ಜಯಂತಿ ಸುನಿಲ್-ಗಜಲ್

ಕಾವ್ಯ ಸಂಗಾತಿ

ಗಜಲ್

ಜಯಂತಿ ಸುನಿಲ್

.

ಲೌಕಿಕದ ಜನರು ನಾವು ನೂರು ಖಯಾಲಿಗೆ ಅಂಟಿಕೊಂಡವರು
ಬುದ್ಧಿಜೀವಿಗಳು ನಾವು ಒಂದೇ ಹದದಲ್ಲಿ ಬದುಕುವ ಕಲೆಗೆ ವಂಚಿತರಾದವರು..!!

ಬೆರಕೆಗೊಂಡ ಮನುಜ ಮತಗಳಲಿ ಕರುಳಿನ ಲೆಕ್ಕವನೇ ಮರೆತಿಹೆವು..
ನೆತ್ತರು ಹರಿಸಲು ಸೈ ನಾವು.. ಧರ್ಮಗಳಿಗೆ ಕವಚವಾದವರು!!

ಬೆತ್ತಲೆ ಮುಚ್ಚಿಟ್ಟುಕೊಳ್ಳುವಷ್ಟು ಬಟ್ಟೆ ಸಾಕಾಗದು ನಮಗೆ
ಹಲವು ವೇಷಧಾರಿಗಳು ನಾವು ನಟನೆಗೆ ಮುಖವಾಡವಾದವರು..!!

ಮಳೆ ಬಿದ್ದರೂ ಇಳೆಗೆ ತೊಳೆಯಲಾಗುತ್ತಿಲ್ಲಾ ಮನುಜರ ಪಾಪವನ್ನು..
ಎದೆಯಗಲಕ್ಕೂ ದ್ವೇಷವನ್ನೇ ತುಂಬಿಕೊಂಡವರು ನಾವು ಪ್ರೀತಿಗೆ ಬೆನ್ನುತೋರಿದವರು..!!

ಹೊಟ್ಟೆ ಹಸಿದಾಗಲೋ? ತುಂಬಿ ಬಿರಿದಾಗಲೋ? ಹಾಡು ಹುಟ್ಟುತ್ತಿಲ್ಲಾ ಇಲ್ಲಿ
ಒಬ್ಬರನ್ನೊಬ್ಬರು ಪೂರ್ಣ ಅರಿಯದವರು ನಾವು ನಂಬಿಕೆಗೆ ಗೋಡೆಯಾದವರು..!!

ಬದುಕಿನ ರಂಗಿನಾಟದಲ್ಲಿ ಬಣ್ಣ ಕಳಚುತ್ತಿವೆ ನಾವು ಕಟ್ಟಿಕೊಂಡ ಭ್ರಮೆಗಳು..
ಶಾಂತಿ ಮಂತ್ರವನ್ನು ಪಠಿಸುವವರು ನಾವು ಒಳಗೊಳಗೆ ಕತ್ತಿ ಮಸೆದವರು..!!

ಮೌನವೆಲ್ಲಾ ಮಾತಾಗಿ ಮಾತೆಲ್ಲಾ ಮೌನವಹಿಸಿದರೆ ಯುದ್ಧಕ್ಕೆ ಜಯವೆಲ್ಲಿದೆ..?
ಸೊರಗಿದ ಎದೆಗಳಲ್ಲಿ ಪ್ರೀತಿ ಹೂ ಅರಳಿಸಬಲ್ಲವರು ನಾವು.. ಜಿದ್ದಿಗೆ ದಾಸರಾದವರು!!



One thought on “ಜಯಂತಿ ಸುನಿಲ್-ಗಜಲ್

Leave a Reply

Back To Top