ಕನ್ನಡ ಸಾಹಿತ್ಯದ ಅಮೂಲ್ಯ ರತ್ನ ಜಿ.ಪಿ.ರಾಜರತ್ನಂ

ನೆನಪು

ಕನ್ನಡ ಸಾಹಿತ್ಯದ ಅಮೂಲ್ಯ ರತ್ನ ಜಿ.ಪಿ.ರಾಜರತ್ನಂ

ಎಲ್. ಎಸ್. ಶಾಸ್ತ್ರಿ

ಕನ್ನಡ ಸಾಹಿತ್ಯದ ಅಮೂಲ್ಯ ರತ್ನ

ಜಿ. ಪಿ. ರಾಜರತ್ನಂ

           ‌  ಕನ್ನಡ ಸಾರಸ್ವತ ಲೋಕದಲ್ಲಿ   ವ್ಯಕ್ತಿತ್ವ, ಬರೆಹ , ಸಾಧನೆ ಎಲ್ಲದರಲ್ಲೂ ಪ್ರತ್ಯೇಕವಾದ ಮತ್ತು ವಿಶಿಷ್ಟವಾದ ಸ್ಥಾನ ಹೊಂದಿದವರು ಜಿ. ಪಿ. ರಾಜರತ್ನಂ ಅವರು. ಸುಮಾರು ಎರಡು ನೂರರಷ್ಟು ಕೃತಿರತ್ನಗಳನ್ನು ನೀಡಿದ ಅವರು ಬರೆದದ್ದೆಲ್ಲ ಚೊಕ್ಕ ಚಿನ್ನವಾಗಿಯೇ ಹೊರಹೊಮ್ಮಿತು. ಕನ್ನಡಕ್ಕೆ ಅವರ ಕೊಡುಗೆ ಅಸಾಮಾನ್ಯವಾದುದು. ಅವರ ಶಿಶುಗೀತೆಗಳಿರಲಿ, ಬೌದ್ಧ ಮತ್ತು ಜೈನ ಸಾಹಿತ್ಯವಿರಲಿ, ಅವರ ಯೆಂಡ್ಕುಡುಕ ರತ್ನನ ಪದ- ನಾಗನ ಪದಗಳಿರಲಿ ಎಲ್ಲವೂ ಅನನ್ಯ, ಅಪೂರ್ವ!

        “ನಾಲ್ಗೆ ಸೀಳ್ಸಿ, ಬಾಯಿ ಒಲಿದಾಕಿದ್ರೂನೆ ಮೂಗ್ನಲ್ ಕನ್ನಡ ಪದವಾಡ್ತೀನಿ ” ಎಂದು ತಮ್ಮ ಕನ್ನಡಾಭಿಮಾನವನ್ನು ತೋರಿದವರು.

         ” ಬಣ್ಣದ ತಗಡಿನ ತುತ್ತೂರಿ

          ಕಾಸಿಗೆ ಕೊಂಡನು ಕಸ್ತೂರಿ…” ಎಂದೋ,

          ” ನಾಯಿಮರಿ ನಾಯಿಮರಿ ತಿಂಡಿಬೇಕೇ..‌” ಎಂದೋ ಅವರು ಬರೆದ ಮಕ್ಕಳ ಹಾಡುಗಳು ಇಂದಿಗೂ ಎಲ್ಲರ ಬಾಯಲ್ಲಿ ನಲಿಯುತ್ತಿವೆ.

               ಮನೆತನದ ಮೂಲ ತಮಿಳುನಾಡಿನದು. ಆದರೆ ರಾಜರತ್ನಂ ಹುಟ್ಟಿದ್ದು ರಾಮನಗರದಲ್ಲಿ ೧೯೦೪ ರ ಮೇ ೧೨ ರಂದು. ತಂದೆ ಶಿಕ್ಷಕರು. ಕೆಲಕಾಲ ಕೆಲಸಕ್ಕಾಗಿ ಅಲೆದಾಡಿದರೂ ಕನ್ನಡ ಪಂಡಿತರಾದ ನಂತರ ಪ್ರಾಧ್ಯಾಪಕ ವೃತ್ತಿ ಕೈಕೊಂಡು ಮಾಸ್ತಿಯವರ ಮಾರ್ಗದರ್ಶನದಂತೆ ಸಾಹಿತ್ಯ ರಚನೆಗೆ ತೊಡಗಿಕೊಂಡ ಅವರು, ಮೈಸೂರು, ಬೆಂಗಳೂರು, ಶಿವಮೊಗ್ಗ, ತುಮಕೂರುಗಳಲ್ಲಿ ಅಧ್ಯಾಪನ ಕೆಲಸ ಮಾಡುತ್ತ ವಿದ್ಯಾರ್ಥಿಗಳಿಗೆ ಚೈತನ್ಯ ಸ್ವರೂಪರೆನಿಸಿದರು.

            ‌ ಅವರ ಸ್ವಭಾವ ವೈಚಿತ್ರ್ಯವೆಂದರೆ ಕಾಲಿಗೆ ಚಪ್ಪಲಿ ಹಾಕದೇ ಓಡಾಡಿದರು. ಬಿದ್ದ ಹಲ್ಲು ಹೊಸದಾಗಿ ಕಟ್ಟಿಸಿಕೊಳ್ಳದೆ ಬಚ್ಚಬಾಯಲ್ಲೇ ನಕ್ಕರು, ನಗಿಸಿದರು.

         ಬೌದ್ಧ ಮತ್ತು ಜೈನ ಧರ್ಮದ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿ  ಅವುಗಳಿಗೆ ಸಂಬಂಧಿಸಿ ಅನೇಕ ಅಮೂಲ್ಯ ಕೃತಿಗಳನ್ನು ನೀಡಿದರು. ಅವರ ಗೌತಮ ಬುದ್ಧ ಪಠ್ಯಪುಸ್ತಕವೂ ಆಗಿತ್ತು.

           ಕನ್ನಡದೊಂದಿಗೆ ಪಾಲಿ, ಸಂಸ್ಕೃತ, ಪ್ರಾಕೃತ, ಇಂಗ್ಲಿಷ್, ತೆಲುಗು , ಮೊದಲಾದ ಭಾಷೆಗಳನ್ನೂ ಅರಿತಿದ್ದ ಅವರು ಸದೃಢ ದೇಹಿಗಳೂ, ಉತ್ತಮ ಭಾಷಣಕಾರರೂ ಆಗಿದ್ದರು. ತಮ್ಮನ್ನು ಅವರು  “ಸಾಹಿತ್ಯ‌ ಪರಿಚಾರಕ” ಎಂದು ಕರೆದುಕೊಳ್ಳುತ್ತಿದ್ದರು ಮತ್ತು  ಆ ರೀತಿ ಸಾಹಿತ್ಯದ ಕೆಲಸವನ್ನೂ ಮಾಡಿದರು. ಮಕ್ಕಳಲ್ಲಿ ಸಾಹುತ್ಯದ ಅಭಿರುಚಿ ಬೆಳೆಸಲು ಪ್ರಯತ್ನಿಸಿದರು.

ದಿಲ್ಲಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ವರ್ಷದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಅವರದಾಗಿತ್ತು. ಇತರ ಹಲವು ಜಿಲ್ಲಾ ಸಮ್ಮೇಳನ, ಧರ್ಮಸ್ಥಳ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷ ಸ್ಥಾನವೂ ಅವರಿಗೆ ದೊರಕಿತು.

             ಸಾಹಿತ್ಯ ಸೃಷ್ಟಿಯಲ್ಲಿ ಅವರು ತಮ್ಮದೇ ಆದ ಒಂದು ವಿಶಿಷ್ಟ ಸ್ವರೂಪವನ್ನು ಕಂಡುಕೊಂಡರು. ನಾಗನ ಪದಗಳು, ರತ್ನನ ಪದಗಳು , ಮುನಿಯನ ಪದಗಳು , ಪುಟ್ನಂಜಿ ಪದಗಳು ಅದಕ್ಕೆ ಉದಾಹರಣೆ. ಅವರ ಆ ಶೈಲಿಯೇ ವಿಶಿಷ್ಟ.

        ” ಹೆಂಡ ಬಿಟ್ಟೇನ್, ಹೆಂಡ್ತೀನ್ ಬಿಟ್ಟೇನ್, ಕನ್ನಡ ಪದಗೊಳ್ ಬಿಡೆನು” ಎಂದು ಕನ್ನಡದ ಕುರಿತಾದ ತಮ್ಮ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಿದ ಅವರು ಒಬ್ಬ ಹೆಂಡ್ಕುಡುಕನ ಮೂಲಕ ತಮ್ಮ ಭಾವನೆಗಳನ್ನು ಹೊರಹಾಕಿದ ಬಗೆ ಅದ್ಭುತ!

        ಮೊದಲ ಪತ್ನಿ ಲಲಿತಮ್ಮ ಅಕಾಲಿಕ ಸಾವನ್ನಪ್ಪಿದಾಗ ಕುಗ್ಗಿಹೋದ ಅವರು ಎರಡನೇ ಹೆಂಡತಿ ಸೀತಮ್ಮನವರು ಬಂದ ನಂತರ ಮತ್ತೆ ಚೇತರಿಸಿಕೊಂಡರು. ಕನ್ನಡದ ಹಿರಿಯ ಸಾಹಿತಿಗಳ ಗಡಣದಲ್ಲಿ ರಾಜರತ್ನಂ ಅವರಿಗೆ ಬಹಳ ಮಹತ್ವದ ಸ್ಥಾನವಿತ್ತು. ಕಂಚಿನ ಕಂಠದ ಅವರ ಮಾತುಗಾರಿಕೆ ಎಲ್ಲರ ಗಮನ ಸೆಳೆಯುತ್ತಿತ್ತು.

         ಆನೆ ನಡೆದದ್ದೇ ದಾರಿ ಎಂಬಂತೆ ರಾಜರತ್ನಂ ತಮ್ಮದೇ ಒಂದು ಹಾದಿ ನಿರ್ಮಿಸಿಕೊಂಡು ಸಾಗಿದರು. ಆ ಹಾದಿಯಲ್ಲಿ ಅವರ ಹೆಜ್ಜೆ ಗುರುತುಗಳು ಅಚ್ಚಳಿಯದಂತೆ ಮೂಡಿನಿಂತಿವೆ.  ೧೯೭೯ ಮಾರ್ಚ್ ೧೩ ರಂದು ಅವರು ನಿಧನರಾದರು.


                     – ಎಲ್. ಎಸ್. ಶಾಸ್ತ್ರಿ

Leave a Reply

Back To Top