ಶಂಕರಾನಂದ ಹೆಬ್ಬಾಳ-ಗಜಲ್

ಕಾವ್ಯ ಸಂಗಾತಿ

ಗಜಲ್

ಶಂಕರಾನಂದ ಹೆಬ್ಬಾಳ

ಗುಡಾರದಲ್ಲಿದ್ದು ಕಲ್ಲು ಮುಳ್ಳಿನ ದಾರಿ
ತುಳಿಯುವವರು ನಾವು
ಬಡತನದ ಬದುಕನ್ನೆ ಕೊನೆತನಕ ನೋಡಿ
ಉಳಿಯುವವರು ನಾವು

ಬೆವರಿಳಿಸಿ ಅಗ್ನಿಯ ಕುಲುಮೆಯಲ್ಲಿ
ಬೆಂದವೆಯಲ್ಲ ಏಕೆ
ತವನಿಧಿಯ ಕಾಣದೆ ಪುಡಿಗಾಸಿನಲಿ
ಕೊಳೆಯುವವರು ನಾವು

ಅಕ್ಷರದ ಜ್ಞಾನವಿರದೆ ಊರೂರು
ತಿರುಗುವ ಫಕೀರರು
ಪಕ್ಷಪಾತಮಾಡದೆ ಸಮಾನತೆ ತೇರನು
ಎಳೆಯುವವರು ನಾವು

ಒಪ್ಪತ್ತಿನ ಗಂಜಿಗೆ ಬಿಸಿಲುನೆರಳೆನ್ನದೆ
ದುಡಿದೆವಲ್ಲ ಜಗದಿ
ಚಿಪ್ಪಿನೊಳಗಿನ ಮುತ್ತಂತೆ ಲೋಕದಿ
ಹೊಳೆಯುವವರು ನಾವು

ಕಡೆತನಕ ಸುಖದ ಐಭೋಗವನು
ಕಾಣದ ಯಾತ್ರಿಕರು
ನುಡಿಗೊಮ್ಮೆ ಅಭಿನವನ ನೆನೆದು
ಬೆಳೆಯುವವರು ನಾವು


Leave a Reply

Back To Top