ನನಗಿಂದು ನಷೆ ಏರಿದೆ-ಯೋಗೇಂದ್ರಾಚಾರ್ ಎ ಎನ್

ಕಾವ್ಯಸಂಗಾತಿ

ಯೋಗೇಂದ್ರಾಚಾರ್ ಎ ಎನ್

ನನಗಿಂದು ನಷೆ ಏರಿದೆ

ಸೇಂದಿ ಸಾರಾಯಿ ಬಿಯರ್
ಏನನ್ನೂ ನಾ ಕುಡಿದಿಲ್ಲ
ಆದರೂ
ನನಗಿಂದು ನಷೆ ಏರಿದೆ

ಕಾಮನ ಬಿಲ್ಲನ್ನೇ ಕೆಳಗಿಳಿಸಿ
ಇನ್ನಷ್ಟು ಬಾಗಿಸಿ
ಚಂದ್ರನನ್ನಾಗಿಸುವಷ್ಟು
ಮತ್ತದನ್ನು ಭಾಗಿಸಿ
ನನ್ನವಳ ತುರುಬಿಗೆ
ಚುಕ್ಕಿ ಚಿತ್ತಾರ ಮಾಡುವಷ್ಟು

ಬೆಳದಿಂಗಳ ಬೆರಸಿ
ಬೊಗಸೆಯಲಿ ಬಳಸಿ
ಕುಡಿಸಿದ
ಆ ಸಿಹಿ ಜೇನ ಹೊನಲು
ಅಮಲೇರಿಸಿದೆ
ನಖ ಶಿಖಾಂತ
ಕಣ್ಮುಚ್ಚಿ ಸ್ವರ್ಗಕ್ಕೆ
ಏಣಿಯಿಲ್ಲದೇ ಏರುವಷ್ಟು
ಮೈ ಮನ ಬೆಳಕಾಗುವಷ್ಟು

ಮುಗಿಲಿಂದ ಧರೆಗೆ ಇಳಿದಷ್ಟು
ನಶೆಯ ನರ್ತನ ಇಮ್ಮಡಿಯಾದಷ್ಟು
ಅಮಲಿಗೆ ಅಮಲು ಗುಣಿಸಿದಷ್ಟು
ನಶೆ ಕಾದು ಹವಣಿಸುತ್ತಿದೆ
ಚೇಳು ಕೊಂಡಿಯು ತಲೆ ಎತ್ತಿ
ಮಿರ ಮಿರನೆ ಹೊಳೆಯುವಷ್ಟು

ಮಧು ಬಟ್ಟಲು ಕಂಡು
ಮನ್ಮತನು ಹೊಕ್ಕಷ್ಟು
ಮಧು ಶಾಲೆಯೇ ತೆರೆದು
ಪ್ರೇಮ ಪಾಠವನು ನುಡಿದಷ್ಟು
ಸೋಮರಸದ ಸೋನೆ ಮಳೆ
ಎಡ ಬಿಡದೆ ಸುರಿದಷ್ಟು
ಧರೆಯು ತಂಪಾಗಿ
ಇನಿಯನ ಕಂಡು
ಹೂನಗೆಯ ಸೂಸಿದಷ್ಟು

ಮನ್ಮತನ ಬಾಣ
ಮಧು ಬಟ್ಟಲ ಇಣಿಕೆ
ಮಧುವಲ್ಲೇ
ಅಭ್ಯಂಗನ ಸ್ನಾನ ಮಾಡಿದಷ್ಟು
ನಶೆ ನಶೆಯಲ್ಲೇ
ಕೂಡಿ ಕಳೆದಷ್ಟು
ಬಡ್ಡಿಗೆ ಬಡ್ಡಿ ಬೆಳೆದು
ಚಕ್ರ ಬಡ್ಡಿಯಾದಷ್ಟು
ನಶೆ ಏರಿದೆ
ನನಗಿಂದು ನಶೆ ಏರಿದೆ


2 thoughts on “ನನಗಿಂದು ನಷೆ ಏರಿದೆ-ಯೋಗೇಂದ್ರಾಚಾರ್ ಎ ಎನ್

Leave a Reply

Back To Top