ಅಂಕಣ ಸಂಗಾತಿ
ಗಜಲ್ ಲೋಕ
ರತ್ನರಾಯಮಲ್ಲ
ಮಿರಜಕರ್ ಅವರ ಗಜಲ್ ಗಳಲ್ಲಿ
ಸಾಮಾಜಿಕ ಕಳಕಳಿ
. ಮಿರಜಕರ್ ಅವರ ಗಜಲ್ ಗಳಲ್ಲಿ ಸಾಮಾಜಿಕ ಕಳಕಳಿ..
ಗಜಲ್ ಪ್ರೀತಿಸುವ, ಪೂಜಿಸುವ ಹೃದಯಗಳಿಗೆ ದಿಲ್ ಸೆ ಆದಾಬ್ ಅರ್ಜ್ ಹೈ..ಈ ‘ಗಜಲ್’ ಎನ್ನುವ ರಸಗಟ್ಟಿ ಸಹೃದಯಿಯ ಭಾವಾಂತರಗದಲ್ಲಿ ಹರಿಯುತ್ತಿರಲು ಹೃದಯದಲ್ಲೊಂದು ಅಪರಿಮಿತ ಕಂಪನ ಉಂಟಾಗುತ್ತದೆ. ಪ್ರತಿವಾರ ಒಬ್ಬೊಬ್ಬ ಶಾಯರ್ ಕುರಿತು ಬರೆಯುತ್ತ ಗಜಲ್ ಗುಲ್ಜಾರ್ ನಲ್ಲಿ ಅಲೆದಾಡುತ್ತಿರುವೆ. ಆ ಗುಲ್ಜಾರ್ ನಲ್ಲಿ ಅರಳಿದ ಗುಲ್ಶನ್ ನೊಂದಿಗೆ ನಿಮ್ಮ ಮುಂದೆ ಬರುತಿದ್ದೇನೆ, ನೀವು ನಿರೀಕ್ಷಿಸುತ್ತಿರುವ ಗಜಲ್ ಬೆಳದಿಂಗಳೊಂದಿಗೆ…
“ಯಾರೇ ಆಗಲಿ ಕೆಡಕು ಆಡಿದರೆ ಕಿವಿಗೊಡದಿರು ನೀನು
ಯಾರೇ ಆಗಲಿ ಕೆಡಕು ಮಾಡಿದರೆ ದನಿಗೊಡದಿರು ನೀನು”
–ಮಿರ್ಜಾ ಗಾಲಿಬ್
ಆಲೋಚನೆಗಳು ಜೀವಂತಿಕೆಯ ಲಕ್ಷಣವಾಗಿದ್ದು ಪ್ರತಿ ಕ್ಷಣವೂ ಮನಸ್ಸಿನಲ್ಲಿ ಹರಿಯುತ್ತಿರುತ್ತವೆ. ಆಲೋಚನೆಗಳು ಸ್ಪಷ್ಟವಾಗಿಯೂ ಸಕಾರಾತ್ಮಕವಾಗಿಯೂ ಇದ್ದರೆ ಯಾವುದೇ ಪರಿಸ್ಥಿತಿಯನ್ನು ನಿರಾತಂಕವಾಗಿ ನಿಭಾಯಿಸಬಹುದು. ಸಕಾರಾತ್ಮಕ ಮನೋಭಾವವು ನಿಜವಾಗಿಯೂ ಕನಸುಗಳನ್ನು ನನಸಾಗಿಸುತ್ತದೆ. ಮನಸ್ಸು ಜಗತ್ತನ್ನು ಪ್ರತಿಬಿಂಬಿಸಿದರೆ, ಪ್ರಪಂಚವು ಮನಸ್ಸನ್ನು ಪ್ರತಿಬಿಂಬಿಸುತ್ತದೆ. ಈ ದಿಸೆಯಲ್ಲಿ ಗಮನಿಸಿದಾಗ ನಮ್ಮ ಜೀವನ ರೂಪುಗೊಳ್ಳುವುದೆ ಮನಸ್ಸಿನ ಕ್ರಿಯೆಯಿಂದ. ನಾವು ಏನನ್ನು ಯೋಚಿಸುತ್ತೇವೆಯೋ ಅದೇ ಆಗುತ್ತದೆ. ಸಂತೋಷ ಎನ್ನುವುದು ಯಾವತ್ತೂ ನೆರಳಿನಂತೆ ಶುದ್ಧ ಆಲೋಚನೆಯನ್ನೆ ಅನುಸರಿಸುತ್ತದೆ ಎಂಬುದನ್ನು ಮರೆಯಲಾಗದು. ಈ ದಿಸೆಯಲ್ಲಿ ಅಮೇರಿಕಾದ ಲೇಖಕಿ ಬೈರನ್ ಕೇಟೀ ಯವರ “Every time your mind shifts, your world shifts” ಎಂಬ ಮಾತು ಎಂದಿಗೂ ಪ್ರಸ್ತುತವೆನಿಸುತ್ತದೆ. ನಮ್ಮ ಮನಸ್ಸು ಬದಲಾದಾಗಲೆಲ್ಲ ನಮ್ಮ ಪ್ರಪಂಚವು ಕೂಡ ಬದಲಾಗುತ್ತಿರುತ್ತದೆ. ಏಕೆಂದರೆ ಮನಸ್ಸು ನಮ್ಮೊಳಗಿದ್ದರೆ, ಪ್ರಕೃತಿಯು ನಮ್ಮ ದೇಹದ ಹೊರಗಿನ ವಸ್ತುವಾಗಿದೆ. ಇದಕ್ಕಾಗಿ ನಾವು ನಮ್ಮ ಕಿವಿಗಳನ್ನು ತೆರೆದಿಡುವ ಅವಶ್ಯಕತೆ ಇದೆ. ಇದರಿಂದ ಬ್ರಹ್ಮಾಂಡದ ಪಿಸುಮಾತುಗಳನ್ನು ಆಲಿಸಲು ಸಾಧ್ಯ. ಇದು ನಮ್ಮನ್ನು ಸರಿಯಾದ ದಿಕ್ಕಿನಲ್ಲಿ ಕರೆದೊಯ್ಯುತ್ತದೆ. ಕಾರಣ, ಮನಸು ಉದ್ವೇಗಗೊಳ್ಳದಂತೆ ಶಾಂತವಾಗಿರಿಸಿಕೊಳ್ಳುವುದು ನಮ್ಮ ಮೊದಲ ಪ್ರಾಶಸ್ತ್ಯವಾಗಿದೆ, ಆಗಬೇಕು ಸಹ! ಮನಸ್ಸು ನಮ್ಮದಾದರೂ ಇದನ್ನು ನಿಯಂತ್ರಿಸುವ ಶಕ್ತಿ, ಸಾಮರ್ಥ್ಯ ಸಾಹಿತ್ಯ, ಸಂಗೀತ ಮತ್ತು ಕಲೆಗೆ ಇದೆ. ಪ್ರತಿ ಭಾಷೆಯು ತನ್ನದೇಯಾದ ವಿರಾಸತ್ ಹೊಂದಿರುತ್ತದೆ. ಈ ವಿರಾಸತ್ ನಲ್ಲಿ ಹಲವಾರು ವೈವಿಧ್ಯಮಯ ಸಾಹಿತ್ಯ ಪ್ರಕಾರಗಳಿರುತ್ತವೆ. ಈ ಸಾಹಿತ್ಯ ಪ್ರಕಾರಗಳಿಗೆ ಭಾಷೆಯ ಎಲ್ಲೆ, ಗಡಿ ಇರುವುದಿಲ್ಲ. ಅಂತೆಯೇ ಸಹೃದಯಿಗಳ ಹೃದಯವನ್ನು ಗೆದ್ದ ಸಾರಸ್ವತ ಲೋಕದ ಹಲವು ಕಾವ್ಯ ಪ್ರಕಾರಗಳನ್ನು ಹಲವಾರು ಭಾಷೆಗಳಲ್ಲಿ ಗುರುತಿಸಬಹುದು. ಇದಕ್ಕೊಂದು ಪ್ರಸ್ತುತ ನಿದರ್ಶನವೆಂದರೆ ಮೆದು ಭಾವಗಳ ಗೊಂಚಲಾದ ಗಜಲ್. ಅರಬ್ ನಾಡಿನ ಈ ಗಜಲ್ ಇಂದು ಕನ್ನಡ ಬಿರಾದರಿಯಲ್ಲಿ ಬೆರೆತು ಹೋಗುತ್ತಿದೆ. ಇಂದು ಕನ್ನಡದಲ್ಲಿ ಅಸಂಖ್ಯಾತ ಬರಹಗಾರರು ಗಜಲ್ ಬೇಗಂ ಗೆ ಮನಸೋತು ಗಜಲ್ ಕೃಷಿಯಲ್ಲಿ ನಿರತರಾಗಿದ್ದಾರೆ. ಅವರುಗಳಲ್ಲಿ ಗಜಲ್ ಗೋ ಶ್ರೀ ಲಕ್ಷ್ಮಿಕಾಂತ ಮಿರಜಕರ್ ಅವರೂ ಒಬ್ಬರು.
