ಅಂಕಣ ಸಂಗಾತಿ

ಕಾವ್ಯದರ್ಪಣ

ಶರಣಬಸಪ್ಪ ಬ. ಕುಂಬಾರ್

ಅನೀನೇನು ಪಡೆದಿದ್ದರೂ

 ಅದನ್ನು ಇಲ್ಲಿಂದಲೇ ಪಡೆದಿರುವೆ

 ಏನನ್ನು ನೀಡಿದ್ದರೂ

 ಅದನ್ನು ಇಲ್ಲಿಗೇ ನೀಡಿರುವೆ

 ನಿನ್ನೆ ಬೇರೆ ಯಾರದ್ದೋ ಆಗಿದ್ದು

 ಇಂದು ನಿನ್ನದಾಗಿದೆ

 ನಾಳೆ ಅದು ಇನ್ಯಾರದ್ದೋ ಆಗಲಿದೆ

 ಪರಿವರ್ತನೆ ಜಗದ ನಿಯಮ

             –  ಭಗವದ್ಗೀತೆ

ಕಾವ್ಯ ಪ್ರವೇಶಿಕೆಯ ಮುನ್ನ

ಋತುಚಕ್ರ ತಿರುಗುವುದು ಕಾಲನೆದೆ ಮರುಗುವುದುll

 ಮೃತನ ಮೈಯಿಂದ ಹೊಸ ಹುಲ್ಲು ಮೊಳೆಯುವುದುl

 ಕ್ಷಿತ ಗರ್ಭಧರಿಸುವುದು ಮತ್ತುದಿಸುವುದು ಜೀವll

 ಸತತ ಕೃಷಿಯೋಮಂಕುತಿಮ್ಮl”

ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಬದಲಾವಣೆಯಾಗುವುದನ್ನು ಪರಿವರ್ತನೆ ಎನ್ನುತ್ತೇವೆ. ಈ ಪರಿವರ್ತನೆ ಸರ್ವ ರಂಗಗಳಿಗೂ ಅನ್ವಯಿಸುತ್ತದೆ. ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಭಾವನಾತ್ಮಕ, ವೈದ್ಯಕೀಯ, ಪ್ರಾಕೃತಿಕ,ಬೌದ್ಧಿಕ, ಭೌಗೋಳಿಕ ಜೊತೆಗೆ  ಜೀವನಶೈಲಿ, ಅಗತ್ಯತೆಗಳು, ಆದ್ಯತೆಗಳು, ಆಶಯಗಳು, ಅಭಿಲಾಷೆಗಳು, ಜನಸಮುದಾಯದ ಭೌದ್ಧಿಕ ಪ್ರಗತಿ ಮುಂತಾದವುಗಳು ಪರಿವರ್ತನೆಯ ಕ್ಷೇತ್ರಗಳಾಗಿವೆ. ಅಂದರೆ ಎಲ್ಲ ರಂಗಗಳಲ್ಲೂ ಹಳೆಯದನ್ನು ಬದಲಾಯಿಸಿಕೊಂಡು ಹೊಸದನ್ನು ಸ್ವೀಕರಿಸುವುದೇ ಪರಿವರ್ತನೆಯಾಗಿದೆ. ಬದಲಾವಣೆಯನ್ನು ಅಲ್ಲಗಳೆಯದೆ ಹೊಂದಿಕೊಳ್ಳುತ್ತಾ ಬದುಕಿನ ಬೇರನ್ನು ಗಟ್ಟಿಗೊಳಿಸುತ್ತಾ ಸಾಗುವುದು ಜೀವನದ ಧ್ಯೇಯವಾಗಿದೆ.

