ಅಂಕಣ ಸಂಗಾತಿ
ಸುಜಾತಾ ರವೀಶ್
ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು
ಸಂತೆಯ ಸರಕು _
ಲಘು ಲಲಿತ ಹಾಸ್ಯ ಪ್ರಬಂಧ ಸಂಕಲನ
ಶ್ರೀಮತಿ ಉಷಾ ನರಸಿಂಹನ್
ಸಂತೆಯ ಸರಕು _ ಲಘು ಲಲಿತ ಹಾಸ್ಯ ಪ್ರಬಂಧ ಸಂಕಲನ
ಲೇಖಕಿ _ ಶ್ರೀಮತಿ ಉಷಾ ನರಸಿಂಹನ್
ಪ್ರಕಾಶಕರು _ ಅನನ್ಯ ಪ್ರಕಾಶನ ಮೈಸೂರು ಪ್ರಥಮ ಮುದ್ರಣ_ ೨೦೨೧
ಶ್ರೀಮತಿ ಉಷಾ ನರಸಿಂಹನ್ ಕನ್ನಡ ಸಾಹಿತ್ಯರಂಗದಲ್ಲಿ ಈಗಾಗಲೇ ಪ್ರಮುಖವಾಗಿ ಗುರುತಿಸಿಕೊಂಡಿರುವ ಲೇಖಕಿ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿ ಈಗಾಗಲೇ ಜನಮನ್ನಣೆ ಪಡೆದಿರುವ ಇವರು ಕಥೆ ಕವಿತೆ ಕಾದಂಬರಿ ನಾಟಕಗಳನ್ನು ರಚಿಸಿದ್ದಾರೆ. ಎರಡು ಬಾರಿ ಮಾಸ್ತಿ ಕಾದಂಬರಿ ಪುರಸ್ಕಾರ, ಎರಡು ಬಾರಿ ಕಸಾಪ ದತ್ತಿ ನಿಧಿ ಬಹುಮಾನ, ಮೂರು ಬಾರಿ ಕರ್ನಾಟಕ ಲೇಖಕಿಯರ ಸಂಘದ ಪ್ರತಿಷ್ಠಿತ ದತ್ತಿ ನಿಧಿ ಪ್ರಶಸ್ತಿಗಳು ಬಂದಿವೆ. ಅದಲ್ಲದೆ ಪ್ರತಿಷ್ಠಿತ ಸಂಘ-ಸಂಸ್ಥೆಗಳ ಬಹುಮಾನ ಪ್ರಶಸ್ತಿಗಳು ಇವರ ಕೃತಿಗಳಿಗೆ ಸಂದಿವೆ. ಪ್ರಮುಖ ಪತ್ರಿಕೆಗಳಲ್ಲಿ ಇವರ ಬರಹಗಳು ಕಥೆಗಳು ಪ್ರಕಟವಾಗುತ್ತಲೇ ಇರುತ್ತವೆ. ನಿರಂತರವಾಗಿ ಬರವಣಿಗೆಯನ್ನು ರೂಢಿಸಿಕೊಂಡಿರುವುದಲ್ಲದೆ ತಮ್ಮದೇ ವಿಶಿಷ್ಟ ಶೈಲಿ ವಸ್ತುಗಳ ಆಯ್ಕೆಯಿಂದಲೂ ಉಷಾ ಅವರು ಗಮನಾರ್ಹರಾಗುತ್ತಾರೆ. ಅವರ ಕಥೆ ಕಾದಂಬರಿಗಳನ್ನು ಓದಿ ಮೆಚ್ಚಿ ಅವರ ಅಭಿಮಾನಿಯಾಗಿದ್ದ ನನಗೆ ಇತ್ತೀಚೆಗೆ ಅವರನ್ನು ಮುಖತಃ ಭೇಟಿಯಾಗುವ ಅವಕಾಶವು ಕೂಡಿಬಂತು. ಆಗ ಅವರೇ ಪ್ರೀತಿಯಿಂದ ಕೊಟ್ಟ ಪುಸ್ತಕ ಇದು.
ನಗುವು ಸಹಜ ಧರ್ಮ. ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ.
