ಅಂಕಣ ಸಂಗಾತಿ

ಸುಜಾತಾ ರವೀಶ್

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಕಾಲಜಿಂಕೆ

ಕಾಲಜಿಂಕೆ _ ಕಾದಂಬರಿ

ಲೇಖಕರು ಕೆ ಸತ್ಯನಾರಾಯಣ

ಪ್ರಕಾಶಕರು ಅನಂತ ಪ್ರಕಾಶನ ಬೆಂಗಳೂರು

ಪ್ರಥಮ ಮುದ್ರಣ ೨೦೦೫

ದ್ವಿತೀಯ ಮುದ್ರಣ  ೨೦೨೦

ಶ್ರೀ ಕೆ ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21ರಂದು ಮಂಡ್ಯ ಜಿಲ್ಲಾ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ. ೧೯೭೨ ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸುವರ್ಣ ಪದಕದೊಂದಿಗೆ ಬಿಎ ಪದವಿ .೧೯೭೪ ರಲ್ಲಿ.  ಅದೇ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿ. ೧೯೭೮ ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವಿಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ  ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿ 2014ರಲ್ಲಿ. ಸಣ್ಣ ಕಥೆ, ಕಿರುಗತೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣ ಬರಹ ವಿಮರ್ಶೆ ಪ್ರವಾಸ ಕಥನ ಕನ್ನಡ ಪ್ರಭ ಸಂಕ್ರಾಂತಿ ಮತ್ತು ಯುಗಾದಿ ಪುರಸ್ಕಾರ ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ 30ಕ್ಕೂ ಹೆಚ್ಚು ಕೃತಿಗಳ ಪ್ರಕಟಣೆ.  ಕರ್ನಾಟಕ ಸಾಹಿತ್ಯ ಅಕಾಡೆಮಿಯ (1988, 1992 2012 )ಪ್ರಬಂಧ, ಕಾದಂಬರಿ ಹಾಗೂ ಸಣ್ಣ ಕಥೆಗಳಿಗೆ ಪುರಸ್ಕಾರ; ಗೌರಿ ಕಾದಂಬರಿಗೆ ಆರ್ಯಭಟ ಪ್ರಶಸ್ತಿ; ಕನ್ನಡಪ್ರಭ ಕಥಾ ಪುರಸ್ಕಾರ, ಯುಗಾದಿ 1993, ಸಂಕ್ರಾಂತಿ 1999, ಮಾಸ್ತಿ ಕಥಾಪುರಸ್ಕಾರ (ನಕ್ಸಲ್ ವರಸೆ 2010) ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ  ಪ್ರಶಸ್ತಿ (2014) ಒಟ್ಟು ಸಾಹಿತ್ಯ ಸಾಧನೆಗೆ ಬಿ ಎಂ ಶ್ರೀ ಪ್ರತಿಷ್ಠಾನದ ಎಂ ವಿ ಸಿ ಪ್ರಶಸ್ತಿ (2012) ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ (2013) ರಾ ಗೌ ಪ್ರಶಸ್ತಿ (2014) ಬಿಎಚ್ ಶ್ರೀಧರ ಪ್ರಶಸ್ತಿ (2016) ವಿಶ್ವ ಚೇತನ ಪ್ರಶಸ್ತಿ (2018).

ಕೆ ಸತ್ಯನಾರಾಯಣ ಅವರ ಕಾದಂಬರಿ ಓದುತ್ತಿರುವುದು ಇದು ನಾನು ಮೊದಲನೆಯದು .ಶೀರ್ಷಿಕೆಯೊಂದಿಗೆ ಅಡಿ ಬರಹ “ಜಾಗತೀಕರಣದ ಒತ್ತಡಗಳು ಹಾಗೂ ಕೌಟುಂಬಿಕ ಜೀವನದ ಅರ್ಥಪೂರ್ಣತೆಯ ನಡುವಿನ ಸಂಬಂಧವನ್ನು ಶೋಧಿಸುವ ಕಾದಂಬರಿ” ಎಂದು ಹೇಳುವುದು ಕಾದಂಬರಿಯ ಮುಖ್ಯ ವಸ್ತು ವಿಶೇಷವನ್ನು ತಾನೇ ಹೇಳಿಬಿಡುತ್ತದೆ. ಆದರೆ ವೈಶಿಷ್ಟ್ಯವಿರುವುದು ಕಥೆಯನ್ನು ಹೇಳುವ ನಿರೂಪಣಾ ಶೈಲಿ ಹಾಗೂ ಪಾತ್ರಗಳು ತಾವಾಗಿ ದೃಷ್ಟಿಕೋನಗಳನ್ನು ವಿವರಿಸುವ, ಪ್ರತಿಮೆಗಳಾಗುವ ಹಾಗೂ ತಾವೇ ಉದಾಹರಣೆಗಳಾಗುತ್ತಾ ಹೋಗುವ ಘಟನೆಗಳ ಅನಾವರಣ.

