ಪ್ರೀತಿಯ ಕನ್ನಡಿಗರೇ-ಚೈತ್ರಾ ತಿಪ್ಪೇಸ್ವಾಮಿ

ಲೇಖನ ಸಂಗಾತಿ

ಪ್ರೀತಿಯ ಕನ್ನಡಿಗರೇ

ಚೈತ್ರಾ ತಿಪ್ಪೇಸ್ವಾಮಿ

ಕನ್ನಡ ನಮ್ಮ ಮಾತೃ ಭಾಷೆ. ನಮ್ಮ ಹೃದಯ ಭಾಷೆ. ನಮ್ಮ ಭಾವನೆಗಳ ಹಂಚಿಕೊಂಡು ಸಂವಹನ ನಡೆಸುತ್ತಾ ಬಂದಿರುವ ನಮ್ಮ ವ್ಯವಹಾರದ ಭಾಷೆ .ನಮ್ಮ ಎಲ್ಲಾ ನೀತಿ ನಿಯಮಗಳನ್ನು ಆದೇಶಗಳನ್ನು ಸವಿವರವಾಗಿ ಮಂಡಿಸುವ ನಮ್ಮ ಆಡಳಿತ ಭಾಷೆ ಕನ್ನಡ. ಮಣ್ಣಿನ ಕರ್ನಾಟಕದ ಪ್ರಾಂತೀಯ ಭಾಷೆ. ನಮ್ಮ ನೆಲದ ಕಂಪು ಸೊಗಡನ್ನು ಪಸರಿಸುವ ನಮ್ಮ ನೆಲದ ಭಾಷೆ ಕನ್ನಡವೇ ಆಗಿದೆ .ಅಂತಹ ಭಾಷೆಯಾಗಿ ಕನ್ನಡದ ಬೆಳೆಸುವಿಕೆಯ ಬಗ್ಗೆ ಸರಳವಾಗಿ ಮಾಡಬಹುದಾದಂತಹ ಆಲೋಚನೆಗಳ ಬಗ್ಗೆ ಪ್ರಸ್ತಾಪಿಸುತ್ತಾ ನಮ್ಮ ಕೈಲಾದ ಕನ್ನಡ ಸೇವೆಯನ್ನು ಮಾಡೋಣ ಎಂದು ನಮ್ಮ ಕನ್ನಡದ ಎಲ್ಲಾ ಹಿರಿಯ ಕಿರಿಯ ಚೇತನಗಳಲ್ಲಿ ಸಂದೇಶವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೇನೆ.

