ಕನಕ ಚಿಂತನೆ ವಿಶೇಷ ಲೇಖನ

ಚಿಂತನ

ಕನಕ ಚಿಂತನೆ ವಿಶೇಷ ಲೇಖನ

ಕನಕದಾಸರ ಕೀರ್ತನೆಗಳಲ್ಲಿ ಹನುಮಂತನ ಚಿತ್ರಣ

ಡಾ.ವೈ.ಎಂ.ಯಾಕೊಳ್ಳಿ

.ಕನಕದಾಸರಿಗೆ ರಾಮ ಎಷ್ಟು ಪ್ರಿಯನೋ ಅಷ್ಟೆ ಪ್ರಿಯನಾದವನು ಹನುಮಂತ.ಬಹುಶಃ ರಾಮಾಯಣ ಕ್ಕಿಂತ‌ ಮೊದಲೇ ನಮ್ಮ ಹಳ್ಳಿ ಗಾಡಿನಲ್ಲಿ  ಜನರ ಕಾಯುವ ಹೊಣೆಗಾರಿಕೆಯನ್ನು ಹನುಮಂತ ದೇವರು ಪಡೆದಿರಬೇಕು‌. ಏಕೆಂದರೆ ರಾಮನ ದೇವಾಲಯಗಳಿರುವ ಹಳ್ಳಿಗಳು ನಮ್ಮ ನಾಡಿನಲ್ಲಿ ಎಷ್ಟಿವೆಯೋ ಗೊತ್ತಿಲ್ಲ. ಹನುಮಂತ ನ ದೇವಾಲಯವಿರದ‌ ಊರುಗಳು ಇಲ್ಲವೇ ಇಲ್ಲ  ಎನ್ಮಬಹುದು.ಎಲ್ಲಾ ಊರುಗಳಲ್ಲಿ ಗಡಿ ಕಾಯುವ ದೇವರಾಗಿ ಊರ ಹೊರಗೇ ಹನುಮಂತನ ದೇವಸ್ಥಾನ ಇರುವದನ್ನು ನಾವು ಕಾಣುತ್ತೇವೆ.ಆದ್ದರಿಂದಲೇ ” ಊರು ಸುಟ್ಟರೂ ಹನುಮಪ್ಪ ಹೊರಗ ” ಎಂಬ ಗಾದೆ ಮಾತು ಪ್ರಚಲಿತದಲ್ಲಿದೆ.

ಹನುಮಂತ ನನ್ನು  ಸ್ತುತಿಸುವ ಎಂಟು ಕೀರ್ತನೆಗಳು  ಪ್ರೊ.ಸುದಾಕರ ಅವರು ಸಂಪಾದಿಸಿದ ‘ಕನಕದಾಸರ ಕೀರ್ತನೆಗಳು ಮತ್ತು ಮುಂಡಿಗೆಗಳು’ ಎಂಬ ಸಂಪುಟ ದಲ್ಲಿವೆ.ಅವುಗಳ ಸವಿವರ ಚರ್ಚೆ ಇಲ್ಲಿದೆ.

ಕನಕದಾಸರು ಸಂಸ್ಕೃತದಲ್ಲಿ ಬರೆದ ಒಂದು‌ ಕೀರ್ತನೆ ಇಲ್ಲಿದೆ. ಕನಕದಾಸರು ಕನ್ನಡದಲ್ಲಿ ಮಾತ್ರವಲ್ಲ,ಸಂಸ್ಕೃತ ದಲ್ಲಿಯೂ ಪದ್ಯ ರಚಿಸುವ ಮಹಾನ್ ಪಂಡಿತರಾಗಿದ್ದರು. ಹನುಮಂತ ನನ್ನು ಇಲ್ಲಿ