50_  52ರ ಆಸುಪಾಸಿನ  ರಂಗನಾಥ ಹಾಗೂ ಅವನಿಗಿಂತ ನಾಲ್ಕೈದು ವರ್ಷ ಚಿಕ್ಕವಳಾದ ಅವನ ಹೆಂಡತಿ ಸುಧಾ ಜಾಗತೀಕರಣದ ಈ ಮೊದಲ ಘಟ್ಟದಲ್ಲಿ ಸಿಲುಕಿದವರು. ಮಗಳು ಪ್ರಾರ್ಥನಾ ದೆಹಲಿಯಲ್ಲಿ ಸಿವಿಲ್ ಎಕ್ಸಾಮಿನ ತಯಾರಿ ನಡೆಸುತ್ತಲೇ ಪದವಿಯ ಕಡೆಯ ವರ್ಷದಲ್ಲಿ ಓದುತ್ತಿರುವವಳು. ಮಗ ವಿಕ್ರಂ ವಿಕಿರಣ ವಿಭಾಗದಲ್ಲಿ ಅಸಿಸ್ಟೆಂಟ್ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದವನು ಓದಲೆಂದು ಅಮೆರಿಕಾಗೆ ಹೋಗಿ ಅಲ್ಲಿಯೇ ನೆಲೆಸಿರುತ್ತಾನೆ. ಅವನಿಗೆ ಮದುವೆ ಮಾಡಬೇಕೆಂಬ ಯೋಚನೆ ಈ ದಂಪತಿಗಳದು.  ಕಾದಂಬರಿಯ ಆರಂಭದಲ್ಲಿ ಮಗಳು ಪ್ರಾರ್ಥನಾ

 ಒಂದು ವರ್ಷ ತನ್ನ ಓದನ್ನೆಲ್ಲ ನಿಲ್ಲಿಸಿ ತನ್ನ ಗುರಿಯನ್ನು ಕಂಡುಕೊಳ್ಳಲು ಇವರ ಬಳಿಗೆ ವಾಪಸ್ ಬರುತ್ತೇನೆಎಂದು ಪತ್ರ ಬರೆದಿರುತ್ತಾಳೆ. ಅವಳನ್ನು ಕರೆದುಕೊಂಡು ಬರಲು ರಂಗನಾಥ ಹೊರಟಿರುತ್ತಾನೆ. ಒಂದು ವರ್ಷದ  ಓದು ನಿಲ್ಲಿಸುವುದೆಂದರೆ ಎಷ್ಟೊಂದು ಪ್ರತಿಸ್ಪರ್ಧೆ ಮತ್ತು ಅದು ಅವಳ ಭವಿಷ್ಯಕ್ಕೆ ಮಾರಕ ಎಂಬುದು ಸುಧಾ ರಂಗನಾಥ್  ದಂಪತಿಗಳ ಅಭಿಪ್ರಾಯ. ಆದರೆ ಅವಳನ್ನು ವಿರೋಧಿಸಲು ಇಷ್ಟವಿರುವುದಿಲ್ಲ ಈ ತಾಕಲಾಟದ ಮಧ್ಯೆ ಬಂದು ಮಿತ್ರರಿಗೆ ಉತ್ತರಿಸ ಬೇಕಾದ ಫಜೀತಿಯನ್ನು ನೆನೆಸಿಕೊಂಡು ಅವರಿಗೆ ಕಸಿವಿಸಿ. ಸರಕಾರಿ ಕಾಲೇಜಿನ ರೀಡರ್ ವೃತ್ತಿಯನ್ನು  ಬಿಟ್ಟು ಪ್ರತಿಷ್ಠಿತ ಟುಟೋರಿಯಲ್ ಕಂಪನಿಯಲ್ಲಿ ಕೆಲಸ ಹಿಡಿದಿದ್ದ ರಂಗನಾಥ ಕೈ ತುಂಬಾ ಸಂಪಾದಿಸಿ ಆಸ್ತಿಪಾಸ್ತಿ ಸೈಟು ಎಲ್ಲವನ್ನು ಮಾಡಿಕೊಂಡಿರುತ್ತಾನೆ . ಸುಧಾ ಶಾಲಾ ಶಿಕ್ಷಕಿ ಆದರೆ ಎಲ್ಲದರ ಮಧ್ಯೆಯು ಒಂದು ರೀತಿಯ ಖಾಲಿತನ ದ್ವಂದ್ವ ಕಾಣುತ್ತಿರುವ ರಂಗನಾಥನಿಗೆ ಮಗಳ ಅಂತರ್ಯವನ್ನು ಅರಿಯುವ ಕುತೂಹಲ.  ಆ ಪ್ರಯತ್ನದಲ್ಲಿ ಮುಂದುವರೆದಿರುತ್ತಾನೆ.

