ಕಾವ್ಯ ಸಂಗಾತಿ
ನಾವ ಈಗ ಸಣ್ಣೋರಾಗೀವಿ
ನರಸಿಂಗರಾವ ಹೇಮನೂರ
ನಾವೀಗ ಸಣ್ಣೋರಾಗೀವಿ
ಯಾಕಂದ್ರ ನಮ್ ಮಕ್ಳು ದೊಡ್ಡೋರಾಗ್ಯಾರ
ಹಿಂಗ ಮಾಡಬ್ಯಾಡ್ರಿ, ಹಂಗ ಮಾಡಬ್ಯಾಡ್ರಿ
ಇದನ್ನ ತಿನ್ರಿ, ಅದನ್ನ ತಿನ್ರಿ,
ಹಗಲೆಲ್ಲ ಟಿ.ವಿ.ಮುಂದ ಕೂಡ ಬ್ಯಾಡ್ರಿ,
ಕಣ್ಮ್ಯಾಗ ಪರಿಣಾಮ ಆಗ್ತದ
ಅವಾಗವಾಗ ಅಂಗಳದಾಗ ತಿರಿಗ್ಯಾಡ್ತಾ ಬರ್ರಿ,
ಹುಡುಗರನ ನೋಡಿ ಕಲೀರಿ
ಅಂತ ಅನಿಸ್ಗೋತ ಇರ್ತೀವಿ
ನಾವೀಗ ಸಣ್ಣೋರಾಗೀವಿ
ಯಾಕಂದ್ರ ನಮ್ ಮಕ್ಳು ದೊಡ್ಡೋರಾಗ್ಯಾರ
ನಿಮಗೀಗ ವಯಸ್ಸ ಮೀರ್ಯಾದ,
ಹುಡುಗಾಟಕಿ ಬಿಡ್ರಿ,
ತಿಳಕೊಂಡು ಮಾತಾಡ್ರಿ,
ಅಂತ ನಮಗ~ ಹೇಳ್ತಾರ,
ನಾವೂ ಕೇಳ್ದೋವರಂಗ ಹಾ ಅಂತೀವಿ,
ತಲೀ ಹಾಕ್ತೀವಿ!
ನಾವೀಗ ಸಣ್ಣೋರಾಗೀವಿ
ಯಾಕಂದ್ರ ನಮ್ ಮಕ್ಳು ದೊಡ್ಡೋರಾಗ್ಯಾರ
ಯಾ ಕೆಲಸ ಸಾಧ್ಯ ಆದ ಅದನ್ನ~ ಮಾಡ್ರಿ,
ಆಗಲಿಲ್ಲಂದ್ರ ಮಾಡಾಕ ಹೋಗ ಬ್ಯಾಡ್ರಿ,
ಯಾರೀಗರ ಹೇಳಿ ಮಾಡಸ್ರಿ,
ಯಾಕಂದ್ರ ಕೆಲ್ಸ ಮಾಡೋ ವಯಸ್ಸಲ್ಲ ನಿಮ್ದೀಗ
ಎಲ್ಯಾರ ಪೆಟ್ ಬಿತ್ತಂದ್ರ ಹೇಳ್ಕೊಳ್ಳಕ್ಕಾಗೋದಿಲ್ಲ
ನಾವೀಗ ಸಣ್ಣೋರಾಗೀವಿ
ಯಾಕಂದ್ರ ನಮ್ ಮಕ್ಳು ದೊಡ್ಡೋರಾಗ್ಯಾರ
ಸಿಟ್ಟ್ ಬಂದು ಒಮ್ಮೊಮ್ಮಿ ಎಗರಾಡ್ತೀವಿ,
ಮತ್ತ ಜಲ್ದಿ ಅವರು ಹೇಳ್ದಂಗ ಕೇಳ್ತೀವಿ,
ಸೀ ದಿನಸೀಗಿ ಮನಸು ಹರದಾಡ್ತದ ಖರೆ,
ಆದ್ರ ಮಾಡೋದೇನು? ಹೋಗೋದೆಲ್ಲಿ?
ನಮ್ಮವರ~ ನಮಗಾಗ್ತರ ಅಂತ ತಿಳ್ಕೊಂಡು
ಅವರಗುಡಾನ~ ಇರಾಕತ್ತೀವಿ!
ನಾವೀಗ ಸಣ್ಣೋರಾಗೀವಿ
ಯಾಕಂದ್ರ ನಮ್ ಮಕ್ಳು ದೊಡ್ಡೋರಾಗ್ಯಾರ