ಭಜರೇ ಹನುಮಂತಂ Iಮಾನಸ

ಭಜರೇ ಹನುಮಂತಂ //ಪ//

 ಭಕ್ತಿಯಿಂದ ಮನಸಿನಲ್ಲಿ ಭಜಿಸುತ್ತೇನೆ ಎಂದು ಕೀರ್ತನೆಯು ಆರಂಭವಾಗುತ್ತದೆ. ಕೋಮಲ ಕಾಯನೆಂದು, ನಾಮಸುದೇವನೆಂದು , ಭೂಸುರ ಶ್ರೇಷ್ಠನೆಂದೂ ಬಣ್ಣಿಸುತ್ತಾರೆ. ಮೂರ್ಖರೂ ನಿಶಾಚರರೂ ಆದ ರಾಕ್ಷಸರ ಸಂಹಾರಿ ಯಂದು ,ಸೀತೆಯ ದುಃಖ ನಿವಾರಿಸಿದವನೆಂದೂ ಬಣ್ಣಿಸುತ್ತ ಆಶ್ಚರ್ಯವೆನ್ನುವಂತೆ ಕೀರ್ತನೆಯ ಕೊನೆಯಲ್ಲಿ ಆದಿ ಕೇಶವ ಅಂಕಿತದ ಬದಲು ಚೆನ್ನಕೇಶವ ಅಂಕಿತ ಬಳಸಿದ್ದಾರೆ.

ಕದರಮಂಡಲಗಿ ಕನಕದಾಸರ ಬಾಳಿನಲ್ಲಿ ಬರುವ ಒಂದು ಮುಖ್ಯ ಸ್ಥಳ.ಇದು ಬಾಡ ಪ್ರಾಂತದ ಒಂದು‌ ಮುಖ್ಯ ಊರು ಆಗಿದ್ದಿರಬಹುದು.ಇಲ್ಲಿನ ಹನುಮಂತದೇವರು ಕಾಂತೇಶ ನೆಂದು ಹೆಸರಾಗಿದ್ದಾನೆ ಕನಕದಾಸರು ತಮ್ಮ ಉತ್ತರ ಕಾಲದಲ್ಲಿ ಇಲ್ಲಿಗೆ ಬಂದು ಕೆಲವು ಕಾಲ ನೆಲೆಸಿದ್ದರೆಂದೂ ಇಲ್ಲಿಯೆ ಮೋಹನ ತರಂಗಿಣಿ ಬರೆದರೆಂದೂ ನಂಬುಗೆ ಇದೆ. ಇಲ್ಲಿನ ಹನುಮಂತ ದೇವರನ್ಜು ಕರುಣಿ ಎಂದು ಕನಕದಾಸರು ಕರೆಯುತ್ರಾರೆ.

ಕದರಮಂಡಲಗಿಯ ಕರುಣಿ ಹನುಮರಾಯ

ಸದುಗುಣವಂತನೆ ಹಣುವಂತನೆ

ಎಂದು ಅವರು ತುಂಬ ಆತ್ಮೀಯವಾಗಿ ಹಣುಮಂತನನ್ನು ನೆನೆಯುತ್ತಾರೆ.ರಾಮಾಯಣದ ಕಥೆ ಒಂದೊಂದು ಸಾಲಿನಲ್ಲಿ  ಚಿತ್ರಿತವಾಗಿದೆ.ಅವನ ತಂದೆ ಆಂಜನೆಯ ಎನ್ನುವದನ್ನು ಆಂಜನೆಯನ ವರಸೂನು ಎಂದು ಕರೆಯುವ ಕವಿ ಅವನ ಧೀರ ವ್ಯಕ್ತಿತ್ವವನ್ನು

ಸಂಜೀವನವ ತಂದ ವರಸೂನು ವ್ಯೋಮಮಾರ್ಗದಿ ಬಂದ

ಅಂಜದ ಗುಣವಂತನೇ ಹಣುವಂತನೇ

ಎನ್ನುವ ಕವಿ ಮುಂದಿನ ಸಾಲುಗಳಲ್ಲಿ ಮತ್ತೆ ಸಂಸ್ಕೃತ ಭೂಯಿಷ್ಠ ಭಾಷೆಯನ್ನೆ ಬಳಸುತ್ತಾರೆ.

