ಕಾವ್ಯ ಸಂಗಾತಿ
ಶ್ರೀ. ಕನಕದಾಸರು
ಗೋಸಿಂಹಾ (ಎಲ್.ಹಾಲ್ಯಾನಾಯ್ಕ)
ಕನಕ……………….ಕನಕ……………….ಕನಕ
ನೀ ಕರುನಾಡ ಭಂಡಾರದ ನೈಜ ಧನ – ಕನಕ
ತಿರುಪತಿ ತಿಮ್ಮಪ್ಪನ ವರಪ್ರಸಾದವೇ ನೀನಪ್ಪ
ಹೆತ್ತವರು ನಿಂಗೆ ‘ತಿಮ್ಮಪ್ಪ ನಾಯಕ’ ಹೆಸರಿಟ್ಟರಪ್ಪ
ಬೀರಪ್ಪ-ಬಚ್ಚಮ್ಮರ ಮುದ್ದು ಮಗ ನೀನಪ್ಪ
‘ಕುರುಬ’ ಜನಾಂಗದಲ್ಲಿ ಜನ್ಮವ ತಾಳಿದೆಯಪ್ಪ
‘ಬಾಡ’ ಗ್ರಾಮದಲ್ಲಿ ಧರೆಗವತರಿಸಿದೆಯಪ್ಪ
ಕೊಪ್ಪರಿಕೆ ಚಿನ್ನ ದೊರೆತು ಕನಕನಾಯಕನಾದೆಯಪ್ಪ
ಕಲಿಯೂ ನೀನು,ಕವಿಯೂ ನೀನಾದೆಯಪ್ಪ
ಬಂಕಾಪುರ ಪ್ರಾಂತ್ಯಕೆ ಡಣಾಯಕ ನೀನಾದೆಯಪ್ಪ
ವಿಜಯನಗರ ಸಾಮ್ರಾಜ್ಯಕೆ ನಿಷ್ಠೆಯ ತೋರಿದೆಯಪ್ಪ
ಸಮರದಲ್ಲಿ ಸಾಹಸ, ಶೌರ್ಯವ ಮೆರೆದೆಯಪ್ಪ
ರಣರಂಗದಲ್ಲಿ ಅರೇಜೀವವಾಗಿ ನೀ ಬಿದ್ದೆಯಪ್ಪ
ಆದಿಕೇಶವನ ಕೃಪೆಗೆ,ಮರುಜನ್ಮವ ಪಡೆದೆಯಪ್ಪ
ಕಾಗಿನೆಲೆಯಲ್ಲಿ ಆದಿಕೇಶವನ ಪ್ರತಿಷ್ಠಾಪಿಸಿದೆಯಪ್ಪ
ಇಷ್ಟದೈವದಂಕಿತನಾಮವ ಇಟ್ಟುಕೊಂಡೆಯಪ್ಪ
ಮೋಹನ ತರಂಗಿಣಿ,ನಳಚರಿತ್ರೆ,ರಾಮಧಾನ್ಯ ಚರಿತ್ರೆ
ಹರಿಭಕ್ತಿಸಾರ ಕಾವ್ಯಕೃತಿ ನೀ ನೀಡಿದೆಯಪ್ಪ
ಕೀರ್ತನೆ,ಸುಳಾದಿ,ಉಗಾಭೋಗ,ಮುಂಡಿಗೆ ಕನ್ನಡ
ಸಾಹಿತ್ಯ ಲೋಕಕೆ ನೀ ಅರ್ಪಿಸಿದೆಯಪ್ಪ
ಶ್ರೀವ್ಯಾಸರಾಯರನು ಗುರುವಾಗಿ ನೀ ಪಡೆದೆಯಪ್ಪ
‘ದಾಸಕೂಟ’ದಲ್ಲಿ ದಾಸರ ದಾಸ ನೀನಾದೆಯಪ್ಪ
ಉಡುಪಿ ಶ್ರೀಕೃಷ್ಣನ ಅನನ್ಯ ಭಕ್ತ ನೀನಾದೆಯಪ್ಪ
“ಬಾಗಿಲನು ತೆರೆದು ಸೇವೆ ಕೊಡು ಹರಿ” ಎಂದೆಯಪ್ಪ
ಕನಕನ ಕಿಂಡಿ ಪವಾಡವ ನೀ ಮಾಡಿದೆಯಪ್ಪ
“ಕುಲ ಕುಲವೆಂದು ಹೊಡೆದಾಡದಿರಾಪ್ಪ
ಕುಲದ ನೆಲೆಯನೇನಾದರು ಬಲ್ಲಿರಾ?” ಕೇಳಿದೆಯಪ್ಪ
ಜಾತಿ ವ್ಯವಸ್ಥೆ ವಿರುದ್ಧ ನೀ ಸಮರಗೈದೆಯಪ್ಪ
ವಿಶ್ವ ಮಾನವ ಸಂದೇಶ ಜಗಕೆ ನೀ ಸಾರಿದೆಯಪ್ಪ
ಕುಲಾತೀತ,ನೆಲಾತೀತ,ಕಾಲಾತೀತನಾಗಿ
ಜಗದೊಳು ನೀ ಚಿರಸ್ಮರಣೀಯನಾದೆಯಪ್ಪ.