ಅಂಕಣ ಸಂಗಾತಿ

ಸುಜಾತಾ ರವೀಶ್

ಸಂಗಾತಿ ಪತ್ರಿಕೆಯ ಮೊದಲ ದಿನದಿಂದಲೂ ಪತ್ರಿಕೆಯ ಜೊತೆ ನಿಂತು, ಹಳೇ ಮೈಸೂರು ಪ್ರಾಂತ್ಯದ ಹಲವು ಓದುಗ -ಬರಹಗಾರರನ್ನು ಪತ್ರಿಕೆಗೆ ಪರಿಚಯಿಸಿ, ಬರೆಸಿದ ಸುಜಾತಾ ರವೀಶ್ ನೆನಪಿನ ದೋಣಿ ಅಂಕಣವನ್ನು ಸತತವಾಗಿ ಐವತ್ತು ವಾರ ಬರೆದಿದ್ದು ಸಂಗಾತಿ ಅವರಿಗೆ ಋಣಿಯಾಗಿದೆ.ಅವರಿಗೆ ನಿಮ್ಮೆಲ್ಲರ ಪರವಾಗಿ ದನ್ಯವಾದಗಳ ಅರ್ಪಿಸುತ್ತೇನೆ

ನೆನಪಿನ ದೋಣಿ

ಶತಕದ ಸಂಭ್ರಮ ಪರಾಮರ್ಶೆಯ ಪಯಣ

ಇಂದು ಪರಾಮರ್ಶೆಯ ಹಾದಿಯಲ್ಲಿ ನೂರರಸಂಭ್ರಮ.  ಯಾರು ಗುರುತಿಸಲಿ ಬಿಡಲಿ ಕಣ್ಣೆದುರಿಗೆ ಮಕ್ಕಳು ಬೆಳೆಯುವುದನ್ನು ಕಂಡು ಹರ್ಷಿಸುವ ತಾಯಿಯ ಮನಸ್ಥಿತಿ ನನ್ನದು. ಯಾರು ಓದಲಿ ಬಿಡಲಿ ಬರೆಯುವುದು ನನ್ನ ಕರ್ತವ್ಯ ಎಂದು ಪಾಲಿಸುತ್ತಾ 1ವಾರವೂ ತಪ್ಪದೆ ಈ ಅಂಕಣವನ್ನು ಬುಧವಾರ ಬೆಳಿಗ್ಗೆ 9ಗಂಟೆಗೆ ಭಾವಸಂಗಮ ಗುಂಪಿನಲ್ಲಿ  ಮತ್ತು ಇತ್ತೀಚಿನ ದಿನಗಳಲ್ಲಿ ಸಂಗಾತಿ ಬ್ಲಾಗ್ ನಲ್ಲಿ ಹಾಕುತ್ತಿದ್ದೇನೆ .ಕೆಲವರಾದರೂ ಪ್ರೀತಿಯಿಂದ ಓದಿ ಮೆಚ್ಚುಗೆಯ ಸಲಹೆಗಳ ಪ್ರತಿಕ್ರಿಯೆ ಕೊಟ್ಟಿದ್ದೀರಿ. ಓದಿದವರಿಗೂ ಓದದವರಿಗೂ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು . ನನ್ನ ಮಾತಿಗಿಂತ ಈ ಕಗ್ಗದ ನುಡಿಗಳು ಇಲ್ಲಿ ಹೆಚ್ಚು ಪ್ರಸ್ತುತ. ಎಲ್ಲರಿಗಮೀಗ ನಮೊ_ ಬಂಧುಗಳೇ ಭಾಗಿಗಳೇ ಉಲ್ಲಾಸವಿತ್ತವರೆ, ಮನವ ತೊಳೆದವರೇ ಟೊಳ್ಳು ಜಗ ಸಾಕುಬಾಳ್_ ಎನಿಸಿ ಗುರುವಾದವರೇ ಕೊಳ್ಳಿರೀ ನಮನವನು _   ಮಂಕುತಿಮ್ಮ

