ಅಂಕಣ ಸಂಗಾತಿ

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -5

ನಾನೂ ಹಾರುವ ಪಕ್ಷಿ ಆಗಿದ್ದಿದ್ದರೆ….

ನಾನೂ ಹಾರುವ ಪಕ್ಷಿ ಆಗಿದ್ದಿದ್ದರೆ….

       ಕಲ್ಪನೆ ಎನ್ನುವುದು ಮಾನವನಿಗೆ ದೇವರು ಕೊಟ್ಟ ವಿಶೇಷ ಗುಣ. ಅದನ್ನೇ ಕವಿ ಬೇಂದ್ರೆಯವರು ” ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ” ಎಂದು ಹಾಡಿರುವರು.  ಆ ಕಲ್ಪನೆಯ ಪದಗಳ ಬಿತ್ತರದಿಂದಲೇ ಕವಿ, ಸಾಹಿತಿ, ಕಥೆಗಾರ, ಕಾದಂಬರಿಗಾರರಾಗುತ್ತಾರೆ. ಒಳ್ಳೆಯ ಹೆಸರನ್ನೂ ಪಡೆಯುತ್ತಾರೆ. ಹೀಗಿರಲು ನಾವು ಕಾಣುವ ಹಲವಾರು ಕನಸುಗಳಲ್ಲಿ ನಾವು ನೋಡುವ ಒಂದು ವಿಚಿತ್ರ ಜೀವಿಗಳು, ಕೀಟಗಳು, ಹುಳಗಳು, ಕಣ್ಣಿಗೆ ಕಾಣದ ಜೀವಿಗಳು ಅದರಲ್ಲೂ ನಿತ್ಯ ನೋಡುವ ಸಂತಸ ಪಡುವ  ಜೀವಿಗಳು ಎಂದರೆ ಹಾರುವ ಹಕ್ಕಿಗಳು, ಅವುಗಳ ಬಗೆಗಿನ ಕನಸುಗಳು.

     ನಾನು ತುಂಬಾ ಶ್ರೀಮಂತನಾಗಿದ್ದರೆ, ನಾನು ಮುಖ್ಯಮಂತ್ರಿ ಆಗಿದ್ದಿದ್ದರೆ, ನಾನು ಕೊಟ್ಯಾಧೀಶನಾಗಿದ್ದರೆ, ನಾನು ಹುಲಿಯಾಗಿ ಇದ್ದಿದ್ದರೆ, ನಾನು ಅಂತಹ, ಇಂತಹ ಪ್ರಾಣಿ ಆಗಿದ್ದಿದ್ದರೆ ಹಾಗೆಯೇ ನಾನು ಹಾರಾಡುವ ಪಕ್ಷಿ  ಆಗಿದ್ದಿದ್ದರೆ.. ಹೀಗೆಲ್ಲಾ ಯೋಚನೆಗಳು ನಮ್ಮನ್ನು ಕಾಡುತ್ತವೆ..

ಹೌದಲ್ಲವೇ? ನಾನು ಹಾರಾಡುವ ಪಕ್ಷಿಯಾಗಿದ್ದರೆ? ನಾನು ಏನೆಲ್ಲಾ ಮಾಡುತ್ತಿದ್ದೆ? ನಿತ್ಯ ನಾನಾ ಶಾಲೆಗೆ ಹಾರಿಕೊಂಡೇ ಹೋಗಿ ಬರುತ್ತಿದ್ದೆ. ಆಗ ನನಗೆ ಶಾಲೆಗೆ ಹೋಗಲು ಬಸ್ಸಿಗೆ ಕಾಯಬೇಕು ಎಂದಿಲ್ಲ, ಸ್ಕೂಟರ್ ಗೆ ಪೆಟ್ರೋಲ್ ಹಾಕಬೇಕು ಎಂದಿಲ್ಲ, ಮನೆಗೆ ತರಕಾರಿ ಸಾಮಾನು ತರಬೇಕು ಎಂದಿಲ್ಲ, ಮಡದಿಯ ಬೈಗುಳ ಇಲ್ಲ, ಗಂಡನ ಕೂಗಾಟ ಕಿರುಚಾಟವೂ ಇಲ್ಲ! ಇನ್ನೂ ಒಂದಿದೆ.

