ಬೆಳಗಾವಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆಯಾಗಿ ಹಿರಿಯ ಕವಯತ್ರಿ ಸಾಹಿತಿ ಆಶಾ ಕಡಪಟ್ಟಿ

ವಿಶೇಷ ಲೇಖನ

ಬೆಳಗಾವಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆಯಾಗಿ

ಆಶಾ ಕಡಪಟ್ಟಿ

ವಿಶೇಷ ಲೇಖನ

ಬೆಳಗಾವಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆಯಾಗಿ

ಆಶಾ ಕಡಪಟ್ಟಿ

( ಭಾವ ತುಂಬಿದ ಬರಹ, ಇಂಪಾದ ಕಂಠಸಿರಿ ಸರ್ವರನ್ನು ಪ್ರೀತಿಯಿಂದ ಆದರಿಸುವ  “ಆಶಕ್ಕ” ಎಂದೇ ಚಿರಪರಿಚಿತರಾಗಿರುವ ಕವಯತ್ರಿ, ಸಾಹಿತಿಯೂ ಆಗಿರುವ ಕ್ರಿಯಾಶೀಲೆ ಆಶಾ ಕಡಪಟ್ಟಿ ಅವರು ಬೆಳಗಾವಿ ತಾಲೂಕು ಎಂಟನೆ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆ ಆಗಿದ್ದು, ಇಂದು ಸೋಮವಾರ ದಿ. ೧೨ ಡಿಸೆಂಬರರಂದು ಅರಳಿಕಟ್ಟಿಯಲ್ಲಿ ನಡೆಯಲಿದೆ. ತನಿಮಿತ್ತ ಪರಿಚಯಾತ್ಮಕ ಲೇಖನ.)

       “ವಿಭಿನ್ನವಾಗಿ ಗುರುತಿಸಿ ಕೊಂಡು ಸಾಧನೆಯ ಪಥದಲ್ಲಿ ನಡೆಯಬೇಕು” ಎಂದುಕೊಳ್ಳಬೇಕು ಎನ್ನುವವರಲ್ಲಿ ನಮ್ಮ ಆಶಾ ಕಡಪಟ್ಟಿಯವರೊಬ್ಬರು . ನೇರ ಮಾತು, ದಿಟ್ಟೆಯಾದರೂ ಎಲ್ಲರನ್ನೂ ಕೂಡಿಸಿಕೊಂಡು ಸಂಘಟನೆಯ ಮೂಲಕ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಏನಾದರೊಂದು ವಿಶೇಷತೆಯ ಮೂಲಕ ಸದಾ ಸೃಜನಶೀಲತೆಯನ್ನು ತೋರುವಲ್ಲಿ ಆಶಾ ಅವರು ಸದಾ ಮುಂಚೂಣಿಯಲ್ಲಿ ಇರುತ್ತಾರೆ.

      ವರ್ತಮಾನಕ್ಕೆ ಸ್ಪಂದಿಸುತ್ತ, ಹಿಂದಿನದನ್ನು ನೆನೆಯುತ್ತ ಭವಿಷ್ಯಕ್ಕೆ ಭರವಸೆಯಾಗತಕ್ಕಂತ ವೈಚಾರಿಕ ದೃಷ್ಟಿಕೋನ ಹೊಂದಿದ ಆಶಕ್ಕ ಅವರು, ಬೆಳಗಾವಿ ಸಾರಸ್ವತ ಲೋಕದಲ್ಲಿ ಜನ ಮಾನಸದ ವ್ಯಕ್ತಿಯಾಗಿ ” ಆಶಕ್ಕ “ಎಂದೇ ಗುರುತಿಸಿಕೊಂಡಿರುವ ಇವರಿಗೆ ಬೆಳಗಾವಿ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಆಗುವ ಭಾಗ್ಯ ಸಂದಿದೆ.