ಕನಕದಾಸರ ಕಾವ್ಯ ಪ್ರತಿಭೆಯನ್ನು ತೋರುವ ಕೀರ್ತನೆ ಗಳಲ್ಲಿ ಒಂದು”ಅರಸಿನಂತೆ ಬಂಟನೋ ಹನುಮಂತರಾಯ” ಎನ್ನುವ ಕೀರ್ತನೆ.ಇಲ್ಲಿ ಅವನ ಒಡೆಯ ರಾಮ ಮತ್ತು ಬಂಟ ಹನುಮ ಇಬ್ಬರನ್ನು  ಹೋಲಿಸುತ್ತ ಮೂರು ಸಂಗತಿಗಳನ್ನು ನೆನೆದು ಹನುಮಂತನೂ ತನ್ನ ಒಡೆಯನಂತೆಯೆ ಸಮರ್ಥ ಎಂಬುದನ್ನು ಸಾರುತ್ತಾರೆ‌.ಇಬ್ಬರ ಕಾರ್ಯಗಳು ಒಂದೆ ಎನ್ನುವಂತೆ ಸಾದೃಸ್ಯವನ್ನು ಚಿತ್ರಿಸುತ್ತಾರೆ.

ಅರಸಿನಂತೆ ಬಂಟನೋ ಹನುಮರಾಯ

ಎಂದು ಸಾರುವ ಕನಕದಾಸರು ಆ ಸಾದೃಸ್ಯದ ಮೂರು ಚಿತ್ರಗಳನ್ನು ಬಿಡಿಸುತ್ತಾರೆ.

ಮೊದಲನೆಯದು ಇಬ್ಬರೂ ಅಂಬುಧಿಯಲ್ಲಿ ಹೊಕ್ಕ ಚಿತ್ರ. ವಿಷ್ಣು ತನ್ನ ದಶಾವತಾರಗಳಲ್ಲಿ ಒಂದು ಅವತಾರದಲ್ಲಿ ಅಂಭುದಿಯೊಳು ಹೊಕ್ಕು ವೇದಗಳನ್ನು ರಕ್ಕಸನಿಂದ ಬಿಡಿಸಿ ರಕ್ಕಸನನ್ನು ಕೊಂದು ವೇದಗಳನ್ನು ತಂದು ಬ್ರಹ್ಮನಿಗೆ‌ಕೊಡುತ್ತಾನೆ.ಹಾಗರಕೆಯಾಎ ಹನುಮಂತನು ಕೂಡಾ ತನ್ನೊಡೆಯನ ಹಾಗೆ ಸಮುದ್ರವನ್ನು ದಾಟಿ ಸೀತೆಯನ್ನು ಬೆಟಿಯಾಗಿ ಅವಳ  ಮಾಣಿಕ್ಯವನ್ನು ತಂದು ರಾಮನಿಗೆ ಅರ್ಪಿಸಿದನಂತೆ.

ಎರಡನೆಯದು ಕೃಷ್ಣಾವತಾರದಲ್ಲಿ ಗಿರಿಧರನೆನಿಸಿದ  ಕೃಷ್ಣನು ಗೋವರ್ಧನ ಗಿರಿಯನೆ ಎತ್ತಿ ಗೋಕುಲದವರನ್ನು ರಕ್ಷಿಸಿದರೆ, ಹಣುಮಂತನು ಲಂಕೆಗೆ ಹೋಗಲು ಸೇತುವೆ ಯನ್ನು ಕಟ್ಟಲು ಸಮಸ್ತ ಪರ್ವತಗಳನ್ನೇ ತಂದು ನಳನ ಕೈಗೆ ಕೊಡುತ್ತಾನೆ.

ಮೂರಬೆಯ ಪದ್ಯಭಾಗದಲ್ಲಿ ಅಂದು ವಿಷ್ಣು ಸುರರಿಗೆ ಅಮೃತವನ್ನು ಕುಡಿಸಿದುದನ್ನು ಹೇಳಿದರೆ,  ಹನುಮಂತನು ವರ ಸಂಜೀವನವ  ತಂದು ಕೊಟ್ಟುದನ್ನು ಹೋಲಿಸುತ್ತದೆ.

