ಸಮಾಧಿ ಮ್ಯಾಲಿನ ಹೂ ಕಥೆಯ ಮೊದಲ ಭಾಗ

ಕಥಾಗುಚ್ಚ

ಸಮಾಧಿ ಮ್ಯಾಲಿನ ಹೂ(ಮೊದಲಬಾಗ)

ಆದಪ್ಪ ಹೆಂಬಾ ಮಸ್ಕಿ

[10:30 pm, 01/12/2022] ಸಂಗಾತಿ ಸಾಹಿತ್ಯ ಪತ್ರಿಕೆ: ಸರಕಾರಿ ನೌಕರಿಯ ಆಸೆಯನ್ನೇ ಕೈ ಬಿಟ್ಟಿದ್ದ ಮುನಿರಾಜು. ಆತ ಆಗಿನ ಕಾಲದಲ್ಲಿ ಟಿಸಿಹೆಚ್ ಕೋರ್ಸ್ ಮುಗಿಸಿ ಹದಿನೆಂಟು ವರ್ಷ ಆಗಿತ್ತು. ಮತ್ತು ಮುನಿರಾಜುನವಿಗೂ ಮೂವತ್ತಾರು ದಾಟುತ್ತಿತ್ತು. ಇನ್ನೆಲ್ಲಿಯ ನೌಕರಿ ? ಅಂದುಕೊಂಡು ಆ ಕಾಲದಲ್ಲಿ ಸ್ವಂತ ಟೈಪಿಂಗ್ ಇನ್ಸ್ಟಿಟ್ಯೂಟ್ ಇಟ್ಕೊಂಡು ಜಿವನ ಸಾಗಿಸುತ್ತಿದ್ದ. ಚೆನ್ನಾಗಿಯೇ ನಡೆದಿತ್ತು ಆತನ ಜೀವನ. ಶಿಸ್ತಿನ ಆಸಾಮಿ. ಎಲ್ಲದರಲ್ಲೂ ಶಿಸ್ತು. ಊಟ, ಬಟ್ಟೆ, ಮಾತು ವಿಶೇಷವಾಗಿ ಖರ್ಚು ! ಈ ಎಲ್ಲದರಲ್ಲೂ ಆತನ ಶಿಸ್ತೇ ಎದ್ದುಕಾಣುತ್ತಿತ್ತು. ಅಂತಹ ಮುನಿರಾಜುವಿಗೆ ಸರಕಾರದ ಆ ಕಾಲದ ಶಿಕ್ಷಕರ ನೇಮಕಾತಿ ನೀತಿಯ ಕೃಪೆಯಿಂದಾಗಿ ಸರಕಾರಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಸಿಕ್ಕಿತು. ಈಗಿನಂತೆ ಕಾಂಪಿಟೇಷನ್ ಇಲ್ಲದ ಆ ಕಾಲದಲ್ಲಿ ಏಜ್ ನ್ನೇ ಮೆರಿಟ್ ಆಗಿ ಪರಿಗಣಿಸಿದ್ದರಿಂದ ಮುನಿರಾಜುವಿಗೆ ಮೂವತ್ತಾರು ದಾಟುತ್ತಿದ್ದರೂ ನೌಕರಿ ಸಿಕ್ಕಿತ್ತು. ಸಾರಿ ಮೂವತ್ತಾರು ದಾಟಿದ್ದರಿಂದಲೇ ನೌಕರಿ ಸಿಕ್ಕಿತ್ತು. ಅದೂ ದೂರದ ರಾಯಚೂರು ಜಿಲ್ಲೆ ಯ ಕಿಡಗೂರು ಅನ್ನುವ ಸಣ್ಣ ಗ್ರಾಮದಲ್ಲಿ ! ಒಂದರ್ಥದಲ್ಲಿ ಸೆಟಲ್ ಆಗಿದ್ದ ಮುನಿರಾಜುವಿಗೆ ನೌಕರಿಯ ಅವಶ್ಯಕತೆ ಇರಲಿಲ್ಲ. ಅದೂ ಅಷ್ಟು ದೂರದ ರಾಯಚೂರಿನಲ್ಲಿ! ಹೀಗಾಗಿ ಕೋಲಾರದಿಂದ ರಾಯಚೂರಿನ ಗ್ರಾಮಕ್ಕೆ, ಬರುವುದೋ ಬೇಡವೋ ಎನ್ನುವ ಗೊಂದಲ್ಲಿದ್ದ. ಯಾರನ್ನು ಕೇಳಿದರೂ ರಾಯಚೂರು ಅಂದರೆ ಬರೀ ಬಿಸಿಲು ಅನ್ನವುವರೇ. ಅಲ್ಲಿನ ಜನ ರಫ್ಫೂ ಅನ್ನೋರು ಬೇರೆ‌. ಹೇಗಪ್ಪ ಮಾಡೋದು ಅಂತ ಯೋಚ್ನೆ ಮಾಡುತ್ತಿದ್ದ ಮುನಿರಾಜುವಿಗೆ ದಾರಿತೋರಿದ್ದು, ಮತ್ತದೇ ಶಿಸ್ತಿನ ಲೆಕ್ಕಾಚಾರ. ಗೆಳೆಯರೊಡನೆ ಸಮಾಲೋಚನೆ. ಅಂತಿಮವಾಗಿ ಸರಕಾರಿ ನೌಕರಿ, ಬಿಡಬಾರದು ಅನ್ನುವ ತೀರ್ಮಾನಕ್ಕೆ ಬಂದ. ಒಂದು ಒಳ್ಳೆಯ ದಿವಸ ನೋಡಿ ನೌಕರಿಗೆ ಜಾಯಿನ್ ಆಗಲು ಕಿಡಗೂರಿಗೆ ಬಂದ. ಒಂಬತ್ತು ಗಂಟೆಗೆಲ್ಲಾ ಶಾಲಾ ಆವರಣದಲ್ಲಿದ್ದ ಮುನಿರಾಜುವಿಗೆ ಆ ಶಾಲೆಯ ವಾತಾವರಣ ತುಂಬಾ ಹಿಡಿಸಿತು. ಎಂಟು ಕೊಠಡಿಗಳಿದ್ದ ಆ ಶಾಲೆಯ ಕಂಪೌಂಡಿನ ಸುತ್ತ ಮರಗಳನ್ನು ಬೆಳೆಸಿದ್ದರು ಅಲ್ಲಿನ ಶಿಕ್ಷಕರು. ಒಂಬತ್ತು ಗಂಟೆಗೆಲ್ಲಾ ಏಳೆಂಟು ವಿದ್ಯಾರ್ಥಿನಿಯರು ಬಂದು ಕೊಠಡಿಗಳನ್ನು, ಆವರಣವನ್ನು ಸ್ವಚ್ಛ ಮಾಡುತ್ತಿದ್ದರು. ಇನ್ನೂ ಕೆಲವರು ಗಿಡಕ್ಕೆ ನೀರು ಹಾಕುತ್ತಿದ್ದರು. ಹೊಸಬನಾದ ಇವನನ್ನು ನೋಡಿ
“ನಮಸ್ಕಾರ್ರಿ ಸರ್, ನಮ್ಮ ಹೆಡ್ ಮಾಸ್ಟರನ್ನ ನೋಡಬೇಕಿತ್ತೇನ್ರಿ ?”
ಎಂದು ಕೇಳಿದ ಆ ಮುದ್ದು ಮಕ್ಕಳಿಗೆ, “ಹೌದಮ್ಮ” ಎಂದಷ್ಟೇ ಉತ್ತರಿಸಿದ. ತಾನು ಹೊಸದಾಗಿ ಆ ಶಾಲೆಗೆ ಬಂದಿರುವ ಶಿಕ್ಷಕ ಎಂದು ಹೇಳಿಕೊಳ್ಳಲಿಲ್ಲ. ಅಷ್ಟರಲ್ಲೇ ಒಂದು ಹುಡುಗಿ, “ನಮ್ ಸರು ಇನ್ನೇನ್ ಬಂದ್ ಬುಡ್ತಾರ್ರಿ, ಇಲ್ಲಿ ಕೂಡ್ರೀ ಸಾರ್” ಅನ್ನುತ್ತಾ ಒಂದು ಛೇರ್ ತಂದು ಹಾಕಿದಳು. , ರಾಯಚೂರು ತಾವು ಅಂದುಕೊಂಡಂಗಲ್ಲ, ಅನಿಸುತ್ತಿತ್ತು ಮುನಿರಾಜುವಿಗೆ.