ಶ್ರೀ ಲಕ್ಷ್ಮಿಕಾಂತ ಮಿರಜಕರ್ ಅವರು ಶ್ರೀ ನೇತಾಜಿ ಮಿರಜಕರ್ ಹಾಗೂ ಶ್ರೀಮತಿ ಲಕ್ಷ್ಮಿ ಮಿರಜಕರ್ ದಂಪತಿಗಳ ಮಗನಾಗಿ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನಲ್ಲಿ ಜನಿಸಿದರು. ಇವರ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಶಿಕ್ಷಣ ಶಿಗ್ಗಾಂವ್ ನಲ್ಲಿ, ಬೆಂಗಳೂರಿನ ಮಾರತಹಳ್ಳಿಯ ಎಂ.ಎ.ಜೆ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡ್ ಪದವಿ, ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ಹಾಗೂ ಹಂಪಿಯ ಕನ್ನಡ ವಿಶ್ವ ವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಮಾಧ್ಯಮ ಅಧ್ಯಯನ ವಿಷಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಪ್ರಸ್ತುತವಾಗಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ (ಪಿಎಚ್.ಡಿ) ಸಂಶೋಧನಾ ವಿದ್ಯಾರ್ಥಿಯಾಗಿ ಸಂಶೋಧನೆಯನ್ನು ಮಾಡುತ್ತಿದ್ದಾರೆ. ಸದ್ಯ ಇವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಯರ್ರೇನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕನ್ನಡ ಸಹಶಿಕ್ಷಕರಾಗಿ ಕಾರ್ಯನಿರ್ವಹಿಸುತಿದ್ದಾರೆ. ತಮ್ಮ ಪದವಿ ಹಂತದಿಂದಲೂ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಒಲವು ಹೊಂದಿರುವ ಇವರು ಕಥೆ, ಕಾವ್ಯ, ಲೇಖನ, ಗಜಲ್, ಸಂಪಾದನೆ… ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡುತ್ತ ಬಂದಿದ್ದಾರೆ. ಶ್ರೀಯುತರು ತಮ್ಮ ತಂದೆಯವರ ಸ್ಮರಣಾರ್ಥವಾಗಿ ‘ನೇತಾಜಿ ಪ್ರಕಾಶನ’ವನ್ನು ಸ್ಥಾಪಿಸಿ ವಸತಿ ಶಾಲೆಯ ಪ್ರತಿಭಾವಂತ ಮಕ್ಕಳ ಬರಹಗಳನ್ನು ಸಂಕಲಿಸಿ “ಚಿಲುಮೆ” ಕೃತಿಯನ್ನು ಹಾಗೂ ‘ಬಯಲೊಳಗೆ ಬಯಲಾಗಿ’ ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿದ್ದಾರೆ.