ಕನ್ನಡಕ್ಕಾಗಿ ಕೈಯೆತ್ತು ಅಲ್ಲಿ ಕಲ್ಪವೃಕ್ಷವಾಗುತ್ತದೆ ಕನ್ನಡಕ್ಕಾಗಿ ಧ್ವನಿ ಎತ್ತು ಅಲ್ಲಿ ಪಾಂಚಜನ್ಯ ಮೊಳಗುತ್ತದೆ ಎನ್ನುವ ಶ್ರೇಷ್ಠ ಕವಿವಾಣಿಯಂತೆ ಕನ್ನಡ ಕನ್ನಡತನಕ್ಕಾಗಿ ಏನನ್ನೇ ಮಾಡಿದರೂ ಅದು ನಮಗೆ ಶೋಭೆ ತರುವಂತದ್ದು. ಕನ್ನಡಕ್ಕಾಗಿ ನಮ್ಮತನವನ್ನು ನಾವು ಇಂದು ಉಳಿಸಿಕೊಂಡು ಬೆಳೆಸಬೇಕಾದ ಅನಿವಾರ್ಯತೆ ನಮ್ಮೆಲ್ಲ ಕನ್ನಡಿಗರಿಗೆ ಬಂದೊದಗಿದೆ. ನಾವಾಡುವ ನುಡಿಯೇ ಕನ್ನಡ ನುಡಿ, ನಾವಿರುವ ತಾಣವೇ ಕನ್ನಡ ನಾಡು ಎಂದು ಕನ್ನಡವೇ ನಮ್ಮ ಉಸಿರು ಆಗಬೇಕಾದ ಭಾಷೆಯಾಗಿದ್ದರೂ ಇಂದಿನ ದಿನಗಳಲ್ಲಿ ನಮ್ಮೆಲ್ಲ ಮನೆಮನೆಗಳಲ್ಲಿ ಅನ್ಯ ಭಾಷೆಯ ವ್ಯಾಮೋಹ ಎದ್ದು ಕಾಣುತ್ತಿದೆ. ನಮ್ಮ ಭಾಷೆ ಮೂಲೆಗುಂಪಾಗುತ್ತಿದೆ. ಪೋಷಕರಾದ ನಾವೇ ಅನ್ಯ ಭಾಷೆಗೆ ಒತ್ತು ಕೊಡುವಂತಹ ಪ್ರಸಂಗಗಳು ಎದುರಾಗುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕನ್ನಡವನ್ನು ಕಟ್ಟುವಂತಹ ಕೆಲಸ ಇಂದು ನಮ್ಮ ಮನೆಗಳಿಂದಲೇ ಆರಂಭವಾಗಬೇಕಾಗಿದೆ.ವ್ಯವಹಾರಕ್ಕಾಗಿ ಯಾವುದೇ ಭಾಷೆಯನ್ನು ಬಳಸಿದರೂ ಕನ್ನಡ ಭಾಷೆಯನ್ನು ಉಸಿರಾಗಿ ಪ್ರೀತಿಸಬೇಕು. ನಮ್ಮ ಭಾಷೆಯನ್ನು ಪ್ರೀತಿಯಿಂದ ಬಳಸಬೇಕಾಗಿದೆ. ನಾವು ಮನೆಗಳಲ್ಲಿ ಕನ್ನಡವನ್ನು ಸುಮಧುರವಾಗಿ ಸ್ವಚ್ಛವಾಗಿ ಮಾತನಾಡಿ ತೋರಿಸಬೇಕಾಗಿದೆ. ಸರಳ ಕನ್ನಡ ಭಾಷೆಯನ್ನು ನಾವು ಉಚ್ಚರಿಸಿ ಮನೆಯ ಮಕ್ಕಳಿಗೆ, ಅನ್ಯ ಭಾಷಿಕರಿಗೆ ಪರಿಚಯಿಸಬೇಕಾಗಿದೆ. ಸಾಧ್ಯವಾದ ಕಡೆಗಳಲ್ಲಿ ನಾವು ಕನ್ನಡವನ್ನು ಮಾತನಾಡುವುದರ ಮೂಲಕ ಕನ್ನಡದ ಭಾಷಾ ಸೌಂದರ್ಯವನ್ನು ಎತ್ತಿ ಹಿಡಿಯ ಬೇಕಾಗಿದೆ.