ನಗುವ ನಗಿಸುವ ನಗಿಸಿ ಬಾಳುವ ವರವ
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ
ಎಂದು ಬಹಳ ಹಿಂದೆಯೇ ಡಿವಿಜಿಯವರು ನುಡಿದಿದ್ದರೂ ನಗುವುದು ಸ್ವಲ್ಪ ಕಷ್ಟದ ಕೆಲಸ. ನಗಿಸುವುದಂತು ಅದಕ್ಕಿಂತ ಕಷ್ಟ ಬೇರೆಯವರ ನಗುವಿನಲ್ಲಿ ನಮ್ಮ ನಗುವನ್ನು ಕಾಣುವುದಂತೂ ಪರಮ ಕಷ್ಟದ ಕೆಲಸ. ಹಾಗಾಗಿ ಇದನ್ನು ದೇವರ ವರವೆಂದು ಭಾವಿಸಲೇಬೇಕು . ನಗಿಸುವುದು ಕಷ್ಟ ಎಂದು ಏಕೆ ಹೇಳಿದೆನೆಂದರೆ ಅಲ್ಲಿ ಹಾಸ್ಯ ಅಪಹಾಸ್ಯವಾಗಬಾರದು. ಎರಡರ ಮಧ್ಯೆ ಒಂದು ಸಣ್ಣ ಗೆರೆ ಇರುತ್ತದೆ. ಆಗ ಹಾಸದ ಬದಲು ಅಭಾಸವಾಗುವ ಸಾಧ್ಯತೆಗಳು ಹೆಚ್ಚು. ಅಲ್ಲದೆ ಕೆಲವೊಮ್ಮೆ ನಮ್ಮನ್ನು ನಾವೇ ಹಾಸ್ಯ ಮಾಡಿಕೊಂಡು ನಗುವ ಎದೆಗಾರಿಕೆ ಬೇಕಾಗುತ್ತದೆ .ಇದೆಲ್ಲವನ್ನು ಅಳವಡಿಸಿಕೊಂಡು ಹೀಗೆ ನಗಿಸುವ ಕೆಲಸವನ್ನು ಲೇಖಕಿಯವರು ಇಲ್ಲಿ ಬಹಳ ಸಹಜವಾಗಿ ಮಾಡಿದ್ದಾರೆ. ಕೆಲವೊಂದು ಲೇಖನಗಳು ಬಿದ್ದು ಬಿದ್ದು ನಗುವಂತೆ ಮಾಡಿದರೆ ಮತ್ತೆ ಕೆಲವು ಲೇಖನಗಳು ಮಂದಹಾಸ ತರುವಲ್ಲಿ ಸಫಲವಾಗುತ್ತದೆ.
ತುಂಬಾ ಸುಂದರವಾದ ಹಾಗೂ ಅರ್ಥಪೂರ್ಣ ಮುಖಪುಟವುಳ್ಳ ಈ ಸಂಕಲನಕ್ಕೆ ಹಿರಿಯ ಲೇಖಕಿ ವಸುಮತಿ ಉಡುಪ ಅವರನ್ನು ಮುನ್ನುಡಿಯಿದ್ದು ಉದಯ ಜಾದುಗಾರ ಅವರ ಬೆನ್ನುಡಿ ಇದೆ.
ಒಟ್ಟು ಹದಿನೈದು ಲೇಖನಗಳಿರುವ ಈ ಸಂಕಲನದಲ್ಲಿ ತುಂಬಾ ನಗುತರಿಸುವ ಕೆಲವು ಲೇಖನಗಳನ್ನು ಪ್ರಸ್ತಾಪಿಸುತ್ತೇನೆ.
“ಸರ್ಪ ವಿಷಹರ ಮದ್ದು” ಲೇಖನದಲ್ಲಿ ನರೇಂದ್ರ ಎನ್ನುವವರಿಗೆ ಹಾವು ಕಚ್ಚಿದಾಗ ಮಾಡಿದ ಪ್ರಥಮ ಚಿಕಿತ್ಸೆಯ ಸಂಧರ್ಭ ಆಗ ಹಳ್ಳಿಗರು ತಲೆಗೊಂದು ಆಡುವ ಮಾತು ಇವೆಲ್ಲ ತುಂಬಾ ಹಾಸ್ಯಮಯವಾಗಿ ಮೂಡಿಬಂದಿದೆ.
