ಕಥಾಗುಚ್ಚ

ಸಮಾಧಿ ಮ್ಯಾಲಿನ ಹೂ(ಎರಡನೆಯ ಭಾಗ)

ಆದಪ್ಪ ಹೆಂಬಾ ಮಸ್ಕಿ

ಒಂದು ವಾರ ಕಳೆದ ನಂತರ ಮುನಿರಾಜು ತನ್ನ ಸಂಸಾರ ಸಮೇತ ಕಿಡಗೂರಿಗೆ ಹಾಜರಾದ. ಎಂದಿನಂತೆ ಶಾಲೆ, ಕೆಲಸ ಮತ್ತು ಸಾಯಂಕಾಲದ ಹೊತ್ತಿನಲ್ಲಿ ನಿಧಾನಕ್ಕೆ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಶುರು ಮಾಡಿದ. ಮೊದ ಮೊದಲು ಎಲ್ಲರೂ ಇವನ ಮಾತಿಗೆ ನಕ್ಕು ಸುಮ್ಮನಾಗುತ್ತಿದ್ದರು. ಆದರೆ ಇಂವ ಸುಮ್ಮನಾಗುತ್ತಿರಲಿಲ್ಲ. ಸೋಲನ್ನು ಸೋಲಾಗಿಯೇ ಸ್ವೀಕರಿಸುತ್ತಿರಲಿಲ್ಲ ಅವನು. ಗೆಲುವಿನ ಮೆಟ್ಟಿಲು ಎಂದು ಭಾವಿಸುತ್ತಿದ್ದ. ಛಲದಂಕಮಲ್ಲ, ಅಂದುಕೊಂಡದ್ದನ್ನು ಸುಲಭವಾಗಿ ಬಿಟ್ಟುಕೊಡುವವನಲ್ಲ. ತಡವಾಗಿಯಾದರೂ ಗೆಲ್ಲುತ್ತಿದ್ದ. ಇವನ ಪ್ರಯತ್ನದ ಫಲವೇನೋ ಎಂಬಂತೆ ಊರೊಳಗಿನ ಒಂದೊಂದೇ ಶೌಚಾಲಯಗಳು ಉಪಯೋಗಕ್ಕೆ ಬರತೊಡಗಿದವು. ಹೊಸ ಹೊಸ ಶೌಚಾಲಾಯಗಳೂ ನಿರ್ಮಾಣವಾಗತೊಡಗಿದವು. ಪ್ರಗತಿಯ ಕಂಡು ತನ್ನ ಪ್ರಯತ್ನ ಫಲ ಕಾಣುತ್ತಿದೆ ಅಂತ ಸಂತೋಷಪಟ್ಟ. ಶಾಲೆಯಲ್ಲೂ ಅಷ್ಟೇ ಮುನಿರಾಜು ಎಲ್ಲ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಆತ ತುಂಬ ಸುಲಭದಲ್ಲೇ ಗುರುತಿಸಿಬಿಡುತ್ತಿದ್ದ. ಅವರ ಸಾಮರ್ಥ್ಯ ಮತ್ತು ಅಭಿರುಚಿಗೆ ತಕ್ಕಂತಹ ಗುರಿಯನ್ನು ಹೊಂದಬೇಕು. ಆ ಗುರಿಗೆ ಪೂರಕವಾದ ಪ್ರಯತ್ನ ಇರಬೇಕು ಎಂಬದು ಅವನ ಪ್ರತಿಪಾದನೆಯಾಗಿತ್ತು. ಎಲ್ಲ ಮಕ್ಕಳ ಗುರಿಯನ್ನು ತನ್ನ ಗುರಿಯೇನೋ ಎಂಬಂತೆ ಭಾವಿಸಿ ಕೆಲಸ ಮಾಡುತ್ತಿದ್ದ. ಹೀಗೆ ಒಂದು ದಿನ ತನ್ನ ಮೂರನೇ ತರಗತಿಯ ಮಕ್ಕಳು ಸಣ್ಣವಾದರೂ ಪರವಾಗಿಲ್ಲ ಹೇಗೆ ಉತ್ತರಿಸುತ್ತಾರೋ ನೋಡೋಣ ಎಂದು ಅವರ ವಯಸ್ಸಿಗೆ ಮೀರಿದ ಒಂದು ದೊಡ್ಡ ಪ್ರಶ್ನೆಯನ್ನು ಕೇಳಿದ. “ಮಕ್ಕಳೇ ಮುಂದೆ ನೀವೇನಾಗಬೇಕು ಅನ್ಕೊಂಡಿದ್ದೀರಿ ? ನಿಮ್ಮ ಜೀವನದ ಗುರಿ ಏನು ?” ಇದಕ್ಕೆ ಮಕ್ಕಳಿಂದ ಬಂದ ಉತ್ತರಗಳನ್ನು ಕೇಳಿ, ದಂಗಾದ ! ಡಾಕ್ಟ್ರು, ಇಂಜಿನಿಯರ್ರು, ಮೇಷ್ಟ್ರು, ಎನ್ನುವ ಕಾಮನ್ ಉತ್ತರಗಳ ಜೊತೆ ಕೆಲ ಮಕ್ಕಳು ವಿಶೇಷವಾದ ಉತ್ತರ ನೀಡಿದ್ದರು. ಒಬ್ಬ ಹುಡುಗ, “ಸರ್ ನಾನು ಎಮ್ಮೆಲ್ಲೇ ಆಗತೀನಿ ಸಾರ್” ಅಂದಿದ್ದ. ಇವನಿಗಿಂತ ಹಪಾಪೋಲಿ ಒಬ್ಬ,”ಸಾರ್, ನಾನು ಅಪ್ಪ ಆಗ್ತೀನಿ ಸಾರ್” ಅಂದಿದ್ದ. ಅವನ ಮಾತು ಕೇಳಿ ನಕ್ಕು ನಕ್ಕು ಸುಸ್ತಾಗಿತ್ತವನಿಗೆ. ಈ ಎಲ್ಲರ ನಡುವೆ ಮುನಿರಾಜುವಿನ ಗಮನ ಸೆಳೆದದ್ದು ರೇಣುಕಾಳ ಗುರಿ.
“ಸರ್, ನಾನು ಕಿರಣ್ ಬೇಡಿಯವರ ಥರಾ ಪೋಲೀಸ್ ಇನ್ಸ್ಪೆಕ್ಟರ್ ಆಗ್ತೀನಿ ಸರ್” ಅಂದಿತ್ತು ಆ ಮಗು.
“ಪುಟ್ಟಾ ….ಕಿರಣ್ ಬೇಡಿ ಬರೀ ಒಬ್ಬ ಇನ್ಸ್ಪೆಕ್ಟರ್ ಅಲ್ಲಮ್ಮಾ ಅವರು ಐಪಿಎಸ್ ಆಫೀಸರ್” ಅಂತ ಹೇಳಬೇಕೆನಿಸಿತ್ತು ಮುನಿರಾಜುವಿಗೆ. ಸಣ್ಣ ಮಗು ತಿಳಿದುಕೊಂಡೀತಾದರೂ ಹೇಗೆ ಎಂದು ಸುಮ್ಮನಾದ. ಮುಂದೆ ಐಪಿಎಸ್ ಅಂದ್ರೆ ಏನು, ಅದನ್ನು ಪಾಸು ಮಾಡಬೇಕಂದ್ರೆ ಏನೆಲ್ಲಾ ಶ್ರಮ ಪಡಬೇಕು, ಐಪಿಎಸ್ ಆದ ನಂತರ ಏನು ಎಂಬುದನ್ನು ಮೊದಲು ತಾನು ತಿಳಿದುಕೊಂಡು ನಂತರ ಈ ಮಗುವಿಗೆ ತಿಳಿಸಬೇಕು ಎಂದು ತೀರ್ಮಾನಿಸಿದ. ಅದು ಅವನ ಬೋಧನೆಯಲ್ಲಿನ ಬದ್ಧತೆಯಾಗಿತ್ತು. ಮುಂದಿನ ಪ್ರತೀ ತರಗತಿಯಲ್ಲೂ ಆತ ರೇಣುಕಾಳಲ್ಲಿ ಒಬ್ಬ ಐಪಿಎಸ್ ಅಧಿಕಾರಿಯನ್ನು ಕಾಣುತ್ತಿದ್ದ.