ಹದಿನೈದು ಇಪ್ಪತ್ತು ನಿಮಿಷದೊಳಗೆ ಎಲ್ಲ ಮೇಷ್ಟ್ರು ಬಂದ್ರು. ಪರಸ್ಪರ ನಮಸ್ಕಾರಗಳ ವಿನಿಮಯವಾಯ್ತು. ಮುನಿರಾಜು ಮಕ್ಕಳು ಹಾಕಿದ್ದ ಖುರ್ಚಿಯಿಂದೆದ್ದು ನಮಸ್ಕಾರ ಹೇಳಿದ ಎಲ್ರಿಗೂ. ತಾನೇ ಪರಿಚಯ ಮಾಡ್ಕೊಂಡ. ಎಲ್ಲರೂ,”ನಮ್ ಸಾಲಿಗೆ ಮತ್ತೊಂದು ಹೊಸ ಹ್ಯಾಂಡ್ ಬಂತಪಾ” ಅಂತೇಳಿ ಖುಷಿ ಪಟ್ರು. ಹೊಸಬನಾಗಿದ್ರಿಂದ ಸಧ್ಯಕ್ಕೆ ಹೊಸ ಟೈಂ ಟೇಬಲ್ ಮಾಡೋವರೆಗೆ ಇವನಿಗೆ ಒಂದು ಸಣ್ಣ ಕ್ಲಾಸು ಅಂದ್ರೆ ಮೂರನೇ ತರಗತಿಯನ್ನು ತಗೋಳ್ಳೋಕೆ ಹೆಡ್ ಮಾಸ್ಟರ್ ಹೇಳಿದ್ರು. ಮುನಿರಾಜು ಖುಷಿಯಿಂದಲೇ ಮೂರನೇ ತರಗತಿಗೆ ಪಾಠ ಮಾಡಲು ಹೋದ. ಹೊಸ ಮೇಷ್ಟ್ರನ್ನು ಕಂಡ ಮಕ್ಕಳು ಭಾಳ ಖುಷಿ ಪಟ್ಟವು. ಮಕ್ಕಳೊಂದಿಗಿದ್ದ ಮುನಿರಾಜುವಿಗೆ ಗಂಟೆ ಹನ್ನೆರಡಾಗಿದ್ದು ಗೊತ್ತೇ ಆಗಲಿಲ್ಲ. ಲಾಂಗ್ ಬೆಲ್ ಸದ್ದಾದಾಗಲೇ ಗೊತ್ತಾಯ್ತು. ಅದು ಇಂಟರ್ವಲ್ ಬೆಲ್ ಅಂತ. ಮಕ್ಕಳು ಕುಣಿಯುತ್ತಾ ಹೊರಗೆ ಓಡಿದವು. ಮುನಿರಾಜು ಆಫೀಸ್ ರೂಮಿನ ಕಡೆ ನಡೆದ. ಇಂಟರ್ವೆಲ್ ಆಗಿದ್ದರಿಂದ ಎಲ್ಲಾ ಶಿಕ್ಷಕರೂ ಬಂದಿದ್ದರು. ಎಲ್ಲರೂ ಇವನ ವಿವರ ಕೇಳಿದರು. ಹೇಳಿದ. ತಾನೂ ಅವರ ವಿವರ ತಿಳ್ಕೊಂಡ. ದೊಡ್ಡ ತರಗತಿಯ ಎರೆಡು ಮಕ್ಕಳು ಬಂದು ಚಹ ಕೊಟ್ರು. ಕುಡಿದ. ಮತ್ತೆ ತರಗತಿ. ಪಾಠ. ಇವನಿಗೆ ಶಾಲೆಯ ವಾತಾವರಣ ತುಂಬ ಹೋಮ್ಲಿ ಅನಿಸಿತು. ಆ ಶಾಲೆಯ ಒಂದು ಬದಿಗೆ ಅಂದ್ರೆ ಮೂರು ತರಗತಿ ಕೋಣೆಗಳಿಗೆ ತೀರಾ ಹತ್ತಿರದಲ್ಲೇ ಇತ್ತು ಒಂದು ಮನೆ. ಅದು ಪಮ್ಮಕ್ಕನವರ ಮನೆ ಅಂತ ನಂತರ ಇವನಿಗೆ ಗೊತ್ತಾಯ್ತು. ಏನಿದು ಪಮ್ಮಕ್ಕ ? ಎಂದುಕೊಳ್ಳುತ್ತಿದ್ದವನಿಗೆ ತಡಮಾಡಿ ತಿಳಿದದ್ದು ಆ ಮನೆಯ ಯಜಮಾನಿಯ ಹೆಸರು ಪ್ರಮೀಳಾ ಆದರೆ ಊರವರೆಲ್ಲರ ಬಾಯಲ್ಲಿನ ಆಕೆ ಪ್ರೀತಿಯ ಪಮ್ಮಕ್ಕ ಎಂದು. ಪಮ್ಮಕ್ಕಳಿಗೆ ಇದ್ದ ಒಬ್ಬನೆ ಮಗ ಬಸವರಾಜ ಕುಡಿದೂ ಕುಡಿದೂ ಶಿವನ ಪಾದ ಸೇರಿದ್ದ. ಅಷ್ಟರೊಳಗೆ ತನ್ನ ಮುದ್ದಿನ ಹೆಂಡತಿ ಶ್ರೀದೇವಿಗೆ ಒಂದು ಮಗುವನ್ನು ಕರುಣಿಸಿದ್ದ. ಆ ಮಗುವೇ ರೇಣುಕಾ. ರಂಗನಾಥ ತಗೆದುಕೊಂಡಿದ್ದ ಮೂರನೇ ತರಗತಿಯ ಅತ್ಯಂತ ಚ್ಯೂಟಿ ಮತ್ತು ಜಾಣ ಹುಡುಗಿ ಆ ರೇಣುಕಾ. ಆ ಹಳ್ಳಿಗರಿಗೆ ಶಾಲೆ ಶಿಕ್ಷಕರು ಅಂದ್ರೆ ತುಂಬಾ ಪ್ರೀತಿ ಮತ್ತು ಗೌರವ. ಮಧ್ಯಾಹ್ನ ಹನ್ನೆರಡರ ಬೆಲ್ ಹೊಡಿಯೋದರೊಳಗೆ ಪ್ರತೀ ದಿನ ಒಬ್ಬೊಬ್ಬರ ಮನೆಯಿಂದ ಚಹ ಬರೋದು. “ನಮ್ಮೂರಾಗ ಒಂದೂ ಓಟ್ಲ ಇಲ್ರಿ, ಪಾಪ ಮಾಷ್ಟ್ರು ಚಾ ಬೇಕಂದ್ರ ಏನ್ ಮಾಡಬಕು” ಅನ್ನೋ ಪ್ರಶ್ನೆ ಎತ್ತಿ, ಆ ಪ್ರಶ್ನೆಗೆ ಆ ಶಾಲೆಯ ಸುತ್ತ ಮುತ್ತ ಇರುವ ನಾಲ್ಕಾರು ಮನೆಯವರೇ ತಾವೇ ನಿರ್ಧಾರ ಮಾಡಿ ತಮ್ಮ ತಮ್ಮ ಮನೆಯಿಂದ ದಿನಕ್ಕೊಬ್ಬರಂತೆ ಚಹ ತಂದು ಕೊಡೋರು. ಬದಲಿಗೆ ಶಿಕ್ಷಕರಿಂದ ಒಂದು ಪೈಸೇನೂ ತಗೋತಿರಲಿಲ್ಲ. ಹಾಗಂತ ಅವರೇನೂ ಅಗರ್ಭ ಶ್ರೀಮಂತರಲ್ಲ. ಎಲ್ಲರ ಜೀವನವೂ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅನ್ನುವಂತಿತ್ತು. ಆದರೆ ಅವರ ಔದಾರ್ಯ ಶ್ರೀಮಂತಿಕೆ ಯಾರಿಗೂ ಕಮ್ಮಿಯಿರಲಿಲ್ಲ. ಜೊತೆಗೆ ಪ್ರತೀ ದಿನ ಮದ್ಯಾಹ್ನದ ಊಟಕ್ಕೆ ಈ ಶಿಕ್ಷಕರಿಗೆ ಪಮ್ಮಕ್ಕನ ಮನೆಯಿಂದ ಮಜ್ಜಿಗೆ ಖಾಯಂ. ಪಮ್ಮಕ್ಕ ತನ್ನ ಮೂರು ಎಮ್ಮೆಗಳನ್ನು ಶಾಲೆಯ ಗೋಡೆ ಪಕ್ಕದಲ್ಲೇ ಕಟ್ಟುತ್ತಿದ್ದಳು. ಹಾಲನ್ನು ಪಕ್ಕದೂರು ಮಾಸಂಗಿಗೆ ಹೋಗಿ ಮಾರಿ ಬರುತ್ತಿದ್ದಳು. ಪಮ್ಮಕ್ಕನ ಮನೆಯಲ್ಲಿ ಹೈನು ಸಮೃದ್ಧವಾಗಿರುತ್ತಿತ್ತು. ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ,ತುಪ್ಪಕ್ಕೇನೂ ಕೊರತೆಯಿರಲಿಲ್ಲ. ಮಜ್ಜಿಗೆ ಮಾತ್ರ ಶಿಕ್ಷಕರಿಗೆ ಮೀಸಲು. ಅಷ್ಟು ಉದಾರಿ ಪಮ್ಮಕ್ಕ. ಪಮ್ಮಕ್ಕನ ಮನೆ ಶಾಲೆಗೆ ಅದೆಷ್ಟು ಹತ್ತಿರವಾಗಿತ್ತೆಂದರೆ. ಆ ಮೂರು ತರಗತಿಗಳಲ್ಲಿ ನಡೆದ ಪ್ರತೀ ಪಾಠ, ಚಟುವಟಿಕೆಗಳೂ ಆ ಮನೆಯೊಳಗೆ ಬಟ್ಟೆ ಹೊಲಿಯುತ್ತಿದ್ದ ಸೊಸೆ ಮುದ್ದು ಶ್ರೀದೇವಿಗೆ. ಸ್ಪಷ್ಟವಾಗಿ ಕೇಳುತ್ತಿದ್ದವು. ಕೆಲವೊಮ್ಮೆ ಪಾಠ ಕೇಳುವುದರಲ್ಲಿ ತಲ್ಲೀನಳಾಗಿರುತ್ತಿದ್ದ ಶ್ರೀದೇವಿ ಹೊಲಿಯುವುದನ್ನೇ ನಿಲ್ಲಿಸಿ ಪಾಠದಲ್ಲಿ ಮಗ್ನಳಾಗಿಬಿಡುತ್ತಿದ್ದಳು. ಹೊರಗಿನ ದಿಂದ ಅವರತ್ತೆ ಪಮ್ಮಕ್ಕ, ” ಏ ಸಿರೆಮ್ಮಾ ಏನ್ ನಿದ್ದಿ ಮಾಡಾಕತ್ತಿಯನು ?” ಅಂತ ಕೂಗಿದಾಗಲೇ ಎಚ್ಚರವಾಗಿ ನಕ್ಕು ಮತ್ತೆ ತನ್ನ ಕಾಯಕ ಮುಂದುವರೆಸುತ್ತಿದ್ದಳು. ಈ ಎಲ್ಲವನ್ನೂ ಬೆರಗು ಗಣ್ಣಿನಿಂದ ನೋಡುತ್ತಿದ್ದ ಮುನಿರಾಜು, ಮೊದಲನೇ ದಿನವನ್ನು ಅತ್ಯಂತ ಸಂತೋಷದಿಂದ ಕಳೆದ. ಶಾಲೆ ಬಿಟ್ಟ ನಂತರ ಹೆಡ್ ಮಾಸ್ಟರ್ ಆತನನ್ನು ಕರೆದು,
” ಏನ್ರೀ ಹ್ಯಾಂಗನಿಸ್ತು, ಹೊಸ ಊರು, ಹೊಸ ಕೆಲಸ ?”
“ಚೆನ್ನಾಗನಿಸ್ತು ಸರ್”
“ಮತ್ತೆ ಇವತ್ತು ರಾತ್ರಿ ಎಲ್ಲಿ ಉಳಕೋತೀರಿ ?”
“ಗೊತ್ತಿಲ್ಲ ಸರ್”
“ಫ್ಯಾಮಿಲಿ ಇದೆಯೋ?”
“ಇದೆ ಸರ್, ಎರಡು ಮಕ್ಕಳೂ ಇವೆ”
“ಏನ್ ಓದ್ತಿದಾರೆ ?”
“ಮೊದ್ಲೆಯವನು ಗಂಡು ಮಗ, ಆರನೇ ಕ್ಲಾಸು, ಹೆಣ್ಮಗುವಿಗೆ ಈಗಿನ್ನೂ ಎರಡು ವರ್ಷ ಸರ್”
“ಫ್ಯಾಮಿಲಿ ನ ಇಲ್ಲಿಗೆ ಕರಕೊಂಡು ಬರೋ ವಿಚಾರ ಇದೆಯೋ ಹೆಂಗೋ ?”
“ಖಂಡಿತ ಸರ್ ಕರಕೊಂಡು ಬರ್ತೇನೆ.”