ಹಾವು ಕಚ್ಚಿದ ಜಾಗದಲ್ಲಿ ಗೀರಿ ಗಾಯ ಮಾಡಿ ವಿಷರಕ್ತವನ್ನು ಹೀರಲು ಕೋಳಿಗಳ ಗುದದ್ವಾರವನ್ನು ಹಿಡಿಯುತ್ತಾರೆ . ಆಗ ಒಂದೊಂದಾಗಿ ಕೋಳಿಗಳು ಸಾಯುವ ಸಂದರ್ಭ ಲೇಖಕಿಯವರಿಗೆ “ಇಷ್ಟು ಜನರೆದುರು ತಮ್ಮ ಮರ್ಯಾದೆ ಹರಾಜಾದ ಮೇಲೆ ತಾವಿನ್ನು ಯಾಕೆ ಬದುಕಬೇಕು” ಎಂದು ಅವೆಲ್ಲ ಆತ್ಮಾಹುತಿ ಮಾಡಿಕೊಂಡಿರಬೇಕು ಅನ್ನಿಸಿತಂತೆ. ಕಡೆಯಲ್ಲಿ ವಿಷವನ್ನು ಕಕ್ಕಿಸಲು ವಾಂತಿ ಮಾಡಿಸಲು ಅಪ್ಪಾಜಪ್ಪ
ಅನ್ನುವರ ಅಮೇಧ್ಯ ಬಳಸುವ ವಿಷಯ, ಈಗಲೂ ನರೇಂದ್ರನನ್ನು ಆತ ಲೇವಡಿಯಿಂದ ” ನನ್ನ ಹೇಲ್ ತಿಂದು ಬದುಕಿ ಉಳಿದಿಯಲ್ಲೋ ಮಗನೇ” ಎಂದು ಛೇಡಿಸುವ ವಿಷಯ ಬಿದ್ದು ಬಿದ್ದು ನಗುವಂತೆ ಮಾಡುತ್ತದೆ.
“ಸಿರ್ಫ್ ದೋ ಮೇ ಗಯಾ” ದಲ್ಲಿ ಎಸ್ ಎಸ್ ಎಲ್ ಸಿ ಎಂದರೆ ಒಂದೇ ಬಾರಿಗೆ ಪಾಸ್ ಆಗುವ ವಿಷಯವೇ ಅಲ್ಲ ಎಂಬ ಆಗಿನ ನಂಬಿಕೆಯನ್ನು ಹೇಳುತ್ತಾ ಅವರ ಅಣ್ಣ ಮತ್ತು ಅವರ ಸ್ನೇಹಿತರು ಮಾಡುತ್ತಿದ್ದ ತುಂಟಾಟಗಳು ಹಾಗೂ ಫೇಲಾದಾಗ ಮನೆಯವರಿಗೆ ಹೇಳುತ್ತಿದ್ದ ಸಬೂಬುಗಳು ಒಬ್ಬರಿಗೊಬ್ಬರು ವಹಿಸಿಕೊಳ್ಳುತ್ತಿದ್ದು ಇವೆಲ್ಲವನ್ನೂ ತಮಾಷೆಯಾಗಿ ವರ್ಣಿಸುತ್ತಾರೆ.
