ನೀ ಬರುವ ಮೊದಲು–ಮಹಾಧೇವಿ ಕೆ.ಪಿ

ಕಾವ್ಯ ಸಂಗಾತಿ

ನೀ ಬರುವ ಮೊದಲು

ಮಹಾಧೇವಿ ಕೆ.ಪಿ

ನೀ ಬರುವ ಮೊದಲು
ನನಗೆಲ್ಲಿ ಗೊತ್ತಿತ್ತು ಹೇಳು..
ಹುಣ್ಣಿಮೆಯ ರಾತ್ರಿಗಳಲ್ಲಿ
ಸುರಿವ ಹಾಲ್ಬೆಳಕ ಹೀಗೆ
ಎದೆಯ ತಿಳಿಗೊಳದ ತುಂಬಾ
ತುಂಬಿಕೊಳ್ಳಬಹುದೆಂದು..!!
ಕಗ್ಗತ್ತಲ ಕರಿರಾತ್ರಿಗಳಲ್ಲಿ
ಆ ಬೆಳಕನ್ನೇ ಸುರಿದು
ಒಡಲ ನೋವ ಸುಡು
ಕೆಂಡಗಳ ಅದ್ದಿ, ವಜ್ರಗಳ
ಮಾಡಿ ಮೌನಚಿನ್ನದ ಕಟ್ಟು
ಹಾಕಿಕೊಳ್ಳಬಹುದೆಂದು….

ನೀ ಬರುವ ಮೊದಲು
ನನಗೆಲ್ಲಿ ತಿಳಿದಿತ್ತು ಹೇಳು
ಮಣ್ಣಿನೊಳಗಿನ ಬೇರುಗಳ
ಸಂಧಾನದ ಪಿಸುಮಾತು,
ಮೌನ ಮೌನವ ತಬ್ಬಿ
ಜಗದ ವಿಸ್ತಾರಕೂ ಹಬ್ಬಿ
ಯಾವುದೋ ನವಭಾವ
ಜೀವ ತಂತುಗಳ ಮೀಟಿ
ಸಕಲ ಸಂಕುಲಗಳನೂ
ಪೊರೆಯುತಿಹ ಪ್ರೇಮದ
ಹಾಡು ಕಲಿಯಬಹುದೆಂದು

ನೀ ಬರುವ ಮೊದಲು
ನನಗೆಲ್ಲಿ ಕಂಡಿತ್ತು ಹೇಳು
ಏಳು ಕೆರೆಯ ಏರಿಯ ದಾರಿ
ಕೆರೆಯಾಚೆಯ ಹೂವಿನ ಕೊಲ್ಲಿ
ಅದರಾಚೆಯ ಕೇದಗೆಯ ಬನ
ಬನದೊಳಗೇ ಬಯಲ ದಾರಿ
ಮಿರಮಿರನೆ ಹೊಳೆಯುವ
ಎಡೆಯೆತ್ತಿದ ನಾಗರಗಳ
ಮಿಸುಕದೇ ಹೀಗೆ ಹಗೂರ
ನಡೆದುಬಿಡಬಹುದೆಂದು
ತಾವು ತಲುಪುವ ರಹದಾರಿಯಲಿ
ಸದ್ದಿಲ್ಲದೆ ಸಾಗಿಬಿಡಬಹುದೆಂದು
ನೀ ಬರುವ ಮೊದಲು
ನನಗೆಲ್ಲಿ ಹೊಳೆದಿತ್ತು ಹೇಳು..

-======================

8 thoughts on “ನೀ ಬರುವ ಮೊದಲು–ಮಹಾಧೇವಿ ಕೆ.ಪಿ

  1. ನನಗೂ ತಿಳಿದಿರಲಿಲ್ಲ ನೀ ಬರುವ ಮೊದಲು.

  2. ಬೇಡಿ ಬಯಸಿದಂತಹ ಮತ್ತೊಂದು ಅವಕಾಶ ಒದಗಿಸುವ ಭಾಗ್ಯ ಮೊದಲ ಸಲದಕ್ಕಿಂತ ಹಲವು ಕಾರಣಕ್ಕಾಗಿ ವಿಶೇಷದ್ದಾಗಿರುತ್ತದೆ.ಅದಿರಲಿ….
    ಈ ಅವಕಾಶ ಹೊಮ್ಮಿಸುವ ಕಾಂತಿ ತನ್ನ ಒಳಹೊರಗನ್ನು ಮೀರಿ ವಾತಾವರಣಕ್ಕೂ ಅದನ್ನು ದಾಟಿಸುತ್ತದೆ.
    ಕೆಲವು ಬರುವಿಕೆಗಳು ತರುವ ಸಂಭ್ರಮ ಮನಸ್ಸನ್ನು ದಾಟಿ ಮುಖದಲ್ಲಿ ಮೂಡಿ ಇಡೀ ದೇಹವನ್ನು ಕೂಡ ಕುಣಿದಾಡಿಸುವಂತಿರುತ್ತದೆ…

Leave a Reply

Back To Top