ಅಗ್ಲಿ ಬಾಯ್-ತೆಲುಗಿನಿಂದ ಅನುವಾದಿತ ಕವಿತೆ

ಅನುವಾದ ಸಂಗಾತಿ

ಅಗ್ಲಿ ಬಾಯ್

ತೆಲುಗು ಮೂಲ : ಚಿಲುವೇರು ಅಶೋಕ್
ಕನ್ನಡ ಅನುವಾದ : ಧನಪಾಲ‌ ನಾಗರಾಜಪ್ಪ

.


ಸರ್, ಇವತ್ತು…
ನಮ್ ಮನೆಯಲ್ಲಿ
ಕಾಡುಬೆಕ್ಕು ಸಾರು
ಆ ಹುಡುಗನ ಬಾಯಿಯಲ್ಲಿ
ಈ ಮಾತು ಕೇಳಿದ್ದೇ ತಡ
ಗೊಳ್ ಅಂತ ತರಗತಿಯೆಲ್ಲಾ ನಕ್ಕಿತು!

ಮೂತಿ ತಿರುವಿಸಿಕೊಂಡು
ಮೂಗು ಮುಚ್ಚಿಕೊಳ್ಳುತ್ತ
ಹಿಂದಿನ ಬೆಂಚಿನಲ್ಲಿ ಕುಳಿತ್ತಿದ್ದವನನ್ನು
ಓರೆಗಣ್ಣಿನಿಂದ ಮಕ್ಕಳೆಲ್ಲಾ ನೋಡಿದರು!

ಆ ನಗು…
ತನ್ನನ್ನು ಗಾಯಗೊಳಿಸುವುದೆಂದು
ಆ ನೋಟ…
ತನ್ನನ್ನು ದೂರತಳ್ಳುತ್ತಿದೆಯೆಂದು
ಅರಿಯದ ಅಮಾಯಕನವನು!

ಸಿಗ್ಗುಪಡಲಿಲ್ಲ ಮುದುಡಿಕೊಳ್ಳಲ್ಲಿಲ್ಲ
ತಲೆ ತಗ್ಗಿಸಲಿಲ್ಲ ತಳಮಳಗೊಳ್ಳಲಿಲ್ಲ!
ತನ್ನದೇ ಧಾಟಿಯಲ್ಲಿ…
ನಮ್ಮಪ್ಪಾ ಹಕ್ಕಿಗಳನ್ನು ಹೊಡೆದು ತಂದರಷ್ಟೇ
ನಮ್ ಹೊಟ್ಟೆಗೆ ಕೂಳು
ಕಾಡುಬೆಕ್ಕನ್ನು ಅಪ್ಪ ಬೇಟೆಯಾಡಿದ ದಿನ
ನಮಗೆ ಹಬ್ಬ…!
ನಮ್ಮ ಬದುಕೇ ಭಿಕ್ಷೆ ಬೇಡುವುದು
ಅದೇನಾದರೂ ನೀಚ ಕೆಲಸವೆ ಸರ್!

ಕೊರಳಪಟ್ಟಿ ಬಿಚ್ಚಿ ಗತ್ತಿನಿಂದ
ಅವನ ಬದುಕಿನ ಚಿತ್ರಣವನ್ನು ತೆರೆದಿಟ್ಟಾಗ
ತನ್ನ ಆಹಾರದ ಅಸ್ತಿತ್ವವನ್ನು ಹೇಳಿದಾಗ

ಇಷ್ಟವಾದರೂ…?!

ಒಳಗೆ ಏನೋ ಕೊರೆತ
ಮನಸ್ಸಿನಲ್ಲಿ ನೆಲಬಾಂಬ್ ಸಿಡಿದಷ್ಟು ಸದ್ದು
ಎಷ್ಟು ತುಳಿದಿಟ್ಟರೂ
ಮುಖ ಸುಳ್ಳಾಡುವುದಿಲ್ಲ!
ತರಗತಿಯಲ್ಲಾ ನೀರವ ಮೌನ
ಆಂತರಿಕ ಚಂಡಮಾರುತ…!