ಪ್ರೇಮ ಪತ್ರಗಳ ಕಾಲದಲ್ಲಿ ತಮಗೆ ಹೈಸ್ಕೂಲು ಮತ್ತು ಕಾಲೇಜಿನಲ್ಲಿ ಬಂದ ಪ್ರೇಮ ಪತ್ರಗಳ ಬಗ್ಗೆ ತಿಳಿಸುತ್ತಾ ಅವೆಲ್ಲವೂ
ಆಗ ಹೆದರಿಕೆ ತರುತ್ತಿದ್ದನ್ನು ತಿಳಿಸುತ್ತಾರೆ. ವಿವಾಹ ನಿಶ್ಚಯದ ನಂತರ ಆರು ತಿಂಗಳು ತಮ್ಮ ಪತಿಯೊಂದಿಗೆ ನಡೆಸಿದ ಪ್ರೇಮ ಪತ್ರಗಳ ಬಗ್ಗೆ ಹೇಳುತ್ತಾ ಈಗ ಪ್ರೇಮ ಪತ್ರ ಬರೆಯಲು ಅವಕಾಶವಿಲ್ಲದ ಬಗ್ಗೆ ವಿಷಾದಿಸುತ್ತಾರೆ. ತುಮಕೂರಿನ ಕಾಲೇಜಿನ ಪ್ರಾಂಶುಪಾಲರು ಇವರಿಗೆ ಬಂದ ಪ್ರೇಮಪತ್ರಗಳನ್ನು ಓದಿ ಹುಡುಗನ ಲ್ಯಾಂಗ್ವೇಜ್ ಚೆನ್ನಾಗಿದೆ ಎಂದು ಹೇಳಿದ್ದು ನಗು ತರಿಸುತ್ತೆ.
“ಹಳ್ಳಿ ಸ್ಕೂಲು ಹಂಗಾಮಿ ಟೀಚರ್ ಆದ ನಾನು” ಲೇಖನದಲ್ಲಿಯೂ ಹಾಗೆ ಮಕ್ಕಳಿಗೆ ಕಲಿಸಲು ಪಟ್ಟಪಾಡುಗಳನ್ನು ಹೇಳುತ್ತಾ ಕಡೆಗೆ ಎಸ್ ಎಸ್ ಎಲ್ ಸಿ ಪಾಸು
ಮಾಡಿಸಲು ಲಂಚ ಕೊಡಲು ಆಳು ಮಗನೊಬ್ಬ ಇವರ ಮನೆಗೆ ಬಂದು ಸಾಲ ಕೇಳಿದ್ದನ್ನು ನೆನಪಿಸಿಕೊಳ್ಳುತ್ತಾರೆ.
“ಎಡತೊರೆ ಕಲ್ಲೇಶಿಯೂ ಕವನ ಸ್ಪರ್ಧೆಯೂ” ಲೇಖನದಲ್ಲಿ ಕವನ ಸ್ಪರ್ಧೆಗಳಲ್ಲಿ ನಡೆಯುವ ವಾಸ್ತವಿಕ ವಿಷಯಗಳನ್ನು ನಗು ಹುಟ್ಟಿಸುವಂತೆ ವರ್ಣಿಸುತ್ತಾರೆ . ಸಮಾರಂಭದ ಖರ್ಚಿಗೆ ಮೂವತ್ತು ಸಾವಿರ ಕೊಟ್ಟವರಿಗೆ ಪ್ರಥಮ ಬಹುಮಾನ, ಹತ್ತು ಸಾವಿರ ಕೊಟ್ಟವರಿಗೆ ತೃತೀಯ ಬಹುಮಾನ ,ಮುಂದೆ ಯಾರಾದರೂ 20,000 ಕೊಟ್ಟರೆ ಅವರಿಗೆ ಎರಡನೇ ಬಹುಮಾನ ಎಂದು ಹೇಳುವ ಸ್ಪರ್ಧೆಯ ಆಯೋಜಕ ಕಲ್ಲೇಶಿಯ ಮಾತುಗಳು, ಸನ್ಮಾನಕ್ಕೆ ಇಷ್ಟು ಹಣ ಎಂದು ನಿಗದಿ ಪಡಿಸುವುದು ಇವೆಲ್ಲವೂ ವರ್ತಮಾನದ ಸ್ಥಿತಿಯ ಸಮರ್ಥ ವಿಡಂಬನೆಯಾಗಿದೆ.
