ಆಗ ಪ್ರೀತಿಯಿಂದಲೇ ಅವರ ಬದುಕಿಗೆ ನಾವು ಒಲವನ್ನ ಹಂಚಬೇಕು. ಇಲ್ಲದೆ ಹೋದರೆ ಮಗಳೆಂಬ ಮಲ್ಲಿಗೆ ಸಮಾಜದ ಎದುರು ಅವಮಾನಗಳನ್ನು ಬಿರು ಬಿಸಿಲಿಗೆ ಬಾಡಿ ಹೋದಾಳು…!! ಮಗಳೆಂಬ ಮಲ್ಲಿಗೆ ಬಾಡದಂತೆ ಜೋಪಾನವಾಗಿ ನಾವು ಕಾಪಾಡೋಣ. ಮಗಳು ಅಷ್ಟೇ ಅಪ್ಪನೆಂಬ ಆಕಾಶದ ಬೆಳದಿಂಗಳನ್ನು ಉಣ್ಣುತ್ತಲೇ ಒಳಿತನ್ನು ನೀಡುವ ಸುವಾಸನೆಯನ್ನು ಬೀರಲಿ ಎಂದು ಸದಾಶಯವನ್ನು ಆಶಿಸೋಣ.
ರಮೇಶ. ಸಿ. ಬನ್ನಿಕೊಪ್ಪ ಹಲಗೇರಿ.
ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.