ರಂಗನಾಥನಿಗೆ ವಿದ್ಯಾರ್ಥಿಗಳ ಕ್ಯಾಂಪ್ ಒಂದರಲ್ಲಿ ಪರಿಚಯವಾದ ರಜನಿ ಮೇಡಂ ಹಾಗೂ ಅವರ ಪತಿ ವಿನೋದ್ ಅವರ ಸಂಸಾರದ ವಿಷಯ ಸಾಮಾಜಿಕ ಸೇವೆಯ ವಿಷಯ ಇದರಲ್ಲಿ ಬಂದಿದೆ. ಸಮಾಜವಾದ ದ ತಿರುಳನ್ನು ಅರ್ಥೈಸುವ ಪ್ರಯತ್ನ ಈ ಪಾತ್ರಗಳ ಮೂಲಕ.ಯಾರಿಗೂ ಮನಸ್ಸು ಬಿಚ್ಚದ ರಮೇಶನಿಗೆ ರಜನಿ ಮೇಡಂ ಅವರ ಬಳಿ ಮಾತ್ರ ಮನದಾಳದ ಮಾತುಗಳು ಸಲೀಸಾಗಿ ಬರುತ್ತವೆ..

ಇವರ ಉದಾಹರಣೆಯ ಮೂಲಕ ಹಾಗೂ ಮ್ಯಾಗ್ಸೇಸ್ಸೇ ಪ್ರಶಸ್ತಿಗೆ ಭಾಜನರಾದ  ರಜನಿಯವರ ಗೆಳತಿ ಪ್ರಭಾದೇವಿ ಇವರ ಮೂಲಕ ಸಮಾಜ ಸೇವೆಯ ವಿವಿಧ ಮಜಲುಗಳನ್ನು ಇಲ್ಲಿ ಲೇಖಕರು ತೆಗೆದಿಡುತ್ತಾರೆ. ನಂತರ ರಂಗನಾಥನ ಸೋದರ ಶಂಕರ್ ಹಾಗೂ ಅವರ ಪತ್ನಿ ಭಾರತಿ ನಡುವಣ ಭಿನ್ನಾಭಿಪ್ರಾಯ ತಪ್ಪು ಗ್ರಹಿಕೆಗಳು ಹಣದ ಹಿಂದೆಯೇ ಹೋಗುವ ಇಂದಿನ ತಲೆಮಾರಿನ ಸ್ವಭಾವವನ್ನು ವಿವರಿಸುತ್ತದೆ. ರಮೇಶನ ಸಂಬಂಧಿ ಮುತ್ತುಸ್ವಾಮಿ ರಿಯಲ್ ಎಸ್ಟೇಟ್ ದಂಧೆಯನ್ನು ಮಾಡಿಕೊಂಡು ಹೋಗುವುದು ಅವನ ತಂದೆ ಮೂರ್ತಿ ಅವರ ರಾಜಕೀಯ ಜೀವನದ ಡೈರಿ ಅದನ್ನು ಪುಸ್ತಕ ಮಾಡುವುದು ಇವೆಲ್ಲಾ ಉಲ್ಲೇಖವಾಗುತ್ತದೆ. ಮತ್ತೊಬ್ಬ ಸಂಬಂಧಿ ಪವಿತ್ರ ದುಬೈಗೆ ತನ್ನ ಕೆಲಸದ ಮೇಲೆ ಹೋಗುವುದು ಹಾಗೂ ಅವಳ ಗೆಳತಿ ಪರಮೇಶ್ವರಿ ಅವಳ  ಎರಡು ಮೂರು ವಿವಾಹಗಳ ವಿಷಯ ಎಲ್ಲವೂ ಇಂದಿನ ಸಾಮಾಜಿಕ ಜೀವನಕ್ಕೆ ಹಿಡಿದ ಕನ್ನಡಿ ಆಗುತ್ತದೆ.