“ಅಬ್ಬ, ಆ ಹಬ್ಬಗಳು” ನಲ್ಲಿ ತಾವು ಚಿಕ್ಕ ವಯಸ್ಸಿನಲ್ಲಿದ್ದಾಗ ಬಿಸಿಲಲ್ಲಿ ಪಟಾಕಿಯನ್ನು ಒಣಗಿಸುವುದು ತಡವಾಗುವುದೆಂದು ಒಲೆಯ ಮೇಲೆ ಕಬ್ಬಿಣದ ಬಾಣಲೆ ಇಡಲು ಹೋದ ಪ್ರಸಂಗ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ.
ಇಸ್ಪೀಟಾಯಣ ಲೇಖನದಲ್ಲಿ ತಮ್ಮ ಅಜ್ಜಿಯ ಮನೆ ಕಡೆಯವರೆಲ್ಲರೂ ಇಸ್ಪೀಟ್ ಆಟದಲ್ಲಿ ಆಸಕ್ತಿ ಉಳ್ಳವರಾಗಿದ್ದು ಎಲ್ಲರೂ ಸೇರಿದಾಗ ಇಸ್ಪೀಟ್ ಆಡುತ್ತಿದ್ದುದನ್ನು ತುಂಬಾ ಆಕರ್ಷಕವಾಗಿ ವಿವರಿಸುತ್ತಾರೆ. ಅಂದಿನ ಕಾಲದಲ್ಲಿ ಮದುವೆ ಮುಂತಾದ ಸಮಾರಂಭಗಳಲ್ಲಿ ನಡೆಯುತ್ತಿದ್ದ ಇಸ್ಪೀಟ್ ಆಟದ ಮೋಜಿನ ಪ್ರಸಂಗಗಳು ಇಲ್ಲಿ ಬೆಳಕು ಕಂಡಿವೆ. ತಮ್ಮ ಅತ್ತೆ ಒಬ್ಬರ ಪತಿ ಅವರ ತವರು ಮನೆಯ ಇಸ್ಪೀಟ್ ಹುಚ್ಚು ತೊಳಿದಿದ್ದು ಅವರನ್ನು ಕಳಿಸಲು ಒಮ್ಮೆ ವಿರೋಧಿಸಿದಾಗ ಅಲ್ಲಿಯವರೆಗೂ ಮೌನ ಗೌರಿಯಂತಿರುತ್ತಿದ್ದವರು ಅಂದು ಪ್ರತಿಭಟಿಸಿದ್ದು ಇಲ್ಲಿ ಪ್ರಸ್ತಾಪವಾಗಿದೆ. ಇಸ್ಪೀಟ್ ಪ್ರಿಯರ ಆತ್ಮ ಸಮಾಧಾನವಾಗಲು ವೈಕುಂಠ ಸಮಾರಾಧನೆಯಲ್ಲಿ ಬೇರೆ ದಾನಗಳ ಜೊತೆ ಒಂದು ಸೆಟ್ ಇಸ್ಪೀಟಸ ಪ್ಯಾಕ್ ಹಾಗೂ ಸಾವಿರ ರೂಪಾಯಿಗಳ ದಾನ ಕೊಡುತ್ತಿದ್ದದನ್ನು ಇಲ್ಲಿ ಲೇಖಕಿಯವರು ಸ್ಮರಿಸುತ್ತಾರೆ.
ರೇಷ್ಮೆ ಸೀರೆಗಳ ವ್ಯಾಪಾರದಲ್ಲಿ ವ್ಯವಹಾರವನ್ನು ನಡೆಸುವ ಲೇಖಕಿಯರು ಆ ಉದ್ಯೋಗದಲ್ಲಿನ ಸಂಗತಿಗಳನ್ನು ಪ್ರಸಂಗಗಳನ್ನು ತುಂಬಾ ಸ್ವಾರಸ್ಯಕರವಾಗಿ ನಿರೂಪಿಸುತ್ತಾ ಹೋಗುತ್ತಾರೆ ಒಮ್ಮೆ ವೆಂಕಟಗಿರಿಯಿಂದ ಬರುವಾಗ ನಡೆದ ಪ್ರಸಂಗ ಮೈ ಜುಮ್ಮೆನಿಸುವಂತೆ ಅನಿಸಿದರೂ ಸುಖಾಂತದಿಂದಾಗಿ ಹಾಸ್ಯ
ಪ್ರಸಂಗವಾಗುತ್ತದೆ.
