ಕಾವ್ಯಸಂಗಾತಿ
ಮಠದ ಅಂಗಳದಲ್ಲಿ……!!
ದೇವರಾಜ್ ಹುಣಸಿಕಟ್ಟಿ.
ಮಠದ ಅಂಗಳದಲ್ಲಿ ಹೂವು
ಅರಳುವುದ ನಿಷೇಧಿಸಿದ್ದೇವೆ…!
ಯಾಕಾಗಿ ಗೊತ್ತೇ…?
ಸೂರ್ಯ ಬೆತ್ತಲಾಗುವದ
ಕಲಿತಿದ್ದಾನಂತೆ…!!
ವೇಷ ತೊಟ್ಟಷ್ಟು
ಕುದುರೆಗೆ ಲಗಾಮು ತೊಡಿಸುವುದು
ಈಗ ಸರಳವಲ್ಲವಂತೆ..!!
ಮಠದ ಪಡಸಾಲೆಯಲ್ಲಿ ಚಿಟ್ಟೆ
ಹಾರುವದ ನಿಷೇಧಿಸಿದ್ದೇವೆ….!
ಯಾಕಾಗಿ ಗೊತ್ತೇ….?
ಅಂಗಾಂಗಕ್ಕೆಲ್ಲ ವಿಭೂತಿ ಬಳಿದು
ಪೀಠಕ್ಕೆ ಸುತ್ತಲೂ ಭಸ್ಮ ಎಳೆದು
ತೊಟ್ಟಿಕ್ಕುವ ಎಣ್ಣೆ ಗಾಣಕೆ
ಜಗಕೆ ಮುಸುಕು ತೊಡಿಸಿಯಾದರೂ
ಪಂಜು ಹಿಡಿವ ಆಸೆಯಂತೆ…!!
ಕತ್ತಲೆಗಾಗಿ ಕಾಯುವ
ಕಾಯವನ್ನೇ ಪಡೆದವರಂತೆ….!!
ಮಠದ ಕೊಳದಲ್ಲಿ
ಮೀನು ಈಜುವುದ ನಿಷೇಧಿಸಿದ್ದೇವೆ…!
ಯಾಕಾಗಿ ಗೊತ್ತೇ….?
ತೊಡೆ ಹರಿದು ಪಾದುಕೆ
ಮಾಡಿದವರ ಪಾದ ಕಮಲಗಳಿಗೆರಗಿದವರ
ಹಾಡಿಗೆ ಬಂದವರು
ಹಾದರ ಮಾಡಿರುವರಂತೆ…!!
ಮಠದ ಕೋಣೆಗೆ
ಕತ್ತಲ ಸೆರಗ ಹಾಸಿ ಮೆತ್ತಗೆ
ಬೆಳಕ ನಿಷೇಧಿಸಿದ್ದೇವೆ…!
ಯಾಕಾಗಿ ಗೊತ್ತೇ…?
ಮುಖಕ್ಕೆ ಮುಖ ಕಾಣುವ
ಪ್ರೇಮವಲ್ಲದ ಕಾಮ ಕೇಳಿಗೆ
ಕಣ್ಣು ಕುರುಡೆoಬ ಗಾದೆಯೇ ಇದೆಯಂತೆ….!!
ಬೆಳಕು ಹರಿದರೆ ಹಾದರ
ಮತ್ತೆ…
ಕಮಂಡಲವಿಡಿದು ವಿಭೂತಿ ಬಳಿದು
ನಶ್ವರದ ಈಶ್ವರನ….
ಕಿಸೆ ತುಂಬಿ….
ತುದಿ ನಾಲಿಗೆಯಲಿ ಜಪಿಸುವುದಿದೆಯಂತೆ….!!
ಹೆಚ್ಚೇನಲ್ಲ ಇಷ್ಟೇ ….!
ಬೆಚ್ಚಿ ಬೀಳದಿರಿ…
ಪ್ರವಚನ…..ಉಪದೇಶ…. ಸತ್ಸಂಗ….!!
ಏನೇನೋ ಸತ್ತವರ
ಸಂಗ ಇನ್ನೂ ಇದೆಯಂತೆ….!!
ಬೆಳಕ ಮಾರಲು ಬಂದವರ
ಹೃದಯ ಕತ್ತಲೆಯಲಿ ಮುಳುಗಿದೆಯಂತೆ…..!!
ಇಂಚಿಂಚು ಇಷ್ಟಿಷ್ಟೇ…!!
“ಬೆಳಕು ಮಾರಲು ಬಂದವರ ಹೃದಯ ಕತ್ತಲಲ್ಲಿ ” ಚೆನ್ನಾಗಿದೆ ಈ ಸಾಲುಗಳು!!