      ಅಪ್ಪಟ್ಟ ಜನಪದ ಹಿನ್ನಲೆಯ ಆಶಕ್ಕ ಮೂಲತಃ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯವರು.  ವಿವಾಹದ ನಂತರ ಬೆಳಗಾವಿಯಲ್ಲಿ ನೆಲಸಿದವರು. ಬೆಳಗಾವಿಯ ಸಾಹಿತ್ಯಿಕ ಹಾಗೂ ಸಾಮಾಜಿಕ ವಲಯದಲ್ಲಿ ಸದಾ ಕ್ರಿಯಾಶೀಲರು. ಆಶಕ್ಕ ಎಲ್ಲಿರುತಾರೊ ಅಲ್ಲಿ ಅವರೊಬ್ಬರೇ ಇರಲ್ಲ, ಬದಲಿಗೆ ಅವರೊಂದಿಗೆ ಒಂದು ಮಹಿಳೆಯರ ದಂಡೇ ಇರುತ್ತೆ. ಅವರು ಯಾವುದೇ ಒಂದು ಕಾರ್ಯಕ್ರಮ ಸಂಯೋಜನೆ ಮಾಡಲಿ ಅಲ್ಲೊಂದು ಹೊಸತು ಇರುತ್ತದೆ. ಚಿಕಿತ್ಸಿಕ ದೃಷ್ಟಿಕೋನವಿರುತ್ತದೆ. ಶಿಸ್ತುಬದ್ಧತೆಗೆ ಹೆಸರುವಾಸಿ ಅವರು.

        ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಇವರು ಮೂಲತಃ ಕವಯತ್ರಿಯಾದರೂ ಕಾದಂಬರಿ, ಚುಟುಕು, ಕಥೆ, ಹಾಸ್ಯ, ಲೇಖನ, ಜನಪದ ಪ್ರಕಾರಗಳಲ್ಲಿ ಅನೇಕ ಕೃತಿಗಳನ್ನು ರಚಿಸಿ ಭುವನೇಶ್ವರಿಯ ಮಡಿಲು ತುಂಬಿದವರು. ಆಧುನಿಕತೆಗೆ ಸ್ಪಂದಿಸುವಂತೆ ಮಹಿಳೆತರಲ್ಲಿ ಸ್ಪೂರ್ತಿ ತುಂಬಿ ಪ್ರತಿಭೆ ತೋರಲು ಹುರಿದುಂಬಿಸುತ್ತಾರೆ. ನಾಟಕ, ನೃತ್ಯ, ವೇಷಭೂಷಣ, ಚರ್ಚೆ, ಹರಟೆ, ಹಾಸ್ಯ, ಭಾಷಣ ಮೊದಲಾದ ಸ್ಪರ್ಧೆಗಳನ್ನು ಹಮ್ಮಿಕೊಂಡು ಮಹಿಳೆಯರು ಪಾಲ್ಗೊಳ್ಳುವಂತೆ ಪ್ರೇರೇಪಿಸುವಲ್ಲು ಅವರದು ಎತ್ತಿದ ಕೈ. ಅವರು ಹೇಳುವುದಕ್ಕಾದರೂ , ಹುರಿದುಂಬಿಸಿದಕ್ಕಾದರೂ ಭಾಗವಹಿಸಬೇಕು ಎನ್ನುವಷ್ಟರ ಮಟ್ಟಿಗೆ ಮಹಿಳೆಯರಲ್ಲಿ ಶಕ್ತಿ ತುಂಬುವ ಗುಣ ಅವರದು.

