ನಯನ. ಜಿ. ಎಸ್.-ಹೀಗೊಂದುಕವಿತೆ

ಕಾವ್ಯ ಸಂಗಾತಿ

ಹೀಗೊಂದು ಕವಿತೆ

ನಯನ. ಜಿ. ಎಸ್.

ಕಾಡದಿರು ಕವಿತೆಯೇ ಕಹಿ ನೆನಪುಗಳ ಕದವ ಮತ್ತೆ ಮತ್ತೆ ತಟ್ಟಿ,
ಎಲ್ಲೆಲ್ಲು ವ್ಯಾಪಿಸಿ ಹುಚ್ಚೆದ್ದು ಕುಣಿಯದಿರು ಗೆದ್ದೆನೆಂದು ಭಾವಗಳ ಮೆಟ್ಟಿ..
ನಿಲ್ಲ ಹೊರಟಿಹುದು ಬದುಕು ಇಂಗಿಸಿ ನೋವ ನವ ಕನಸುಗಳಿಗೆ ನೆಚ್ಚಿ,
ನಿರ್ಲಕ್ಷ್ಯದ ಹಂಗ ತೊರೆಯುತ ಸಹಕರಿಸು ಮನವೇ ಧೃತಿಯ ಮೆಚ್ಚಿ.

ತ್ರಾಸವಿದು ಬದುಕು ದಕ್ಕದು ಇಚ್ಛಿಸಿದ್ದೆಲ್ಲ ಕ್ಷಣ ಕ್ಷಣಗಳ ಪರ್ಯಂತ,
ಕಂಬನಿಯನೂ ಹೀರಿ ಹೃದಯದಿ ನೆಲೆಸೀತು ಚಾಂಚಲ್ಯಕಿತ್ತು ಸಮ್ಮತ..
ಆದರಿಸು ವಾಂಛೆಗಳ ಚಿವುಟದೇ ಚಿಗುರುತ್ತಿರಲಿ ವಿಶ್ವಾಸದ ಸೆಲೆಯಲಿ,
ಒಳಿತು ನೆನೆಯಲು ಚಿಂತನೆಗಳ ತೊರೆಯುತ ಚಿಂತೆಯ ಬಾಳ್ವೆಯಲಿ.

ಸಹ ಸಖ್ಯರು ಯಾರಿಲ್ಲವಿಲ್ಲಿ ಒಂಟಿ ಪಯಣವಿದು ಎನುತ ತಿಳಿ ಮನುಜ,
ಇಣುಕಲೇನು ಸೋಲು ? ಗೆಲುವಿಗೂ ಪಾಠವದು ಅರಿತರೆ ಸ್ಥೈರ್ಯ ಸಹಜ..
ಅಳಲುಗಳ ಶಾಪಕೆ ಸೆಡ್ಡು ಹೊಡೆಯಲು ಇಹುದಲ್ಲಿ ನಗುವಿನ ಅಭಿಧಾನ,
ಭಕುತಿ ಬಲುಹಿನಲಿ ಇಂಬು ಕಾಣಲು ಮೇಳವಿಸುವುದು ವಿಜಯದ ನರ್ತನ


One thought on “ನಯನ. ಜಿ. ಎಸ್.-ಹೀಗೊಂದುಕವಿತೆ

Leave a Reply

Back To Top