ಎಲ್ಲಾ ಬರಹಗಳಿಗಿಂತ ಹೆಚ್ಚು ಖುಷಿ ಕೊಟ್ಟ ಬರಹ “ಕೊಬ್ಬು ಕರಗುವ ಸಮಯ”. ನಾನು ಮೊದಲೇ ಹೇಳಿದಂತೆ ತಮ್ಮನ್ನು ತಾವೇ ಹಾಸ್ಯ ಮಾಡಿಕೊಳ್ಳಲು ಬಹಳ ಎದೆಗಾರಿಕೆ ಬೇಕು. ಆ ಗುಣವನ್ನು ಇಲ್ಲಿ ಉಷಾ ಅವರು ತುಂಬಾ ಸಹಜವಾಗಿ ಮೆರೆದಿದ್ದಾರೆ . ಹಿಂದಿನ ಗೆಳತಿಯರನ್ನು ನೆನಪಿಸಿಕೊಳ್ಳುವಲ್ಲಿ ನನ್ನ ಸ್ಮರಣ ಶಕ್ತಿ ಬಹಳ ಅದ್ಭುತವಾದದ್ದು ಎಂದು ನನಗೆ ನಾನೇ ಬೆನ್ನು ತಟ್ಟಿಕೊಳ್ಳುತ್ತಿದ್ದೆ. ಆದರೆ ಉಷಾ ಅವರು ನನ್ನ ಹೈಸ್ಕೂಲು ಗೆಳತಿ ಎಂದು ಗುರುತಿಸುವಲ್ಲಿ ಮೊದಲನೇ ಭೇಟಿಯಲ್ಲಿ ಸಾಧ್ಯವಾಗಲೇ ಇಲ್ಲ. ಅದಕ್ಕೆ ಕಾರಣ ನನ್ನ ಮನಸ್ಸಿನಲ್ಲಿ ಅಂದಿನ ಲತಾಂಗಿ ಎಸ್ ಎಸ್ (ಸ್ಲಿಮ್ ಅಂಡ್ ಸ್ಲಿಮ್) ಉಷಾಳ ಬಿಂಬವೇ ಅಚ್ಚಾಗಿದ್ದುದು.(ಉಷಾ ಅವರ ಕ್ಷಮೆ ಕೋರಿ).
ಇಲ್ಲಿ ಅವರು ತಮ್ಮನ್ನು ತಾವು ವರ್ಣಿಸಿಕೊಳ್ಳಲು ಬಳಸುವ ಭಾಷೆಯ ಪರಿ ಸಹಜ ಹಾಸ್ಯದ ಸಮರ್ಥ ಉದಾಹರಣೆ. ಆನಂತರ ಪ್ರಕೃತಿ ಶಿಬಿರದ ವಿಷಯ ಹೇಳುವಾಗಂತು ಓದುವುದನ್ನೇ ನಿಲ್ಲಿಸಿ ಬಿದ್ದು ಬಿದ್ದು ನಗುತಿದ್ದೆ. (ಹಾಗೇ ನನ್ನ ಪತಿರಾಯರ ಹುಬ್ಬು ಗಂಟಿನ ಕಟಾಕ್ಷಕ್ಕೂ ಪಾತ್ರಳಾದೆ ಅನ್ನಿ). ಅಲ್ಲಿ ಬಳಸುತ್ತಿದ್ದ ಚಿಕಿತ್ಸೆಯ “ಟರ್ಮರಿಕ್ ಬಾತ್ ” “ಮಡ್ ಬಾತ್” “ವರ್ಲ್ಪೂಲ್ ಬಾತ್” “ಇಮರ್ಷನ್ ಬಾತ್” ಇದೆಲ್ಲವೂ ಅವರಿಗೆ ಅವರು ಮಿಸ್ ಮಾಡಿಕೊಳ್ಳುತ್ತಿದ್ದ ಕೇಸರಿಬಾತ್ ವಾಂಗಿಬಾತ್ ಬಿಸಿಬೇಳೆ ಬಾತ್ ಇವುಗಳನ್ನು ನೆನಪಿಸಿ ಹಪಹಪಿಸುವಂತೆ ಮಾಡುತ್ತಿದ್ದವಂತೆ.
