ಪುಸ್ತಕ ಸಂಗಾತಿ
ಮಹೇಶ್ ಹೆಗಡೆ ಹಳ್ಳಿಗದ್ದೆಯವರ ಗಜಲ್ ಸಂಕಲನ
ಮಹತಿ
ಮಹತಿ ಗಜ಼ಲ್ ಸಂಕಲನ
ಇತ್ತೀಚೆಗೆ ನಾನು ಓದಿದೊಂದು ಕೃತಿ ಮಹತಿ ಗಜ಼ಲ್ ಸಂಕಲನ. ಅನಾಯಾಸವಾಗಿ ಓದಿಸಿಕೊಂಡು ಹೋಗಿ ನೇರವಾಗಿ ಮನದೊಳಗೆ ಇಳಿದು, ಓದಿ ಅದೆಷ್ಟೋ ಹೊತ್ತಿನ ಬಳಿಕವೂ ಎದೆಯಾಳದಲ್ಲಿ ಕಾಡುತ್ತಿದ್ದ ಸಾಲುಗಳು, ಎಲ್ಲರೆದೆಯನ್ನೂ ಹೊಕ್ಕಲಿ ಎಂಬ ಉದ್ದೇಶದಿಂದ ಈ ಕೃತಿಯ ಪುಟ್ಟ ಕೃತಿ ಪರಿಚಯವನ್ನು ನಿಮ್ಮ ಮುಂದಿಡುವ ಬಯಕೆ. ನನ್ನೊಳಗೆ ಹೊತ್ತಿದ ದೀಪದ ಪ್ರಖರತೆ ಸುತ್ತೆಲ್ಲ ಹರಡಲಿ ಎಂಬ ಆಸೆ.
ಮಹತಿ-ಗಜ಼ಲ್ ಸಂಕಲನ
ಕವಿಗಳು- ಮಹೇಶ್ ಹೆಗಡೆ ಹಳ್ಳಿಗದ್ದೆ.
ಮಹೇಶ್ ಹೆಗಡೆ ಹಳ್ಳಿಗದ್ದೆಯವರ ಮಹತಿ ಗಜ಼ಲ್ ಸಂಕಲನ ಸುಮಾರು ನೂರು ಆಯ್ದ ಅವರ ಸ್ವರಚಿತ ಗಜ಼ಲ್ ಗಳು ಹಾಗು ಕೆಲವೇ ಕೆಲವು ಅವರ ಬಾಳ ಸಂಗಾತಿ ಮೈತ್ರಿ ಹೆಗಡೆಯವರ ಗಜ಼ಲ್ ಗಳ ಒಟ್ಟು ನಿಕ್ಷೇಪವಾಗಿದೆ. ಗಜ಼ಲ್ ಗುರುಗಳೆಂದು ಮಹೇಶ ಹೆಗಡೆಯವರು ಒಪ್ಪಿಕೊಳ್ಳುತ್ತಾ,ಸಹಪಾಠಿಯೂ ಆಗಿರುವ ನಿರ್ಮಲಾ ಹೆಗಡೆ ಗೋಳಿಕೊಪ್ಪ ಅವರಿಂದ ಮುನ್ನುಡಿ ಬರೆಯಿಸಿ, ಸ್ನೇಹಿತರಾದ ಸಂತೋಷ್ ಉಪಾಧ್ಯಾಯ, ದೆಹಲಿ ಅವರಿಂದ ಶುಭ ಹಾರೈಕೆಗಳನ್ನು ಬರೆಸಿಕೊಂಡು, ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರಾಗಿ ಸ್ನೇಹಿತರಾದ ಮಧುರಾ ಮೂರ್ತಿ ಅವರ ಬೆನ್ನುಡಿಯೊಂದಿಗೆ, ಸದ್ಗುರುಗಳಾದ ಶ್ರೀ ಎಸ್ ಎನ್. ಭಟ್ ಚಿತ್ರಿಗಿ ಅವರಿಗೆ ಸಮರ್ಪಿಸಿ ಸಾರ್ಥಕತೆಯನ್ನು ಕಂಡುಕೊಂಡ ಸಂಕಲನವಿದು.