ಎತ್ತಿನ ಸಾರು ತಿಂದವನಿಗೆ
ಲೆಕ್ಕಗಳೆಲ್ಲಿ ಅರ್ಥವಾಗುತ್ತವೆ?
ಲೆಕ್ಕದ ಮೇಷ್ಟ್ರು ಮಾಡಿದ ಅಣಕ!

ಗೊಡ್ಡುಮಾಂಸ ತಿಂದರೆ ನಾಲಿಗೆ ಮಂದವಾಗಿ
ಮಾತುಗಳು ತಡಬಡಿಸುವವು
ಅದಕ್ಕೇ ನೀವು ಬುದ್ಧಿಹೀನರು!
ಗೆಳೆಯರ ಚುಚ್ಚು ಮಾತುಗಳ ಇರಿತಗಳು!

ಚಿಕ್ಕಂದಿನಲ್ಲಿ ಇಷ್ಟವಾಗಿ ತಿಂದ
ಎತ್ತಿನ ಸಾರನು ಕೀಳಾಗಿಸುವ
ಅಪಹಾಸ್ಯದ ನುಡಿಗಳು…!

ಶ್ರಾಮಿಕ ವರ್ಗದ ಆಹಾರದ
ಅವಹೇಳನಗೈಯ್ಯವ ಕುಬ್ಜ ಮನಸ್ಸು
ರಾಜ್ಯವಿಡೀ ಶಾಕಾಹಾರದ ಜಪ
ಹಸುವಿನ ಸಾರಿನ ಅನುಮಾನಕ್ಕೆ ಆಖ್ಲಾಕ್ ಬಲಿ!
ತಲೆಯಲ್ಲಿ ಗಿರ್ ಅಂತು ಕಾಲಚಕ್ರ!


ಆಹಾರೋತ್ಪನ್ನ ಪರವಾನಿಗೆ
ವಿಷಯವನ್ನು ಗ್ರಹಿಸುವ ಕ್ರಮದಲ್ಲಿ
ಇಂದು ನಿಮ್ಮ ಮನೆಯಲ್ಲಿ…
ಏನು ಸಾರೆಂಬ ಪ್ರಶ್ನೆ ತೋಡಿದ ಜೀವನ!

ಅವರವರ ಮನೆಯ ಸಾರುಗಳನ್ನು ಹೇಳಿ
ಮಕ್ಕಳೆಲ್ಲರೂ ಕುಳಿತುಕೊಂಡರು
ಅವನ ಸರತಿ ಬಂತು
ದಿನವೂ ತುಂಟತನದಿಂದ ಈಗ ಸಾರಿನಿಂದ ವೈರಲ್ ಆದ!

ಅವನ ಹೆಸರು ರಾಜ
ಸ್ವಂತ ದೇಶವಿರದ ರಾಜ!
ವರ್ಷಕ್ಕೊಮ್ಮೆ ಆಧಾರ್ ಕಾರ್ಡಿನಲ್ಲಿ ವಿಳಾಸ ಬದಲಾಗುವುದು!
ಊರಾಚೆಗಿನ ಆರಡಿಗಳ ಡೇರೆ ತನ್ನ ನಿವಾಸ!

ತುಂಟತನದಿಂದ…
ಉಪಾಧ್ಯಾಯರನ್ನು ತಬ್ಬಿಬ್ಬಾಗಿಸುವನು!
ಯಾವ ತಪ್ಪಾದರೂ…
ಅವನ ಮೇಲೆಯೇ ಅಪರಾಧ ಹೊರಿಸಲಾಗುವುದು!
ಮಕ್ಕಳೆಲ್ಲಾ ಅವನಿಂದಾಗಿ ಕೇಡುತ್ತಿದ್ದಾರೆಂಬ
ನಿಂದನೆ ನಿತ್ಯ ಹೊರುವನು!
ಆದರೂ ತಗ್ಗುವುದಿಲ್ಲ ಕುಗ್ಗುವುದಿಲ್ಲ!

ಯಾರೆಂದರವರನ್ನು…
ಶಾಲೆಗೆ ಸೇರಿಸಿಕೊಳ್ಳಬೇಡಿ
ಪೋಷಕರ ಎಚ್ಚರಿಕೆಯಲ್ಲಿ
ಅಸ್ಪೃಶ್ಯತೆಯ ಅವಮಾನವನ್ನು ಹೊರುತ್ತಿರುವವನ ಒಡಹುಟ್ಟಿದವನಿವನು!

