ಅರುಣಾ ಶ್ರೀನಿವಾಸ ಕವಿತೆ-ನಿಂಗವ್ವನ ನಗು ಮತ್ತು ಬರಗಾಲ

ಕಾವ್ಯ ಸಂಗಾತಿ

ನಿಂಗವ್ವನ ನಗು ಮತ್ತು ಬರಗಾಲ

ಅರುಣಾ ಶ್ರೀನಿವಾಸ

ಕಾಲಲ್ಲಿ ಕೆರ ಇಲ್ಲದೆಯೇ
ತಲೆ ಮೇಲೆ ಕೊಡ ಹೊತ್ತು
ನಡೆಯುತ್ತಿದ್ದಳು ನಿಂಗವ್ವ
ಮೈಲುಗಟ್ಟಲೆ ದೂರ
ನೀರಿನದೇ ಹಾಹಾಕಾರ…

ಆಗಲೂ ನಿಂಗವ್ವನ ಮುಖದ
ನಗೆ ಮಾಸಿರಲಿಲ್ಲ ನೋಡಿ.‌‌

ಸುಟ್ಟ ಕಾಲುಗಳ ತುಂಬ
ಎದ್ದ ಗುಳ್ಳೆಗಳಿಗೆ ಸಮಾಧಾನಿಸುವಷ್ಟು
ವ್ಯವಧಾನ ಇರದಾಕೆ….
ಇದೇ ಅಚ್ಚ ಬಿಳಿಯಾಗಿದ್ದ ನಿಂಗವ್ವ
ಬಿಸಿಲಿಗೊಡ್ಡಿ ಕರ್ರಗೆ ಕರಟಿದಾಕೆ….
ಬಾಳ ಬೆಂಕಿಯೊಳಗೆ
ಬೆಂದು ಹೊಳೆದಾಕೆ….

.

ಆಗಲೂ ನಿಂಗವ್ವನ ಮುಖದ ನಗೆ
ಮಾಸಿರಲಿಲ್ಲ ನೋಡಿ…

ತಂದ ಒಂದೆರಡು ಕೊಡ ನೀರಿನಲ್ಲೂ
ಅದ್ಹೇಗೆ ಅಡುಗೆ ಮನೆ ಹೊಕ್ಕು
ಸದ್ದು ಮಾಡಿದ್ದಳೋ…
ನೆಟ್ಟ ಒಂದೆರಡು ಗಿಡಗಳಿಗೆ
ನ್ಯಾಯ ಒದಗಿಸಿದ್ದಳೋ…
ಜಿಪುಣತೆಯಿಲ್ಲದೆಯೇ
ನೀರುಳಿಸುವ ಪಾಠ ಅವಳಿಂದಲೇ
ಕಲಿಯಬೇಕು…

ಆಗಲೂ ನಿಂಗವ್ವನ ಮುಖದ ನಗೆ
ಮಾಸಿರಲಿಲ್ಲ ನೋಡಿ..‌‌..

ಅವ್ವ ನೀರಿಗಾಗಿ ಪಟ್ಟ ಪಾಡು…
ನೋಡಲಾಗದೆ ಕಲಿತ ಮಕ್ಕಳು
ಬೆಳೆದು ಹೊರಟ ಪೇಟೆಯ ಜಾಡು….
ದೊಡ್ಡ ಬಂಗಲೆಯೊಳಗೆ
ಈಗ ಹಣದ ಹಾಡು…

ಈಗ ನಿಂಗವ್ವನಿರುವ
ಪೇಟೆ ಮನೆ ತುಂಬಾ ನಲ್ಲಿ ನಲ್ಲಿಗಳಲ್ಲಿ
ನೀರಿನದೇ ಕಾರುಬಾರು…
ಬಡತನದ ಹೇಳ ಹೆಸರಿಲ್ಲದ ಸೂರು…
ಒಂದೇ ಸೂರಿನಡಿ ಮಾತಿಗೂ ಸಿಗದ
ಮಕ್ಕಳ ದುಡ್ಡು ಗಳಿಸುವ ಜಾಡು…

ಆದರೂ…
ನಿಂಗವ್ವನ ಮುಖದಲ್ಲೀಗ
ನಗುವಿರದೆ ಏಕೋ ಬರಡು… ಬರಡು…
ಬರಗಾಲದ ಅಪ್ಪಟ ಕೊರಡು…


Leave a Reply

Back To Top