ಆಹಾ….ಮದ್ದೂರ ವಡೆ!-ಲಲಿತ ಪ್ರಬಂಧ

ಪ್ರಬಂಧ ಸಂಗಾತಿ

ಆಹಾ….ಮದ್ದೂರ ವಡೆ!

ಮಂಡಲಗಿರಿ ಪ್ರಸನ್ನ

ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೋಹ್ಲಿಗಳು ಶತಕದಲ್ಲಿ ಅದೇನೇನೋ ದಾಖಲೆ ಮಾಡಿರುವುದು ಅಂಕಿಅಂಶಗಳ ತಜ್ಞರಿಗೆ ಗೊತ್ತು. ಆದರೆ ನಾನು ಕಲಬುರಗಿ-ರಾಯಚೂರು ಸೀಮೆಯ ಮನುಷ್ಯ ಮಂಡ್ಯ-ಮೈಸೂರಿಗೆ ಒಂದು ವರ್ಷದಲ್ಲಿ ಹಾಫ್ ಸೆಂಚುರಿ’ ಬಾರಿಯಷ್ಟಾದರೂ ರೈಲಿನಲ್ಲಿ ಓಡಾಡಿ ದಾಖಲೆ ನಿರ್ಮಿಸಿದ್ದು ಒಂದು ದಾಖಲೆಯೆ ಎನ್ನಬಹುದು . ಅದಕ್ಕೆ ಮುಖ್ಯ ಕಾರಣವೆಂದರೆ ನನ್ನ ನೌಕರಿ ಇದ್ದದ್ದು ಕಲಬುರಗಿ ಜಿಲ್ಲೆಯಲ್ಲಿ, ಮಗಳೊಟ್ಟಿಗೆ ಕುಟುಂಬ ನೆಲಸಿದ್ದು ಮೈಸೂರಲ್ಲಿ! ಹಾಗೆ ನೋಡಿದರೆ ಮೈಸೂರು ನಮಗೆ ಹೊಸದೇನು ಅಲ್ಲ ನಮ್ಮ ಮನೆಯವರ ಅಣ್ಣ, ಅಕ್ಕನ ಕುಟುಂಬ ಅದೆಷ್ಟೋ ವರ್ಷಗಳಿಂದ ಅಲ್ಲಿ ನೆಲಸಿದ್ದು ಬೇರೆ ವಿಷಯ ಬಿಡಿ. ಅದಿರಲಿ ನಾನೀಗ ಮುಖ್ಯವಾಗಿ ಹೇಳಬೇಕಾಗಿರುವುದು ರಾಯಚೂರು, ಕಲಬುರಗಿಯ ಖಡಕ್ ರೊಟ್ಟಿಗೂ, ಮಂಡ್ಯ ಸೀಮೆಯ ಮದ್ದೂರ ವಡೆಗೂ ಇರುವ ಸಂಬಂಧ! ಇದೇನು ಇದ್ದಕ್ಕಿದ್ದಂತೆ ವಿಷಯ ಮದ್ದೂರ ವಡೆಗೆ ಬಂದುಎತ್ತಣ ಮಾಮರ ಎತ್ತಣ ಕೋಗಿಲೆ….ಆಯಿತಲ್ಲ?’ ಎಂದು ಗಾಬರಿಯಾಗಬೇಡಿ, ಇದೊಂದಿಷ್ಟು ಪೀಠಿಕೆ ಮಾತ್ರ.
ಸರಿ, ಮಗಳ ನೌಕರಿಯಿಂದಾಗಿ ಕುಟುಂಬ ನೆಲಸಿದ್ದ ಮೈಸೂರಿಗೆ ನಾನು ಕಲಬುರಗಿ, ಯಾದಗಿರಿ, ರಾಯಚೂರು, ಗುಂತಕಲ್ಲು, ಅನಂತಪುರಂ, ದೊಡ್ಡಬಳ್ಳಾಪುರ, ಬೆಂಗಳೂರು, ರಾಮನಗರ, ಚೆನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ದಾಟಿ ಮೈಸೂರಿನ ಪ್ರಯಾಣದ ಈ ಅರ್ಧ ಶತಕದ ದಾಖಲೆಯ ತಿರುಗಾಟದಲ್ಲಿ ನನ್ನನ್ನು ಹೆಚ್ಚು ಆಕರ್ಷಿಸಿದ್ದು ಮದ್ದೂರು’, ಅದಕ್ಕೆ ಬೇರೆ ಕಾರಣ ಹೇಳುವ ಅಗತ್ಯವಿಲ್ಲ ಎಂದುಕೊಂಡಿದ್ದೇನೆ. ಮದ್ದೂರು ಎಂದ ತಕ್ಷಣ ಹಿಂದಿನಿಂದಲೆಮದ್ದೂರು ವಡೆ’ ನೆನಪಾಗದಿದ್ದರೆ ಹೇಗೆ? ಸಾಮಾನ್ಯವಾಗಿ ಬಸವ ಎಕ್ಸ್ಪ್ರೆಸ್ ಅಥವಾ ಸೋಲಾಪುರ-ಹಾಸನ ಎಕ್ಸ್ಪ್ರೆಸ್ ಮೂಲಕವೆ ನಾನು ಬೆಂಗಳೂರು ಮೂಲಕ ಮೈಸೂರು ತಲುಪುತ್ತಿದ್ದೆ. ಬಸವ ಎಕ್ಸ್ಪ್ರೆಸ್‌ನಲ್ಲಿ ಬಂದರೆ, ಯಶವಂತಪುರದವರೆಗೆ ನಿದ್ದೆ ಹೊಡೆದು ನಂತರ `ಮದ್ದೂರು ವಡೆ’ ಗಾಗಿ ಎದ್ದು