    ಆಶಕ್ಕ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯವರು. ಸುಸಂಸ್ಕೃತ, ಸಾಹಿತ್ಯಿಕ ಹಿನ್ನಲೆಯ ಪ್ರತಿಷ್ಠಿತ ಕಾಡದೇವರಮಠ ಮನೆತನದವರು. ತಂದೆ ಕಾಡಯ್ಯ, ತಾಯಿ ಚೆನ್ನವ್ವ ಅವರ ಕುಡಿ. ತಾಯಿ ಜನಪದ ಸಾಹಿತ್ಯ ಆಸಕ್ತರು, ತಂದೆ ಕೂಡ ಹಾಡುಗಾರರು, ಚಿಕ್ಕಪ್ಪಂದಿರುಗಳಾದ ಖ್ಯಾತ ಮಕ್ಕಳ ಸಾಹಿತಿ ಜಯವಂತ ಕಾಡದೇವರಮಠ, ಹಾಗೂ ಕನ್ನಡ  ಹೋರಾಟಗಾರ  ವೀರೂಪಾಕ್ಷಯ್ಯ ಕಾಡದೇವರಮಠ , ಗುರುಗಳಾದ ಸಾಹಿತಿ ಹುಲಗಬಾಳಿ ಸರ್, ಬಿ.ಆರ್. ಪೊಲೀಸಪಾಟೀಲ ಇವರೆಲ್ಲರ ಒಡನಾಟದಲ್ಲಿ ಬೆಳೆದವರು. ಹೀಗಾಗಿ ಆಶಕ್ಕ ಅವರಿಗೆ ಸಾಹಿತ್ಯ, ಸಂಗೀತಾಸಕ್ತಿ ಮೂಡಿತು.  ಪ್ರಾಥಮಿಕದಿಂದ ಪಿ.ಯು.ಸಿ ವರೆಗಿನ ಶಿಕ್ಷಣವನ್ನು ಬನಹಟ್ಟಿಯಲ್ಲಿಯೇ ಪೂರೈಸಿಕೊಂಡರು. ಪಿಯುಸಿ ಪ್ರಥಮ ವರುಷದಲ್ಲಿದ್ದಾಗಲೇ ಇಂಜನೀಯರ್ ಬಾಲಚಂದ್ರ ಕಡಪಟ್ಟಿ ಅವರನ್ನು ವಿವಾಹವಾದರು. ಅವರು ಮಿಲ್ಟ್ರಿ ಇಂಜನಿಯರಿಂಗ್ ಸರ್ವಿಸ್ ದಲ್ಲಿ ಸಿನಿಯರ್ ಆಫೀಸರ್ ಇದ್ದುದರಿಂದ ಮಹಾರಾಷ್ಟ್ರ, ಆಂದ್ರ ಮೊದಲಾದ ಅಂತರರಾಜ್ಯಗಳಲ್ಲಿ ವಾಸಿಸುವ ಅವಕಾಶ ದೊರೆತ ಫಲವಾಗಿ ಹಲವಾರು ಭಾಷೆಗಳನ್ನು ಕಲಿಯುವ ಅವಕಾಶ ದೊರಕಿತು.

     ಸುಮಧುರ ಕಂಠಸಿರಿಯನ್ನು ದೈವದತ್ತವಾಗಿ ಪಡೆದ ಇವರು ಉತ್ತಮ ಗಾಯಕಿ ಕೂಡ. ತಾವು ರಚಿಸಿದ ಕವನಗಳಿಗೆ ತಾವೇ ರಾಗ ಸಂಯೋಜಿಸಿ ಸುಮಧುರವಾಗಿ ಹಾಡುತ್ತಿರುತ್ತಾರೆ. ಇವರ ಜಾನಪದ ಹಾಡುಗಾರಿಕೆಯಲ್ಲಿ ತುಂಬ ವೈಶಿಷ್ಟ್ಯತೆಯನ್ನು ಕಾಣುತ್ತೇವೆ. ಕೇಳುಗರ ಮೈಮರೆಸುವ ಕಲೆಗಾರಿಕೆ ಸಿದ್ದಿಸಿಕೊಂಡವರು. ವಾಕ್ ಚಾತುರ್ಯವು ಅಷ್ಟೇ ನಯ, ವಿನಯದೊಂದಿಗೆ ದಿಟ್ಟವಾಗಿ, ಕರಾರುವಕ್ಕಾಗಿ , ತೂಕಬದ್ಧವಾಗಿ ಮಾತನಾಡುವ ಶೈಲಿ ಅವರದು.

