ಪುಟ್ಟಿಯ ಆಸೆ -ಪುಸ್ತಕ ಪರಿಚಯ

ಪುಸ್ತಕ ಸಂಗಾತಿ

ಅಕ್ಬರ್ ಸಿ ಕಾಲಿಮಿರ್ಚಿ

ಪುಟಾಣಿಗಳ ಓದಿನ ಫುಳಕ

ಸಹಜ ರೀತಿಯಲ್ಲಿ ಮಗುವಿನ ಮನಸ್ಸು ಸೆರೆ ಹಿಡಿವ ಕವಿತೆಗಳ ರಚನೆ ತುಸು ಕಠಿಣವೆ. ಆದರೂ ನಿತ್ಯ ಓದು ಮತ್ತು ಶ್ರಮದ ಪರಿಣಾಮ ಅದನ್ನು ಸರಳಗೊಳಿಸಬಲ್ಲುದು ಎಂಬುದು ಅನುಭವದ ವರಸೆ.

ಕವಿ ಅಕ್ಬರ್ ಸಿ ಕಾಲಿಮಿರ್ಚಿ ಮಕ್ಕಳ ಕುರಿತು ಬರೆವ ಕವಿತೆಗಳು ಸಹಜ ರೀತಿಯಲ್ಲಿ ಮೈದಳೆಯುತ್ತವೆ.

ಮಗು ಸಹಜ ರೀತಿಯಲ್ಲಿ ಓದುವ ಶೈಲಿಯಲ್ಲಿ ಅವರು ಬರೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಕಳೆದ ವರುಷ ಕನ್ನಡ ಮೈತ್ರಿ ಪ್ರಕಾಶನ ಹೊರ ತಂದಿರುವ ಅವರ ಮಕ್ಕಳ ಕವನ ಸಂಕಲನ

 ‘ ಪುಟ್ಟಿಯ ಆಸೆ’ ಇದಕ್ಕೊಂದುನಿದರ್ಶನ.

ಈ ಸಂಕಲನ ನಲವತ್ತೊಂದು ಕವಿತೆಗಳನ್ನು ತನ್ನೊಡಲೊಳಗೆ ಮಡಗಿಕೊಂಡಿದೆ. ಸಮಾಜದಲ್ಲಿ ಮಗು ಪರಿಪೂರ್ಣ ರೀತಿಯಲ್ಲಿ ಬೆಳೆಯುವುದಕ್ಕೆ ಇಲ್ಲಿನ ಬಹುತೇಕ ಕವಿತೆಗಳು ದಾರಿ ಬಿಟ್ಟುಕೊಡುತ್ತವೆ. ವಿವಿಧ ವಿಷಯಗಳ ಅಡಕಗೊಂಡ , ವಿವಿಧ ಬಗೆಯ ಕವಿತೆಗಳು ನಗು ಚೆಲ್ಲುತ್ತವೆ.

ಒಂದು ಭಾವಪೂರ್ಣ ಮತ್ತು ಧ್ವನಿಪೂರ್ಣ ಕವಿತೆಯನ್ನು ಗಮನಿಸೋಣ. ( ಶರಣು ಕಂದ)

ಇಲ್ಲಿಯ ಚರಿತ್ರೆಯ ಹುಟ್ಟಿಗೆ ಇತಿಹಾಸವಿದೆ

ಆಂತರ್ಯವಿದೆ ತಿರುಳಿದೆ ಹುರುಳಿದೆ

ಹುಟ್ಟು ಪ್ರಕೃತಿಯ ಫಲ

ಪಡೆವುದು ಧನ್ಯತೆಯ ಫಲ‘ ( ಪುಟ-೧)

ಮಗುವಿಗೆ ಈ ನಾಡಿನ ಆಚಾರ, ಸಂಸ್ಕೃತಿ , ಪರಂಪರೆ , ಪ್ರಕೃತಿ ಹಾಗೂ ಶರಣರ ಸಾಮಾಜಿಕ ಬದ್ಧತೆಯನ್ನು ಎತ್ತಿ ತೋರಿಸುವ ಯತ್ನ ಕಾಲಿಮಿರ್ಚಿ ಅವರದು.

ಮಕ್ಕಳ ಮುಗ್ದ ಮನಸ್ಸಿಗೆ ಹಿರಿಯರು ತಲೆ ಬಾಗಲೇಬೇಕು. ಮಗು ಕಂಡದ್ದೆಲ್ಲವನ್ನೂ ಬಯಸುವುದು ಸಹಜ. ಅದಕ್ಕೆ  ಕವಿ ಉದಾಹರಿಸಿದ್ದು ಹೀಗೆ. (ಪುಟ್ಟಿಯ ಆಸೆ)

ಪುಟಾಣಿ ಮಗುವು ಗಿಳಿಯನು ನೋಡಿ

ಹಿಡಿಯಲು ಹೋಯಿತು, ಗಿಳಿಯು ಹಾರಿತು

ಪುರ್ರನೇ ಗಗನಕೆ…

ನನಗದು ಬೇಕು ಎನ್ನುತ ಪುಟ್ಟಿಯು

ಹಠವನು ಹಿಡಿದು ಅಳುತಲಿ ನಿಂತಿತು

ಅಂಗಳ ನಡುವೆ‘…(ಪುಟ-೧೪)

