ಕಾವ್ಯ ಸಂಗಾತಿ
ನಮ್ಮವರ ಮಧ್ಯೆ
ಯೋಗೇಂದ್ರಾಚಾರ್ ಎ ಎನ್
ನಮ್ಮದೇ ಕಪ್ಪು ಸಾಸರ್
ನಮ್ಮದೇ ತಟ್ಟೆ ಚಮಚ
ನಮ್ಮದೇ ಮನೆಯ ಕೀಲಿ ಕೈಗಳನ್ನೂ
ನಂಬುವುದೇ ಕಷ್ಟವಾಗಿದೆ
ಎದೆ ಹಾಲನ್ನು ಕುಡಿದು
ಗರ್ಭಕ್ಕೆ ಕಿಚ್ಚನ್ನಿಕ್ಕುವ
ಕುನ್ನಿಗಳು
ಬೀದಿ ಬೀದಿಗಳಲ್ಲಿ
ಓಡಾಡುತ್ತಿದ್ದಾರೆ
ವಿರೋಧವಿರಲಿ
ಪರ ನಿಂತು ನೆಗೆದಾಡುವ
ಮಾಲಿಕರಿಗೂ ಇಲ್ಲಿ
ಮಾನ ಸಮ್ಮಾನಗಳು
ವಿಚಿತ್ರವಾದರೂ ಸತ್ಯ ಗೆಳೆಯ
ಕನ್ಸಲ್ಟೇಶನ್ ಗೂ ನಿಲುಕದ
ಕತ್ತಲಲ್ಲಿ ಕೂತು
ಬೆಳಕಲ್ಲಿ ಕೂತವರನ್ನು
ದೂರುವ
ನರ ಹಂತಕರು
ನರಕ ದರ್ಶಕರು
ಹೆತ್ತೊಡಲನ್ನೇ ಬಗಿದು
ಪತಾಕೆಯನ್ನೇರಿಸುವ
ಹುಕುಂ ಪಡೆದವರ
ಮನೆ ಮಂದಿಯ ಕೂಗು
ಕೆಲವರಿಗೆ ಕಳವಳ
ಕೆಲವರಿಗೆ ಕವಳ
ಮತ್ತೆ ಕೆಲವರಿಗೆ
ಡಾಂಬಾರು ರಸ್ತೆಯ
ಒಂದೊಂದು ಜಲ್ಲಿ ಕಲ್ಲುಗಳ
ಸಮಾಧಿಯ ಮೇಲೆ
ಮನೆ ಕಟ್ಟುವ ಧವಳ
ಯಾರನ್ನು ನಂಬುವುದು
ಯಾರನ್ನು ಬಿಡುವುದು
ನಂಬಿಕೆಯೇ ಮಾರುಹೋಗಿದೆ
ಕನ್ನಡಿಯು ಮಾಸಿಹೋಗಿದೆ
Superb sir
*ತಮ್ಮ ಕಾವ್ಯ ಕೃಷಿಗೆ ಅಭಿನಂದನೆಗಳು*
ನಾಗರಾಜ ಅಗಸನಹಳ್ಳಿ ಖಜಾಂಚಿ
KSGEA ಹಾನಗಲ್ಲ
HM GHPS ನಿಟಗಿನಕೊಪ್ಪ