ಅಂಕಣ ಸಂಗಾತಿ

ಒಲವ ಧಾರೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ

ಚಾಲಕರ ಒಲವು ಮರೆಯುವದುಂಟೇ..?

ಎಲ್ಲರ ಬದುಕಿನ ಬಂಡಿ ಎಳೆಯುವ ಚಾಲಕರ ಒಲವು ಮರೆಯುವದುಂಟೇ..?

ತಮ್ಮ ಬದುಕಿನ ಗುರಿ ಮುಟ್ಟದಿದ್ದರೂ ಪ್ರಯಾಣಿಕರನ್ನು ಊರಿಗೆ ಮುಟ್ಟಿಸುವವರ ಒಲವ ಮರೆಯುವದುಂಟೇ…?

“ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ..”- ಡಿ. ವಿ. ಜಿ.

ಮೇಲಿನ ಎರಡು ಮಾತುಗಳು ನನ್ನನ್ನು ಸದಾ ಕಾಡುತ್ತಿರುತ್ತವೆ.

ಹೌದು…

ಪ್ರತಿಯೊಬ್ಬರೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸಬೇಕಾದರೆ ಅಥವಾ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಮುನ್ನುಗ್ಗಬೇಕಾದರೆ ಪ್ರತಿಯೊಬ್ಬರ ಬದುಕಿನಲ್ಲಿಯೂ ‘ಚಾಲಕರ’ ಪಾತ್ರ ಬಹಳ ಮುಖ್ಯ. ‘ಚಾಲಕ’ ಎಂಬ ಪದ ಚಲನೆಯನ್ನು ನಿರಂತರವಾಗಿ ಮಾಡುವವ… ಆತ ಮೈಯೆಲ್ಲಾ ಕಣ್ಣಾಗಿ ಯಾವ ಕಡೆಯೂ ತನ್ನ ದೃಷ್ಟಿಯನ್ನು ಹರಿಸದೆ ಕೇವಲ ಆತನಿಗೆ “ದಾರಿ ಮತ್ತು ಗುರಿ” ಮುಖ್ಯವಾಗಿರುತ್ತದೆ.

ಚಾಲಕನಿಗೆ “ದಾರಿ ಮತ್ತು ಗುರಿ” ಮುಖ್ಯವಾದಾಗ ಮಾತ್ರ ತನ್ನ ಪ್ರಯಾಣಿಕರನ್ನು ಸುರಕ್ಷಿತವಾಗಿ ಮತ್ತು ನಿಗಧಿತ ಸಮಯಕ್ಕೆ ತಲುಪಿಸಬಲ್ಲ.

ಚಾಲಕನಿಗೆ ಜವಾಬ್ದಾರಿ ಮುಖ್ಯ. ಪ್ರತಿಯೊಬ್ಬ ಚಾಲಕನು ಜವಾಬ್ದಾರಿಯುತವಾಗಿ ವಾಹನವನ್ನು ಚಾಲನೆ ಮಾಡುತ್ತಾನೆ. ಹಾಗೇ ಚಾಲನೆ ಮಾಡಲೇಬೇಕು. ಅದಕ್ಕಾಗಿ ಆತ ನಿದ್ದೆಯನ್ನು ಕೊಲ್ಲುತ್ತಾನೆ. ಕುಟುಂಬವನ್ನು ತೊರೆಯುತ್ತಾನೆ. ವಿವೇಕವನ್ನು ಸವಾರಿ ಮಾಡುತ್ತಾನೆ. ಪಯಣಿಗರ ನಿಗಧಿತ ಗುರಿಯನ್ನು ಮುಟ್ಟಿಸುತ್ತಾನೆ.

‘ಚಾಲಕ’ ಎಂದರೆ ವಾಹನದ ಡ್ರೈವರ್ ಮಾತ್ರ ಅಲ್ಲ..!! “ಬದುಕೆಂಬ” ವಾಹನಕ್ಕೆ ಚಾಲಕ ಎಂದರೆ ಗುರು, ತಂದೆ, ತಾಯಿ,ಸ್ನೇಹಿತ, ಹಿತೈಷಿ ಯಾರಾದರೂ ಆಗಿರಬಹುದು.

ಯಾರು ಅಭಿಪ್ರಾಯವನ್ನು, ಸಲಹೆಯನ್ನು, ಕೇಳುತ್ತಾರೋ ಅವರಿಗೆ ಸರಿಯಾದ ಮಾರ್ಗದರ್ಶನ ಮಾಡುವವರೆಲ್ಲರೂ ಚಾಲಕರೆ..!!