ಮುನಿರಾಜು ಮತ್ತು ಪಮ್ಮಕ್ಕ ನವರು ನೆರೆಹೊರೆಯವರಾದ್ದರಿಂದಲೋ ಏನೋ ಸ್ವಲ್ಪವೇ ದಿನಗಳಲ್ಲಿ ಮುನಿರಾಜುವಿನ ಹೆಂಡತಿ ಸೀತಕ್ಕ ಮತ್ತು ಪಮ್ಮಕ್ಕನ ಸೊಸೆ ಶ್ರೀದೇವಿ ತುಂಬಾ ಆತ್ಮೀಯರಾದ್ರು. ಶ್ರೀದೇವಿ ಏನೂ ಓದಿರದ ಚೆಂದದ ಹುಡುಗಿ. ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿದ್ದರಿಂದ ರೇಣುಕಾಳನ್ನು ಹಡೆದಿದ್ದಳು. ಖುಷಿಯಾಗಿದ್ದಳು.ಆದರೆ ಆ ಖುಷಿ ಅವಳ ಬದುಕಿನಲ್ಲಿ ಬಹಳ ದಿನ ಉಳಿಯಲಿಲ್ಲ. ಅವಳ ಪಾಲಿಗೆ ವಿಧಿ ತುಂಬಾ ಕ್ರೂರಿಯಾಗಿತ್ತು. ಅತಿ ಚಿಕ್ಕ ವಯಸ್ಸಿನಲ್ಲಿಯೇ ಆ ಹುಡುಗಿಯನ್ನು ವಿಧವೆಯನ್ನಾಗಿಸಿತ್ತು. ಆದರವಳು ತುಂಬಾ ಜಾಣೆಯಾಗಿದ್ದಳು ಧೃತಿಗೆಡಲಿಲ್ಲ. ಧೈರ್ಯವಂತೆ. ಮಗಳನ್ನು ಸಾಕುವ, ಅವಳಿಷ್ಟದಂತೆ ಓದಿಸುವ ಛಾತಿ ಅವಳಿಗಿತ್ತು. ಅವಳ ಜೊತೆ ಮಾತನಾಡಿದವರಾರೂ ಆಕೆಯನ್ನು ಶಾಲೆ ಓದಿದವಳಲ್ಲ ಎಂದರೆ ನಂಬುತ್ತಿರಲಿಲ್ಲ. ಯಾಕೆಂದ್ರೆ ಅಷ್ಟೊಂದು ಇಂಗ್ಲಿಷ್ ಪದಗಳು ಅವಳ ಬಾಯಿಯಿಂದ ಬರುತ್ತಿದ್ದವು. ಕೌನ್ಸೆಲಿಂಗ್, ಕಾಮನ್ ಸೆನ್ಸ್, ಹೆಲ್ದೀ ಡಿಸ್ಕಷನ್, ಅಂಡರ್ಸ್ಟ್ಯಾಂಡ್……ಹೀಗೆ ಇಂಥವೇ ಇನ್ನೂ ಹಲವಾರು ಇಂಗ್ಲೀಷ್ ಪದಗಳು ಅವಳ ಬಾಯಿಯಿಂದ ಸಲೀಸಾಗಿ ಬರುತ್ತಿದ್ದವು. ಅವಳ ಜನರಲ್ ನಾಲೆಡ್ಜ್ ನೋಡಿ ಡಿಗ್ರೀ ಮುಗಿಸಿದ್ದ ಖುದ್ದು ಸೀತಕ್ಕಳೇ ಬೆರಗಾಗಿ ಹೋಗಿದ್ದಳು. ಇದೆಲ್ಲ ಗೊತ್ತಾಗಿ ಮುನಿರಾಜು, ” ಶಾಲೆಗೇ ಹೋಗಿಲ್ಲ ಅಂತೀಯಾ ಮತ್ತೆ ಹೇಗಮ್ಮಾ ಇಷ್ಟೆಲ್ಲಾ ಕಲಿತೆ ?” ಅಂತ ಕೇಳಿದರೆ. “ನೀವು ಮತ್ತು ನಿಮ್ಮಂತಹ ಶಿಕ್ಷಕರಿಂದಲೇ ಕಲಿತೆ ಸರ್. ನೀವು ಪಾಠ ಮಾಡೋದು ನನ್ನ ಮನೆಯಲ್ಲಿ ಸ್ಪಷ್ಟವಾಗಿ ಕೇಳಿಸುತ್ತೆ. ನಾನು ಬಟ್ಟೆ ಹೊಲೀತಾ ಹೊಲೀತಾ ನಿಮ್ಮ ಮಾತು ಕೇಳಿಯೇ ಕಲಿತದ್ದು ಸರ್.” ಅಂದಿತ್ತು ಮುಗ್ಧ ಹುಡುಗಿ. ಹಾಗೆಂದ ಅವಳಲ್ಲಿ ಏಕಲವ್ಯನನ್ನು ಕಂಡವರು ಒನ್ಸ್ ಅಗೇನ್ ಮುನಿರಾಜು. ಮುಂದುವರೆದು, “ಮನಸ್ಸಿದ್ದಲ್ಲಿ ಮಾರ್ಗ ಕಣಮ್ಮ. ನೀನು ಓದಿದ್ರೆ ದೊಡ್ಡ ಆಫೀಸರ್ ಆಗ್ತಿದ್ದೆ ನೋಡಮ್ಮ” ಎಂದ. ಅದಕ್ಕವಳು, “ಓದಿದ್ರೇ…… ಸಧ್ಯಕ್ಕಂತೂ ಅಲ್ಲ ಬಿಡ್ರಿ ಸರ. ನಮ್ಮಂತೋರು ಸಮಾಧಿ ಮ್ಯಾಲಿನ ಹೂ ಇದ್ದಂಗ”
“ಅಂಥ ಮಾತ್ಯಾಕಮ್ಮ ಆಡ್ತೀಯಾ, ಹಾಗನ್ಬಾರದು”
“ಅದರಾಗೇನೈತಿ ಬಿಡ್ರಿ ಸರ ಸತ್ಯನ ಐತಿ. ಸಮಾಧಿ ಮ್ಯಾಲಿನ ಹೂ ಎಷ್ಟೇ ಚೆಂದ ಇರಲಿ ಯಾರಾದ್ರೂ ಇಟ್ಕೋತಾರನು ? ಹಂಗ ನಿಮ್ಮ ಪ್ರಕಾರ ನಾನು ಶ್ಯಾಣೇ ಇರಬಹುದು, ಯಾರಾದರೂ ಕರದು ಕೆಲಸ ಕೊಡತಾರನು ?” ಪ್ರ್ಯಾಕ್ಟಿಕಲ್ ಆಗಿ ಮಾತಾಡುತ್ತಿದ್ದ ಶ್ರೀದೇವಿ ಯನ್ನು ಮುನಿರಾಜು ತಡೆದು, “ಅಮ್ಮ ಬಿಡು ನಿನ್ನ ಕತೆ. ಮುಗಿದಿದೆ. ರೇಣುಕಾಂದು ಹೀಗಾಗದಂತೆ ನೋಡಿಕೋ ಅಷ್ಟೇ ಸಾಕು”
