ಕಾವ್ಯಸಂಗಾತಿ
ಕೊಡೆಯ ಸ್ವಗತ
ಶಂಕರಾನಂದ ಹೆಬ್ಬಾಳ
ತೂತು ಬಿದ್ದ ಛತ್ರಿ,
ಮೂಲೆಯಲ್ಲಿ ನೇತಾಡುತ್ತಿದೆ..!
ಉರುಳು ಹಾಕಿದ ಖೈದಿಯಂತೆ
ಜೋತು ಬಿದ್ದ ಹಣ್ಣಿನಂತೆ….
ಒಳಗೊಳಗೆ ಕೊರಗುತ್ತಿದೆ…!!
ಜೇಡವು ತನ್ನ ಸಾಮ್ರಾಜ್ಯ
ವಿಸ್ತರಿಸುತ್ತಿದೆ..
ಅಜ್ಜನ ಕಾಲದಿ ಇದರ ವೈಭವವೇನು…?
ಇದರ ಜರ್ಬೇನು…?
ಕಪ್ಪು ಬಟ್ಟೆಯ ನಯನಾಜೂಕಾದ
ಛತ್ರಿ…..
ಮೊದಲಿನ ಅಂದವಿಲ್ಲ
ಹಾಕಿ ಹುಡುಕಿದೆ ದುರ್ಬೀನು…?
ಈಗ ಅದು ಗುಬ್ಬಚ್ಚಿಗಳ ತಾಣ
ಜಿರಲೆ ಇರುವೆಗಳ ಶಾಶ್ವತ ಮನೆ..
ಆಗಾಗ,…!
ಚಿಕ್ಕ ಪುಟ್ಟ ಹಾವುಗಳು
ಇದರೊಳು ಎಲ್ಲೆಂದರಲ್ಲಿ ಪ್ರತ್ಯಕ್ಷ….
ಈಗೀಗ…!!
ಮಳೆಗಾಲದಲ್ಲಿ ನಿನ್ನ ನೆನಪು
ಈಗ ಬಳುಕುವ ನೀರೆಯರಿಗೆ
ಬಿಸಿಲ ಕಿರಣಕೆ ಆಸರೆಯಾದೆ
ನಲ್ಲೆಯ ಇನಿಯನಂತೆ….!
ಈಗ ಒಳಗಿನ ಕಳ್ಳುಗಳೆಲ್ಲ
ಕಿತ್ತು ಮೂಲೆ ಸೇರಿದೆ….
ಕಾಲು ಮುರಿದ ಮುದುಕನಂತೆ…!!
ಈಗಲೂ ಇದೆ,
ಅದೇ ಹಳೆಯ ಛತ್ರಿ….
ತನ್ನದೆ ಒನಪಿನಲ್ಲಿ…!
ಮೂಲೆಯಲ್ಲಿ ಜೋತಾಡುತ್ತ
ವಿರಹ ಗೀತೆ ಹಾಡುತ್ತಿದೆ
ಸ್ವಗತದ ಧಾಟಿಯಲ್ಲಿ…!!