ಕಾವ್ಯಸಂಗಾತಿ
ಗಜಲ್
ಹನಿಬಿಂದು
ಹಸಿರ ಹೊದ್ದು ಮಲಗಿರುವ ಕನ್ಯೆಯಿವಳು ನೀ ಯಾರೇ?
ಬಸಿರಲಿ ಜೀವಿಗಳ ಹೊತ್ತು ಸಾಕುವವಳು ನೀ ಯಾರೇ ?
ಬವಣೆಯ ಬದುಕನು ಒಪ್ಪಿ ಅಪ್ಪಿಕೊಂಡಿರುವಳು ಧರೆ
ಬದಲಾವಣೆ ಮಾಡುವ ಮನುಜರ ಹೊತ್ತವಳು ನೀ ಯಾರೇ?
ಗುಂಡಿ ಕೊರೆದು ನಿನ್ನೆದೆಯ ನೆತ್ತರ ಕುಡಿವವರ ಬೆಳೆಸುತಿರುವವಳು ಬುವಿ
ಗಂಡಿಯೊಳಗೂ ಜೀವಿಗಳಿಗೆ ಆಶ್ರಯವಿತ್ತವಳು ನೀ ಯಾರೇ?
ಗುಂಡು ಗುಂಡಾಗಿ ದುಂಡಾಗಿ ಬೆಳೆದವಳು ಪೃಥ್ವಿ
ಗಂಡಸರಿಗೂ ತಲೆ ತಗ್ಗಿಸದೆ ರವಿಯ ಕಿರಣದಿ ಬೆಳೆಯುವವಳು ನೀ ಯಾರೇ?
ಮಂಡಿಯೂರಿ ಬೇಡುತಿಹೆ ಧರಣಿ ದೇವಿಯೇ ಹೆಚ್ಚಿಸದಿರು ಮನುಜರನು
ಹೆಂಡ ಕುಡಿದು ಬುದ್ಧಿ ಹಾಳುಮಾಡಿಕೊಂಡವರ ಪ್ರೇಮದಿ ಪೊರೆವವಳು ನೀ ಯಾರೇ