“ಖಂಡಿತ ಸರ್ ನಾನು ನನ್ನ ಮಗಳನ್ನು ಅವಳೆಷ್ಟು ಓದ್ತೀನಿ ಅಂತಾಳೋ ಅಲ್ಲಿ ಮಟ ಓದಿಸ್ತೀನಿ ನಿಮ್ಮಾಶೀರ್ವಾದದಿಂದ ಅವಳು ದೊಡ್ಡ ಆಫೀಸರ್ ಆಗಬೇಕು”
“ಭಗವಂತನ ಆಶೀರ್ವಾದ ಇದ್ದೇ ಇರುತ್ತೆ ಬಿಡಮ್ಮಾ ಖಂಡಿತ ಆಗ್ತಾಳೆ”
ಎಲ್ಲದರಲ್ಲೂ ಜಾಣೆಯಾಗಿದ್ದ ಶ್ರೀದೇವಿಗೆ ಓದಲು ಬರೆಯಲು ಬರುತ್ತಿರಲಿಲ್ಲವಷ್ಟೇ. ನಿಧಾನಕ್ಕೆ ಸೀತಕ್ಕ ಓದುವುದನ್ನೂ, ಬರೆಯುವುದನ್ನೂ ಕಲಿಸಿಕೊಡುತ್ತಿದ್ದಳು. ಮುನಿರಾಜು ಅವಳ ಕಲಿಕೆಯ ಗತಿ ನೋಡಿ ವಿಸ್ಮಯಗೊಂಡಿದ್ದ. ಬರತಾ ಬರತಾ ಮನೆ ಮಗಳಂತಾಗಿ ಬಿಟ್ಟಳು ಶ್ರೀದೇವಿ. ಮುನಿರಾಜು ದಂಪತಿಗಳೂ ಈಗ ಅವಳನ್ನು ಪ್ರೀತಿಯಿಂದ ಸಿರೆಮ್ಮ ಎಂದೇ ಕರೆಯಲು ಶುರು ಮಾಡಿದರು.ಇವರಿಂದ ಸಿರೆಮ್ಮ ಅಂತ ಕರೆಸಿಕೊಳ್ಳೋಕೆ ತುಂಬಾ ಖುಷಿಯಾಗುತ್ತಿತ್ತವಳಿಗೆ. ಹೀಗೊಂದು ದಿನ ಶಾಲೆಯಲ್ಲಿ ಪಾಲಕರ ಸಭೆ ಏರ್ಪಡಿಸಲಾಗಿತ್ತು. ಆ ಸಭೆಯಲ್ಲಿ ಪಾಲಕರು ಮಾತನಾಡಬೇಕಿತ್ತು. ಹಿಂದಿನ ದಿನವೇ ಮುನಿರಾಜು ಸಿರೆಮ್ಮನಿಗೆ ಹೇಳಿದ್ದ, “ನಾಳೆ ನೀನು ಮಾತನಾಡಲೇ ಬೇಕಮ್ಮ” ಅಂತ. ಹೆದರಿದ ಶ್ರೀದೇವಿ, “ಹೆದರಿಕೆಯಾಗುತ್ತೆ ನಾನೊಲ್ಲೆ ಸರ್” ಅಂದಿದ್ದಳು. ಹಟ ಬಿಡದ ಮುನಿರಾಜು ಅವಳಗೆ ಸಭೆಯಲ್ಲಿ ಮಾತನಾಡುವ ಕಲೆ ಹೇಳಿಕೊಟ್ಟು, ರಿಹರ್ಸಲ್ ಮಾಡಿಸಿ, ಪೂರ್ಣ ತಯಾರಿ ಮಾಡಿದ್ದ ಮುನಿರಾಜು. ಇವನ ತಯಾರಿ ಹೇಗಿತ್ತೆಂದರೆ ಮರುದಿನದ ಸಭೆಯಲ್ಲಿ ಶ್ರೀದೇವಿ ಮಾತನಾಡಿದರೆ ಇಡೀ ಊರಿನ ಜನರಿಗೆ ದಿಗ್ಭ್ರಮೆಯಾಗಿತ್ತು ! ಇದು ನಮ್ಮೂರ ಹುಡುಗಿ ಸಿರೆಮ್ಮನಾ ಎನ್ನುವಷ್ಟು ! ಅಂದಿನಿಂದ ಆ ಊರಲ್ಲಿ ಅವಳ ಖದರೇ ಬೇರೆಯಾಗಿತ್ತು. ಅದು ಕೆಲವೇ ದಿನಗಳಲ್ಲಿ ಅವಳನ್ನು ಆ ಶಾಲೆಯ ಸುಧಾರಣಾ ಸಮಿತಿಯ ಅಧ್ಯಕ್ಷೆಯನ್ನಾಗಿಸಿತ್ತು‌. ಅವಳ ಬೆಳವಣಿಗೆಗೆ ಅವಳಲ್ಲಿದ್ದ ಅಂತಃಶಕ್ತಿಯೇ ಕಾರಣ ಎಂದು ಮುನಿರಾಜು ಹೇಳುತ್ತಿದ್ದರೆ, “ಇಲ್ಲ ಸರ್ ಅದಕ್ಕೆ ನಿಮ್ಮ ಮಾರ್ಗದರ್ಶನ ಮತ್ತು ಆಶೀರ್ವಾದವೇ ಕಾರಣ” ಎಂದು ವಿನಮ್ರವಾಗಿ ಹೇಳುತ್ತಿತ್ತು ಸಿರೆಮ್ಮ. ಹೀಗೇ ವರುಷಗಳುರುತ್ತಿದ್ದವು. ಇವರ ಬಾಂಧವ್ಯ ಗಟ್ಟಿಯಾಗುತ್ತಿತ್ತು. ಮುನಿರಾಜುವಿನ ಮಾರ್ಗದರ್ಶನದಂತೆ ಉನ್ನತ ವ್ಯಾಸಂಗಕ್ಕೆಂದು ರೇಣುಕಾಳನ್ನು ದೂರದ ಧಾರವಾಡಕ್ಕೆ ಓದಲು ಕಳುಹಿಸಿದಳು ಸಿರೆಮ್ಮ. ಕಾಲ ಚಕ್ರ ನಿಲ್ಲುವಂಥದ್ದಲ್ಲ. ತಿರುಗುತ್ತಲೇ ಇರುತ್ತದೆ. ಕಾಲಚಕ್ರದ ಈ ತಿರುಗುವಿಕೆಯ ಮಧ್ಯೆ ಮುನಿರಾಜುವಿಗೆ ತನ್ನ ಕೋಲಾರ ಜಿಲ್ಲೆಯ ದೂರದ ಹಳ್ಳಿಯೊಂದಕ್ಕೆ ವರ್ಗಾವಣೆಯಾಯ್ತು. ಆತನ ವರ್ಗಾವಣೆ ಮಕ್ಕಳಿಗೆ, ಊರವರಿಗೆ ತುಂಬಾ ನೋವು ತರಿಸಿತ್ತು. ಎಲ್ಲರಿಗಿಂತ ತುಂಬ ವ್ಯಥೆ ಪಟ್ಟವಳು ಶ್ರೀದೇವಿ. ಮುನಿರಾಜುವನ್ನು ತನ್ನ ಅಪ್ಪನೇನೋ ಎನ್ನುವಂತೆ, ಬಿಗಿದಪ್ಪಿ ಆಲಂಗಿಸಿ ಅಳುತ್ತಿತ್ತು ಆ ಹುಡುಗಿ. ಅವಳನ್ನು ಸಮಾಧಾನ ಪಡಿಸಿ ತನ್ನೂರ ಕಡೆಗೆ ಬರುವಷ್ಟರಲ್ಲಿ ಸಾಕು ಸಾಕಾಗಿ ಹೋಗಿತ್ತು ಮುನಿರಾಜುವಿಗೆ. ಬದುಕು ನಿಂತ ನೀರಲ್ಲ. ಅದು ನಿಲ್ಲುವುದೂ ಇಲ್ಲ. ಮುನಿರಾಜು ತನ್ನ ಜಿಲ್ಲೆಯ ಹಳ್ಳಿಯೊಂದನ್ನು ಸೇರಿದ. ಪ್ರಾರಂಭದಲ್ಲಿ ಸಿರೆಮ್ಮ ಪ್ರತಿ ದಿನ ಫೋನಿನಲ್ಲಿ ಮಾತಾಡೋಳು. ಬುರುತ್ತಾ ಬರುತ್ತಾ ಅದು ಕಡಿಮೆಯಾಗುತ್ತಾ ಬಂತು.ಅವರ ಜೀವನ ಅವರಿಗೆ. ಇವರ ಜೀವನ ಇವರಿಗೆ.ಈಗ ಫೋನ್ ಮುಖೇನ ಮಾತು ತಿಂಗಳಿಗೊಮ್ಮೆ……ಆರು ತಿಂಗಳಿಗೊಮ್ಮೆ ಹೀಗೆ…… ಮರೆವು ಬದುಕನ್ನು ಜೀವಂತವಾಗಿರಿಸುತ್ತೆ. ಇತ್ತ ಮನಿರಾಜುವಿಗೂ ವಯಸ್ಸಾಗುತ್ತಾ ಬಂತು. ಜೊತೆಗೆ ಕಡಿಮೆಯಾಗುತ್ತಿದ್ದ ನೆನಪು. ತುಂಬಾ ದಿನಗಳ ನಂತರ ಶ್ರೀದೇವಿಯಿಂದ ಒಂದು ಕರೆ ಬಂತು. ” ಸರ್ ನಮಸ್ಕಾರ ಸರ್ ಹೇಗಿದೀರಾ ಸರ್ ? ನಾನು ಸಿರೆಮ್ಮ…., “
“ಓ….ನಮಸ್ಕಾರಾಮ್ಮಾ ನಾವು ಚೆನ್ನಾಗಿದ್ದೇವೆ. ನೀವು ಚೆನ್ನಾಗಿದ್ದೀರಾ….. ನಿನ್ನ ಮಗಳು ……(ಸ್ವಲ್ಪ ತಡವಾಗಿ) ರೇಣುಕಾ ಅಲ್ವ ? ಏನ್ಮಾಡ್ತಿದಾಳೆ ಈಗ ?”
“ನಾವು ಚೆನ್ನಾಗಿದ್ದೇವೆ ಸರ್, ನಿಮ್ಮಾಶೀರ್ವಾದದಿಂದ ಚೆನ್ನಾಗಿದ್ದೇವೆ…. ಸರ್ ಈ ತಿಂಗಳು ಒಂಬತ್ತನೇ ತಾರೀಖಿಗೆ ನೀವು ನಮ್ಮೂರಿಗೆ ಬರಲೇಬೇಕು ಸಾರ್.”
“ಯಾಕಮ್ಮಾ….ಏನು ವಿಶೇಷ ? ರೇಣುಕಾಗೆ ಮದುವೆ ಗೊತ್ತು ಮಾಡೀರೆನು ? ಅಷ್ಟು ದೊಡ್ಡವಳಾಗ್ಯಾಳಾ ಅವಳು ?”
