ಮಂಜುನಾಥ ನಾಯ್ಕ ಕವಿತೆ-ಅರ್ಧ ಸತ್ಯ

ಕಾವ್ಯ ಸಂಗಾತಿ

ಅರ್ಧ ಸತ್ಯ

ಮಂಜುನಾಥ ನಾಯ್ಕ

ಕಾಳ ರಾತ್ರಿಯಲ್ಲಿ ಕಿರುಬೆರಳನ್ನು ಹಿಡಿದು ನುಣ್ಣಗೆ
ನಡೆಯಬಾರದಿಲ್ಲಿ ಕತ್ತಲೆ ನೆತ್ತಿಗೇರುವ ಸರಿಹೊತ್ತಿನಲ್ಲಿ
ಅಂಗೈಯೇ ಕತ್ತಲೆಗೆ ನೆರಳಾಗುವ ತಿಳಿಹೊತ್ತಲ್ಲಿ

ಹಚ್ಚಿಟ್ಟ ದೀಪದ ದೇದೀಪ್ಯಮಾನ ಬೆಳಕಲ್ಲಿ
ತುಂಡು ರಾತ್ರಿಯೊಂದು ಬೆಳಕಿನ 
ಕನ್ನಡಿಯಲ್ಲಿ  ಮುಖ ಸಿಂಡರಿಸಿಕೊಂಡು
ಮತ್ತೆ ಮತ್ತೆ ಹಾದ ಬಿರುಗಾಳಿಗೆ ಮೈಯೊಡ್ಡಿ
ದೀಪದೆದೆಯಲ್ಲಿ ಅಗ್ನಿ ಗೂಡುಕಟ್ಟಿ
ದೀಪದ ಮುಖ ಕರ್ರಗಾಗಿ ಕತ್ತಲು ನೆರೆಯುತ್ತದೆ
ಅನಂತ ಆಕಾಶವೂ ಮೌನ ತಬ್ಬುತ್ತದೆ

ಎದೆ ಎದೆಯಲಿ ಚಿಗುರಿದ ಪ್ರೀತಿ
ಪೃಣತೆಯ ಕವಲು ದಾರಿಯಲಿ
ಒಬ್ಬಂಟಿ ಬಿಟ್ಟುಹೋಗಬಾರದಿಲ್ಲಿ
ಕಾದು ಕುಳಿತ ಕಾಳ್ಗಿಚ್ಚಿನ ಕಾಡ ಸಂಚಿನಲ್ಲಿ

ಕರಾಳತೆಯ ಮುಖವಾಡದ ಕತ್ತಲಿನಲ್ಲಿ
ಬೆಳಕಿನ ಹಾದಿ ಸುಗಮವಲ್ಲ
ಅದಕ್ಕೆ ರಾತ್ರಿ ಸೂರ್ಯನಿಲ್ಲ

ಇರುಳು ನಕ್ಕಂತೆ ಕಂಡರೂ
ನಂಬಬಾರದು
ಹಸೀ ರಾತ್ರಿಯಲ್ಲಿ ಕಂಡದ್ದೆಲ್ಲವೂ
ಸತ್ಯವಲ್ಲ

ಕಗ್ಗತ್ತಲ ಕ್ರೂರತೆಗೆ ಬೆಚ್ಚಿಬಿದ್ದ ಆರ್ದ್ರತೆಯ ತುಟಿಗಳು
ಅಮರ ಗೀತೆಯ ಗುನುಗುವುದಿಲ್ಲ
ಕಪ್ಪಿಟ್ಟಿರುವ ಅನಂತ ಆಕಾಶಕ್ಕೆ
ನಕ್ಷತ್ರದ ಹಾದಿ ಕಾಣುವುದಿಲ್ಲ

ನಿಂತಂತೆ ಭ್ರಮಿಸಿರುವ ಮಲಗಿರುವ ಮರ
ನೆರಳು ಬೀಳದೆ ಮೈಯೊರಗಿದ ಕತ್ತಲೆಯ ಗರ್ಭದಲ್ಲಿ ಬೀಜಾಂಕುರ
ಬೆಳಕಿನ ಮುಖ ಅದಿನ್ನೂ ದೂರ

ಮರಣದ ತೊಟ್ಟಿಲಲ್ಲಿ ಮಿಸುಕಾಡುವ ಸಂಜೆ
ಬೈಗು ನುಂಗಿದ ಇರುಳ ರಾತ್ರಿಯಲ್ಲಿ
ಅರ್ಧ ಚಂದ್ರನ  ದರ್ಶನ

ಸತ್ತಂತೆ ನಟಿಸುವ ಬೆಳಕು ಹಾಯುವವರೆಗೂ
ನಿಶಾಚರ ರಾತ್ರಿಯ ಕಾರುಬಾರು
ಅರ್ಧ ಸತ್ಯ ಮಾತ್ರ


One thought on “ಮಂಜುನಾಥ ನಾಯ್ಕ ಕವಿತೆ-ಅರ್ಧ ಸತ್ಯ

Leave a Reply

Back To Top