ಅಟೆಂಡರ್ ಸ್ವೀಪರ್ ಇರದ
ನಮ್ಮ‌ ಶಾಲೆಯಲ್ಲಿ ಎಲ್ಲದಕ್ಕೂ ಆಧಾರ
ಕಪ್ಪು ಮುಖ
ನಗು ನವನೀತ
ಬಾಯಿ ತೆರೆದರೆ ಭಯವಿರದೆ
ಭಂಡ ಬೈಗಳುಗಳ ಮಳೆಗರೆಯುವನು!

ಸತ್ಯ ಒಂದು ಸ್ವರವಾದಾಗ
ಹುಚ್ಚು ಮಾತುಗಳನು ಕಕ್ಕುವ
ಈ ತುಚ್ಛ ನಾಗರಿಕರಿಗಿಂತಲೂ
ಬುದ್ಧಿಯಲ್ಲಿ ಯಾವ ಮಚ್ಚೆಯೂ ಇರದವನ
ಬಾಯಿ ತುರಿಕೆ ನನಗೆ ಅಭ್ಯಂತರವೇನಲ್ಲ!

ನಿರಂತರ ಆ ಚಲನೆ
ಹೋದ ವರ್ಷ ನಮ್ಮ ಶಾಲೆಯಲ್ಲಿ ಸೇರಿದ
ಶಾಲೆಯವನಿಗಿಟ್ಟ ಮುದ್ದು ಹೆಸರು
‘ಅಗ್ಲಿ ಬಾಯ್’..!


ಒಂದು ದಿನ…
ಹರಿದ ಅಂಗಿಯಲ್ಲಿ ಬಂದರೆ
ಹತ್ತಿರ ಕರೆದು
ಅವನ ಉಡುದಾರಕ್ಕಿದ್ದ ಪಿನ್ನನ್ನು ತೆಗೆದು ಮುಚ್ಚಿದೆ!

ನಮ್ಮಪ್ಪನೂ ಕೂಡ…
ನಿಮ್ಮಂತೆ ಹತ್ತಿರಕ್ಕೆ ಕರೆಯುವುದಿಲ್ಲ
ನಮ್ಮ ಅಮ್ಮನೂ ಕೂಡ…
ನಿಮ್ಮಂತೆ ಕಾಳಜಿ ಮಾಡುವುದಿಲ್ಲ!
ಖುಷಿಯಾಗಿ ಹೇಳುವವನ ಕಂಗಳಲ್ಲಿ ಹೊಳಪು!

ಹಾಗೆ…
ಮನಸ್ಸಿನಲ್ಲಿ ಮುದ್ರೆಯಾದವನು
ಈ ನಡುವೆ ಶಾಲೆಗೆ ಬರುತ್ತಿಲ್ಲ ಅಂತ
ಕರೆ ಮಾಡಿ ವಿಚಾರಿಸಿದೆ…

ನಗುತ್ತಲೇ ನಮಸ್ತೆ ಹೇಳಿದ
ಏನೋ ಶಾಲೆಗೆ ಯಾಕೆ ಬರುತ್ತಿಲ್ಲ?!

ಈ ವರ್ಷ ನಮ್ಮ ಡೇರಾ
ಪಕ್ಕದೂರಿಗೆ ಬದಲಾಗಿದೆ ಸರ್!
ಮನಸ್ಸು ಕಿವುಚಿದಂತಾಯಿತು!

ಚೇತರಿಸಿಕೊಂಡು ಕೇಳಿದೆ-
ಹೋಗಲಿ ಹಾಸ್ಟೆಲಿಗೆ ಹೋಗುವೆಯಾ?
ಅಯ್ಯೋ ಬಿಡಿ ಸರ್
ನಾವೆಲ್ಲಿದ್ದರೆ ಅದೇ ನಮ್ಮ ಪ್ರಪಂಚ!
ಬಿಡುವಾದಾಗ ಶಾಲೆಗೆ ಬರ್ತಿನಿ
ಹೆಸರು ತೆಗಿಬೇಡಿ ಕಂಚಿನ ಕಂಠದಲ್ಲಿ ಹೇಳಿದ!

