ಕಾವ್ಯ ಸಂಗಾತಿ
ಮಾತು ಮುಗಿಯುವ ಹೊತ್ತು
ಚಂದ್ರು ಎಂ ಹುಣಸೂರು
ಅಕಸ್ಮಾತ್ ಆದ ನಿನ್ನ ಭೇಟಿಗೆ
ಸೀತಾಫಲ ಹಣ್ಣಿನ ಗುಣ
ಉಗಾದಿ ಹಬ್ಬದ ಒಬ್ಬಟ್ಟಿನ ತಾಜಾತನ
ಆಗಷ್ಟೇ ಕರೆದ ಹಾಲಿನ ನೊರೆಯ ಘಮ
ಇನ್ನ ಏನೇನೊ ಅಡಕವಾಗಿ
ಅದನ್ನು ಅನುಭವಿಸಲೂ ಆಗದೆ
ಬಿಟ್ಟು ಕೊಡಲೂ ಆಗದೆ
ಕೇವಲ ಉಳಿಸಿಕೊಂಡದ್ದಕ್ಕಷ್ಟೇ
ನಗುನಗುತ್ತಾ ಇರಬೇಕಾಗಬಹುದೆಂಬ
ಚರ್ಚೆಯ ಯೋಚನೆ ಎಷ್ಟು ಕಠಿಣ
ಹೀಗೆಲ್ಲ ಎತ್ತರಕ್ಕೇ ಏರುವ
ನಿನ್ನ ಗಮ್ಯದ ಸ್ಥಿತಿ
ಎಲ್ಲವನ್ನು ಕೇಳುತ್ತಾ ಕೇಳಿಸಿಕೊಳ್ಳುತ್ತಾ
ಹು ಹೂಹು ಅನ್ನುತ್ತಾ
ಸರಿ ರಾತ್ರಿಗೆ ಮಾತು ಮುಗಿಸುವ ಹೊತ್ತು ಬರುತ್ತದಲ್ಲ
ಇಂತಹ ರಾತ್ರಿಗೆ ನಾನು ಏನು ತಾನೆ ವಾಪಸ್ಸು ಕೊಡಬಲ್ಲೆ?
ಪ್ರೀತಿಗೆ ಸಂಬಂಧ ಬಹಳ ಚಿಕ್ಕದು
ಪ್ರೀತಿ ದೂರ ಅಂತರಗಳನ್ನು
ಪರಿಗಣಿಸದೇ ಸಾಗುವಂತದ್ದು
ಮುಖ ಬಣ್ಣ ಮಾಂಸಖಂಡಗಳನ್ನು ಲೆಕ್ಕಿಸದೆ
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು
ಸಾಕಷ್ಟು ಕಾಲುದಾರಿಗಳನ್ನು
ಜತೆಯಾಗಿ ಸವೆಸುವಂತದ್ದೆಂದು
ವ್ಯಾಖ್ಯಾನ ಕೊಡಬೇಕೆನಿಸುತ್ತದೆ
ಅಷ್ಟರಲ್ಲಿ ಪ್ರೀತಿ ಇನ್ನೇನೊ ಹೊಸ ರೂಪಕವನ್ನು ಹೊತ್ತು ತವರಿಗೆ ಬಂದಂತೆ ಬರುತ್ತದೆ
ಮತ್ತೆ ನಿನ್ನನ್ನು ನನ್ನವಳಾಗಿ ನೋಡಿ ಇಡುವಾಗ
ತೀರಿ ಹೋದ ತಂದೆಯ ಫೋಟೋದಲ್ಲಿನ ಕಣ್ಣುಗಳಿಗೆ ಜೀವ ಬಂದಂತೆ ಅನಿಸುತ್ತದೆ
ಇವೆಲ್ಲವೂ ನಿನಗೆ ಹೊಸದು
ನನಗೂ ಕೂಡ
ಆದರೆ ನಮ್ಮ ನಮ್ಮ ಅಂತರಂಗದ ಆಕಾಶವಾಣಿಗೆ
ನಾವಿಬ್ಬರೇ ಶ್ರೋತೃಗಳು
ನಮ್ಮ ಯಾವತ್ತಿನದೇ ಮಾತು ಮುಗಿಯುವ ಹೊತ್ತಿನಲ್ಲಿ
ಜೀವ ತನ್ನ ತೇವದ ಋಣಕ್ಕೆ
ಕಾಪಿಟ್ಟುಕೊಂಡಿದ್ದ ಸತ್ವವನ್ನು ನೆಲದ ಮೇಲೆ ಮೊಳಕೆಯೊಡೆದಂತೆ ಬದಲಾಗುತ್ತದೆ
ತನ್ನನ್ನು ತಾನೇ ಸೃಷ್ಟಿಸಿಕೊಳ್ಳಲು
ಕಂಡು ಕೊಳ್ಳಲು
ಕೂಡಿಕೊಳ್ಳಲು
ಅಲ್ಲೆಲ್ಲೊ ದೂರದಲ್ಲಿ
ಜನ ನಿಬಿಡವಾದ ರಸ್ತೆಯಲ್ಲಿ ಕೈ ಕೈ ಹಿಡಿದು ಸಾಗಿ
ಹತ್ತಿರಕ್ಕೆ ಹತ್ತಿರವಾಗಿ
ಎದೆಯ ಸದ್ದು ಕೇಳುವ
ನನಗೆ ಮರುಹುಟ್ಟಿನ ಅನುಭವ
ಮಾತು ಮುಗಿಯುವ ಹೊತ್ತಿನಲ್ಲಿ ಮಾತ್ರ
ನಿನ್ನಿಂದ ಏನನ್ನೋ ನಿರೀಕ್ಷಿಸಿ
ಖಾಲಿ ಖಾಲಿ ಅನಿಸಿಕೊಂಡು
ಹೊಸದೊಂದು ನಾಳೆಗೆ
ಹಳೆಯ ಪರಿಚಯದ ನೆನಪಿಗೆ
ಮತ್ತು,
ಮಾತನಾಡುತ್ತಲೇ ನಿದಿರಿಗೆ ಜಾರುವ ನಿನಗೆ
ಈ ಜನ್ಮದ ಒಲವಿನ ನಮಸ್ಕಾರ
ಸುಂದರವಾಗಿದೆ…
ಎದೆಯ ಗೂಡೊಳು ಹೊಕ್ಕು ದಡಗುಡಿಸುವ ತಣ್ಣನೆಯ ಚಂದ್ರಣ್ಣನ ಮನದ ಮಾತುಗಳ ಜೊತೆಗೆ ನಮ್ಮ ಭಾವನೆಗಳನ್ನು ಹೊತ್ತ ಪದಗಳ ಬಂಡಿ ಓದುಗರೆಲ್ಲರ ಮನಮನೆ ಮುಟ್ಟಲಿ…
– ಪ್ರದೀಪ್ ಕುಮಾರ್ ಹಾಸನ
ಧನ್ಯವಾದ
ತಂದೆಯ ನೆನಪಲ್ಲೇ ಕಣ್ಣುಗಳಲ್ಲಿ ನೀರು ತುಂಬುವ ಮನದಾಳದ ಮಾತು ಚಂದ್ರು sir, ತುಂಬಾ ಚೆನ್ನಾಗಿ ಇದೆ ನಿಮ್ಮ ಬರವಣಿಗೆ.
ನೈಸ್