ಡಾ. ಸದಾಶಿವ ದೊಡಮನಿ ಕವಿತೆ-ಖಾಲಿ ಜೋಳಿಗೆ

ಕಾವ್ಯ ಸಂಗಾತಿ

ಖಾಲಿ ಜೋಳಿಗೆ

ಡಾ. ಸದಾಶಿವ ದೊಡಮನಿ

ಬರೀ ತಪ್ಪುಗಳನ್ನು ಹುಡುಕದಿರು
ಅಕ್ಕಿಯಲ್ಲಿ ತುಂಬಾ ಹಳ್ಳುಗಳು ಇವೆ
ಆರಿಸು ಅಕ್ಕಿ
ಆರಿಸದಿರು ಹಳ್ಳು

ನುಸಿ, ಬಾಲುಹುಳು ಎಂದು
ಅಕ್ಕಿಯನ್ನೇ ಎತ್ತಿ ಎಸೆಯದಿರು;
ಹಸಿವು ಹೆತ್ತ ಕರುಳು ಬಾಣಂತಿ ನಾನು!
ಹಸಿವೆಯ ಕುರಿತ ನಿನ್ನ ಒಣ ಮಾತು
ಹೊಟ್ಟೆ ತುಂಬಿಸಲಾರವು

ಕರುಳು ಸುಟ್ಟುಕೊಂಡು
ಯಾರೋ ಕೊಟ್ಟ ತುಕುಡಿ ರೊಟ್ಟಿ
ಯನು ಸೆರಗಿನಲ್ಲಿ ಕಟ್ಟಿಕೊಂಡು
ಬಾಳ ಬಂಡಿ ಉರುಳಿಸಲು
ನಿತ್ಯ ಅಗ್ಗಿ ಹಾಯುವ ಅವ್ವ
ನನ್ನ ಪಾಲಿಗೆ ಖಾಲಿ ಜೋಳಿಗೆ ಸಂತೆ

ಚರುಮ ಸುಲಿದ ಪಾದಗಳಿಗೆ
ಬಾಳೆ ಬಚ್ಚಿ ಸುತ್ತಿ, ಅವರಿವರ ಹೊಲಗಳಲೆದು
ಆಯ್ದ ಬೊಗಸೆ ಸೇಂಗಾ ಬುಡ್ಡಿಯನು
ಅವರಿವರಿಗೆ ಹಂಚುತ್ತಲೇ
ಮನೆ ಮುಟ್ಟುವ ಅಪ್ಪನಿಗೆ
ತುಕಾರಾಮ ಹೆಸರು ಅನ್ವರ್ಥಕ

ಅಗಸೆ ಬಾಗಿಲಲ್ಲಿ ಆನೆ
ಹಾದು ಹೋದರೂ
ಇರುವೆ ಹೊರುವಷ್ಟೇ
ಅನ್ನದಗಳಿಗೆ ನಿತ್ಯ ಹೋರಾಟದ ಕಸರತ್ತು
ಕಸುವಿಲ್ಲದ ಹಸಿದ ಕರುಳ ಪಾಡು!


Leave a Reply

Back To Top