ವಿಶಾಲ ಭಾರತದಲ್ಲಿ
ಇಂಚು ಜಾಗವಿರದ ಸಂಚಾರಿ ನಕ್ಷತ್ರಗಳಷ್ಟೋ?!
ಮನಸ್ಸು ಸುಳಿಗಳು ತಿರುಗುತ್ತಿದ್ದರೆ
ಚೆನ್ನಾಗಿರು, ಈ ಸಲ ಕಾಡುಬೆಕ್ಕು ಸಿಕ್ಕಾಗ
ಊಟಕ್ಕೆ ಕರೆಯುವುದು ಮರೆಯಬೇಡ ಎಂದು ಫೋನಿಟ್ಟುಬಿಟ್ಟೆ!


ತೆಲುಗು ಮೂಲ : ಚಿಲುವೇರು ಅಶೋಕ್
ಕನ್ನಡ ಅನುವಾದ : ಧನಪಾಲ‌ ನಾಗರಾಜಪ್ಪ

—————————————

6 thoughts on “ಅಗ್ಲಿ ಬಾಯ್-ತೆಲುಗಿನಿಂದ ಅನುವಾದಿತ ಕವಿತೆ

  1. ಎಂತಹ ಅದ್ಭುತ ಕಾವ್ಯ…ಅಲೆಮಾರಿಗಳ ಬದುಕಿನ ಅಂತರಂಗ ತೆರೆದಿಟ್ಟಿದೆ. ಅಭಿನಂದನೆಗಳು ಸರ್ ಇಬ್ಬರಿಗೂ

  2. ನಿಜಕ್ಕೂ ಚಿಂತನಾರ್ಹ ಕವಿತೆ.ಈಗ ದೇಶದಲೆದ್ದಿರುವ
    ಆಹಾರದ ವಿಚಾರದಲ್ಲಿ ಈ ಕವಿತೆಯು ಮರು ಪ್ರಶ್ನೆಗೆ ಅವಕಾಶವಿಲ್ಲದಂತೆ ತಣ್ಣಗೆ ಉತ್ತರಿಸಿದೆ.ಅಸಮಾನತೆಯೇ ಮೈವೆತ್ತ ನಮ್ಮ ದೇಶದ ಸ್ಥಿತಿಗತಿಯಲ್ಲಿ ಇನ್ನೂ ಅಲೆಮಾರಿಯಾಗಿ ಬದುಕು ಸವೆಸುತ್ತಿರುವವರ ಬವಣೆಯನ್ನು ನಿರ್ಮಮಕಾರದಿಂದ ಕವಿತೆ “ಅಗ್ಲಿ ಬಾಯ್ “ನಲ್ಲಿ ಸಮರ್ಥವಾಗಿ ನಿವೇದಿಸಿದೆ.
    ನಾನು ಸಣ್ಣವನಿದ್ದಾಗ ನಮ್ಮೂರಿನ ಅಗೇವು ಮತ್ತು ಹುಡೇವುಗಳಲ್ಲಿ ಮೇಲುಶಿಕಾರಿಯ ಮಂದಿ ಬಲೆಯೊಡ್ಡಿ ಮಂಟಬೆಕ್ಕನ್ನು ಹಿಡಿಯುತ್ತಿದ್ದುದನ್ನು ನೋಡಿದ್ದೇನೆ.ಅವರು ಅದನ್ನು ತಿನ್ನುತ್ತಾರೆಂದು ಕೇಳಿದ್ದೆ ಅದರ ನೆನಪಾಯಿತು.ಈ ಆಧುನಿಕ ಕಾಲದಲ್ಲಿಯೂ “ಅಗ್ಲಿ ಬಾಯ್ “ತರದವರ ಜೀವನ ಅದೇ ತೆರನಾಗಿ ಇನ್ನೂ ಉಳಿದುಕೊಂಡಿದೆಯೆಂದು ಖೇದವಾಯಿತು.

  3. ಅಲೆಮಾರಿಗಳ ಜೀವನದ ಕಠೋರ ಸತ್ಯಗಳನ್ನು ಬಿಚ್ಚಿಟ್ಟ ಇಬ್ಬರಿಗೂ ಶರಣು ಶರಣಾರ್ಥಿ

Leave a Reply

Back To Top