ವಾಸ್ತವಿಕವಾಗಿ ಬಸ್ಸು, ಕಾರು, ಜೀಪು, ದ್ವಿಚಕ್ರವಾಹನ, ಹಡಗು, ವಿಮಾನ… ಇವುಗಳನ್ನು ತಮ್ಮ ಚಾಣಾಕ್ಷತನದಿಂದ ತದೇಕಚಿತ್ತದಿಂದ ನಿಗಧಿತ ಗುರಿಯನ್ನು ತಲುಪಿಸಲು ಪ್ರಯಾಣಿಕರಿಗೆ ಅಭಯನಾಗಿ, ಸಾರಥಿಯಾಗಿ, ಸಹಜೀವಿಯಾಗಿ, ಸ್ನೇಹಿತನಂತೆ ಗುರಿ ಮತ್ತು ನಿಗದಿತ ಸ್ಥಳವನ್ನು ತಲುಪಿಸಲು ಶ್ರಮಿಸುತ್ತಾನೆ.

ವಾಹನವನ್ನು ಚಲಿಸುವಾಗ ಅವನು ತನ್ನ ಬಾಳಿನ ಜಂಜಡಗಳನ್ನು, ಚಿಂತೆಗಳ ಇರುವಿಕೆಯನ್ನು ಮರೆತುಬಿಡಬೇಕು..!! ಕೇವಲ ‘ದಾರಿ ಮತ್ತು ಗುರಿ’ ಮುಖ್ಯವಾಗಿರಬೇಕು. ತನ್ನನ್ನು ನಂಬಿಕೊಂಡು ಬಂದ, ತನ್ನ ಮೇಲೆ ವಿಶ್ವಾಸವಿಟ್ಟ ಪ್ರಯಾಣಿಕರ ಹಿತವನ್ನು ಕಾಯಬೇಕು.

ಚಾಲಕ ಎಂದರೆ “ಯಮನ ಸ್ವರೂಪಿ” ಎಂದೂ ಕೆಲವರು ಕರೆಯುತ್ತಾರೆ..! ಆದರೆ ನಿಜವಾಗಿಯೂ ಆತ ಯಮನ ಸ್ವರೂಪಿಯಲ್ಲ. ಅಕಸ್ಮಿಕವಾಗಿ ನಡೆದ ಘಟನೆಗಳಿಗೆ ಕೆಲವು ಸಲ ಮಾತ್ರ ಆತ ಕಾರಣನಾಗಬಲ್ಲ. ಇನ್ನು ಕೆಲವು ಚಾಲಕರು ತಮ್ಮ ಜವಾಬ್ದಾರಿಯನ್ನು ಮರೆತು, ತಮ್ಮ ಅಸ್ತಿತ್ವ ಮತ್ತು ಮಹತ್ವವನ್ನು ಮರೆತುಬಿಟ್ಟು ತಮ್ಮ ವೃತ್ತಿ ಬದುಕನಲ್ಲಿ ಹೇಗೆಬೇಕೋ ಹಾಗೆಯೇ ನಡೆದುಕೊಂಡು ಬಿಡುತ್ತಾರೆ..!! ಕಪ್ಪು ಚುಕ್ಕಿಯನ್ನು ಬೆಳೆಸಿಕೊಂಡು ಬಿಡುತ್ತಾರೆ. ಕೇವಲ ತಮ್ಮ ಕುಡಿತದ ಚಟಕ್ಕೆ ಕ್ಷಣಿಕ ಖುಷಿ ಮತ್ತು ಸಂತೋಷದ ಸಲುವಾಗಿ ಎಷ್ಟೋ ಜನರನ್ನು ಬಲಿ ತೆಗೆದುಕೊಂಡು ಬಿಡುತ್ತಾರೆ. ಇದು ಬದುಕಿನ ದುರ್ದೈವವೆಂದೇ ಕರೆಯಬಹುದು..!!

ಕೆಲವು ಸಲ ಬದುಕು ಹಾಗೆ ನಮ್ಮನ್ನು ಅಣಕಿಸಿ ಆಟವಾಡಿ ಬಿಡುತ್ತದೆ. ಆಗ ಚಾಲಕ ಯಮನ ಸ್ವರೂಪಿ..!!

ಗೆಳೆಯರನ್ನು, ಸಂಬಂಧಿಕರನ್ನು, ನೆರೆಹೊರೆಯವರನ್ನು.. ಕಳೆದುಕೊಂಡು ಬಿಡತ್ತವೆ. ಅನಾಥ ಭಾವದಿಂದ ಶೂನ್ಯ ಮನಸ್ಸು ಒಳಹೊಕ್ಕು ಬಿಡುತ್ತದೆ..!!