ರಜನಿಯವರು ನಡೆಸುತ್ತಿದ್ದ ಜಯಸಲ್ಮೇರ್ ನ ಸಂಸ್ಥೆಗೆ ರಂಗನಾಥ ಹಾಗೂ ಪ್ರಾರ್ಥನಾ ಕೊಡುವ ಭೇಟಿ ಅಲ್ಲಿನ ಪರಿಸರದ ವಿವರಣೆ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಹಾಗೆಯೇ ರಮೇಶ ನೆನಪಿಸಿಕೊಳ್ಳುವ ಇವರ ತಂದೆ ಚಿಕ್ಕಪ್ಪನ ಹೆಂಡತಿ ಹಾಗೂ ಮಗನನ್ನು ಮನೆಯಿಂದ ಹೊರಗೆ  ಆಸ್ತಿಯಲ್ಲಿ ಪಾಲು ಕೊಡದೆ ಕಳುಹಿಸುವ ಸಂದರ್ಭ;> ಹಿರಿಯರ ಊರಿನ ಮನೆಯನ್ನು ಮಾರಿದಕ್ಕೆ ಮಗಳು ಪ್ರಾರ್ಥನಾ ಆಕ್ಷೇಪಿಸುವ ಪರಿ ; ತಾನು ಅಲ್ಲಿಗೆ ಹೋಗಿ ಭೇಟಿ ಕೊಡುವುದು ನಮ್ಮಲ್ಲಿ ಇರುವ ಹಳೆಯ ನಂಟಿನ ಅಂಟುಗಳನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ ಎಂಬ ಸಂಗತಿಯನ್ನು ನೆನಪಿಸುತ್ತದೆ. ಹಾಗೆಯೇ ಚಿಕ್ಕಮ್ಮನಿಗೆ ಆದ ಮೋಸ ಮನೆಯ ದಾಳಿಂಬೆ ಗಿಡ ಅರ್ಧ ಭಾಗ ಹಣ್ಣು ಕೊಡದಿದ್ದು ಈಗ ಬೇರೆಯವರು ಮನೆಯನ್ನು ಕೊಂಡ ಮೇಲೆ ಪೂರ್ತಿ ಮರ ಫಲ ಭರಿತವಾಗಿರುವುದು ಕರ್ಮಶೇಷಗಳಿಂದ ಯಾರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ನಂಬಿಕೆಯನ್ನು ದೃಢಪಡಿಸುತ್ತದೆ . ಈ ಎಲ್ಲಾ ಅಯೋಮಯಗಳ ನಡುವೆ ಮಗ ವಿಕ್ರಂ ವಿದೇಶದಲ್ಲಿ ನೆಲೆಸಿರುವ ಬೇರೆ ಜಾತಿಯವರ ಮಗಳನ್ನು ಮದುವೆಯಾಗುವುದು ಹಾಗೂ ಅವರಿಗಿದ್ದಷ್ಟು ಧರ್ಮನಿಷ್ಠೆಯ ಸ್ವಭಾವ ತಮ್ಮಲ್ಲಿ ಬೆಳೆಸದಿದ್ದಕ್ಕೆ ತಂದೆಯನ್ನು ಆಕ್ಷೇಪಿಸುವುದು “ಇರುವುದೆಲ್ಲವ ಬಿಟ್ಟು ಇರದುದಕ್ಕೆ” ತುಡಿಯುವ ಮನುಜ ಸ್ವಭಾವದ ಉದಾಹರಣೆಯಂತೆ ತೋರುತ್ತದೆ. ಪ್ರಾರ್ಥನಾ ತನ್ನ ತಂದೆ ತಾಯಿಯರ ದಾಂಪತ್ಯದ ಬಗ್ಗೆ ವಿಶ್ಲೇಷಣೆ ಮಾಡುತ್ತಾ ರಮೇಶ ಸ್ವಾರ್ಥಿಯಾಗಿ ಸುಧಾಳನ್ನು ಬೆಳೆಯಲು ಬಿಡಲಿಲ್ಲ ಎಂದು ದೂರುತ್ತಾಳೆ. ತನ್ನ ತಾಯಿಗೆ ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳುವಂತೆ ಬಿಟ್ಟುಹೋದ ವೀಣಾವಾದನವನ್ನು ಪುನರಾರಂಭಿಸುವಂತೆ ಸೂಚಿಸುತ್ತಾಳೆ.