೧೦೦ ರ ಸಂಭ್ರಮದಲ್ಲಿ ನಿಂತು ನೋಡಿದಾಗ ನನಗೆ ಈ ಪುಸ್ತಕ ವಿಮರ್ಶೆ ಲೋಕಕ್ಕೆ ಬಂದ ಗಳಿಗೆಯ ನೆನಪಾಗುತ್ತದೆ. ನಾನು ಬರವಣಿಗೆ ಆರಂಭಿಸಿದ್ದು ಈಗ ಮೂರೂವರೆ ವರ್ಷಗಳಿಂದ. ಪುಸ್ತಕಗಳನ್ನು ಓದುತ್ತಿದರೂ ಪುಸ್ತಕ ಪರಿಚಯದ ಸಾಹಸಕ್ಕೆ ಕೈಹಾಕಿರಲಿಲ್ಲ . ಬರೀ ಕವಿತೆಗಳನ್ನು ಬರೆಯುತ್ತಿದ್ದ 1ಬ್ಲಾಗ್ ಪತ್ರಿಕೆಯಲ್ಲಿ ಪುಸ್ತಕ ವಿಮರ್ಶೆ ಬರೆಯಲು ಆಹ್ವಾನ ಕೊಟ್ಟಿದ್ದರು. ನಾನು ಸಾಯಿಸುತೆಯವರ ಭಾವ ಸರೋವರ ಕಾದಂಬರಿ ವಿಮರ್ಶೆ ಕಳುಹಿಸಿದ್ದೆ. ಆದರೆ ಪ್ರಕಟವಾಗಲಿಲ್ಲ. ತಿದ್ದಿಕೊಳ್ಳುವ ದೃಷ್ಟಿಯಿಂದ ಕಾರಣ ಕೇಳಿದಾಗ “ಹಳೆಯ ಕಥಾವಸ್ತುಗಳು ಬೇಡ” ಎಂದಿದ್ದರು. ಲಿವ್ ಇನ್ ರಿಲೇಷನ್ ಶಿಪ್ ಬಗ್ಗೆ ಇದ್ದ ಈ ಕಾದಂಬರಿ ಅವರಿಗೆ ಏಕೆ ಪ್ರಸ್ತುತವೆನಿಸಲಿಲ್ಲವೋ  ಇಂದಿಗೂ ನನಗೆ ಅದು ಬಗೆಹರಿಯದ ಪ್ರಶ್ನೆ. “ಪ್ರಥಮ ಚುಂಬನಂ ದಂತ ಭಗ್ನಂ” ಎಂಬಂತೆ ನನ್ನ ಪಾಡಿಗೆ ನನ್ನ ಕವಿತಾಲೋಕದಲ್ಲಿ ಮುಳುಗಿದೆ. ಭಾವಸಂಗಮ ಗುಂಪಿನಲ್ಲಿ ಸಾಹಿತ್ಯಾತ್ಮಕ ಚಟುವಟಿಕೆಗಳನ್ನು ನಡೆಸಲು ವಾರಕ್ಕೊಂದು ದಿನ ನಿಗದಿ ಪಡಿಸಿದ್ದರು. ಆಗ ನನ್ನದೊಂದು ಪುಸ್ತಕ ವಿಮರ್ಶೆ ಹಾಕಿದೆ. ಕೆಲ ಸಹೃದಯಿಗಳ ಮೆಚ್ಚುಗೆಯ ಪ್ರತಿಸ್ಪಂದನೆ ಮತ್ತು ರಾಪಾ ಸರ್ ಅವರ ಸಕಾರಾತ್ಮಕ ಟೀಕೆ ಪ್ರೋತ್ಸಾಹ ಮತ್ತೆ ವಿಮರ್ಶೆ ಬರೆಯುವ ಉತ್ಸಾಹ ಮೂಡಿಸಿತು. ಈ ಮಧ್ಯೆ ರಾಜ್ಯ ಮಟ್ಟದ ವಿಮರ್ಶಾ ಸ್ಪರ್ಧೆ ಯೊಂದರಲ್ಲಿ ಸಮಾಧಾನಕರ ಬಹುಮಾನ ಬಂದು ಸ್ವಲ್ಪ ಹೆಚ್ಚಿನ ಆತ್ಮವಿಶ್ವಾಸ ತಂದಿತು.