ಕೂಡುತ್ತಿದ್ದೆ. ಹಾಗೆ ಸೋಲಾಪುರ-ಹಾಸನ ರೈಲಿನಲ್ಲಿ ಬಂದರೂ ಯಶವಂತಪುರದವರೆಗೂ ನಿದ್ದೆ ಮಾಡಿ ನಂತರ ಮದ್ದೂರು ವಡೆಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಮದ್ದೂರು ವಡೆಯ ಘಮಲು ಕೆಂಗೇರಿ ರೈಲು ನಿಲ್ದಾಣದಿಂದ ಅಥವಾ ರಾಮನಗರದಿಂದಲೇ ಶುರುವಾಗುತ್ತದೆ. ಕೆಲ ಸಾರಿ ಹೆಂಡತಿಯ ಜೊತೆ ಬಸ್ಸಿನಲ್ಲೆ ಬೆಂಗಳೂರಿಂದ ಮೈಸೂರಿಗೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಈ ಘಮಲು ಸಿಕ್ಕಿರಲಿಲ್ಲ. ರೈಲು ಪ್ರಯಾಣದಲ್ಲಿ ಮಾತ್ರ ಪ್ರತಿ ಸಾರಿ ಮದ್ದೂರು ವಡೆಯ ಘಮಲಿನ ವೈವಿಧ್ಯಮಯ ರುಚಿ ನೆನಸುತ್ತದೆ. ಒಂದು ಮದ್ದೂರು ವಡೆ ತಿಂದು ಒಂದಷ್ಟು ಫಿಲ್ಟ್ರ್ ಕಾಫಿ ಕುಡಿದರೆ ಮುಗಿಯಿತು, ಮೈಸೂರು ಬರುವವರೆಗೆ ಚೆನ್ನಪಟ್ಟಣದ ಗೊಂಬೆಗಳು, ರಾಮನಗರದ ಬೆಟ್ಟ, ಶೋಲೆ ಸಿನೆಮಾ, ಸಕ್ಕರೆ ನಾಡು ಮಂಡ್ಯದ ಜನ, ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ, ಹೀಗೆ ಎಲ್ಲರೂ ನೆನಪಿನ ಸ್ಮೃತಿಯಿಂದ ಸರಿದು ಹೋಗುತ್ತಾರೆ. ರಾಮನಗರ, ಚೆನ್ನಪಟ್ಟಣ, ಮದ್ದೂರು ರೈಲು ನಿಲ್ದಾಣ ಬರುತ್ತಲೆ ಮದ್ದೂರು ವಡೆಯ ಮಾರಾಟದ ಭರಾಟೆ ಜೋರು. ನಾನು ಮಾತ್ರ ಮದ್ದೂರು ವಡೆಯನ್ನು ಖರೀದಿ ಮಾಡುತ್ತಿದ್ದುದು ಮದ್ದೂರಿನಲ್ಲಿಯೆ. ಅದೇಕೋ ಮದ್ದೂರು ಮತ್ತು ವಡೆ ಎರಡೂ ನನ್ನನ್ನು ವಿಶೇಷ ರೀತಿಯಲ್ಲಿ ಆಕರ್ಷಿಸಿದ್ದವು. ಆ ಮದ್ದೂರು ವಡೆಯ ಮೋಹಕ್ಕಾಗಿ ನಾನು ಯಶವಂತಪುರ ರೈಲು ನಿಲ್ದಾಣ ತಲುಪುತ್ತಿರುವಂತೆಯೆ ನಿದ್ದೆಯಿಂದ ಎದ್ದು ಬ್ರಷ್ ಮಾಡಿ, ಮದ್ದೂರು ವಡೆಯ ಮಾರಾಟಗಾರನ ಕೂಗಿಗೆ ಕಾಯುತ್ತಿದ್ದೆ. ಬಕೇಟ್‌ನಲ್ಲಿ ಹೊತ್ತು ತರುತ್ತಿದ್ದ ಬಿಸಿಬಿಸಿ ಮದ್ದೂರು ವಡೆಯ ಮಾರಾಟವೂ ವಿಭಿನ್ನವೆ. ಅವರ ಕೂಗು, ದನಿ, ಜೊತೆಗೆ ಮಾರಾಟ ಮಾಡುವ ಹುಡುಗರ ಮುಖ ನೋಡಿ ‘ಒಂದು ವಡೆ ಕೊಡಪ್ಪ’ ಎಂದು ಕೇಳಿದಾಗ ಚಿಕ್ಕ ಪೇಪರಿನ ತುಕಡಿಯೊಂದರಲ್ಲಿ ಆಗಷ್ಟೇ ಎಣ್ಣೆಯಲ್ಲಿ ಕರಿದು ತಂದಿದ್ದ ಬಿಸಿಬಿಸಿ ವಡೆ ತಿನ್ನಲು ಸ್ವರ್ಗ ಎನಿಸುತ್ತಿತ್ತು. ಮದ್ದೂರು ವಡೆ ಹಿಡಿದು ರೈಲಲ್ಲಿ ಬರುವ ಸಾಲು ಸಾಲು ಹುಡುಗರಲ್ಲಿ ಒಂದೊಂದು ವಡೆ ಖರ್ಚಾದಾಗಲೂ ಮುಖದಲ್ಲೇನೋ ಹೊಳಪು ಕಾಣುತ್ತಿತ್ತು.