ಮಹಾಭಾರತದ ಭೀಮ ಹನುಮಂತನ ಅವತಾರ ಎಂದು ನಂಬಿಗೆಯಿದೆ. ಆಂಜನೆಯನನ್ನು ಭೀಮರಾಯ ಎಂದೂ ಕರೆಯಲಾಗುತ್ತದೆ. ಭೀಮರಾಯನ ಗುಡಿಯಲ್ಲಿ ಇರುವ ಹುಚ್ಚೂರಾಯ ಭೀಮರಾಯನೆಂತಲೂ ಕರೆಯಲ್ಪಡುತ್ತಾನೆ ಆತ ಹನುನಂತನಲ್ಲದೆ ಬೇರಾರು ಅಲ್ಲ. ಕನಕದಾಸರು ಒಂದು‌ಕೀರ್ತನೆಯಲ್ಲಿ ಹನುಮಂತನನ್ನು ಭೀಮರಾಯ ಎಂಬ ಹೆಸರಿನಲ್ಲಿಯೇ ಸ್ತುತಿಸುತ್ತಾರೆ. ಆಂಜನೆಯಾತ್ಮಜ, ಅಗಣಿತ ಬಲವಂತ ಮೊದಲಾದ  ನುಡಿಗಟ್ಟುಗಳು ಅವನ ಸಾಹಸವನ್ನು ಬಣ್ಣಿಸುತ್ತವೆ. ವಾರಿಧಿಯನು ದಾಟಿ ಸೀತೆಗುಂಗುರವಿತ್ತ ” ಎನ್ನುವ ವಿವರ ಭೀಮರಾಯ ಹನುಮಂತನೆ ಎಂಬುದನ್ನು ಸಾರುತ್ತದೆ. ಕೀರ್ತನೆಯ ಕೊನೆಯ ಭಾಗದಲ್ಲಿ

ರಾಮರಾಯರಿಗೆ ನೀ ಪ್ರೇಮದ ಬಂಟನು ಭೀಮರಾಯ

ಕಾಮಿತ ಫಲವಿತ್ತು ಕರುಣದಿ ಸಲಹಯ್ಯ ಭೀಮರಾಯ

ಎಂದು ಸ್ತುತಿಸುತ್ತಾರೆ. ಅವನ ಸೇವಕತನದ ಗುಣವನ್ನು ಕನಕದಾಸರು ಬಣ್ಣಿಸುತ್ತಾರೆ.ಭಕ್ತಮನದ ಕನಕದಾಸರು  ಶ್ರೀ ರಾಮನಿಗೆ ಹನುಮಂತ‌ ಮಾಡಿದ ಸೇವೆ ಉತ್ಕೃಷ್ಟವಾದುದಾ ಗಿ ಕಾಣಿಸುತ್ತದೆ. ಅವರಿಗೆ ಹನುಮಂತ ದೇವರು ಪರಮ ಸೇವಕನಾಗಿ ಕಾಣಿಸುತ್ತಾನೆ          ‌‌‌     ” ಸೇವಕತನದ ರುಚಿಯ ನೇನರಿದೆಯೋ ‘ ಎಂದು ಆರಂಭವಾಗುವ ಕೀರ್ತನೆಯಲ್ಲಿ ರಾಮಾಯಣದ ವಿವರಗಳೇ ಇವೆ.

ಬಹಳ ಮುಖ್ಯವಾದ ಕೀರ್ತನೆ ಎಂದರೆ  “ಎನ್ನ ಕಂದ ಹಳ್ಳಿಯ  ಹನುಮ” ಎನ್ನುವದು. ಕನಕದಾಸರ ಕಾವ್ಯ ಕೌಶಲ್ಯತೆ ಇಲ್ಲಿ ವ್ಯಕ್ತವಾಗಿದೆ.ಸೀತೆ ತನ್ನನ್ನು ನೋಡಲು ಬಂದ ಹನಮಂತನಿಗೆ ನೇರವಾಗಿ “ರಾಮಚಂದ್ರ ಹೇಗಿದ್ದಾರೆ” ಎಂದು ಕೇಳದೆ ಚೆನ್ನಾಗಿದ್ದಾರೆ  ಲಕ್ಷ್ಮಣದೇವರು” ಎಂದು ಪ್ರಶ್ನಿಸುತ್ತಾಳೆ. ಇದನ್ನು ತಿಳಿದ ಹನುಮಂತ ತುಂಬ ಚತುರಮತಿಯಾದು ದರಿಂದ ರಾಮನ ಇರುವಿಕೆಯನ್ಜು ಕಥೆ ಮಾಡಿ ಸೀತೆಗೆ ತಿಳಿಸುತ್ತಾನೆ. ಸೀತೆ ತುಂಬ ಪ್ರೀತಿಯಿಂದ ಎನ್ನ ಕಂದ ಎನ್ನುವದು ಮತ್ತೂ ಮುಂದುವರಿದು ಅವನನ್ನು ಹಳ್ಳಿಯ ಹನುಮ ಎನ್ನುವದು ಕನಕದಾಸರ  ಸೃಷ್ಟಿಗಳಾಗಿವೆ.