ಏತನ್ಮಧ್ಯೆ ಶ್ರೀಯುತ ಗಣೇಶ್ ಪ್ರಸಾದ್ ಪಾಂಡೇಲು ರವರು ಅಕ್ಷರದೀಪ ವಾಟ್ಸಪ್ ಗುಂಪಿನಲ್ಲಿ ಪುಸ್ತಕ ವಿಮರ್ಶೆ ಅಂಕಣ ಬರೆಯಲು ಆಹ್ವಾನಿಸಿದರು. ಒಂದಿಷ್ಟು ಅಂಕಣಗಳನ್ನು ಆ ಗುಂಪಿಗೆ ಬರೆದೆ. ಸದಸ್ಯರ ಮೆಚ್ಚುಗೆಯ ಪ್ರತಿಕ್ರಿಯೆಗಳು ಬಂದವು. ನಂತರ ಅಂಕಣ ನಿಲ್ಲಿಸಲು ಹೇಳಿದ್ದರಿಂದ ನಿಲ್ಲಿಸಬೇಕಾಯಿತು.

ರಾಪಾ  ಸರ್  ಅವರು ಭಾವ ಸಂಗಮಕ್ಕೆ ಅಂಕಣ ಬರೆಯಲು ಸೂಚಿಸಿದಾಗ ಪುಸ್ತಕ ವಿಮರ್ಶೆಯನ್ನೇ ಬರೆಯುವೆ ಎಂಬ ಕೋರಿಕೆಯಿಟ್ಟೆ.  ಅವರಿಂದ ಅನುಮತಿಯೂ ದೊರಕಿತು ಸೂಕ್ತ ಲೋಗೊ ಪಟವನ್ನೂ ಮಾಡಿಕೊಟ್ಟರು. ೨೮.೧೦.೨೦ ರಿಂದ ಲಲಿತ ಬೆಳವಾಡಿಯವರ ಮಳೆಬಿಲ್ಲು ಲೇಖನ ಸಂಗ್ರಹಗಳು ಪುಸ್ತಕದಿಂದ ಪರಾಮರ್ಶೆ ಪುಸ್ತಕಲೋಕದ ಅವಲೋಕನ ಆರಂಭವಾಗಿ ಟೆಲಿಗ್ರಾಂ ಆವೃತ್ತಿಯಲ್ಲಿ ೭೫ ಸಂಚಿಕೆಗಳಲ್ಲಿ  ಅಂಕಣ ಮುಕ್ತಾಯವಾಯಿತು .ಮತ್ತೆ ಭಾವಸಂಗಮ ವಾಟ್ಸಪ್ ಆವೃತ್ತಿಯಲ್ಲಿ ಈಗ ಪರಾಮರ್ಶೆ ಅಂಕಣದ  20ನೆಯ ಸಂಚಿಕೆ. ಮತ್ತೆ ಬೇರೆ ಕೆಲವು ಅವಲೋಕನಗಳಿಗೆ ಸ್ಪರ್ಧೆಗಳಿಗೆ ಹಾಗೂ ಗೆಳೆಯರ ಕೋರಿಕೆಯ ಮೇರೆಗೆ ಬರೆದ ಪರಾಮರ್ಶೆಗಳೆಲ್ಲಾ ಸೇರಿ ಈಗ ನೂರು ದಾಟಿದ ಸಂಭ್ರಮ.

ಪುಸ್ತಕ ವಿಮರ್ಶೆಗಾಗಿ ಸಂದ ಗೌರವಗಳು

೧. ಈ ಮೊದಲೇ ತಿಳಿಸಿದ ಹಾಗೆ ನೇಮಿಚಂದ್ರ ಅವರ “ಸಾವೇ ಬರುವುದಿದ್ದರೆ ನಾಳೆ ಬಾ” ಪುಸ್ತಕ ವಿಮರ್ಶೆಗೆ ರಾಜ್ಯಮಟ್ಟದಲ್ಲಿ ಸಮಾಧಾನಕರ ಬಹುಮಾನ.

೨. “ಸಾಯಿಸುತೆಯವರ ಕಾದಂಬರಿಗಳಲ್ಲಿ ನೈತಿಕತೆ” ವಿಮರ್ಶಾ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ಸಾಯಿಸುತೆಯವರ ಇಪ್ಪತ್ತು ಕಾದಂಬರಿಗಳ ಬಹುಮಾನ.