“ಅದೆಲ್ಲಾ ಸಸ್ಪೆನ್ಸು ಸಾರ್ ಅವತ್ತು ನೀವು ಬರಲೇ ಬೇಕು. ಜೊತೆಗೆ ಸೀತಕ್ಕನ್ನೂ ಕರಕೊಂಡು ಬರಬೇಕು”
ಮಗಳಂಥ ಅವಳಿಂದ ಪ್ರೀತಿ ತುಂಬಿದ ಹಕ್ಕೊತ್ತಾಯ. ಶಿಕ್ಷಕ ಮಣಿಯಲೇ ಬೇಕು. ಮುನಿರಾಜು ಒಪ್ಪಿಕೊಂಡ. ಒಂಬತ್ತನೇ ತಾರೀಖಿನಂದು ತನ್ನನ್ನು ಶಿಕ್ಷಕನನ್ನಾಗಿ ಗುರುತಿಸಿದ ಮೊದಲ ಊರಿಗೆ ಹೋದ, ಸೀತಾಳನ್ನೂ ಕರೆದುಕೊಂಡು ಹೋದ. ಊರಿಗೆ ಹೋದವ ದಿಂಘ್ಮೂಢನಾಗಿ ಬಿಟ್ಟ. ಆರಂಭದಲ್ಲೇ ಬಯಲು ಶೌಚಾಲಯ ಮುಕ್ತ ಗ್ರಾಮ ಕ್ಕೆ ಸ್ವಾಗತ ಎನ್ನುವ ಕಮಾನು ಇವರನ್ನು ಸ್ವಾಗತಿಸುತ್ತಿತ್ತು. ದಾರಿಯುದ್ದಕ್ಕೂ ತಳಿರು.‌ ತೋರಣಗಳ ಅಲಂಕಾರ. ಎಲ್ಲೆಲ್ಲೂ ಸಂಭ್ರಮದ ವಾತಾವರಣ. ಪಮ್ಮಕ್ಕನ ಚಿಕ್ಕ ಮನೆಯ ಜಾಗದಲ್ಲೀಗೊಂದು ಭವ್ಯ ಬಂಗಲೆ ! ಆಶ್ಚರ್ಯಚಕಿತನಾದ. ಇವರು ಬಂದುದ ಕೇಳಿ ಖುದ್ದು ಶ್ರೀದೇವಿ ಅಂಗಳಕ್ಕೆ ಬಂದಿದ್ದಳು. ಅವಳೀಗ ಬರೀ ಶ್ರೀದೇವಿ ಯಾಗಿರಲಿಲ್ಲ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀದೇವಿ ಆಗಿದ್ದಳು ! ಅದನ್ನು ಅಲ್ಲಿ ಕಟ್ಟಿದ್ದ ಬೃಹತ್ ಬ್ಯಾನರ್ ಗಳೇ ಹೇಳುತ್ತಿದ್ದವು ! ಅವಳ ಪಕ್ಕದಲ್ಲೇ ಒಬ್ಬ ಲೇಡಿ ಪೋಲೀಸ್ ಆಫೀಸರ್! ಬಹುಶಃ ಅವಳ ಸೆಕ್ಯೂರಿಟಿ ಇರಬೇಕು ಎಂದುಕೊಂಡ. ಆದರೆ
ಅವರಿಬ್ಬರೂ ಬಾಗಿ ಮುನಿರಾಜುವಿನ ಪಾದ ಮುಟ್ಟಿ ನಮಸ್ಕರಿಸಿದರು. ಗಾಬರಿಯಾದ ಅವನು ತನ್ನ ಚಾಳೀಸು ಸರಿಮಾಡಿಕೊಳ್ಳುತ್ತಾ ಪೋಲಿಸ್ ಯುನಿಫಾರಂ ನಲ್ಲಿದ್ದ ಆ ಹುಡುಗಿಯ ಎದೆಯ ಮೇಲೆ ಹಾಕಿದ್ದ ನೇಮ್ ಪ್ಲೇಟ್ ನೋಡಿದ. ಅಲ್ಲಿ ರೇಣುಕಾ ಐಪಿಎಸ್ ಎಂದಿತ್ತು ! ಇಬ್ಬರನ್ನೂ ಅಪ್ಪಿಕೊಂಡ.
“ಸಾರ್ಥಕವಾಯಿತಮ್ಮ ನಿಮ್ಮಮ್ಮ ಪಟ್ಟ ಶ್ರಮ”
ಎನ್ನುತ್ತಾ ಕಣ್ಣೀರಾದ. ಅದು ಆನಂದದ ಕಣ್ಣೀರಾಗಿತ್ತು.


Leave a Reply

Back To Top