ಇಂದು ಜಗತ್ತು ಪರಿವರ್ತನೆಗೆ ತನ್ನನ್ನು ತಾನು ತೆರೆದುಕೊಂಡಿದೆ. ಕಾಲ್ನಡಿಗೆಯಿಂದ ವಿಮಾನದಲ್ಲಿ ಹಾರುವವರೆಗೆ, ಗೆಡ್ಡೆಗೆಣಸು ತಿನ್ನುತ್ತಿದ್ದರಿಂದ ಹಿಡಿದು ಭಕ್ಷ ಭೋಜ್ಯಗಳನ್ನು ಸವಿಯುವವರೆಗೆ, ಮನೆಯ ಔಷದೋಪಚಾರದಿಂದ ಹೃದಯವನ್ನು ಬದಲಿಸುವವರೆಗೂ, ಮರದ ತೊಗಟೆ ಧರಿಸುತ್ತಿದ್ದುದರಿಂದ ತರೇವಾರಿ ವಸ್ತ್ರಗಳನ್ನು ತೊಡುವವರೆಗೂ, ಚಂದ್ರನನ್ನು ದೇವರೆಂದು ಆರಾಧಿಸುತ್ತಿದ್ದವರೂ ಚಂದ್ರಲೋಕಕ್ಕೆ ಹೋಗಿಬರುವುದು,ಭವ್ಯ ಬಂಗಲೆಗಳಲ್ಲಿ ವಾಸಿಸುತ್ತಿರುವುದು, ಹೆಬ್ಬೆಟ್ಟೊತ್ತಿ ಅನ್ಯಾಯಕ್ಕೆ ಒಳಗಾಗುತ್ತಿದ್ದವರು, ಅಕ್ಷರ ಕಲಿತು ಎದೆಯೆತ್ತಿ ಪ್ರಶ್ನಿಸುವಂತಾಗಿದ್ದಾರೆ.‌ಅಡುಗೆ ಮನೆಗೆ ಸೀಮಿತವಾಗಿದ್ದ ಹೆಣ್ಣು ಸಕಲ ರಂಗಗಳಲ್ಲಿ ಯಶಸ್ವಿಯಾಗಿ ದುಡಿಯುತ್ತಿದ್ದಾರೆ. ಮೌಡ್ಯ ಕಂದಾಚಾರಗಳಿಂದ ವೈಜ್ಞಾನಿಕ ವಿಮರ್ಶೆಗೆ ದಾರಿಯಾಗಿದೆ. ಪ್ರಕೃತಿಯಲ್ಲಿ ಹಗಲು,ರಾತ್ರಿಗಳು, ಋತುಮಾನಗಳು ಸಹಜವಾಗಿ ಸಂಭವಿಸುತ್ತಿವೆ. ಆದರೂ  ಸೃಷ್ಟಿಯಲ್ಲಿ ವೈರುಧ್ಯಗಳು ಎದುರಾಗುತ್ತಿವೆ. ಅಂತಹಪರಿವರ್ತನೆಗೆ ಸಂಬಂಧಿಸಿದ ಕೆಲವೊಂದನ್ನು ನಿಮ್ಮ ಮುಂದೆ ತರಲಿದ್ದೇನೆ.

ಕವಿಪರಿಚಯ

ಶಬಕಮ್  ಕಾವ್ಯನಾಮದಿಂದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶರಣಬಸಪ್ಪ ಬ. ಕುಂಬಾರ್ ರವರು ಕಲ್ಬುರ್ಗಿ ತಾಲೂಕಿನ ಶಹಬಾದ ಗ್ರಾಮದವರು.ಇವರು ಡಿಪ್ಲೋಮೋ ಇನ್ ಮೆಕಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಪ್ರಸ್ತುತ ಮಹಾರಾಷ್ಟ್ರದ ಪೂನಾದಲ್ಲಿ ಸ್ವಂತ ಆಟೋಮೊಬೈಲ್ ಕಂಪನಿ ನಡೆಸುತ್ತಿದ್ದಾರೆ.ಇವರು ಕಥೆ, ಕವನ, ಕಾದಂಬರಿಗಳನ್ನು ಬರೆಯುವಲ್ಲಿ ತಮ್ಮನ್ನು ಕ್ರಿಯಾಶೀಲರಾಗಿರುವ ಇವರು  “ಭಾವನೆಗಳ ಸುಳಿಯಲ್ಲಿ” ಎಂಬ ಕಥಾ ಸಂಕಲನ ಮತ್ತು “ಶ್ವೇತ ಸಾಗರ” ಹಾಗೂ “ತಾಯಿ” ಎಂಬ ಎರಡು ಕಾದಂಬರಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಇವರು ಹಲವಾರು ಕವಿಗೋಷ್ಠಿಗಳು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಆಸ್ವಾದಿಸುತ್ತಿದ್ದಾರೆ. ಇವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕಲಬುರ್ಗಿಯ ಜಿಲ್ಲಾಧ್ಯಕ್ಷರು ಮತ್ತು ಪೂನಾ ಜಿಲ್ಲೆಯ ಗೌರವಾಧ್ಯಕ್ಷರಾಗಿ ಕನ್ನಡಾಂಬೆಯ ಸೇವೆ ಮಾಡುತ್ತಿದ್ದಾರೆ. ಶಬಕಮ್ ಅವರು ಬೆಳಗಾವಿ ಜಿಲ್ಲೆಯ ಬಿ ಎ ಸನದಿ ಪ್ರಶಸ್ತಿ ಮತ್ತು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಕವಿತೆಯ ಆಶಯ