೩. “ಎಚ್ ಜಿ  ರಾಧಾದೇವಿಯವರ ಕಾದಂಬರಿಗಳಲ್ಲಿ ನೀವು ಮೆಚ್ಚಿದ ಅಂಶಗಳು” ವಿಮರ್ಶಾ ಲೇಖನ ಸ್ಪರ್ಧೆಯಲ್ಲಿ ಪ್ರಥಮ ನಗದು ಬಹುಮಾನ .

೪. ತ್ರಿವೇಣಿಯವರ ಬಾಳು ಬೆಳಗಿತು ಕಾದಂಬರಿ ವಿಮರ್ಶೆಗೆ ಪ್ರಥಮ ನಗದು ಬಹುಮಾನ.

೫.  ಸಾಯಿಸುತೆ ಬಳಗದವರ ನಾನು ಮೆಚ್ಚಿದ ಸಾಯಿಸುತೆ ಕೃತಿ ಈ ಬಗ್ಗೆ ಲೇಖನ ಸ್ಪರ್ಧೆಯಲ್ಲಿ “ಅನಘಾ ಬಿಡಿಸಿದ ಚಿತ್ತಾರ” ಈ ಕೃತಿ ಪರಿಚಯಕ್ಕಾಗಿ 20 ಕಾದಂಬರಿಗಳ ಬಹುಮಾನ

೫. ಶ್ರೀಮತಿ ಲಲಿತಾ ಬೆಳವಾಡಿಯವರ “ಯೂರೋಪ್ ಯಾತ್ರೆ”ಯ ಪ್ರಸ್ತಕ ವಿಮರ್ಶೆಗಾಗಿ ಪ್ರವಾಸಸಾಹಿತ್ಯ ಅಭಿಯಾನದಲ್ಲಿ ವಿಶೇಷ ನಗದು ಬಹುಮಾನ .

೬. ಇತ್ತೀಚಿಗೆ ಸಿಎಂ ಮುಕ್ತಾ ಅವರ ಕಾದಂಬರಿಗಳ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರ ಮಾತು ಕೊಟ್ಟವಳು ಪುಸ್ತಕದ ಬಗ್ಗೆ ಪ್ರಬಂಧ ಮಂಡಿಸಿದ್ದು ನೆನಪಿನ ಬುತ್ತಿಗಳಲ್ಲಿ ಪ್ರಮುಖ ಅಂಶ.

೭.ಪುಸ್ತಕ ಅವಲೋಕನ ಬಳಗದಲ್ಲಿಯಂತೂ ಪ್ರತಿಯೊಂದು ಅಭಿಯಾನದಲ್ಲೂ ಪುಸ್ತಕ ಬಹುಮಾನ ಬರುತ್ತಿದೆ. ಬಳಗಕ್ಕೆ ಅತ್ಯಂತ ಧನ್ಯವಾದಗಳು

೮. ಲೇಖಿಕಾ ಸಾಹಿತ್ಯ ಬಳಗದ ಹಿರಿಯ ಮಹಿಳಾ ಸಾಧಕಿಯರು ಮಾಲಿಕೆಯಲ್ಲಿ  ಶ್ರೀಮತಿ ಸುಧಾ ಮೂರ್ತಿ, ದಮಯಂತಿ ನಾರೇಗಲ್, ಶ್ರೀಮತಿ ಕಮಲ ಹಂಪನಾ ಹಾಗೂ ಶ್ರೀಮತಿ ಹೆಚ್ ಎಸ್ ಪಾರ್ವತಿ ಅವರ ಪುಸ್ತಕಗಳ ಬಗ್ಗೆ ಪ್ರಬಂಧ ಮಂಡನೆ ಮಾಡಿರುವುದು ನನಗೊಂದು ಹೆಮ್ಮೆಯ ವಿಷಯ.