ಮಕ್ಕಳ ನೆಚ್ಚಿನ ಮೇಷ್ಟ್ರು ಆಗಿರುವ ಶ್ರೀ ಲಕ್ಷ್ಮಿಕಾಂತ ಮಿರಜಕರ್ ರವರು ೨೯೨೨-೨೩ ನೇ ಶೈಕ್ಷಣಿಕ ಸಾಲಿನಿಂದ ಪ್ರತಿವರ್ಷ ಮಕ್ಕಳ ಬರಹಗಳಿರುವ ‘ತೇಜಸ್ವಿ ಗೋಡೆ ಪತ್ರಿಕೆ’ಯನ್ನು ಹೊರತರುವುದರ ಜೊತೆಗೆ ತಮ್ಮ ಶಾಲೆಯಲ್ಲಿ ದಾನಿಗಳಿಂದ ಪುಸ್ತಕಗಳನ್ನು ಸಂಗ್ರಹಿಸಿ ‘ತೇಜಸ್ವಿ ಗ್ರಂಥಾಲಯ’ವನ್ನು ಆರಂಭಿಸಿ ಮಕ್ಕಳಲ್ಲಿ ಸಾಹಿತ್ಯ ಆಸಕ್ತಿಯನ್ನು ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿದ್ದು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಹಲವಾರು ಕವಿಗೋಷ್ಠಿ, ಶೈಕ್ಷಣಿಕ ಕಮ್ಮಟ ಹಾಗೂ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿಯೂ ಭಾಗವಹಿಸಿದ್ದಾರೆ. ಧಾರವಾಡ ಆಕಾಶವಾಣಿಯಿಂದ ಇವರ ಕವಿತೆಗಳು ಪ್ರಸಾರಗೊಂಡಿವೆ. ಶ್ರೀಯುತರ ಹಲವು ಲೇಖನಗಳು, ಕವನ, ಗಜಲ್ ಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಸಾಹಿತ್ಯ ಹಾಗೂ ಕ್ರಿಯಾಶೀಲತೆಯನ್ನು ಗಮನಿಸಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಮೈಸೂರಿನ ಕರ್ನಾಟಕ ಕಾವಲು ಪಡೆ ಬಳಗದಿಂದ ೨೦೧೬ ನೇ ಸಾಲಿನ “ಆದರ್ಶ ಶಿಕ್ಷಕ ಪ್ರಶಸ್ತಿ”, ಚಿತ್ರದುರ್ಗದ ಸಿರಿಗನ್ನಡ ಪ್ರಕಾಶನ ಬಳಗದಿಂದ “ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ”, ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಿಂದ ೨೦೧೮ ನೇ ಸಾಲಿನ “ಉತ್ತಮ ಕನ್ನಡ ಶಿಕ್ಷಕ” ಪ್ರಶಸ್ತಿ ಲಭಿಸಿವೆ. ಇವುಗಳೊಂದಿಗೆ ಇವರ ‘ಬಯಲೊಳಗೆ ಬಯಲಾಗಿ’ ಗಜಲ್ ಸಂಕಲನದ ಮುಖಪುಟವು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಅತ್ಯುತ್ತಮ ಮುಖಪುಟ ಚಿತ್ರ ವಿನ್ಯಾಸ ಪ್ರಶಸ್ತಿ, ‘ಬಸವ ಪುರಸ್ಕಾರ’ ಎನ್.ಎಸ್. ವಾಮನ ಶತಮಾನೋತ್ಸವ ಪುಸ್ತಕ ಪ್ರಶಸ್ತಿ, ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತಿನ ಕಾವ್ಯ ಪ್ರಶಸ್ತಿ ಹಾಗೂ ಇವರ ಹಲವು ಬಿಡಿ ಕವಿತೆಗಳಿಗೆ ಸಂಕ್ರಮಣ ಬಹುಮಾನ, ನವೀನ ಚಂದ್ರ ಕಾವ್ಯ ಬಹುಮಾನ, ಗೋವಿಂದ ಪೈ ಸ್ಮಾರಕ ಕಾವ್ಯ ಬಹುಮಾನ, ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾವ್ಯ ಸ್ಪರ್ಧೆಯ ಬಹುಮಾನ, ಅಕ್ಷರ ಐಸಿರಿ ಕಾವ್ಯ ಸ್ಪರ್ಧೆ ಬಹುಮಾನಗಳು ಲಭಿಸಿವೆ.