ಇದಕ್ಕೆ ಪ್ರತ್ಯುತ್ತರ ಎನ್ನುವಂತೆ ಇರುವ ಇನ್ನೊಂದು‌ಕೀರ್ತನೆ

” ಏನೆಂದಳೇನೆಂದಳೋ ನಿನ್ನೊಳು ಸೀತೆ  ಹನುಮಯ್ಯ” ಎನ್ನುವ ಕೀರ್ತನೆ. ಮೇಲಿನ ಕೀರ್ತನೆಯಲ್ಲಿ ರಾಮ ಹೇಗಿದ್ದಾನೆ ಎಂದು ಸೀತೆ ಕೇಳಿದರೆ ,ಈ ಕೀರ್ತನೆಯಲ್ಲಿ ಸೀತೆ ನಿನಗೆ ಏನು ಹೇಳಿ ಕಳಿಸಿದಳು ಎಂಬ ಪ್ರಶ್ನೆ ಕೇಳುತ್ತಾನೆ .ಅದಕ್ಕೆ ಉತ್ತರ ರೂಪವೇ ಕೀರ್ತನೆಯ ಭಾಗವಾಗಿದೆ. ರಾಮನ ಹತ್ತಿರವಿರುವ ಘನಪದವಿ ಯನುಳಿದು ವನವ ಸೇರಿದೆನೆಂದು ಚಿಂತಿಸುತ್ತಿರುವದನ್ನು ಹೇಳುತ್ತಾನೆ‌

ಹನುಮಂತ ನೆಲೆಸಿದ ಪವಿತ್ರ ಪ್ರಸಿದ್ಧ  ಕ್ಷೇತ್ರಗಳಲ್ಲಿ ಮುತ್ತತ್ತಿಯೂ ಒಂದು.ಅಲ್ಲಿ ಮುತ್ತತ್ತಿರಾಯ ಎಂಬ ಹೆಸರಿನಿಂದ ಹನುಮಂತ ನೆಲೆಸಿದ್ದಾನೆ. ಮುತ್ತತ್ತಿ‌ ಕ್ಷೇತ್ರದರ್ಶನ ಕಾಲಕ್ಕೆ  ” ಎಷ್ಟು ಪೊಗಳಲಿ ..”ಕೀರ್ತನೆ ಬರೆದಿರಬಹುದೆ ನ್ನುವ  ಸೂಚನೆಯನ್ನು ಸಂಪಾದಕರಾದ ಪ್ರೊ ಸುದಾಕರ್ ಅವರು ಕೊಡುತ್ತಾರೆ. ಇಲ್ಲಿಯೂ ರಾಮಾಯಣದ ಕಾಲದ ಹನುಮಂತನ ಕಥೆಯೇ ಇದ್ದರೂ ಕೊನೆಯಲ್ಲಿ  ಕರುಣಾವಾರಿಧಿ ಕಾಗಿನೆಲೆಯಾದಿಕೇಶವ ಮುತ್ತತ್ತಿ ದೊರೆಯೆ” ಎಂದು ಆದಿಕೇಶವನನ್ನು ಮುತ್ತತ್ತಿರಾಯನನ್ನು ಅಭೇದ ರೂಪದಿಂದ ಬಣ್ಣಿಸಿದ್ದಾರೆ.

ಇಷ್ಟು ಕೀರ್ತನೆಗಳನ್ನು ಗಮನಿಸಿದಾಗ ಕನಕದಾಸರು ರಾಮಾಯಣದ ರಾಮಭಕ್ತನಾಗಿ ಹನುಮಂತನನ್ನು ಕಂಡಿದ್ದಾರೆ ಎಂಬುದೆ ಮಹತ್ವದ್ದಾಗಿದೆ.


ಡಾ.ವೈ.ಎಂ.ಯಾಕೊಳ್ಳಿ

Leave a Reply

Back To Top