ಕಾವ್ಯ ಸಂಗಾತಿ
ಅನಾವರಣ
ಮಹೇಶ್ ಹೆಗಡೆ ಹಳ್ಳಿಗದ್ದೆ
ಒಮ್ಮೆ ನಿನ್ನೆದುರು
ಬೆತ್ತಲಾಗಬೇಕೆಂದುಕೊಳ್ಳುತ್ತೇನೆ,
ಆಗುತ್ತಿಲ್ಲ…..
ಹುಟ್ಟುವಾಗ
ನಿಜಾರ್ಥದಲ್ಲಿ ಬೆತ್ತಲಾಗೇ ಇದ್ದೆ,
ಒಳಗೂ ಹೊರಗೂ…
ಕಾಲಚಕ್ರ ಉರುಳಿದಂತೆ
ಕಾದ ಮನದ ಮೇಲೆ ಬಿದ್ದ
ಕಾಮನೆಗಳಾವುದೂ ಆವಿಯಾಗಲೇ ಇಲ್ಲ,
ದೇಹಕ್ಕೆ ಹೊದೆಸಿದ ಹೊದಿಕೆಯು
ಬೇಡವೆನಿಸಲಿಲ್ಲ,
ಕಣ್ಣು ಕಂಡಿದ್ದು ಕಿವಿ ಕೇಳಿದ್ದು ಎಲ್ಲವೂ
ಚಿತ್ತದ ಗೋಡೆಗೆ ಅಂಟಿಕೊಳ್ಳತೊಡಗಿತ್ತು.
ದಾಹಕ್ಕೆ ದಾಸನಾಗಿಬಿಟ್ಟೆನೇ….!
ಮನಸ್ಸು
ಹೊಸ ಹೊಸ ಬಣ್ಣಗಳನ್ನು
ಎಳೆದುಕೊಂಡು ಬಳಿದುಕೊಳ್ಳುತ್ತಲೇ ಇದೆ
ತೊಳೆದುಕೊಳ್ಳುವ ಇರಾದೆ ಮಾತ್ರ
ಇನ್ನೂ ಇಲ್ಲ
ಆವರಣವ ಸರಿಸಿ
ನಿನ್ನಮುಂದೆಲ್ಲವನ್ನೂ
ಅನಾವರಣ ಮಾಡುವ ಹೊತ್ತು
ಇನ್ನೂ ಬಂದಿಲ್ಲ
ಕಾಯುತ್ತೇನೆ….