ಮನೆಮನೆಯಲ್ಲೂ ಕನ್ನಡದ ಹಣತೆಗಳನ್ನು ಹಚ್ಚಬೇಕಾಗಿದೆ. ಅತ್ಯಂತ ಮಧುರವಾಗಿ ಕನ್ನಡ ಭಾಷೆಯನ್ನು ಮಾತನಾಡುವ ಕೌಶಲ್ಯವನ್ನು ನಮ್ಮ ಮಕ್ಕಳಿಗೆ ಇಂದು ನಾವು ಕಲಿಸಿ ಕೊಡಬೇಕಾಗಿದೆ .ನಾವು ಚಿಕ್ಕ ಚಿಕ್ಕ ಹಾಡುಗಳ ಮೂಲಕ ಸಣ್ಣ ಕಥೆಗಳ ಮೂಲಕ ಕನ್ನಡ ಭಾಷೆಯ ಸೊಬಗನ್ನು ಮಕ್ಕಳಿಗೆ ಪರಿಚಯಿಸ ಬೇಕಾಗಿದೆ .ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದರೂ ನಾವು ಅವರಿಗೆ ಚಿಕ್ಕವಯಸ್ಸಿನಿಂದಲೇ ಕನ್ನಡ ಭಾಷೆಯ ಅದ್ಭುತವಾದಂತಹ ಸಾಹಿತ್ಯ ಸಂಪತ್ತನ್ನು ಪರಿಚಯಿಸುತ್ತಾ ಹೋದರೆ ದೊಡ್ಡವರಾದಮೇಲೆ ಅವರಲ್ಲಿ ಭಾಷೆಯ ಅಭಿಮಾನ ಬೆಳೆಯುತ್ತಾ ಹೋಗುತ್ತದೆ. ಮನೆಯ ಒಂದು ಭಾಷೆಯಾಗಿ ಅಕ್ಕರೆಯಿಂದ ನುಡಿಯುವ ಬಗ್ಗೆ ಎಲ್ಲರೂ ಗಮನಿಸಬೇಕಾಗಿದೆ. ಮೊದಲು ನಮ್ಮ ಮನೆಯಲ್ಲಿ ಕನ್ನಡ ಉಳಿದರೆ ನಾವು ಹೊರಜಗತ್ತಿನಲ್ಲಿ ಕನ್ನಡವನ್ನು ಉಳಿಸಬಹುದು. ಬದಲಾವಣೆ ಏನಿದ್ದರೂ ನನ್ನಿಂದ ಮಾತ್ರ ಸಾಧ್ಯ ಎನ್ನುವಂತೆ ನಾವು ಮೊದಲು ನಮ್ಮ ತಾಯಿ ಭಾಷೆಯನ್ನು ಪ್ರೀತಿಯಿಂದ ನುಡಿಯೋಣ .ಗೌರವದಿಂದ ಇನ್ನೊಬ್ಬರಿಗೂ ಪರಿಚಯಿಸೋಣ.ಅಕ್ಕ ಪಕ್ಕದವರಿಗೂ ಆ ಮೂಲಕ ಕನ್ನಡದ ಬಗ್ಗೆ ಆಸಕ್ತಿ ಬರುವಂತೆ ನಾವು ನಡೆದು ಕೊಳ್ಳಬೇಕಾಗಿದೆ. ಮನೆಮನೆಗಳಲ್ಲಿ ಕನ್ನಡ ತಾಯಿಯನ್ನು ಆರಾಧಿಸಬೇಕಾಗಿದೆ.ಬೀದಿಬೀದಿಗಳಲ್ಲಿ ಕನ್ನಡತನ ಉಳಿಸಿ-ಬೆಳೆಸಲು ನಾವು ಸಜ್ಜಾಗಬೇಕಾಗಿದೆ. ಕನ್ನಡವನ್ನು ಪ್ರೀತಿಯಿಂದ ಮಾತನಾಡಿ ಆಸಕ್ತಿಯಿಂದ ಭಾಷೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕನ್ನಡ ಭಾಷೆಯನ್ನು ಹೃದಯದ ಭಾಷೆಯಾಗಿ ಕೊಂಡೊಯ್ಯುವ ಅಮೂಲ್ಯ ಕೆಲಸವನ್ನು ನಾವೆಲ್ಲರೂ ಮಾಡೋಣ. ಕನ್ನಡ ನಾಡು ನುಡಿಯ ಬಗ್ಗೆ ನಮ್ಮ ಮಕ್ಕಳಲ್ಲಿ ಗೌರವವನ್ನು ಬೆಳೆಸೋಣ. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎನ್ನುತ್ತಾ ಹೆಮ್ಮೆಯಿಂದ ಕನ್ನಡಿಗರಾಗಿ ಬಾಳೋಣ…
ನೆನಪಿರಲಿ..

ಇಂತಿ
ಕನ್ನಡದ ಎಲ್ಲ ಮನಸುಗಳಿಗೆ ಪ್ರೀತಿಯ ನಮಸ್ಕಾರಗಳು. ಕನ್ನಡಕ್ಕಾಗಿ ನಾವೆಲ್ಲ ಒಂದಾಗಿ ಸೇರೋಣ
*ಜೈ ಕರ್ನಾಟಕ ಮಾತೆ ಜೈ ಜೈ ಕನ್ನಡ *


    ಚೈತ್ರಾ ತಿಪ್ಪೇಸ್ವಾಮಿ.

Leave a Reply

Back To Top