ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಗ್ರಹಣ!

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಇಂದು ಗ್ರಹಣ
ಎಂದು ಮುಂಜಾನೆಗೆ ಪ್ರಸರಣ
ಎಲ್ಲ ಬಣ್ಣದ ಚಾನಲ್ಲಿನಲ್ಲು
ಸಂಜೆಯೆ ಆಕಳಿಸುವವರೆಗು
ಅದೇ ಸುದ್ದಿ ರುಬ್ಬುವ ಒಳಕಲ್ಲು!

ಹೌದು ಗ್ರಹಣ ಚಂದ್ರನಿಗಿರಲಿ
ಅಥವ ಸೂರ್ಯನಿಗೆ ಆಗಲಿ
ಗ್ರಹಣದ ಒಂದೊಂದಕ್ಷರವನು
ತಾನೆ ನುಂಗಿ ಅರಗಿಸಿದ ಗ್ರಹಣದಂತೆ
ಇಲ್ಲಿ ಎಲ್ಲ ರಸ್ತೆಗಳಿಗು
ಸೂತಕದ ಛಾಯೆ ಬಡಿದು
ಸುಡು ಬಿಸಿಲಲು ಸಂಜೆಮಬ್ಬು!

ಸೂರ್ಯ ಚಂದ್ರರ ಗ್ರಹಣಕ್ಕೆ
ಇಲ್ಲಿ ಊರು ಕೇರಿಗಳಲೆಲ್ಲ
ಎಲ್ಲರನ್ನು ತಟ್ಟಿದ ಕಳವಳ?
ಅಲ್ಲೆಲ್ಲೋ ವ್ಯೋಮದಾಳದಲಿ
ಜರುಗುವ ಖಗೋಳ ಘಟನೆ
ಇಲ್ಲಿ ದಿನವನ್ನೆ ಹಿಡಿದು ಅಲ್ಲಾಡಿಸಿದಂತೆ!

ಅಂಗಡಿ ಮುಂಗಟ್ಟು ಭಣಭಣ
ಎಲ್ಲ ವ್ಯಾಪಾರ ವ್ಯವಹಾರ
ದಿಢೀರನೆ ತಟಸ್ಥ
ಸರ್ಕಾರಿ ಕಛೇರಿಯ ಕುರ್ಚಿಗಳಿಗು
ಬಡಿದ ಬರದ ಕೆಟ್ಟ ಶಕುನ!

ಹೌದು, ಇಂದು ಅಲ್ಲೆಲ್ಲೊ
ಯಾವುದೋ ಒಂದು
ಆಕಾಶ ಕಾಯಕ್ಕೆ ಬಡಿದ ಗ್ರಹಣ
ಇಲ್ಲಿ ಮನೆ ಮನಗಳಲ್ಲು
ಆಕ್ರಮಿಸಿದ ದಿಗಿಲು
ಈ ಕ್ಷಣ ಏನೋ
ಮರುಕ್ಷಣ ಇನ್ನೇನೋ
ಭಯದಿ ಬಡಿವ ಹೃದಯ
ಬೆಳ್ಳಂಬೆಳಿಗ್ಗೆ ಇಡಿ ಮಿದುಳಿಗೆ
ಹಿಡದ ಕರಿಕಾದ ಕರಿಕೊಡೆ!


About The Author

3 thoughts on “ಡಾ. ಅರಕಲಗೂಡು ನೀಲಕಂಠ ಮೂರ್ತಿ-ಗ್ರಹಣ!”

  1. D N Venkatesha Rao

    ಗ್ರಹಣದ ನಮ್ಮ ದಿನಚರಿ, ಅದರ ವರ್ಣನೆ ದಿವ್ಯವಾಗಿದೆ
    ಅಭಿನಂದನೆಗಳು

Leave a Reply

You cannot copy content of this page

Scroll to Top