ಮಹೇಶ್ ಹೆಗಡೆಯವರ ಗಜ಼ಲ್ ಗಳು ಓದಿಸಿಕೊಂಡು ಹೋಗುವುದೇ ಅವುಗಳ ಅದ್ಭುತ ಭಾವ ಸಂವೇದನೆಗಳಿಗೆ. ಪ್ರತಿಮೆಗಳನ್ನು ಬಳಸಿ ಬರೆದ ಕೆಲವೊಂದು ಸಾಲುಗಳಂತೂ ಅಬ್ಬಾ ಎನಿಸಿ ಬಿಡುವಷ್ಟು ಮನವನ್ನು ಕಾಡುತ್ತದೆ. ಹೆದೆಯೇರಿಸಿ ಬಿಟ್ಟ ಬಾಣದಂತೆ ನೇರ ಅಂತರಾಳದಲ್ಲಿ ನೆಲೆಗೊಂಡು ಬಿಡುತ್ತದೆ. ಅವರ ಬಹುತೇಕ ಗಜ಼ಲ್ ಗಳು ಮೊದಲ ಸಾಲಿನಲ್ಲೇ ಓದುಗನನ್ನು ಹಿಡಿದಿಡುವುದು ಮಾತ್ರವಲ್ಲದೆ, ಮುಂದಿನ ಶೇರ್ ಗಳಲ್ಲಿ ಆಶಯದ ಕೊಂಡಿಗಳು ಕಳಚಿ ಎತ್ತೆತ್ತಲೋ ಸಾಗದೆ, ಕೊನೆಯವರೆಗೂ ಒಂದೇ ಆಶಯದ ಕೇಂದ್ರದಲ್ಲಿ ಸುತ್ತುತ್ತಾ ಅದೇ ಭಾವತೀವ್ರತೆಯ ಸ್ತರವನ್ನು ಕೊನೆಯ ಮಿಸ್ರಾದವರೆಗೂ ಉಳಿಸಿಕೊಂಡು ಹೋಗಿರುವುದೇ ಓದುಗನ ಹೃದಯದಲ್ಲೂ ಅಂಥದ್ದೇ ತೀವ್ರವಾದ ಭಾವ ಸಂವೇದನೆಯನ್ನು ಮೀಟುವುದಕ್ಕೆ ಕಾರಣವಾಗುತ್ತದೆ.
ಅವರ ಗಜ಼ಲ್ಗಳಲ್ಲಿ ಅಂತರಾತ್ಮನೊಡನೆ ನಡೆಸುವ ಸಂವಾದವಿದೆ, ಪ್ರೀತಿಯ ನಿವೇದನೆಗಳಿವೆ, ಮನದ ತಿರುಳನ್ನೇ ಕಾಡುವ ಸುಖಾಸುಮ್ಮನೆಯಲ್ಲದ ಹಲವು ಗಂಭೀರ ಪ್ರಶ್ನೆಗಳಿವೆ, ತೋರುವ ಸಣ್ಣನೆಯ ತಣ್ಣನೆಯ ಕೋಪವಿದೆ, ದೇವನೊಡನೆ ಬಿನ್ನಹವಿದೆ, ಪೌರಾಣಿಕತೆಯ ಸೊಗಡಿದೆ, ಪ್ರೇಮದ ಭಾವಗಳಿಗೆ ಅಲೌಕಿಕದ ಸ್ಪರ್ಶವಿದೆ. ಒಟ್ಟಿನಲ್ಲಿ ಪ್ರೇಮವೂ ಎಲ್ಲೋ ಒಳಗಿನ ಅಧ್ಯಾತ್ಮವನ್ನು ಬಡಿದೆಬ್ಬಿಸುತ್ತದೆಯಾ ಅನ್ನಿಸಿಕೊಳ್ಳುತ್ತಾ ಓದಿಸಿಕೊಂಡು ಹೋದಾಗಲೇ ಗಜ಼ಲ್ ಬರೆದ ಸಾರ್ಥಕ್ಯ ಅಲ್ಲಿಗೇ ದಕ್ಕಿಹೋಯಿತು ಎಂಬ ಭಾಸ ಓದಿದ ಮನದಂಗಳದ ತುಂಬೆಲ್ಲಾ ಕುಣಿದಾಡುತ್ತದೆ.