“ನೋಡಿ ಇದು ಹಳ್ಳಿ ಊರು ಇಲ್ಲೂ ಮನೆ ಸಿಗ್ತವೆ ಆದ್ರೆ ಅಂಥ ಫೆಸಿಲಿಟಿ ಇರಲ್ಲ. ಆದ್ರೆ ಇಲ್ಲೇ ಪಕ್ಕದಲ್ಲೇ ಆರೇಳು ಕಿಲೋಮೀಟರ್ ದೂರದಲ್ಲಿ ಮಾಸಂಗಿ ಅಂತ ಊರಿದೆಯಲ್ಲ ? ನಾವೆಲ್ಲ ಅಲ್ಲೇ ಮನೆ ಮಾಡಿರೋದು. ಇಂವ ರಾಜಪ್ಪ ಮಾತ್ರ ಸಿಂಗಲ್ಲು. ಹಿಂಗಾಗಿ ಇವ ಇಲ್ಲೇ ಇದಾ ಊರಾಗ ರೂಮ್ ಮಾಡ್ಯಾನ. ಸಧ್ಯಕ್ಕೆ ನಿಮಗೆ ಸೆಟ್ ಆಗೋತನಕ ಇವನ ರೂಮಿನ್ಯಾಗ ಇರ್ರಿ. ಮುಂದ ನೋಡಾಮಂತ” ಅಂದ್ರು ಹೆಡ್ ಮೇಷ್ಟ್ರು. ರಾಜಪ್ಪನೂ ಅದೇ ಶಾಲೆ ಶಿಕ್ಷಕ, ಹೂಂ ಅಂದ. ಮುನಿರಾಜುವಿನ ಹೊಸ ಬದುಕಿನ ಆರಂಭ. ಒಂದು ವಾರ ಹೀಗೇ ನಡೀತು. ಆ ಒಂದು ವಾರದಲ್ಲಿ ಆ ಊರು ಮುನಿರಾಜುವಿಗೆ ತುಂಬಾ ಆಪ್ತವಾಯ್ತು. ಮನೇನ ಆ ಊರಲ್ಲೇ ಮಾಡಿದರಾಯಿತು ಅಂದುಕೊಂಡ. ಬಾಡಿಗೆ ಮನೆ ಸಿಗುವುದು ತಡವೇನಾಗಲಿಲ್ಲ. ಅಲ್ಲೇ ಪಮ್ಮಕ್ಕನ ಮನೆ ಪಕ್ಕದಲ್ಲೇ ಅಂದ್ರೆ ತನ್ನದೇ ಶಾಲೆಯ ಕೂಗಳತೆಯಲ್ಲೇ ಮನೆ ಸಿಕ್ತು. ವಿಚಿತ್ರ, ಆ ಮನೆಯಲ್ಲಿ ಶೌಚಾಲಯ ಇತ್ತು. ಆದ್ರೆ ಬಳಕೆ ಮಾಡುತ್ತಿರಲಿಲ್ಲ. ಮನೆ ಓನರ್ ಆಗಿದ್ದ ಪ್ಯಾಟೀಗೌಡರಿಗೆ ಬೇಡವಾಗಿದ್ದ ವಸ್ತುಗಳೆಲ್ಲ ಆ ಶೌಚಾಲಯದಲ್ಲಿದ್ದವು. ಅದು ಅವರ ಪಾಲಿನ ಸ್ಟೋರ್ ರೂಮಾಗಿತ್ತು ! ಶೌಚಾಲಯ ಬೇಕು ಅಂದ ಮುನಿರಾಜುವಿಗೆ, ಮನಿ ಓನರ್ ಪ್ಯಾಟೀಗೌಡ್ರು,
” ಆಂ…? ಪೈಕಾನೀ ಬೇಕಾ ? ಪೈಕಾನ್ಯಾಗ ಓತೀರಾ, ಅದನ್ನ ಕಟ್ಟಿಸಿದಾಗನಿಂದ ಅದರಾಗ ನಾವು ಕಾಲಿಟ್ಟಿಲ್ಲ” ಅಂದ್ರು. ಹೆಮ್ಮೆಯೇನೋ ಎಂಬಂತೆ. ಮುನಿರಾಜು ಅವತ್ತೇ ಅನ್ಕೊಂಡ. “ನಾನು ಈ ಊರಾಗ ಸಾಲಿ ಕಲಿಸೋದರ ಜೊತೆಗೆ ಶೌಚಾಲಯದ ಜಾಗೃತಿನೂ ಮೂಡಿಸಬೇಕು” ಅಂತ. ಮುಂದೆ ಆತ ಅದನ್ನು ಸಾಧಿಸಿದ ಕೂಡ.

———————————


(……..ಮುಂದುವರಿಯುವುದು)

Leave a Reply

Back To Top