ಶಾಲೆಗೆ ಹೋಗಬೇಕೆಂದು ಇಲ್ಲ, ಮನೆ ಕೆಲಸ ಮಾಡಬೇಕೆಂದು ಇಲ್ಲ, ಅಡುಗೆ ಮಾಡು, ಬಟ್ಟೆ ಒಗೆ, ಮನೆ ಕೆಲಸ ಮಾಡು, ಕೆಲಸಕ್ಕೆ ಹೋಗು ಎಂಬ ಯೋಚನೆ ಇಲ್ಲ ಅಲ್ಲವೇ? ಕಾಳು ಹುಡುಕಿ ಹೆಕ್ಕಿ ತಿಂದರೆ ಆಯಿತು, ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡಿ ಮುಂದಿನ ಜನಾಂಗ ಬೆಳೆಸಿದರೆ ಆಯಿತು.

    ಬದುಕು ಮಾನವರಿಗೆ ಕಷ್ಟ ಆಗಿದೆ. ಎಲ್ಲಿ ಹೋದರೂ ಮಾಡರ್ನಿಟಿ. ಇಂದು ಇದ್ದ ಬಟ್ಟೆ ಬರೆ, ನಾಳೆ ಇಲ್ಲ. ಪ್ರತಿದಿನ ಹೊಸತನ್ನು ಕೇಳುವ ಮಾನವನಿಗೆ ಸಂಬಳ ಸಾಲಲ್ಲ. ಬ್ಯುಸಿನೆಸ್ ಬೇಕು, ಹಣ, ಒಡವೆ, ಬಂಗಲೆ, ಕಾರು, ಆಸ್ತಿ ಬೇಕು. ಅದಕ್ಕಿಲ್ಲ ಬ್ರೇಕು! ಅದು ಬೇಕು, ಇದು ಬೇಕು, ಬೇಕು, ಬೇಕು, ಬೇಕು! ಪ್ರಾಣಿ ಪಕ್ಷಿಗಳಿಗೆ ಹಾಗಲ್ಲ, ಊಟ, ರಕ್ಷಣೆ, ಸಂತಾನೋತ್ಪತ್ತಿ, ಪ್ರೀತಿ, ಸ್ವಾತಂತ್ರ್ಯ ಇಷ್ಟೇ ಸಾಕು.

ಬದುಕು ಅಷ್ಟೇ ಅಲ್ಲವೇ? ಹುಟ್ಟು, ಬದುಕು, ಸಾವು. ಪಕ್ಷಿಗಳಿಗೂ ಮರಿ ಹಕ್ಕಿಗಳಿಗೆ ಬಾಯಲ್ಲಿ ಕಚ್ಚಿಕೊಂಡು ಬಂದು ಗುಟುಕು ಕೊಡಬೇಕು. ಅವುಗಳಿಗೆ ಹಾರಲು ಕಲಿಸ ಬೇಕು.  ಗೂಡು ಕಟ್ಟಬೇಕು. ಅಲ್ಲಿಗೆ ಮುಗಿಯಿತು. ಬದುಕು ಆರೋಗ್ಯವಾಗಿ ಸಂತಸದಿಂದ ಕೂಡಿರಬೇಕು. ನಾನೂ ಪಕ್ಷಿಯಾಗಿದ್ದರೇ….. ವಾವ್…ಈ ಆಲೋಚನೆ ತುಂಬಾ ಚೆನ್ನಾಗಿದೆ ಅಲ್ಲವೇ? ನೀವೇನಂತೀರಿ?-


ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ  ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು. ವಿಳಾಸ – ಸ ಪ ಪೂರ್ವ ಕಾಲೇಜು ಮೂಲ್ಕಿ 574154

Leave a Reply

Back To Top