ಅವರ ಗಜ಼ಲ್ ಗಳು ಒಂದಕ್ಕಿಂದ ಒಂದು ಚೆನ್ನಾಗಿದ್ದರೂ, ಎಲ್ಲವನ್ನೂ ಬರೆದು ವಿಮರ್ಶಿಸ ಹೊರಟರೆ ಪುಟಗಟ್ಟಲೆಯಾಗಿ ಅದೊಂದು ಸುಂದರ ಗ್ರಂಥವಾದೀತು ಎಂಬ ಉದ್ದೇಶದಿಂದ ಕೆಲವೊಂದು ಸಾಲುಗಳನ್ನಷ್ಟೇ ನಿಮಗೆ ಪರಿಚಯಿಸುತ್ತಾ ಓದುಗನ ಹೃದಯವನ್ನೂ ಮೆಲ್ಲನೆ ತಟ್ಟುವ ಆಶಯ ನನ್ನದು.
ನಾ ಬರೆದ ಸಾಲುಗಳು ಒದ್ದೆಯಾಗಿವೆ ನಿನ್ನದೇ ಕಣ್ಣೀರೆಂದು ಬಲ್ಲೆ ನಾನು
ನೀ ನುಡಿಸಿದ ಕೊಳಲ ಸುಡುತ್ತಿದ್ದೆ ಒಲವು ಒಡೆದದ್ದು ಗೊತ್ತಾಗಲೇ ಇಲ್ಲ
-ಎಂದು ಮೊದಲ ಗಜ಼ಲ್ ನಲ್ಲೇ ಓದುಗನ ಮನವನ್ನು ಸೆರೆಹಿಡಿಯುತ್ತಾ ಆತ್ಮ ವಿಮರ್ಶೆಯಲ್ಲಿ ತೊಡಗಿಕೊಂಡಿರುವ ಕವಿಯು , ನನ್ನಲ್ಲಿಯೇ ಇಷ್ಟೊಂದು ಕೊಳಕು ತುಂಬಿದೆ, ತಿಳಿಯಲು ತಡವಾಯಿತು ಶಿವ ಎಂದು ಆತ್ಮವಿಮರ್ಶೆಯಲ್ಲಿ ಕಂಡುಕೊಳ್ಳುವ ಉತ್ತರದಿಂದ ಅಂತರಾಳವನ್ನು ತೊಡಕುಗಳಿಂದ ಮುಕ್ತ ಮಾಡಿಬಿಡುತ್ತಾರೆ. ಅಲ್ಲಿಗೆ ಕವಿಯ ಮನಸ್ಸು ಪರಿಶುದ್ಧವಾದಂತೆಯೇ.
ಇನ್ನೂ ಕೆಲವು ಗಜ಼ಲ್ ಗಳು ತಮ್ಮೊಳಗೆ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಲೇ ಉತ್ತರದ ತೀರವನ್ನು ತಲುಪಿಬಿಡುತ್ತವೆ.
