ಸುರೇಶ ತಂಗೋಡ ಕವಿತೆ-ಕೂಗು

ಕಾವ್ಯ ಸಂಗಾತಿ

ಕೂಗು

ಸುರೇಶ ತಂಗೋಡ

ಆಡುವ ಬಾಯೊಂದೆ ಆದರೂ
ಭಾಷೆ ಬೇರೆ-ಬೇರೆ
ಅದಕ್ಕಾಗಿಯೇ ಪ್ರತ್ಯೇಕ ಕೂಗು
ನಮ್ಮ ಭಾಷೆ ನಮ್ಮ ಹೆಮ್ಮೆ
ಅಡಿ ಬರಹ.

ಕುಡಿವ ಜಲವೊಂದೇ ಆದರೂ
ಹರಿವ ಜಾಗ ಬೇರೆ-ಬೇರೆ
ಕಾವೇರಿಯನ್ನೇ ಇಬ್ಭಾಗಿಸಿದರು
ನಮ್ಮ ಹಕ್ಕೆಂದರು.

ಮಾಡುವ ಪ್ರಾರ್ಥನೆ ಒಂದೇ ಆದರೂ
ಸ್ಥಳವು ಬೇರೆ-ಬೇರೆ
ಮಂದಿರ,ಮಸೀದಿ,ಚರ್ಚ್ ಗಳು
ದೇವನೊಬ್ಬನೇ.

ಎಲ್ಲರ ಕೂಗು ಒಂದೇ ಆದರೂ
ಶಬ್ಧ ಬೇರೆ-ಬೇರೆ
ಜಾತಿಗಾಗಿ,ಜಲಕ್ಕಾಗಿ,ನೆಲಕ್ಕಾಗಿ
ಕೊನೆಗೆಲ್ಲವೂ ಮತಗಳಿಗಾಗಿ.

ಅದೆಷ್ಟೂ ನೆತ್ತರು ಹರಿದವು ಆದರೂ
ಕಾರಣಗಳಾದವು ಬೇರೆ-ಬೇರೆ
ಕೊನೆಯೆಂದು ತಿಳಿಯದ ಸಾಮಾನ್ಯ
ಮೂಕ ಪ್ರೇಕ್ಷಕನಾದ.


Leave a Reply

Back To Top