ವೈದ್ಯಕೀಯ ರೀತ್ಯಾ ಕೂಡ ಹಾಸ್ಯ ನಗುವಿಗೆ ಅದರದ್ದೇ ಪ್ರಾಮುಖ್ಯತೆಯಿದ್ದು, ಎಂತಹ ಪರಿಸ್ಥಿತಿಯಲ್ಲೂ ಮನತುಂಬಿ ನಕ್ಕಾಗ ಎಲ್ಲ ನೋವುಗಳು ಮರೆಯಾಗುವುದನ್ನು ಅಥವಾ ಅದರ ತೀಕ್ಷ್ಣತೆ ಕಡಿಮೆಯಾಗುವುದನ್ನು ಗುರ್ತಿಸಬಹುದು. ಬದುಕಿನ ಜಂಜಡಗಳೆಂಬ ಮರುಭೂಮಿಯಲ್ಲಿ ಆಗಾಗ ಬೀಸುವ ಮಂದಾನಿಲ ಮತ್ತು ಸಿಗುವ ಓಯಸಿಸ್ಸುಗಳಂತೆ ನಗೆ ಹಾಸ್ಯಗಳು. ಹಾಗಾಗಿ ನವರಸಗಳಲ್ಲಿ ಹಾಸ್ಯರಸಕ್ಕೆ ತುಂಬಾ ಪ್ರಾಮುಖ್ಯತೆ. ಹೀಗೆ ಬದುಕಿನ ಸಂಕಟಗಳನ್ನು ಮರೆಯುವ ಶಕ್ತಿ ಕೊಡುವ ಹಾಸ್ಯ ಸಾಹಿತ್ಯಕ್ಕೆ ಹಾಗೂ ಅದರ ರಚನಾಕಾರರಿಗೆ ಶರಣು ಎನ್ನಲೇಬೇಕು.
ಇದುವರೆಗೂ ನಾನು ಓದಿದ್ದು ಉಷಾ ಅವರ ಸಣ್ಣ ಕಥೆಗಳು ಹಾಗೂ ಗಂಭೀರ ಕಥಾ
ವಸ್ತುಗಳ ಕಾದಂಬರಿಗಳನ್ನು ಮಾತ್ರ. ಇಷ್ಟೊಂದು ತಮಾಷೆಯಾಗಿ ನಗೆ ಕಡಲಲ್ಲಿ ಮುಳುಗುವಂತೆ ಬರೆಯುತ್ತಾರೆ ಎಂದು ಗೊತ್ತಾಗಿದ್ದು ಈ ಸಂಕಲನದ ಲೇಖನಗಳನ್ನು ಓದಿದ ನಂತರವೇ. ಒಂದೇ ತರಹದ ನಿರೂಪಣೆಗೆ ಸೀಮಿತವಾಗದೆ ಎಲ್ಲಾ ತರಹದ ಬರಹಗಳನ್ನು ಬರೆಯುವ “ವರ್ಸಟೈಲ್” ಹಾಗೂ ನಮ್ಮ ಹೆಮ್ಮೆಯ ಲೇಖಕಿ ಉಷಾ ನರಸಿಂಹನ್ ಅವರು. ಅವರ ಲೇಖನಿಯಿಂದ ಇನ್ನಷ್ಟು ಹೆಚ್ಚಿನ ರಚನೆಗಳು ಮೂಡಿ ಬರಲಿ. ಮತ್ತಷ್ಟು ಉನ್ನತೋನ್ನತ ಪ್ರಶಸ್ತಿಗಳು ಅವರ ಮುಡಿಗೇರಲಿ ಎಂಬ ಶುಭಾಕಾಂಕ್ಷೆಗಳೊಂದಿಗೆ.
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು
ಸೂಪರ್…ಓದಲೇಬೇಕೆಂಬ ಹಂಬಲ…