ಟಿ.ದಾದಾಪೀರ್ ಕವಿತೆ-ನಿರೀಕ್ಷೆ ಗಳು

ಕಾವ್ಯ ಸಂಗಾತಿ

ನಿರೀಕ್ಷೆ ಗಳು

ಟಿ.ದಾದಾಪೀರ್

ದೊರೆ ಬರುವನೆಂದು
ಕೊಳೆ ತೊಳೆದು
ಬೀದಿಗಳು ಶೃಂಗರಿಸಿ
ಊರು ಹೊಳೆಯಿತು
ಪಳ ಪಳ

ಗುಂಡಿ ಬಿದ್ದ
ರಸ್ತೆಗಳು
ಗುಳಿ ಕೆನ್ನೆಯ
ಸುಂದರಿಯೊಬ್ಬಳು
Lack me ಪೌಡರ್
ಹಚ್ಚಿದಂತೆ
ತೇಪೆ ಕಂಡು
ಹೊಳೆದವು
ಥಳ ಥಳ

ಭೂತ ಬಂಗಲೆಗಳು
ಕಛೇರಿಗಳಾಗಿ ಕಂಡವು
ಸುಣ್ಣ ಬಣ್ಣದಿಂದ

ದೊರೆ ಬಂದರು
ದಾರಿ ಬಿಡಿ
ಹೂ , ಹಾರ, ತುರಾಯಿ
ಸ್ವೀಕರಿಸಲು
ಸಹಕರಿಸಿ

ಅಭಿಮಾನದ ಸಾಗರಕ್ಕೆ
ಆಕಾಶದ ಹಕ್ಕಿಯಿಂದ
ಕೆಳಗಿಳಿದ ದೊರೆ
ಎಲ್ಲಾ ಸ್ವೀಕರಿಸಿ
ಮತ್ತೆ ನಗುತ ಹಾರಿ
ಹೊಂಟ ಆಕಾಶದ ಕಡೆ

ನಿರೀಕ್ಷೆ ಗಳೇ ಹಾಗೆ
ಆಕಾಶದಿಂದ ಇಳಿದು
ಆಕಾಶಕ್ಕೆ ಹಾರುತ್ತವೆ

ಕೊಳೆ ತೊಳೆದ
ಕಾಮಿ೯ಕರು ಮತ್ತೆ
ಕಾರು ಬಿಟ್ಟು ಹೋದ
ದೂಳು ಗುಡಿಸುತ್ತಿದ್ದಾರೆ ಬೀದಿಯಲ್ಲಿ
ಕಾಮಿ೯ಕರ ಬೆವರು ಮುತ್ತಾಗಬಹುದೆ
ಎಂಬ ತಳ ಮಳ

ಹಸೆ ಮಣೆ ಮೇಲೆ
ಕುಳಿತ್ತಿದ್ದ ಊರಿನ ಬೀದಿಗಳು
ಕೆಳಗೆ ಇಳಿಯುತ್ತಿವೆ
ನಿಧಾನಕ್ಕೆ
ಪೌಡರ್ ಕಳೆದುಕೊಂಡ
Lack me ಸುಂದರಿಯಂತೆ
ಮತ್ತೆ ರಸ್ತೆಗಳು ಗುಳಿ ಬೀಳುತ್ತಿವೆ


Leave a Reply

Back To Top