ಆಧುನಿಕ ಬದುಕು ಮೂರಾಬಟ್ಟಿ ಆಗಿದ್ದಕ್ಕೆ, ಮಕ್ಕಳೆಲ್ಲಾ ಬಾಲ್ಯದ ಸಹಜ ಆಟಗಳನ್ನು ಬಿಟ್ಟು ದೂರ ದರ್ಶನ , ಮೊಬೈಲ್ ಯಾಂತ್ರಿಕ ಆಟಗಳಲ್ಲಿ ತೊಡಗಿರುವುದು ಕವಿಗೆ ವಿಷಾದವಿದೆ. ಹಾಗಾಗಿ ಪರಂಪರಾಗತ ಆಟಗಳನ್ನು ಮತ್ತೆ ನೆನಪಿಸುವ ಕಳಕಳಿ ಅವರದು. (ಗೋಲಿ ಆಟ)

ಗುಂಡನ ಕೈಯಲ್ಲಿ

  ಗೋಲಿ ಗುಂಡು

  ಜೇಬಲಿ ಝಣಝಣ ಸದ್ದು‘…(ಪುಟ-೨೩)

ತಾಯಿಗೆ ಮಕ್ಕಳೆಂದರೆ ಎಲ್ಲಿಲ್ಲದ ಮುದ್ದು.

ಅವಳಿಗೆ ಮಕ್ಕಳನ್ನು ಮುದ್ದು ಮಾಡುವ ಹಾದಿಗಳು ಹಲವು. ಕಾಲಿಮಿರ್ಚಿ ಅವರ ಕವಿತೆಯ ತಾಯಿ ಮಗುವನ್ನು ಮುದ್ದಿಸುವ ರೀತಿ ಬಲು ಸೊಗಸು.

ಪುಟಾಣಿ ಬೆಲ್ಲದ

ಮುದ್ದಿನ ಕೂಸೆ

ಮಂಡಿ ಊರುತ

ನೀ ಬಾರೋ..‌‘(ಪುಟ-೨೮)

ಕಣ್ಣೆದುರಿನ ಸಂಗತಿಗಳನ್ನು ಸೂಕ್ಷ್ಮ ಸಂವೇದನೆಯ ಮೂಲಕ ಗಮನ ಹರಿಸುವ ಕವಿಗೆ ‘ ರವಿಗೆ ಕಾಣದ್ದು ಕವಿಗೆ ಕಂಡಂತೆ’. ಸಂಕಲನ ಮತ್ತೊಂದು ಕವನ (ಉಪಾಹಾರ)

ಗೋಡೆ ಮೇಲೆ ಹಲ್ಲಿ ಆಟ

ಮನೆ ತುಂಬ ಅದರ ಓಟ

ಶಬ್ದಕಂಜಿ ಸರಸರನೇ

ಮರೆಗೆ ಸರಯಿತು‘…(ಪುಟ-೪೪)

ಮನೆಯೊಳಗಿನ ಹಲ್ಲಿಯ ಪ್ರತಿ ಚಲನವನ, ಅದರ ಬೇಟೆಯ ಭಂಗಿ ಹಾಗೂ ದಕ್ಕಿಸಿಕೊಳ್ಳುವ ಪರಿಯನ್ನು ಬಲು ನಾಜೂಕಿನಿಂದ ಬರೆದಿದ್ದಾರೆ.

ಮನೆಯ ಸಾಕು ಪ್ರಾಣಿ ಕುರಿತು ಅವರ ಬಹು ಸಂವೇದನೆಯ ಮತ್ತೊಂದು ಕವನ ಗಮನ ಸೆಳೆಯುತ್ತದೆ.( ನಮ್ಮ ಟಾಮಿ)

ಮುದ್ದು ಪ್ರಾಣಿ

ಹೆಸರು ಟಾಮಿ

ಅರಿವು ಭಾಳ

ಬೆಟ್ಟದಷ್ಟು‘…(ಪುಟ-೫೧)

ಮನುಷ್ಯನಿಗಿಂಥ ಮೂಕ ಜೀವಿಗಳ ಸಂವೇದನೆ ಬಲು ಹೆಚ್ಚು. ನಮ್ಮನ್ನು ಮೀರಿದ ಅರಿವು ಮನೆಯ ಸಾಕು ನಾಯಿ ‘ ನಮ್ಮಟಾಮಿ’ ಯಲ್ಲಿ ಕಂಡಿದ್ದಾರೆ. ಅಂತ್ಯ ಪ್ರಾಸಗಳಲ್ಲಿ ಓಡುವ ಕವಿತೆ ಪಾಜಿ ಮುಟ್ಟಿದ ಬಳಿಕ ಹುಮ್ಮಸ್ಸು ಉಣ ಬಡಿಸುತ್ತದೆ.

ಹೀಗೆ ಸಂಕಲನ ಬಹುತೇಕ ಕವನಗಳು ಕವಿಯ ಬರೆಹದ ತಾಕತ್ತನ್ನು ಪ್ರದರ್ಶಿಸುತ್ತಾ ಸಾಗುತ್ತವೆ. ಬಿಡುವಿರದ ಓದು ಬೆಂಬಲವಾಗಿ ನಿಂತಿರುವ ವಾಸನೆ ಮೂಗಿಗೆ ಬಡಿಯುತ್ತದೆ. ಮಕ್ಕಳ ಮನಕ್ಕೆ ಪುಷ್ಟಿ ನೀಡುವ ಕವನಗಳು ನಿರಾಸೆ ಉಂಟು ಮಾಡುವುದಿಲ್ಲ. ಕವಿಗೆ ಅಭಿನಂದನೆಗಳು.


ಶಿ ಕಾ ಬಡಿಗೇರ

Leave a Reply

Back To Top