ಗಜಲ್ ಪ್ರತಿಯೊಂದು ವಸ್ತುವನ್ನು, ಸಮಾಜವನ್ನು ಪ್ರೀತಿಸಲು ಕಲಿಸುತ್ತದೆ. ಹೃನ್ಮನಗಳ ಶೃಂಖಲೆಗಳಿಂದ ಬಿಡುಗಡೆಗೊಳಿಸಿ ಪರಮ ಸ್ವಾತಂತ್ರ್ಯದ ಶೋಧನೆಯನ್ನು ನಿರೀಕ್ಷಿಸುತ್ತದೆ. ಪ್ರೀತಿಯ ಕೋಮಲ ಭಾವವೆ ಇದರ ಆತ್ಮ. ಇಲ್ಲಿ ಪ್ರೀತಿ ಎಂಬುದು ಕೇವಲ ಗಂಡು-ಹೆಣ್ಣಿನ ಸಂಬಂಧಕ್ಕೆ ಸೀಮಿತವಾದುದಲ್ಲ, ಬದಲಿಗೆ ಇಡೀ ಮನುಕುಲದ ಒಳಿತನ್ನು ಬಯಸುವ ಚಿರಾಗ್. ಇದು ಗಂಭೀರತೆಯಿಂದ ಉಲ್ಲಾಸದವರೆಗೆ, ವಿಚಾರದಿಂದ ಮಾನವೀಯತೆವರೆಗೆ ಪರಿವರ್ತನೆ ಹೊಂದುತ್ತ ಬೆರಗುಗೊಳಿಸುತ್ತದೆ. ಸುಖನವರ್ ಶ್ರೀ ಲಕ್ಷ್ಮಿಕಾಂತ ಮಿರಜಕರ್ ಅವರ ಗಜಲ್ ಗಳಲ್ಲಿ ಪ್ರೀತಿ, ಪ್ರೇಮ, ಪ್ರಣಯ, ವಿರಹ, ಭಗ್ನ ಹೃದಯದ ತಳಮಳದೊಂದಿಗೆ ರೈತನ ಕುರಿತು ಕಾಳಜಿ, ಅಕ್ಕರೆ, ಸಾಮಾಜಿಕ ವ್ಯವಸ್ಥೆಯ ವಿಡಂಬನೆ, ಸಾಮಾಜಿಕ ಸಮಸ್ಯೆಗಳ ವಿಷ ವರ್ತುಲ, ಸಮಾಜವನ್ನು ಪ್ರೀತಿಸುವ ಸಮತಾವಾದ, ಧಾರ್ಮಿಕ ಎಡಬಿಡಂಗಿತನ, ರಾಜಕೀಯದ ದಶಾವತಾರ, ಸಂಬಂಧಗಳ ಕಣ್ಣಾಮುಚ್ಚಾಲೆ, ಬಂಧಗಳ ಕನವರಿಕೆ, ಹೆತ್ತವರ ಮಮತೆ… ಮುಂತಾದ ಹಲವು ಆಯಾಮಗಳ ವಿಷಯವನ್ನು ಗಮನಿಸಿಬಹುದು.