ಸಂಸಾರದಲ್ಲಿನ ಅನುಬಂಧ ಸಂಬಂಧಗಳ ಬಗ್ಗೆ ವಿಶ್ಲೇಷಣೆ ನಡೆಸುತ್ತಾ ಒಂದು ಗಟ್ಟಿ ನಿರ್ಧಾರಕ್ಕೆ ಬಂದು ಆ ಬಗ್ಗೆ ಕಾದಂಬರಿ ಬರೆಯುವ ತನ್ನ ತೀರ್ಮಾನವನ್ನು ಪ್ರಾರ್ಥನಾ ಹೇಳುತ್ತಾಳೆ .ಹೊಸದೊಂದು ತುಡಿತ ಅಥವಾ ಪುಳಕವನ್ನು ಅನುಭವಿಸುವ ಹೊಸದೇನಾದರೂ ಸಾಧಿಸುವ ನಿಟ್ಟಿನಲ್ಲಿ ಸುಧಾ ಒಂದು ಯೋಗ ತರಬೇತಿ ಶಿಬಿರಕ್ಕೆ ಶಿಬಿರಾರ್ಥಿಯಾಗಿ ಹೋಗುತ್ತಾಳೆ. ರಮೇಶನು ಇದ್ದಕಿದ್ದಂತೆ ಕೋಚಿಂಗ್ ಸೆಂಟರ್ ಮೇಲೆ ಆಪಾದನೆ ಬಂದು ಅದು ಮುಚ್ಚುವಂತಹ ಸ್ಥಿತಿಗೆ ಬರಲು ತನ್ನವೃತ್ತಿಯನ್ನೇ ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳುತ್ತಾನೆ. ಏತನ್ಮಧ್ಯೆ ಇದಕ್ಕಿದ್ದಂತೆ ಒಂದು ದಿನ ತನ್ನ ಹುಟ್ಟೂರಿಗೆ ಭೇಟಿ ನೀಡುತ್ತಾನೆ. ಅಲ್ಲಿ ಕೆರೆಯ ಅಂಚಿನಲ್ಲಿ ಕುಳಿತಾಗ ತನ್ನ ತಂದೆ ತಾಯಿಯರು ಬಂದು ಮಾತನಾಡಿದಂತೆ ಅನ್ನಿಸುತ್ತದೆ. ಅದೇ ಸಮಯಕ್ಕೆ ಮಗಳ ಕಾದಂಬರಿಯ ಅಂತಸ್ಸತ್ವದ ಹೊಳಹು  ಬರೆಯುವಿಕೆಯ ನಿರ್ಧಾರವನ್ನು ತಿಳಿಸುವ ಮೆಸೇಜ್ ಸಹ ಬಂದು ಒಂದು ಹೊಸ ಆರಂಭದ ಮುನ್ಸೂಚನೆಯ ಸುಳಿವು ಬಂದಂತೆ ಆಗುತ್ತದೆ . ಬಹುತೇಕ ಎಲ್ಲಾ ಪಾತ್ರಗಳಿಗೂ ಅವರವರು ಅರಸಿ ಹೋದ ಜಾಡಿನಲ್ಲಿ ಗಮ್ಯ ಕಾಣುತ್ತಾ ಒಂದು ರೀತಿಯ ಸುಖಾಂತ. ಆದರೆ ಇವೆಲ್ಲವೂ ಗೆರೆ ಕೊಯ್ದಿಟ್ಟಂತೆ ,ಕಥೆ ಬರೆದಂತೆ ಆಗದೆ ಈ ಅಂತ್ಯ ಮತ್ತೊಂದು ಆರಂಭದ ಸೂಚನೆ ಎಂಬಂತೆ ತೋರುವುದು ಕಥೆಯ ನಿರೂಪಣೆಯ ತುಂಬಾ ಪ್ರಮುಖ ವಿಧಾನ.  ಅಲ್ಲದೆ ಪಾತ್ರಗಳ ಮೂಲಕವೇ ಸಾಮಾಜಿಕ ಸ್ಥಿತಿಯಂತರಗಳು, ಬದಲಾಗುತ್ತಿರುವ ಮನೋಭೂಮಿಕೆಗಳು ಇವೆಲ್ಲವೂ ಚಿತ್ರಿತವಾಗುತ್ತಾ ಹೋಗುತ್ತದೆ . ರಮೇಶನ ಸ್ವಗತವಾದರೂ ಇಡೀ ಒಂದು ಕಾಲಘಟ್ಟದ ಮಧ್ಯಮ ವರ್ಗದ ಸಮಾಜದ ಪ್ರತಿಬಿಂಬ, ವಿವಿಧ ವ್ಯಕ್ತಿತ್ವಗಳ ರಂಗಭೂಮಿಯಂತೆ ತೋರುತ್ತದೆ. ಹಾಗಾಗಿ ನಮ್ಮ ನಿಮ್ಮದೇ ಕಥೆ ಎನಿಸುವಂತಹ ಆಪ್ತತೆ ಮೂಡುತ್ತದೆ ಕಥೆ ಗೆಲ್ಲುತ್ತದೆ.