ಜೀವನವೆಂಬುದು

 ಸೈಕಲ್ ಸವಾರಿ ಇದ್ದಂತೆ

 ಸಮತೋಲನ ಇರಬೇಕೆಂದರೆ

 ಚಲಿಸುತ್ತಲೇ ಇರಬೇಕು

         – ಐನ್ ಸ್ಟೀನ್

ಮಹನೀಯರ ಈ ನುಡಿಯು ಚಲನೆಯ ಮಹತ್ವವನ್ನು ಸೂಚಿಸುತ್ತದೆ.  ಈ ಜಗತ್ತು ನಿತ್ಯನೂತನವಾಗಿ ಇರಬೇಕು. ಹಳೆಯದರ ಜಾಗದಲ್ಲಿ ಹೊಸದು ಸೇರಬೇಕು. ಸಂದೇಶ ಆದರ್ಶಗಳನ್ನು ಉಳಿಸಿಕೊಂಡು ಅದನ್ನು ಪಾಲಿಸುವ ಜಾಣ್ಮೆ ಮುಂದುವರೆಯಬೇಕು. ಈಗಿರುವ ಸ್ಥಿತಿಗಳಲ್ಲಿ ಭಿನ್ನವಾದ ಮಾರ್ಪಾಡುಗಳನ್ನು ಮಾಡಬೇಕು ಇಲ್ಲದಿದ್ದರೆ ನಿಸರ್ಗ ವಿಸ್ಮಯವೆನಿಸುವುದಾದರೂ ಹೇಗೆ ?ಬದಲಾವಣೆ ಕಾಣದ ವಸ್ತು ಸ್ಥಿರವಾಗಿ ಉಳಿಯದೆ  ನಾಶವಾಗಬಹುದು. ಹಾಗಾಗಿ ಬದಲಾವಣೆಯಿಂದ ಸೊಬಗು, ಸೊಬಗಿನಿಂದ ಸಂತಸ, ಸಂತಸದಿಂದ ಉತ್ಸಾಹ, ಉತ್ಸಾಹದಿಂದ ಪ್ರಗತಿ ಇವೆಲ್ಲದರ ಅರಿವು ಮೂಡಿಸುವುದೇ ಈ ಪರಿವರ್ತನೆ ಕವಿತೆಯ ಆಶಯ.ಇಲ್ಲಿ ಕವಿಯು ಮನುಜನ ಬದುಕಿನಲ್ಲಿ ಹುಟ್ಟಿನಿಂದ ಸಾವಿನವರೆಗೂ ಏನಿಲ್ಲ ಬದಲಾವಣೆಗಳನ್ನು ಕಾಣುತ್ತಾನೆ, ಅವನು ಅದಕ್ಕೆ ಹೇಗೆ ಸ್ಪಂದಿಸುತ್ತಾನೆ ಎಂಬುದನ್ನು ಓದುಗರ ಮುಂದಿಡುವ ಪ್ರಯತ್ನ ಮಾಡಿದ್ದಾರೆ.

ಇಲ್ಲಿ ಕವಿಗಳು ಬದಲಾವಣೆಯನ್ನು ಪ್ರಾಕೃತಿಕವಾಗಿ ಮಾತ್ರ ಚರ್ಚಿಸದೆ ಬೌದ್ಧಿಕವಾಗಿ ಕೂಡ ಚರ್ಚಿಸುವ ಮೂಲಕ ಹಲವಾರು ಭಿನ್ನ ವಿಭಿನ್ನವಾದ ಮಾರ್ಪಾಡುಗಳನ್ನು ತಿಳಿಸುವ ಮೂಲಕ ಆ ಬದಲಾವಣೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂಬ ಆಶಯ ಕವಿತೆಯಲ್ಲಿ ವ್ಯಕ್ತವಾಗಿದೆ. ಬದಲಾವಣೆ ಹೊಸ ಹೊಸ ಆಯಾಮಗಳಲ್ಲಿ ತೆರೆದುಕೊಳ್ಳುತ್ತದೆ. ಆಗ ನಮ್ಮ ಜವಾಬ್ದಾರಿಗಳೇನು ಎಂಬುದನ್ನು ಕವಿತೆ ಸಾರುತ್ತದೆ.