     ಗ್ರಾಮೀಣದಿಂದ  ತಾಲೂಕು, ಜಿಲ್ಲಾ, ರಾಜ್ಯ ಹಾಗೂ ಅಂತರರಾಷ್ಟ್ರೀಯ ಕವಿಗೋಷ್ಠಿಗಳಲ್ಲಿ ಕವನವಾಚನ, ಚಿಂತನಗೈದಿದ್ದಾರೆ. ಮೈಸೂರು ದಸರಾ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ವಿಶ್ವಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿಯೂ ಕವನ ವಾಚಿಸಿದ್ದಾರೆ. ಅಲ್ಲದೇ ದೂರದರ್ಶನ, ಆಕಾಶವಾಣಿ ಕಾರ್ಯಕ್ರಮಗಳಲ್ಲಿಯೂ ಕವನವಾಚನ,  ಸಂದರ್ಶನ ನೀಡಿದ್ದಾರೆ. ಆಶಕ್ಕರ ಹಲವಾರು ಲೇಖನಗಳು , ಚಿಂತನೆಗಳು  ಅನೇಕ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಣೆಗೊಂಡಿವೆ. ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿ ರಚನಾತ್ಮಕ ಕಾರ್ಯಕೈಗೊಳ್ಳುವುದಷ್ಟೇ ಅಲ್ಲದೇ ಜಿಲ್ಲೆಯ ಹಲವಾರು ತಾಲೂಕಿನಲ್ಲಿ ಸಂಚರಿಸಿ ಲೇಖಕಿಯರ ಸಂಘಗಳನ್ನು ಸ್ಥಾಪಿಸಲು ಕಾರಣಿಕೃತರಾಗಿದ್ದಾರೆ.

        ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೃತಿಗಳು ಮೂಡಿ ಬಂದಿವೆ. ಅವುಗಳಲ್ಲಿ ‘ ಸೋಗಿನ ಚಂದ್ರ’, ‘ ಶುದ್ಧನಾದ’, ‘ ಚಿತ್ತಚಿತ್ತಾರ’ ಕವನಸಂಕಲನಗಳು,  ‘ಹನಿಗರಿ’ ಚುಟುಕು ಸಂಕಲನ, ‘ ಅನಿವಾರ್ಯ ಹಾಗೂ ‘ ಸಂಪದ’  ಕಾದಂಬರಿಗಳು, ” ಜಾನಪದ ಚುಕ್ಕೆಗಳು”, ” ಅರಗಿಣಿ” ಮಕ್ಕಳ ಕವನ ಸಂಕಲನ ಕೃತಿಗಳನ್ನು ಹೊರತಂದಿದ್ದು,  ‘ ಇರುವೆ’ ಹಾಸ್ಯ ಲೇಖನ ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಆಯ್ಕೆಯಾಗಿದೆ. ” ನೆನಪು ಕಾಡತಾವ” ಸಂಗೀತ, ಸಾಹಿತ್ಯ, ಧ್ವನಿಯೊಂದಿಗೆ ಧ್ವನಿಸುರಳಿ ಹೊರತಂದು ಉತ್ತರ ಕರ್ನಾಟಕದ ಮೊಟ್ಟಮೊದಲ ಕವಯತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಇನ್ನೊಂದು ಹೆಮ್ಮೆಯ ಸಂಗತಿ ಎಂದರೆ ” ಇದು ಎಂಥಾ ಪ್ರೇಮವಯ್ಯಾ” ಚಲನಚಿತ್ರಕ್ಕೆ ಶೀರ್ಷಿಕೆ ಗೀತ ರಚನೆ ಮಾಡಿದ್ದು ಇದನ್ನು ಡಾ. ರಾಜಕುಮಾರ ಹಾಡಿದ್ದಾರೆ.

    ನಾಡಿನ ಹತ್ತು ಹಲವು ಸಂಘಟನೆಯಲ್ಲಿ ಸ್ಥಾಪಕರಾಗಿ, ನಿರ್ದೇಶಕರಾಗಿ, ವಿವಿಧ ಪದಾಧಿಕಾರಿ ಸ್ಥಾನಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಬೆಳಗಾವಿ ಲೇಖಕಿಯರ ಸಂಘದ ಅಧ್ಯಕ್ಷೆ, ಸಂಸ್ಕೃತಿ ಮಹಿಳಾ ಮಂಡಳ ಅಧ್ಯಕ್ಷೆ, ಅಖಿಲ ಭಾರತ ಕವಯಿತ್ರಿರ ಸಂಘಟನೆ ನವದೆಹಲಿ , ಕನ್ನಡ ಸಾಹಿತ್ಯ ಪರಿಷತ್ತ  ಬೆಂಗಳೂರು, ಲಿಂಗಾಯತ ಮಹಿಳಾ ಸಮಾಜ, ಉತ್ತರ ಕರ್ನಾಟಕ ಲೇಖಕಿಯರ ಸಂಘಗಳ ಅಜೀವ ಸದಸ್ಯೆಯಾಗಿ, ಬೆಳಗಾವಿ ಜಿಲ್ಲಾ ಗಡಿಭಾಗದ ಮಹಿಳಾ ಸದಸ್ಯೆ ಕಾರ್ಯದರ್ಶಿ, ಡಾ.ಬೆಟಗೇರಿ ಕೃಷ್ಣಶರ್ಮಾ ಸ್ಮಾರಕ ಟ್ರಸ್ಟ್ ಬೆಳಗಾವಿ ಸದಸ್ಯೆಯಾಗಿ, ‘ಸುವ್ವಾಲೆ ‘  ತ್ರೈಮಾಸಿಕ  ಪತ್ರಿಕೆಯ ಸಂಪಾದಕಿಯಾಗಿ ಹಲವಾರು ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

