ಹಮೀದಾ ಬೇಗಂ ದೇಸಾಯಿ-ಗಜಲ್

ಕಾವ್ಯ ಸಂಗಾತಿ

ಗಜಲ್

ಹಮೀದಾ ಬೇಗಂ ದೇಸಾಯಿ

ಜರಡಿಯಲಿ ಹಾಕಿದ ಮರಳಂತೆ ಸಮಯ ಜಾರುತಿದೆ ನೋಡು
ಭವಿಷ್ಯದ ಗಳಿಗೆಗಳು ಮೆಲ್ಲಗೆ ಬರುವುದು ತೋರುತಿದೆ ನೋಡು

ಇನ್ನೂ ಆಲಸ್ಯವೇಕೆ ನಿನಗೆ ನಿದ್ದೆಯಿಂದ ಎಚ್ಚರಾಗಲು ಸಾಕಿ
ಮಾಳಿಗೆಯ ಕಿಟಕಿಯಿಂದ ಬೆಳಕು ಸಣ್ಣಗೆ ಸೋರುತಿದೆ ನೋಡು

ಹೊರಳಾಡಬೇಡ ಮತ್ತೆ ಅದೇ ಹಳಸಿದ ಕನಸುಗಳ ನೆನೆಯುತ
ಹೊತ್ತು ಮೇಲೇರಿ ಸುತ್ತ ಬಿಸಿಲು ಕಾರುತಿದೆ ನೋಡು

ಜಿಡ್ಡಾದ ಮನದ ಭಾವಗಳ ತೊಳೆದುಕೋ ಎದ್ದು ಬೇಗ
ಸೊಕ್ಕಿದ ದೇಹದಿ ಮದದ ಕಶ್ಮಲ ನಾರುತಿದೆ ನೋಡು

ಸುಂದರ ಜೀವನ ನಿನ್ನ ಎದುರು ನಿಂತಿದೆ ಬೇಗಂ
ನಗುತ ಸಂತಸದಿ ಅನುಭವಿಸು ಕಾಲ ಮೀರುತಿದೆ ನೋಡು


Leave a Reply

Back To Top