ಹೃದಯ ಬೆಳಗುವ ಕನಸುಗಳು ಚಿರನಿದ್ರೆಗೆ ಜಾರಿದರೆ ಹೇಗೆ ಎಂಬ ಕಾಡುವ ಯೋಚನೆ, ಕತ್ತಲಲಿ ಸುರಿಸಿದ ಕಣ್ಣೀರು ಮನದ ಕನ್ನಡಿಯಲ್ಲಿ ಕಾಣುವ ಬಗೆ, ಏನು ಬರೆಯಲಿ ನನ್ನೊಳಗಿನ ಅಕ್ಷರಗಳ ತೊರೆ ಬತ್ತಿದ ಮೇಲೆ ಎಂದು ಕವಿಯ ಖಾಲಿಮನಸ್ಸು ಹಕ್ಕಿಯಿಲ್ಲದ ಗೂಡಿನಂತೆ ಕವಿಯನ್ನು ಕಾಡುವ ರೀತಿ, ನೆಮ್ಮದಿಯ ಅರಸುವ ಆತುರದಲಿ ಸಖ್ಯವ ಮುರಿದನೇನು ಅವನು ಗೆಳತಿ ,ಹಾಗೂ ದಾಹ ತೀರೀತೆಂದು ಎದೆಯ ಮೀಟಿ ಒಲವ ಕೊಡದೇ ಹೋದೆ ನೀನು ಎಂಬ ಕ್ಷಣಿಕ ಮೋಹದ ಮುಖವನ್ನು ಅನಾವರಣಗೊಳಿಸುವ ಹಾಗೂ ಗೆಳತಿಯನ್ನು ಸಮಾಧಾನಿಸುವ ಸಾಲುಗಳು,
ಕತ್ತಿಯನು ಚುಂಬಿಸಿದೆ ಗೊತ್ತಾಗದೆ ರುಧಿರ ಹರಿಯಿತಲ್ಲ ನೋಡು ಎಂದು ಮತ್ತೆ ಮತ್ತೆ ಆತ್ಮವಿಮರ್ಶೆಗೆ ತೊಡಗಿಸಿಕೊಳ್ಳುವ ಅದ್ಭುತ ರೀತಿ, ವಿದ್ಯೆಯ ಕಲಿತು ವಿನಯವ ಗಳಿಸಲು ಏನು ಮಾಡಲಿ ಎಂಬ ವಿನೀತಭಾವ, ತಟ್ಟಿ ಎಬ್ಬಿಸುತ ಕುಂಡಲಿನಿ ಚಕ್ರಗಳ ಆತ್ಮವ ಎಬ್ಬಿಸ ಬೇಕಿದೆ ನಾನು….. ಮೋಹವ ತೊರೆಯಲು ಮೋದಕ ನೀಡುವೆ ಅನುಗ್ರಹಿಸು ಎಂಬ ಅಲೌಕಿಕತೆಯಲ್ಲಿ ಉತ್ತರವನ್ನು ಕಂಡುಕೊಳ್ಳುವುದೇ ಅವರ ಮನದ ಪ್ರೌಢತೆಯ ಕನ್ನಡಿಯಾಗಿ ಬಿಡುತ್ತದೆ.
ಆಲ್ಲದೆ ಸ್ನೇಹದ ಭಾವದಲ್ಲಿ ಮೋಹದ ಅಪಸ್ವರ ನುಡಿಸದಿರು ಎಂಬ ನಿಷ್ಕಲ್ಮಶ ಭಾವ, ಪಾಂಚಾಲಿಯ ವೇದನೆಯು ಬದುಕು ಕವಿಯ ಮನದ ತಿರುಳನ್ನು ತಟ್ಟಿದ ಬಗೆ….ಹೀಗೆ… ಇನ್ನೂ ಅನೇಕ ಸಾಲುಗಳು ಓದುಗನ ಹೃದಯವನ್ನು ಕೆಣಕುತ್ತವೆ, ಕಾಡುತ್ತವೆ, ಹೃದಯವನ್ನು ಆರ್ದ್ರಗೊಳಿಸುತ್ತವೆ. ಇಲ್ಲಿ ಪ್ರಾಸಗಳಿಗಾಗಿ ತ್ರಾಸದ ಬಡಿದಾಟವಿಲ್ಲ, ಭಾವತೀವ್ರತೆಯೊಳಗೆ ತಪ್ಪಿರದೆ ನಿಯಮಗಳು ಹಾಯಾಗಿ ಇದ್ದು ಬಿಡುತ್ತವೆ. ನಿಯಮಗಳೇ ಗಜ಼ಲ್ ಎಂಬ ಸದ್ದು ಮಾಡುತ್ತಾ ಭಾವ ಸೂಕ್ಷ್ಮತೆಯನ್ನು ಕಳೆದುಕೊಳ್ಳುವುದಿಲ್ಲ.