ಮುಖ ಹೊತ್ತಿಗೆ ಗುಂಪುಗಳಾದ “ಪುಸ್ತಕ ಅವಲೋಕನ”  “ಸಾಯಿಸುತೆ ಅಭಿಮಾನಿ ಬಳಗ” “ಎಚ್ ಜಿ ರಾಧಾದೇವಿ ಅಭಿಮಾನಿಗಳು” “ನಾನೊಬ್ಬ ಪುಸ್ತಕ ಪ್ರೇಮಿ” ಈ ಎಲ್ಲ ಗುಂಪುಗಳು ವಿಮರ್ಶಾ ಲೇಖನಗಳಿಗೆ ತುಂಬು ಪ್ರೋತ್ಸಾಹ ನೀಡಿ ಈ ಪ್ರಕಾರದ ಬರವಣಿಗೆಗೆ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ.  ಹಾಗೆಯೇ ಶ್ರೀ ಎಸ್ ಎಲ್ ಭೈರಪ್ಪ ಅಭಿಮಾನಿಗಳ ಬಳಗ, ಬೇಂದ್ರೆ ಅಭಿಮಾನಿಗಳ ಬಳಗ ಹಾಗೂ ಬಿಜಿಎಲ್ ಸ್ವಾಮಿ ಅಭಿಮಾನಿಗಳ ಬಳಗದಲ್ಲಿಯೂ ನನ್ನ ಲೇಖನಗಳು ಪ್ರಕಟವಾಗಿ ಸಾಕಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಈ ಎಲ್ಲ ಗುಂಪಿನ ನಿರ್ವಾಹಕರುಗಳಿಗೆ ಹಾಗೂ ಸದಸ್ಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

ಇದೆಲ್ಲ ಸಂತಸಕ್ಕೆ ಕಾರಣ ಭಾವಸಂಗಮದಲ್ಲಿ ಅಂಕಣ ಬರೆಯಲು ರಾಪಾ ಸರ್ ಅವರು ನೀಡಿದ ಅವಕಾಶ . ಈಗ ಸಂಗಾತಿ ಬ್ಲಾಗ್ ಪತ್ರಿಕೆಯ ಸಂಪಾದಕರಾದ ಶ್ರೀ ಕು ಸ ಮಧುಸೂದನ್ ಆವರಿಗೂ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು . ನನ್ನ ತೊದಲು ಬರಹಗಳಿಗೆ ನೀವೆಲ್ಲ ನೀಡಿದ ಪ್ರೋತ್ಸಾಹ ತಿದ್ದಿಕೊಟ್ಟ ಸಲಹೆಗಳು ಮಾರ್ಗದರ್ಶನಗಳೇ ಪೂರಕ. ಶತಕದ ಸಂಭ್ರಮಕ್ಕೆ ತಾವೆಲ್ಲ ಕಾರಣೀಭೂತರು. ಸೂಕ್ತ ಅವಕಾಶ ನೀಡಿ ಮಧ್ಯೆಮಧ್ಯೆ ತಿದ್ದಿ ತೀಡಿ ಕೆಲವೊಮ್ಮೆ ಬೈದು ನನಗೆ ಕಣ್ಣಿನ ಆಪರೇಷನ್ ಆದಾಗ  ಮೊದಲೇ ಕಳುಹಿಸಿದ್ದ ಬಳಗಗಳನ್ನು ಕಾಲಕ್ಕೆ ಸರಿಯಾಗಿ ಬಳಗಕ್ಕೆ ಪೋಸ್ಟ್ ಮಾಡಿ ಸಹಕಾರ ನೀಡಿದ ರಾಪಾ ಸರ್ ನಿಮಗೆ ನನ್ನ ಧನ್ಯವಾದ ಪೂರಕ ವಂದನೆಗಳು. ಪ್ರೋತ್ಸಾಹಿಸಿ ನಲ್ನುಡಿಗಳನ್ನಾಡಿದ ಮಿತ್ರರಿಗೆಲ್ಲ ಅನಂತಾನಂತ ಧನ್ಯವಾದಗಳು. ಶ್ರೀಕಾಂತ್ ಪತ್ರೆಮರ ಅವರ ಸುಂದರ ಪ್ರತಿಕ್ರಿಯೆಗಳನ್ನು ಸೇವ್ ಮಾಡಿಟ್ಟುಕೊಂಡಿದ್ದೀನಿ. ಮುಂದೊಮ್ಮೆ ಪುಸ್ತಕ ಪ್ರಕಟವಾದರೆ ಅವುಗಳನ್ನು ಸೇರಿಸುವ ಯೋಚನೆ/ಯೋಜನೆ. 

