ಕಾವ್ಯ ಸಂಗಾತಿ
ನಕಲಿ ಪ್ರಪಂಚ
ಶಾಲಿನಿ ಕೆಮ್ಮಣ್ಣು
ನಮ್ಮವರು ತಮ್ಮವರು ಎಲ್ಲರೂ ಇದ್ದರಂತೆ
ಹುಡುಕ ಹೊರಟಾಗ ಅಪರಿಚಿತರಂತೆ
ಸಂಬಂಧಗಳು ಸಾಂದರ್ಭಿಕವಂತೆ
ಅವಕಾಶವಾದಿಗಳ ನೀತಿ ತಾರ್ಕಿಕವಂತೆ
ದೂರದ ಬೆಟ್ಟ ನುಣ್ಣಗೆ ಕಾಣುವುದಂತೆ
ಬಿಳಿ ಕಂಡದ್ದೆಲ್ಲ ಹಾಲಲ್ಲವಂತೆ
ಪ್ರೀತಿಯ ಬಂಧಗಳು ಮರೆಮಾಚಿತಂತೆ
ಮಮತೆ ಮಮಕಾರ ಮರೀಚಿಕೆಯಂತೆ
ಕತ್ತಲ ಕಾಡ್ಗಿಚ್ಚು ಕಣ್ಣಿಗೆ ಕಾಣಿಸದಂತೆ
ಗೂಬೆಯ ಕಣ್ಣು ನಟ್ಟಿರುಳ ಭೇದಿಸಿದಂತೆ
ಕರುಣೆಯ ಕರುಳು ಬಿರಿದು ಕವಲಾಯಿತಂತೆ
ಕೇಳುವ ಕರಣ ಕಿವುಡಾಯಿತಂತೆ
ಬಾಂಧವ್ಯದ ಬೆನ್ನು ಬಾಗಿ ಬೆಂಡಾಯಿತಂತೆ
ಮಿಡಿಯೋ ಮನಗಳು ಮುದುಡಿವೆಯಂತೆ
ತಲೆ ತಿನ್ನುತ್ತಿದ್ದವರಿಗೆ ತಲೆ ನೋವಂತೆ
ಕಾಲೆಳೆಯುತ್ತಿದ್ದವರು ಕುಂಟುಸಿದ್ದಾರಂತೆ
ಎತ್ತಿ ಹಿಡಿವವರು ಹೊತ್ತು ಎಸೆದರಂತೆ
ಸ್ನೇಹಿತರಿಗೆ ತುಡಿಯಲು ಸಮಯವಿಲ್ಲವಂತೆ
ಮೋಹಕ ಮಾತುಗಳು ಮೌನದಲಿ ಸೆರೆಯಾದವಂತೆ
ಅಂಧಕಾರದ ಕಾರ್ಮೋಡ ಭುಗಿಲೆದ್ದು ಸುರಿಸಿತಂತೆ
ದೂರದ ಅಕ್ಕರೆ ಬಳಿಯಲಿ ಅಳಿದು ಹೋಯಿತಂತೆ
ಹೋರಾಟ ಹಾರಾಟ ಚೀರಾಟ ಎಲ್ಲ ಗೌಣವಾಯಿತು
ಉರಿ ಬಿಸಿಲ ಧಗೆಗೆ ಮಂಜು ಕರಗಿ ಹೋಯಿತು
ನೀರಬರ ಸೆಳೆತಕೆ ಮೋಹ ಕೊಚ್ಚಿ ಹೋಯಿತು
ಬಿರುಗಾಳಿಯ ಅಬ್ಬರಕೆ ಹಸಿ ಗುಳ್ಳೆ ಒಡೆದೋಯ್ತು
ಭೂಮಿ ಬಾಯ್ತೆರೆದು ನುಂಗಿ ಅರಗಿಸುತಿಹುದು
ಇರುವಂತೆ ಇದ್ದು ಬಿಡು
ಚಿಂತೆಗಳ ಸಂತೆಯಲಿ ಬಿಡು
ಹರಿವ ನೀರಲಿ ತೇಲಿಸು ಓ ಗುರುವೇ
ಎನ್ನ ದೂರದ ನೀಲಿಯಲಿ ಮರೆಯಾಗಿಸು
ಕಾಲಚಕ್ರದೊಳು ಕೊನೆಯಾಗಿಸಿ ಲೀನವಾಗಿಸು