ಯಂಡಮೂರಿ ವೀರೇಂದ್ರನಾಥರು ಎಲ್ಲೋ ತಮ್ಮ ಬರಹದಲ್ಲಿ ಹೇಳಿದ ಒಂದು ನೆನಪು, ಬರಹವು ನಮ್ಮನ್ನು ನೈತಿಕ ಸತ್ಯದೆಡೆಗೆ ಕಾಲಾಂತರದಲ್ಲಿ ಕೊಂಡೊಯ್ಯುತ್ತದೆ ಎಂಬುದಾಗಿ. ಇಲ್ಲಿ ಕವಿ ಮಾತ್ರವಲ್ಲ ಓದುಗನೂ ಕವಿಯಷ್ಟೇ ಆಳಕ್ಕೆ ಇಳಿದು ಸಮಯ ವ್ಯರ್ಥವಾಗದಂತೆ ನೈತಿಕ ಸತ್ಯದೆಡೆಗೆ ಸಾಗುವ ಹಾದಿಯನ್ನು ಹಸನುಗೊಳಿಸಿದ್ದಾರೆ ಕವಿ ಮಹೆಶ್ ಹೆಗಡೆಯವರು. ಇದಕ್ಕೆಂದೇ ತಮ್ಮ ವ್ಯಕ್ತಿತ್ವವನ್ನೂ ಅಂತರಾತ್ಮನೊಡನೆ ಮಂಥನಕ್ಕೊಳಪಡಿಸುತ್ತಾ ತಿದ್ದಿ ತೀಡುವುದೂ ವೇದ್ಯವೇ. ಇಲ್ಲವಾದರೆ ಇಂಥ ಸಾರಭರಿತ ಗಜ಼ಲ್ ಗಳು ಅಷ್ಟೊಂದು ಸುಲಭದಲ್ಲಿ ಹುಟ್ಟಿ ಬಿಡುವುದೇ..?
ಒಟ್ಟಿನಲ್ಲಿ ಗಜ಼ಲ್ ಕಲಿಯುತ್ತಿರುವವರು, ಇನ್ನೂ ಚೆನ್ನಾಗಿ ಹೇಗೆ ಬರೆಯಬಹುದೆಂಬ ತುಡಿತ ಇರುವವರು, ಅಕ್ಷರ ಪ್ರೇಮಿಗಳು, ಕವಿಮನದವರು ಹಾಗೂ ಜನ ಸಾಮಾನ್ಯರೂ ಹಿತವಾಗಿ ಆಸ್ವಾದಿಸಬಲ್ಲ ಕೊಂಡು ಓದಬಲ್ಲ ಕೃತಿಯಿದು. ಗಜ಼ಲ್ ಲೋಕದಲ್ಲಿ ತುಂಬು ಭರವಸೆಯ ಕವಿಗಳು ಮಹೇಶ್ ಹೆಗಡೆಯವರು ಎಂಬುದನ್ನು ನಿಸ್ಸಂಶಯವಾಗಿ ಹೇಳುತ್ತಾ , ಸಾರಸ್ವತ ಲೋಕಕ್ಕೆ ಅವರ ಇರುವಿಕೆಯು ಮೌಲ್ಯಯುತವಾದದೆಂಬುದನ್ನು ಯಾವುದೇ ಉತ್ಪ್ರೇಕ್ಷೆಯಿಲ್ಲದೆ ಹೇಳಬಲ್ಲೆನು.
ನನ್ನ ಹೃದಯತಟ್ಟಿದ ಕೃತಿ, ನಿಮ್ಮ ಮನೆ ಮನವನ್ನೂ ತಟ್ಟಲಿ ಎಂಬ ಆಶಯದೊಂದಿಗೆ ಇಂದಿನ ಬರಹದ ಸಾರ್ಥಕತೆಯನ್ನು ಕಂಡುಕೊಳ್ಳುತ್ತೇನೆ.
ಅರುಣಾ ಶ್ರೀನಿವಾಸ