ಕವಿತೆಯ ಶೀರ್ಷಿಕೆ

ಪರಿವರ್ತನೆ

ಈ ಕವಿತೆಯಲ್ಲಿ ಕವಿಯೋ ಜಗದ ಬದಲಾವಣೆ ಕುರಿತು ವಿವರಿಸಿದ್ದಾರೆ. ಮನುಜನ ಬದುಕು ಸೇರಿದಂತೆ ಪ್ರಕೃತಿಯಲ್ಲಿ ಆಗುವ ಬದಲಾವಣೆ ಕುರಿತು ಕಾವ್ಯ ಕಟ್ಟಿದ್ದಾರೆ . ಆ ಮೂಲಕ ಕವಿತೆ ಜಗತ್ತಿನಲ್ಲಿ ಆಗುವ ಮಾರ್ಪಾಡುಗಳನ್ನು ಓದುಗರ ಮುಂದಿಡುತ್ತಾರೆ. ಇಲ್ಲಿ ಪರಿವರ್ತನೆ ಶೀರ್ಷಿಕೆಯೂ ಕವಿತೆಗೆ ಅರ್ಥಪೂರ್ಣವಾಗಿ ಹೊಂದುತ್ತದೆ.

ಕವಿತೆಯ ವಿಶ್ಲೇಷಣೆ

ಪರಿವರ್ತನೆ

ಪರಿವರ್ತನೆ ಜಗದ ನಿಯಮ

 ಇರದಿರೆ ನಿಂತ ನೀರಿಗೆ ಸಮ

 ಬದಲಾದರೆ ಬದುಕು ಸಂಭ್ರಮ

 ಇಲ್ಲವಾದರೆ ನೀರಿನಲಿ ಹೋಮ

ಪರಿವರ್ತನೆ ಎಂದರೆ ಬದಲಾವಣೆ. ಬದಲಾವಣೆ ಕಾಣದ ಜಗತ್ತಿನ ಊಹಿಸಿಕೊಳ್ಳಲು ಆಗದು. ಇದು ನಿತ್ಯ ನಿರಂತರ ಕಾಲಚಕ್ರ. ಪರಿವರ್ತನೆಯಿಂದ ತಾಜಾತನ ದೊರೆಯುತ್ತದೆ.ಹೊಸತನ ಮೂಡುತ್ತದೆ. ಲವಲವಿಕೆ ಎದ್ದು ಕಾಣುತ್ತದೆ. ಈಗಂತೂ ಶರ ವೇಗದ ಬದಲಾವಣೆ ಕಾಣುತ್ತದೆ. ಭೌತಿಕವಾಗಿ, ಸಾಮಾಜಿಕವಾಗಿ, ನೈಸರ್ಗಿಕವಾಗಿ ಇದು ಸಂಭವಿಸುತ್ತಲೇ ಇರುತ್ತದೆ.

