ಕೆ ಶಶಿಕಾಂತರವರ ಕವಿತೆ-ಮಗು ಮತ್ತು ಅಮ್ಮ

ಕಾವ್ಯ ಸಂಗಾತಿ

ಮಗು ಮತ್ತು ಅಮ್ಮ

ಕೆ ಶಶಿಕಾಂತ

ಮಗು:
ಕಾಡೊಳಗಿರುವ ಕೋತಿಗಳೆಲ್ಲ
ಊರೊಳಗಿನ ಗಿಡದಲ್ಲೇಕಮ್ಮ?
ನಮ್ಮ ಗಿಡದಲೇ ಕುಂತರೂ ಕೂಡ
ನಮಗೇ ಹೆದರಿಸುವವು ನೋಡಮ್ಮ.
ಅಮ್ಮ:
ಕಾಡಿನ ಕೋತಿ ಊರಿಗೆ ಬರಲು
ಕಾರಣವೇನು ಕೇಳು
ತಿನ್ನಲು ಹೊಟ್ಟೆಗೆ ಇಲ್ಲದೆ ಇರಲು
ಅವು ಮಾಡುವುದೇನು ಹೇಳು
ಮಗು:
ನೀನು ಕೊಟ್ಟ ರೊಟ್ಟಿಯ ಹಿಡಿದು
ತಿನ್ನಲು ಕುಂತರೆ ನಾವು
ಗಿಡದ ಮೇಲಿಂದ ಹಾರುತ ಓಡುತ
ಕಸಿಯಲು ಬರುವವು ನೋಡು.
ಅಮ್ಮ:
ನಾವುಗಳೆಲ್ಲ ಕಾಡಿಗೆ ಹೋಗಿ
ಬಿಡದೇ ಗಿಡಗಳ ಕಡಿದು,
ಅನ್ನ ನೀರು ಸಿಗದಿರೆ ಜೀವವು
ಬದುಕುವುದು ಎಂತು ಹೇಳು….
ಮಗು:
ದೂರದಿ ಕುಂತು ಒದರುತ, ಚೀರುತ
ಹೊಂಚು ಹಾಕುತಿದೆ ನೋಡು,
ತಿನ್ನಲು,ಉಣ್ಣಲು ಕುಳಿತರೆ ನಾವು
ದುರುಗುಟ್ಟುವದದು ಕಾಣು…
ಅಮ್ಮ:
ನೇರಳೆ ಹಣ್ಣು,ಮಾವಿನ ಹಣ್ಣು
ಕಾಡಲಿ ಸಿಗದು ಈಗ,
ಅವಗಳನೆಲ್ಲ ತೋಟದಿ ಬೆಳೆಸಲು
ನರಳಿತು ಈ ಜೀವವು ನೋಡ.
ಮಗು:
ಚಿನ್ನು ನಾನು ಸುತ್ತಿದ ರೊಟ್ಟಿಯ
ಹಿಡಿದು ತಿನ್ನುತಲಿರಲು
ನೀನು ಒಳಗಿರೆ ಹತ್ತಿರ ಬಂದು
ಕಸಿದುಕೊಂಡೇ ಹೋಯಿತು ನೋಡು.
ಅಮ್ಮ:
ಮಾಡುವುದೇನು ಮಂಗವು ಈಗ
ಹಸಿವನು ತಾಳುವುದೆಂತು?
ಸುಮ್ಮನೆ ಕೊಡೆವು ನಾವು ಅವಕೆ
ಅವು ಬರುವವು ತಿನ್ನಲು ಕಸಸು


One thought on “ಕೆ ಶಶಿಕಾಂತರವರ ಕವಿತೆ-ಮಗು ಮತ್ತು ಅಮ್ಮ

  1. ವಾಸ್ತವ ಚಿತ್ರಣದೊಂದಿಗೆ ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಮಾಹಿತಿ ಪಾಠ. ಚೆನ್ನಾಗಿದೆ.

Leave a Reply

Back To Top