ಅಂಕಣದ ಸಲುವಾಗಿಯಾದರೂ ವಾರಕ್ಕೊಂದು ಹೊಸ ಪುಸ್ತಕ ಓದಲು ಅವಕಾಶ ಮಾಡಿಕೊಳ್ಳುವೆ. ಎಂಥ ನಿರಾಶೆ ನಿರುತ್ತೇಜನ ಸಿಕ್ಕಿದರೂ ಸಹೃದಯಿ ಸ್ನೇಹಿತರಿದ್ದರೆ ಹಿಂಜರಿಯದೆ ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಳ್ಳಬಹುದು ಎಂಬ ನೀತಿಯನ್ನು ಪ್ರತ್ಯಕ್ಷ ನನ್ನ ಜೀವನದಲ್ಲಿ ಅನುಭವಿಸಿದ ಹಾಗಾಯಿತು. ನಿಯಮಿತ ಓದು ಬರವಣಿಗೆಗೆ ಸಾಥ್ ನೀಡಿದ ಪರಾಮರ್ಶೆ ಅಂಕಣಕ್ಕೆ ನಾನೆಂದೆಂದೂ ಚಿರಋಣಿ  .

ಪರಾಮರ್ಶೆ ಲೇಖನಗಳಿಗೆ ಸಂಬಂಧಿತ ಲೇಖಕರು ಆಡಿದ ನುಡಿಗಳು ಬೋನಸ್ ಸಿಕ್ಕಿದಂತೆ.  ಲಲಿತಾ ಬೆಳವಾಡಿ,  ರಾಪಾ ಸರ್,  ವೀಣಾ ನಾಯಕ್ ,ಸಾಯಿಸುತೆ, ಶ್ರೀ ಲಕ್ಷ್ಮಿ  ಭಟ್ ಶ್ರೀನಿವಾಸ್ ಪ್ರಸಾದ್, ಪದ್ಮನಾಭ, ವಿವೇಕಾನಂದ ಕಾಮತ್, ಅನಸೂಯಾದೇವಿ , ಸಿಎನ್ ಮುಕ್ತಾ, ಶೈಲಾ ಜಯ ಕುಮಾರ್, ಸಂತೋಷಕುಮಾರ್ ಮೆಹೆಂದಳೆ,ಜಯಂತಿ ಚಂದ್ರಶೇಖರ್, ಬಿ ಆರ್ ಚಂದ್ರಶೇಖರ್ ಬೈದೂರು, ಮಲ್ಲಿನಾಥ ತಳವಾರ, ಎ ಆರ್ ಮಣಿಕಾಂತ್, ಡಾಕ್ಟರ್ ರಾಜಶೇಖರ ಜಮದಂಡಿ, ಗಾಯತ್ರಿ ರಾಜ್,

ಎಂ ಎಸ್ ಮಕಾಂದಾರ್, ಜೀವರಾಜ ಛತ್ರದ, ವೈ ಕೆ ಸಂಧ್ಯಾಶರ್ಮ, ಅಮ್ಮ ವಿಜಯಮ್ಮ (ಇಳಾ),  ಮೀನಾ ಹರೀಶ್ ಕೋಟ್ಯಾನ್ ಮುಂತಾದ ಲೇಖಕ/ಲೇಖಕಿಯರು ನನ್ನ ಪರಾಮರ್ಶೆ ಲೇಖನಗಳಿಗೆ ಮೆಚ್ಚುಗೆಯ ಮಾತುಗಳಿಂದ ಹಾರೈಸಿದ್ದಾರೆ .ಇವರೆಲ್ಲರಿಗೂ ನನ್ನ ಹೃದಯಾಂತರಾಳದ ಧನ್ಯವಾದಗಳು .


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

One thought on “

  1. ಅವಕಾಶಕ್ಕಾಗಿ ಧನ್ಯವಾದಗಳು ಸಂಪಾದಕ ಮಧುಸೂದನ ಅವರಿಗೆ. ೫೦ ಅಂಕಣಗಳು ಮುಗಿಸಿದ ಸಂತಸ.

    ಸುಜಾತಾ ರವೀಶ್

Leave a Reply

Back To Top