ಗುಡಿ-ಮಸ್ಜಿದ್ ಗಳು ದೇವರ ತಾಣವೆಂಬುದು ಹಲವರ ಅಂಬೋಣ. ಅಲ್ಲಿಗೆ ಹೋಗುವುದೆ ದೇವರಿಗಾಗಿ! ಇಲ್ಲಿ ಗಜಲ್ ಗೋ ಅವರು ‘ತಾಯಿಯೇ ದೇವರು’ ಎಂಬುದನ್ನು ತಮ್ಮ ಷೇರ್ ನಲ್ಲಿ ದಾಖಲಿಸಿದ್ದಾರೆ. ಪ್ರತಿ ಮನೆಗಳಲ್ಲಿ ಅಮ್ಮ ಇರುವಾಗ ದೇವರನ್ನು ಹುಡುಕುತ್ತ ಮಂದಿರ-ಮಸ್ಜಿದ್ ಗಳಿಗೆ ಹೋಗುವುದು ಏಕೆ ಎಂದು ಪ್ರಶ್ನಿಸುತ್ತ ತಾಯಿಯ ಮಹತ್ವ ಹಾಗೂ ಮೌಢ್ಯತೆಯನ್ನು ಮುಖಾಮುಖಿಯಾಗಿಸಿದ್ದಾರೆ. ವೃದ್ಧಾಶ್ರಮಗಳು ಎಲ್ಲೆಡೆ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಈ ಭೋಗ ಸಂಸ್ಕೃತಿಯ ಕಾಲಘಟ್ಟದಲ್ಲಿ ಹೆತ್ತವರನ್ನು ಪೋಷಿಸುವ, ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ಮಕ್ಕಳ ಮೇಲಿದೆ. ಈ ಕೆಳಗಿನ ಷೇರ್ ತುಂಬಾ ಸರಳವಾಗಿ ಹಾಗೂ ಸ್ಪಷ್ಟವಾಗಿ ನಾವು ಮರೆಯುತ್ತಿರುವ ನಮ್ಮ ಪರಂಪರೆಯನ್ನು ಸ್ಮರಿಸುತ್ತ, ನಮ್ಮ ಕರ್ತವ್ಯವನ್ನು ಅರುಹುತ್ತಿದೆ.
“ಮನೆಯಲ್ಲಿ ದೇವರಿರುವಾಗ ಗುಡಿಗೆ ಹೋಗುವ ಜರೂರು ಏನಿದೆ
ಜನ್ಮದಾತೆ ಅಮ್ಮನಿರುವಾಗ ಮಸೀದಿಗೆ ಹೋಗುವ ಜರೂರು ಏನಿದೆ”
ಯಾವ ಬೌದ್ಧಿಕ ಶಕ್ತಿಯಿಂದ ಮನುಷ್ಯ ಇನ್ನಿತರ ಪ್ರಾಣಿಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದ್ದನೊ ಇಂದು ಅದೆ ಬೌದ್ಧಿಕ ಶಕ್ತಿಯ ದಿವಾಳಿಯಿಂದ ತತ್ತರಿಸಿ ಹೋಗುತಿದ್ದಾನೆ. ಉಚ್ಛ ಪ್ರಾಣಿ ಇಂದು ಹುಚ್ಚು ಪ್ರಾಣಿಯಾಗಿರುವುದು, ಆಗುತ್ತಿರುವುದು ಮನುಕುಲಕ್ಕೆ ಹಿಡಿದ ಕನ್ನಡಿಯಾಗಿದೆ. ಸುಖನವರ್ ಮಿರಜಕರ್ ಅವರು ನಮ್ಮ ಸಾಮಾಜಿಕ ವ್ಯವಸ್ಥೆ ತನ್ನ ಜೀವಾಳವೆಂದು ಭಾವಿಸಿ ಪೋಷಿಸಿಕೊಂಡು ಬಂದಿರುವ, ಬರುತ್ತಿರುವ ಜಾತಿ, ಧರ್ಮದ ಬೇಲಿಯನ್ನು ಖಂಡಿಸಿದ್ದಾರೆ. ಅಂತರಂಗದಲ್ಲಿ ಅಡಗಿರುವ ಮಾನವಿಯತೆ ಬಹಿರಂಗದಲ್ಲಿ ವ್ಯಕ್ತಗೊಳ್ಳುತ್ತ ಎಲ್ಲ ಕಡೆ ಮನುಷ್ಯತ್ವದ ದೀಪ ಪ್ರಕಾಶಮಾನವಾಗಿ ಪ್ರಜ್ವಲಿಸಬೇಕು ಎಂಬ ಆಶಯವನ್ನು ಈ ಷೇರ್ ನಲ್ಲಿ ವ್ಯಕ್ತಪಡಿಸಿದ್ದಾರೆ.