ಕಥೆಯ ಶೀರ್ಷಿಕೆ ಬಗ್ಗೆ ನನ್ನ ಅನಿಸಿಕೆ ಜಿಂಕೆ ವೇಗವಾಗಿ ಸರಿದು ಹೋಗಿಬಿಡುತ್ತದೆ ಅದನ್ನು ಹಿಡಿಯಲು ಸಾಧ್ಯವಿಲ್ಲ ಎಂಬುದು ಒಂದು ಅರ್ಥ.  ಮತ್ತೊಂದು ಕಾಲದ ಜಿಂಕೆ ಎಂದರೆ ಮಾಯಾಜಿಂಕೆ ಮರೀಚಿಕೆ ಅದರ ಹಿಂದೆ ಹೋಗುವುದು ವ್ಯರ್ಥ ಎಂದು ಮತ್ತೊಂದು ಅರ್ಥ.

ನನ್ನ ಮನ ಮೆಚ್ಚಿದ್ದು ಈ ಸಾಲುಗಳು

ಮಗ ವಿಕ್ರಂ ತಾನೇ ಮೆಚ್ಚಿ ಮದುವೆಯಾಗುತ್ತಿರುವ ವಿಷಯ ತಿಳಿದ ಸುಧಾ “ಮಕ್ಕಳಿಗೆ ತಂದೆ ತಾಯಿಯರು ಯಾವ ಹಂತದಲ್ಲಿ ಸಾಕೆನಿಸುತ್ತಾರೆ; ಯಾವ ಹಂತದಲ್ಲಿ ಬೇಕೆನಿಸುವುದಿಲ್ಲ ಹೇಳಿ” ಎಂದು ಕೇಳಿದಾಗ ರಂಗನಾಥನು “ಮಕ್ಕಳು ದೂರವಾಗುವುದಿಲ್ಲ; ದೂರವಾದರು ಅಂತ ನಾವು ಅಂದುಕೊಳ್ಳುತ್ತೇವೆ ಅಷ್ಟೇ. ಅವರು ಸ್ವತಂತ್ರರಾಗ್ತಾರೆ ಅಷ್ಟೇ” ಎನ್ನುತ್ತಾನೆ.  ನಿಜ ಅಲ್ಲವೇ?


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top