‘ಬಿಸಿಬಿಸಿ ವಡೆ ಸರ್….ಬಿಸಿ ಇರದಿದ್ದರೆ ಹಣ ವಾಪಸ್…’ಎನ್ನುವ ಅವರ ಮಾತಿನ ವರಸೆಗಳು ಅಥವಾ ‘ಸಾರ್ ಬಿಸಿ ಬಿಸಿ ವಡೆ, ಬಾಯಿಗಿಟ್ಟರೆ ಸುಡುತ್ತೆ’ ಎನ್ನುವ ಹಾಸ್ಯ ಭರಿತ ನುಡಿಗಳು ರೈಲಲ್ಲಿ ಕುಳಿತವರನ್ನು ಮಂದಸ್ಮಿತ ನಗೆಯಲ್ಲಿ ತೇಲುವಂತೆ ಮಾಡುತ್ತಿದ್ದವು. ಮದ್ದೂರು ವಡೆ ಸ್ವಲ್ಪ ಸ್ವಲ್ಪವೆ ಮುರಿದು ಬಾಯಿಗಿಡುವಾಗ ಈ ವಡೆಯ ಜೊತೆಗೆ ಒಂದಷ್ಟು ಕೊಬ್ಬರಿ ಚಟ್ನಿಯೋ, ಅಥವಾ ಉಪ್ಪಿನಕಾಯಿಯೋ ಇದ್ದ್ರೆ ಎಷ್ಟು ರುಚಿ? ಎನಿಸುತ್ತದಲ್ಲವೆ ಎಂದೆನಿಸದೆ ಇರಲಿಲ್ಲ. ರುಚಿಗಾಗಿ ಬಾಯಿ ಬಾಯಿ ಬಡಿದುಕೊಳ್ಳುವ ನನ್ನಾಕೆ ಕೊಟ್ಟ ಪೇಪರಿನಲ್ಲಿ ಎಣ್ಣೆ ಹೀರಿಸಿ ತಿನ್ನುತ್ತಿದ್ದಳು. ಇರದಿದ್ದಲ್ಲಿ ಎಣ್ಣೆಯಿಂದ ಕೆಮ್ಮು ಎಂದು ಅವಳ ಅಂಬೋಣ.
ಮದ್ದೂರು ವಡೆಯ ಒಂದೊಂದು ತುಣುಕು ತಿನ್ನುವಾಗ ಅದರ ಜೊತೆಗೆ ಬರುತ್ತಿದ್ದ ಕರಿದ ಈರುಳ್ಳಿ ತುಕಡಿ ರುಚಿಗೆ ಮತ್ತಷ್ಟು ಇಂಬು ನೀಡಿದಾಗ, ಈ ಮದ್ದೂರು ವಡೆಯನ್ನು ಕಂಡುಹಿಡಿದ ಮಹಾನ್ ವ್ಯಕ್ತಿ ಯಾರು ಎಂಬುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದೆ. ಮದ್ದೂರು ವಡೆ ಜೊತೆಗೆ ದೋಸೆ, ತಟ್ಟೆ ಇಡ್ಲಿ, ಹೀಗೆ ಬೇರೆಲ್ಲ ಖಾದ್ಯ ರೈಲಲ್ಲಿ ಸಿಕ್ಕರೂ ಜನ ಹೆಚ್ಚು ಹೆಚ್ಚಾಗಿ ಇಷ್ಟ ಪಡುತ್ತಿದ್ದುದ್ದು