       ಆಶಕ್ಕರ ಮೇರು ವ್ಯಕ್ತಿತ್ವದ ಸಾಧನೆಗೆ ಹಲವಾರು ಪ್ರಶಸ್ತಿ, ಬಿರುದು, ಸನ್ಮಾನಗಳು ಸಂದಿವೆ. ಕನ್ನಡ ಜ್ಯೋತಿ ರಾಜ್ಯ ಪ್ರಶಸ್ತಿ, ಸ್ತ್ರೀ ಶಕ್ತಿ ಒಕ್ಕೂಟದಿಂದ ” ಕರ್ನಾಟಕ ರತ್ನ ” ಪ್ರಶಸ್ತಿ, ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಪ್ರಶಸ್ತಿ,  ಕರ್ನಾಟಕ ರಾಜ್ಯ ಡಾ. ಅಂಬೇಡ್ಕರ್ ರತ್ನ ಪ್ರಶಸ್ತಿ, ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ. ಕನ್ನಡ ಸಾಹಿತ್ಯ ಪರಿಷತ್ತು ಸಾಧಕರ ಗೌರವ, ಅಖಿಲಭಾರತ ವೀರಶೈವ ಮಹಾಸಭಾದಿಂದ ” ಸಾಂಸ್ಕೃತಿಕ ಆಶಾದೀಪ” ಪ್ರಶಸ್ತಿ, ಕರ್ನಾಟಕ ರಾಜ್ಯಪಾಲರಾಗಿದ್ದ ಟಿ.ಎನ್ ಚತುರ್ವೇದಿ ಅವರಿಂದ ವಿಶೇಷ ಸನ್ಮಾನ ಸಂದಿದೆ. ೨೦೨೨ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಸಾಂಸ್ಕೃತಿಕ ಉತ್ಸವದ ಅಧ್ಯಕ್ಷರಾಗಿದ್ದರು.

      ಅಪರೂಪದ  ಘನವ್ಯಕ್ತಿತ್ವದ  ಆಶಾ ಕಡಪಟ್ಟಿ ಅವರನ್ನು ಅರಳಿಕಟ್ಟಿಯಲ್ಲಿ ನಡೆಯಲಿರುವ ಬೆಳಗಾವಿ ತಾಲೂಕು ಎಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದು ಹೆಮ್ಮೆಯ ಸಂಗತಿ. ಅವರ ಘಟನವ್ಯಕ್ತಿತ್ವದಕ್ಕೆ ಸಂದ ಗೌರವವಿದು. ಅರಳಿಕಟ್ಟಿ ವಿರಕ್ತಮಠದ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ. ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರ ಸಾರಥ್ಯದಲ್ಲಿ, ತಾಲೂಕಾ ಕಸಾಪ ಅಧ್ಯಕ್ಷ ಸುರೇಶ ಹಂಜಿ ಅವರ ನೇತೃತ್ವದಲ್ಲಿ ಜರುಗಲಿರುವ ಸಮ್ಮೇಳನಕ್ಕೆ ಎಲ್ಲ ಕನ್ನಡ ಮನಸ್ಸುಗಳ ಶುಭಹಾರೈಕೆ.


     ರೋಹಿಣಿ ಯಾದವಾಡ

Leave a Reply

Back To Top