ಪರಿವರ್ತನೆ ಇಲ್ಲದಿದ್ದರೆ ಅದು ನಿಂತ ನೀರಂತೆ ಎನ್ನುತ್ತಾರೆ ಕವಿಗಳು. ನಿಂತ ನೀರು ಜಡವಾಗಿರುತ್ತದೆ. ಪಾಚಿ ಕಟ್ಟುತ್ತದೆ. ಕಸಕಡ್ಡಿಗಳು ಬಿದ್ದು ಕೊಳೆತು ನಾರುತ್ತದೆ. ಯಾರಿಗೂ ಇದು ಇಷ್ಟವಾಗುವುದಿಲ್ಲ. ಯಾರ ಮನಸ್ಸನ್ನು ಸೆಳೆಯುವುದಿಲ್ಲ. ಪರಿವರ್ತನೆ ಇಲ್ಲದ ಸ್ಥಿತಿಯನ್ನು ನಿಂತ ನೀರು ರೂಪಕದ ಮೂಲಕ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ . ಇದರಿಂದ ನಮಗೆ ಚಲನೆಯ ಮಹತ್ವ ತಿಳಿದು ಬರುತ್ತದೆ. ಜೀವನವು ಎಂದಿಗೂ ನಿಂತ ನೀರಾಗಬಾರದು‌ ನಿಂತ ನೀರಲ್ಲಿ ಹುಳು ಹುಪ್ಪಟೆಗಳು ಬೀಳುತ್ತವೆ. ಹಾಗಾಗಿ ಜೀವನವು ಸದಾ ಚಲನಶೀಲವಾಗಿರಬೇಕು. ಚಲಿಸುವ ನೀರು ಹೇಗೆ ತನ್ನ ಪ್ರತಿ ಹರಿವಿನಲ್ಲೂ ಹೊಸತನವನ್ನು ಪಡೆದು ತನ್ನೊಳಗಿರುವ ಕಸಕಡ್ಡಿಗಳನ್ನು ಹೊರದೂಡಿ ಚೈತನ್ಯವಾಗಿ ಹರಿಯುತ್ತದೆಯೋ ಹಾಗೆಯೇ ಜೀವನವೂ ಹರಿವ ತೊರೆ ಯಾಗಬೇಕು. ಈ ಪಯಣದಲ್ಲಿ ಜೀವನದಲ್ಲಿ ಎದುರಾಗುವ ಕಷ್ಟ, ನೋವು, ಸಮಸ್ಯೆ, ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು. ಆಗ ಗೆಲುವು ನಮ್ಮ ಪಾಲಿಗೆ ಇರುತ್ತದೆ ಎಂಬುದು ಕವಿಯ ಮನೋಗತವಾಗಿದೆ. ಇಲ್ಲವಾದರೆ ನೀರಿನಲ್ಲಿ ಹೋಮ ಮಾಡಿದಂತೆ ಅಪ್ರಯೋಜಕ ಎನ್ನುತ್ತಾ ಅದ್ಭುತ ನಾಣ್ಣುಡಿಯ ಪ್ರಯೋಗಿಸಿದ್ದಾರೆ.

ಬದುಕು ನಿತ್ಯ ಅದೇ ರಾಗ ಅದೇ ಹಾಡು ಹಾಡುತ್ತಿದ್ದರೆ ಸಹಿಸಿಕೊಳ್ಳುವುದು ತುಂಬಾ ಕಷ್ಟ. ಹೇಳಿದ್ದೆ ಹೇಳುತ್ತಾ, ಕೇಳಿಕ್ಕೆ ಕೇಳುತ್ತಾ,  ನೋಡಿದ್ದೆ ನೋಡುತ್ತಿದ್ದರೆ ನೀರಸವೆನಿಸುತ್ತದೆ. ನಿರಾಶಾಭಾವ ಕಾಡುತ್ತದೆ ಹಾಗಾಗಿ ಪ್ರತಿಯೊಂದರಲ್ಲೂ ನಿಷ್ಕಲ್ಮಶತೆ ಹುಡುಕುತ್ತಾ ಹೋಗಬೇಕು. ಹಳೆಯದರಲ್ಲಿ ಹೊಸತನವನ್ನು ಹುಡುಕಾಟ ಮಾಡಬೇಕು.

ಏನು ತಿಳಿಯದ ಹಸುಗೂಸೊಂದಕ್ಕೆ ನಿತ್ಯವೂ ಒಂದೇ ಆಟಿಕೆ ನೀಡುತ್ತಿದ್ದರೆ ಅದು ಬೇಸರದಿಂದ ದೂರ ದೂಡುತ್ತದೆ.  ಅದಕ್ಕೂ ಇದರೊಂದಿಗೆ ಆಡಿ ಬೇಡವೆನಿಸುತ್ತದೆ. ಹೊಸ ಗೊಂಬೆ ಬೇಕೆನಿಸುತ್ತದೆ. ನಾವು ಆಗಾಗ ಹೊಸ ಗಿಲಕಿ, ಗೊಂಬೆ  ನೀಡಿದರೆ ಅದು ಬಹಳ ಕುತೂಹಲದಿಂದ ತೆಗೆದುಕೊಂಡು ಖುಷಿ ಖುಷಿಯಾಗಿ ಆಡಿ ನಲಿಯುತ್ತದೆ. ಸಾಮಾಜಿಕ ಬದುಕಿಗೆ ಇನ್ನೂ ತೆರೆದುಕೊಳ್ಳದ ಮಗುವಿನ ಪಾಡೇ ಇದಾದರೆ ಎಲ್ಲವನ್ನೂ ಕಂಡಿರುವ ದೊಡ್ಡವರ ಪಾಡೇನು ಯೋಚಿಸಬೇಕು.