“ಜಾತಿ ಧರ್ಮ ಬಣ್ಣ ಅಂತಸ್ತು ಯಾವುದೂ ಶ್ರೇಷ್ಠವಲ್ಲ ಕಾಂತ
ಸಕಲ ನೋವಿಗೆ ಮಿಡಿಯುವ ಮನುಷ್ಯತ್ವದ ದೀಪ ಹಚ್ಚುತ್ತೇನೆ“
ಗಜಲ್ ನಲ್ಲಿ ಹಳೆಯ ಪ್ರತಿಮೆಗಳಿಂದ ಹೊಸ ಅರ್ಥ ಸೃಜನವಾಗಬೇಕಾದರೆ, ಗಜಲ್ ಸಂಪ್ರದಾಯದ ವಸ್ತುವಿಗೆ ನವೀನ ಪ್ರಜ್ಞೆಯನ್ನು, ಸೌಂದರ್ಯಾನುಭೂತಿಯನ್ನು ಹೆಚ್ಚಳಗೊಳಿಸಬೇಕಾದರೆ ಹೊಸ ಶಬ್ದಸಂಪತ್ತಿಯನ್ನು ಗಜಲ್ ಮಾಧ್ಯಮವನ್ನಾಗಿ ಉಪಯೋಗಿಸಿಕೊಳ್ಳುವ ಜರೂರತ್ತು ಇದೆ. ಈ ದಿಸೆಯಲ್ಲಿ ಶಾಯರ್ ಲಕ್ಷ್ಮಿಕಾಂತ ಮಿರಜಕರ್ ಅವರಿಂದ ಮತ್ತಷ್ಟು ಮೊಗೆದಷ್ಟೂ ಗಜಲ್ ಗಳು ರಚನೆಯಾಗಲಿ, ಅವುಗಳು ಸಂಕಲನ ರೂಪ ಪಡೆದು ಸಹೃದಯ ಓದುಗರ ಮನವನ್ನು ತಣಿಸಲಿ ಎಂದು ಪ್ರೀತಿಯಿಂದ ಶುಭ ಹಾರೈಸುತ್ತೇನೆ.
“ಪ್ರಿಯಳ ಸುಂದರ ಮೊಗದ ಪ್ರತಿಬಿಂಬ ಕನ್ನಡಿಯಲಿ
ಒಂದೇ ಸ್ಥಳದಲಿ ಸೂರ್ಯ ಚಂದ್ರರು ಕೂಡಿದಂತೆ”
–ಹೀರಾಲಾಲ್ ಫಲಕ್
ಮನುಷ್ಯನ ಮನಸು ತಳಮಳಗಳ ದಿಬ್ಬಣ. ಶಾಂತಿ, ನೆಮ್ಮದಿ ನಮ್ಮನ್ನು ಆವರಿಸಬೇಕಾದರೆ ಗಜಲ್ ಅಶಅರ್ ನ ಪಾತ್ರ ಅನನ್ಯ. ಇಂಥಹ ಗಜಲ್ ಜನ್ನತ್ ನಲ್ಲಿ ವಿಹರಿಸುತ್ತಿರಲು ಹಲವು ಬಾರಿ ಸಮಯವನ್ನೂ ಶಪಿಸಿದ್ದುಂಟು. ಆದರೂ ಸಮಯದ ಮುಂದೆ ಮಂಡಿಯೂರಲೆ ಬೇಕಲ್ಲವೇ..ಸೋ, ಅನಿವಾರ್ಯವಾಗಿ ಇಂದು ನನಗೆ ಇಲ್ಲಿಂದ ನಿರ್ಗಮಿಸಲೆಬೇಕಿದೆ, ಮತ್ತೆ ಮುಂದಿನ ಗುರುವಾರ ತಮ್ಮ ಪ್ರೀತಿಯನ್ನರಸುತ ಬರಲು.. ಹೋಗಿ ಬರುವೆ, ಅಲ್ವಿದಾ….
ರತ್ನರಾಯಮಲ್ಲ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