ಮದ್ದೂರು ವಡೆ ಎಂಬುದು ನನ್ನ ಅಂದಾಜು. ಅದಕ್ಕೆ ಮುಖ್ಯ ಕಾರಣವೆಂದರೆ ಒಂದು ವಡೆಯನ್ನು ಕುರುಂ ಕುರುಂ ಎಂದು ತಿಂದು ಕಾಫಿ ಕುಡಿದರೆ ಮುಗಿಯಿತು, ಅದೇನೋ ಸ್ವರ್ಗ ಸಿಕ್ಕ ಸುಖ. ಆಗಾಗ ಹೆಂಡತಿ ಬೇಡವೆಂದರೂ ಇಷ್ಟ ಪಟ್ಟು ನಾನು ಎರಡು ವಡೆ ತಿಂದದ್ದು ಅದರ ಜನಪ್ರೀಯತೆಗೆ ಕಾರಣವಾಗಿದೆ. ಇನ್ನೂ ಕೆಲವರು ತಮ್ಮ ಕುಟುಂಬದ ಸದಸ್ಯರಿಗೆ ಮದ್ದೂರ ವಡೆ ಪಾರ್ಸಲ್ ತೆಗೆದುಕೊಂಡು ಹೋದದ್ದು ಇದೆ. ನನ್ನ ಯಾರೆ ಗೆಳೆಯರು ರಾಯಚೂರು, ಕಲಬುರಗಿಯಿಂದ ತಂಪುತಾಣ ಮೈಸೂರು ಕಡೆ ಪ್ರಯಾಣಿಸುತ್ತಿದ್ದರೆ ಅವರನ್ನು ಮೊದಲು ನಾನು ಕೇಳುತ್ತಿದ್ದ ಪ್ರಶ್ನೆ ‘ಮದ್ದೂರು ವಡೆ ತಿಂದಿರಾ?’ ಎಂದು. ಬಿಸಿಲು ನಾಡು ಕಲಬುರಗಿಯಿಂದ ತಂಪುತಾಣ ಮೈಸೂರಿನ ನಡುವೆ ಅನೇಕ ವರ್ಷಗಳ ನನ್ನ ಋಣಾನುಬಂಧದ ಹಿಂದಿನ ರಹಸ್ಯಕ್ಕೆ ಸಾಕ್ಷಿ ಎಂಬಂತೆ ಈ ಮದ್ದೂರು ವಡೆ ನನ್ನ ಎದೆಗೂಡಲ್ಲಿ ಈಗಲೂ ಬೆಚ್ಚಗೆ ಇದೆ. ಮಗಳ ನೌಕರಿಯಿಂದಾಗಿ ನಾನು ಈಗ ಮೈಸೂರಿನ ನಂಟು ಹೆಚ್ಚು ಬೆಳೆಸಿಕೊಂಡು ಮದ್ದೂರಿನ ಕಥೆ ದಾಖಲಿಸುತ್ತಿದ್ದರೆ, ಎಷ್ಟೋ ವರ್ಷಗಳ ಹಿಂದೆ ನನ್ನ ಅಪ್ಪ ಎಂ.ಎ.ಓದಲು ಮೈಸೂರಿಗೆ ಹೋದಾಗಿನ ಹೇಳುತ್ತಿದ್ದ ಆಗಿನ ಘಟನೆಗಳು ಈಗ ನನಗೆ ನೆನಪಾಗುತ್ತವೆ.


Leave a Reply

Back To Top