ಕಾವ್ಯ ಸಂಗಾತಿ
ಆ ಮಧುರ ಬಾಲ್ಯದ ನೆನಪು
ಸುಜಾತಾ ರವೀಶ್
ಆಟ ಪಾಠದ ಹೊರತು ಬೇರೆ ಚಿಂತೆಯಿಲ್ಲ
ಐಸ್ಕಡ್ಡಿˌ ಹುಳಿ ಕಿತ್ತಳೆಗಳೆ ಬಾಯಿರುಚಿಗೆಲ್ಲ
ಜಾರುಬಂಡೆ ಉಯ್ಯಾಲೆ ಮನ ತಣಿಸುತಿತ್ತಲ್ಲ
ಚೌಕಾಭಾರ ಹಳಗುಳಿಗಳಲಿ ಕಾಲ ಕಳೆಯುತಿತ್ತಲ್ಲ.
ಹಬ್ಬ ಬಂದರೆ ಹೊಸಬಟ್ಟೆಯ ಸಂಭ್ರಮ
ಮನೆತುಂಬ ಬಗೆ ಬಗೆಯ ತಿಂಡಿಗಳ ಗಮಗಮ
ರಜೆಯಲ್ಲಿ ಅಜ್ಜಿಮನೆಯಲಿ ಬಂಧುಗಳೊಡನಾಟ
ಮಳೆಯಿರಲಿ ಬಿಸಿಲಿರಲಿ ಬೀದಿಯಲಿ ಸದಾ ಆಟ.
ಬಾಳ ಘಟ್ಟಗಳಲೆಲ್ಲಾ ಬಹು ಮಧುರವದು ಬಾಲ್ಯ
ಅದಕೇ ಅದು ಉರುಳಿಹೋದದ್ದೇ ತಿಳಿಯಲಿಲ್ಲ
ಕಾಲಚಕ್ರ ಒಂದೊಮ್ಮೆ ಹಿಂದುರುಳುವುದಾದರೆ
ಮರಳಿಸು ಮತ್ತೆ ನನ್ನ ಬಾಲ್ಯವ ಓ ದೇವರೇ!