ಚಾಲಕ ಚಾಣಾಕ್ಷಣನಾಗಿರಬೇಕು. ತನ್ನನ್ನು ತಾನು ತನ್ನ ವೃತ್ತಿಗೆ ಅರ್ಪಿಸಿಕೊಂಡಾಗ ಮಾತ್ರ ಇತರರನ್ನು ರಕ್ಷಿಸಬಲ್ಲ. ‘ಬದುಕು ಒಬ್ಬರ ಮೇಲೆ ಇನ್ನೊಬ್ಬರೊಂದಿಗೆ ಅವಲಂಬನೆಯಾಗಿರುತ್ತದೆ’ ಹಾಗಾಗಿ

“ವಿಧಿ ಅದರ ಸಾಹೇಬ” ಎಂದರೆ ಚಾಲಕನಿದ್ದಂತೆ..! ಪ್ರತಿಯೊಬ್ಬರ ಬದುಕು ಚಲನಶೀಲವಾಗಿರಬೇಕು. ಚಾಲಕ ಚಲನಶೀಲತೆಗೆ ಚೈತನ್ಯಶೀಲನಾಗಿರಬೇಕು.

ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸಂಸ್ಥೆಯಲ್ಲಿಯೋ, ವಯಕ್ತಿಕವಾಗಿಯೋ ಚಾಲನೆ ಮಾಡುವ ವೃತ್ತಿಯನ್ನು ಆರಿಸಿಕೊಳ್ಳುವಾಗ ಆತನಿಗೆ ವೇತನವಷ್ಟೇ ಮುಖ್ಯವಾಗಿರುವುದಿಲ್ಲ.‌..!! ವೃತ್ತಿಯ ಜವಾಬ್ದಾರಿಯು ಮುಖ್ಯವಾಗಿರುತ್ತದೆ. ಯಾಕೆಂದರೆ ಎಲ್ಲರ ಜೀವನಕ್ಕೆ ಕಾರಣನಾಗಿರುತ್ತಾನೆ. ಇದನ್ನು ಅರಿತು ನಡೆದಾಗ ಮಾತ್ರ ಆತ ಸಮಾಜದಲ್ಲಿ ಉತ್ತಮವಾದ ಹೆಸರನ್ನು ಗಳಿಸಬಲ್ಲ ಮತ್ತು ನಾಲ್ಕು ಜನರಿಗೆ ಒಳ್ಳೆಯವನಾಗಿರಲ್ಲ.

ನಾವು ಅಲ್ಲಲ್ಲಿ ಇಂತಹ ಘಟನೆಯ ಮಾತುಗಳನ್ನು ಕೇಳುತ್ತಿರುತ್ತೇವೆ.

“ಅಯ್ಯೋ ಆ ಚಾಲಕ ತನಗೆ ಹೃದಯಾಘಾತವಾದಂತಹ ಸಮಯದಲ್ಲಿಯೂ ವೃತ್ತಿಪರ ಪ್ರಜ್ಞೆ ಮತ್ತು ಸಮಯಪ್ರಜ್ಞೆಯನ್ನು ಮೆರೆದು ಎಲ್ಲರ ಪ್ರಾಣವನ್ನು ಉಳಿಸಿದನು. ನಂತರ ಆತ ತನ್ನ ಪ್ರಾಣ ಕಳೆದುಕೊಂಡನು ಅಯ್ಯೋ ಪಾಪ..” ಎನ್ನುವ ಪ್ರೀತಿಪೂರ್ವಕ ಕರುಣಾಜನಕ ಮಾತುಗಳು..!! ಚಾಲಕ ವೃತ್ತಿಯನ್ನು ಎತ್ತಿ ಹಿಡಿದವರ ಘನತೆಯನ್ನು ಸದಾ ಬೆಳಗುತ್ತದೆ.

ಸಮಾಜದ ನಿತ್ಯ ಬದುಕಿನಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಸ್ತುಗಳನ್ನು, ಪ್ರಯಾಣಿಕರನ್ನು, ಸಾಮಾನುಗಳನ್ನು ಸಾಗಿಸುವ ಗುರುತರವಾದ ಜವಾಬ್ದಾರಿಯನ್ನು ಹೊತ್ತ ಚಾಲಕರ ಬದುಕು ಸದಾ ಹಸನಾಗಿರಲಿ. ಸಮಾಜದ ಚಲನಶೀಲತೆಗೆ ಅವರ ಕಾಣಿಕೆಯು ಬಹುದೊಡ್ಡದು. ಅವರ ಬದುಕು ಚಲನಶೀಲಗೊಂಡು ಉನ್ನತವಾಗಲೆಂದು ಹಾರೈಸೋಣ.

———————–

ರಮೇಶ. ಸಿ. ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.

Leave a Reply

Back To Top