ಕಾವ್ಯ ಸಂಗಾತಿ
ಗಜಲ್
ಜಯಂತಿ ಸುನಿಲ್
ಮುಳ್ಳುಗಳ ದಾರಿಯಲಿ ನಡೆದು ಬಂದವಳು ನಾನು..
ನೋವುಗಳ ಶಹರಿನಲಿ ಬಳಲಿ ಬೆಂದವಳು ನಾನು..!!
ಶ್ರೀಮಂತ ವಸ್ತುಗಳು ನನ್ನ ಗುಡಿಸಲಿನಲ್ಲಿ ಸಿಕ್ಕಲಾರವು…
ಕಲ್ಪನೆಗೂ ಮೀರಿದ ಲೋಕವನ್ನು ಕನಸಿನಲ್ಲಿ ಕಂಡವಳು ನಾನು..!!
ಪಕ್ಷಪಾತವಿಲ್ಲದ ನಿಲುವು ನನ್ನ ಮನೆಯ ಹೆಸರು..
ಯಾರ ಕನಿಕರದ ಅನುಕಂಪಕ್ಕೂ ನಿಲುಕದ ಆತ್ಮವಿಶ್ವಾಸ ಹೊಂದಿದವಳು ನಾನು..!!
ನನ್ನ ಬಣ್ಣ ಕಪ್ಪಿರಬಹುದು..ಆತ್ಮದಲ್ಲಿ ಬೆಳಕಿದೆ
ಅಡಿಗಡಿಗೆ ಆಯ್ದ ಕಲ್ಲುಗಳನ್ನೇ ಮುತ್ತುಗಳನ್ನಾಗಿಸಿಕೊಂಡವಳು ನಾನು..!!
ವಜ್ರವನ್ನು ಕತ್ತರಿಸಬಲ್ಲ ಸಂವೇದನೆಗಳು ನನ್ನೆಡೆಗೆ ಅಂತಃಕರಣವುಳ್ಳವು
ಬಿಸಿಲು,ಚಳಿ,ಗಾಳಿ ಮಳೆಯನ್ನು ಸದಾ ಅಪ್ಪಿಕೊಂಡವಳು ನಾನು..!!
ಲೋಕ ಗುರುತು ಹಿಡಿಯುವ ಅಂತಸ್ಥಿನ ಯಜಮಾನಿಯಲ್ಲಾ..
ಕಗ್ಗಾಡಿನಲ್ಲಿ ಬೆಳೆದ ಕಾಡ ಸಂಪಿಗೆಯಂತೆ ತೆರೆ ಮರೆಯಲ್ಲೇ ಉಳಿದವಳು ನಾನು..!!
ನನ್ನ ಮೌನ,ಧ್ಯಾನ ಕಾವ್ಯವಾಗಿ ಈ ಮಣ್ಣಿನಲ್ಲಿ ಉಸಿರಾಡಿ ಜಯಿಸಬಲ್ಲದೇ?
ನಿಮ್ಮೊಳಗೆ ತಳೆವ ಒಲುಮೆಗೆ ಸದಾ ಬೊಗಸೆಯೊಡ್ಡಿದವಳು ನಾನು..!!
Tumba chenda