ನಿನ್ನ ಮೌನಕೆ ಮಾತ….……
ಜಯಕವಿ ಡಾ.ಜಯಪ್ಪ ಹೊನ್ನಾಳಿ
ನಿನ್ನ ಮೌನಕೆ ಮಾತ
ತೊಡಿಸಬಲ್ಲೆನು ನಾನು
ನೀ ಹೇಳದಿರೆ ಮುಗುಳು ತುಟಿಯ ತೆರೆದು..!
ಹೂಗನಸುಗಳ ಬರೆದು
ನಿನ್ನ ಕಣ್ಣಲೆ ಒರೆದು
ಚೈತ್ರ ಚಿಗಿದಿದೆ ತಾನು; ಚಿಗರೆ ನೆರೆದು..!
ಕಡಿದ ಬುಡದಲೆ ನೆನಪು
ಹೊಂಬಾಳೆಯಾಗುತಿವೆ
ಕತ್ತರಿಸಿದೆಡೆಯೆ; ತತ್ತರಿಸುತೆದ್ದು..!
ವಿಧಿಯು ಮರೆತಿದೆ ಜಿದ್ದು
ನೋವು ಸೇರಿದೆ ಗುದ್ದು
ಆನಂದ ಬಾಷ್ಪಕಿದೆ ಬೆರಗ ಮುದ್ದು..!
ಹೊಸ ಹಾದಿ ಹಾರೈಸಿ
ಹೊಸ ಬೆಳಕು ಕೋರೈಸಿ
ಹೊಸ ಜೀವ ಭಾವದಲಿ ಯುಗಳ ವಾಣಿ..!
ಬೀಸಿದೆಲರಲೆ ಯಾನ
ತಾರೆಗಳೆ ಬಹುಮಾನ
ಕಡಲೊಡಲಿನಲಿ ಒಲವ ಚಂದ್ರ ದೋಣಿ..!
************