ಕಾಲಚಕ್ರವನ್ನು ಯಾರಿಂದಲೂ ಹಿಡಿಯಲು ಆಗದು ಅದು ಉರುಳುತ್ತಲೇ ಇರುತ್ತದೆ‌. ಕ್ಷಣ, ನಿಮಿಷ, ಗಂಟೆ, ದಿನ, ವಾರ, ತಿಂಗಳು, ವರ್ಷ, ದಶಮಾನ, ಶತಮಾನಗಳಾಗಿ ಹೋಗುತ್ತಿದ್ದಂತೆ ಹಳೆಯದನ್ನು ಮರೆಯುತ್ತೇವೆ.ಹೊಚ್ಚ ಹೊಸದು ಆ ಸ್ಥಾನವನ್ನು ತುಂಬುತ್ತದೆ  ಎನ್ನುವುದು ಕವಿಯ ಅಭಿಮತವಾಗಿದೆ.

ಅವಶ್ಯಕತೆ ಬದಲಾವಣೆಗೆ ಕಾರಣ

 ಹೊಸತನವಿರದಿರೆ ತುಕ್ಕಿನ ಜನನ

 ಅರಿತರೆ ಸೃಜನಶೀಲತೆಗಯ ಆಗಮನ

 ಬದುಕಲ್ಲಿ ಮೌಲ್ಯಗಳಿರಲಿಅನುದಿನ

ಹಿಂದೆ ಮನುಷ್ಯ ಅಲ್ಪತೃಪ್ತನಾಗಿದ್ದ‌ ಜನರು ದೈಹಿಕ ಶ್ರಮ ವಹಿಸಿ ದುಡಿಯುತ್ತಿದ್ದರು. ಬರುವುದರೊಳಗೆ ತೃಪ್ತಿ ಜೀವನವನ್ನು ಸಾಗಿಸುತ್ತಿದ್ದರು. ಪ್ರಕೃತಿಯ ನಡುವೆ ಜೀವಿಸುತ್ತಿದ್ದರು. ಯಂತ್ರಗಳ ಸಹಾಯ ಬೇಕಿರಲಿಲ್ಲ. ಅಗತ್ಯತೆಗಳು ಅವಶ್ಯಕತೆಗಳು ತೀರಾ ಕಡಿಮೆ ಇದ್ದವು. ಆದರೆ ಕಾಲ ಬದಲಾದಂತೆ ಜನರು ಆರಾಮದಾಯಕ ಜೀವನ ಬಯಸಿದರು. ಕೆಲಸ ಕಾರ್ಯಗಳನ್ನು ಮಾಡಲು ಅಶಕ್ತರಾದರು ಅಥವಾ ಸೋಮಾರಿತನ ತೋರಿದರು. ಪ್ರಯುಕ್ತ ಅವಶ್ಯಕತೆಗಳನ್ನು ಪೂರೈಸಲು ಮತ್ತೊಂದು ಮಾರ್ಗ ಬೇಕಾಗಿತ್ತು. ಆಗ ಅನ್ವೇಷಣೆಯಾದ ಹೊಸ ತಂತ್ರಗಳೆ ಈ ಯಂತ್ರಗಳು.‌ಹೀಗೆ ಹೊಸ ಹೊಸ ಅವಿಷ್ಕಾರಗಳು ಬದಲಾವಣೆಗೆ ನಾಂದಿಯಾದವು ಎಂದು ಕವಿ ಪರಿವರ್ತನೆಯ ಮೂಲವನ್ನು ಹುಡುಕುತಿದ್ದಾರೆ. 

ಹಳೆಯ ನೀರು ಹರಿಯುತ್ತಿರಬೇಕು. ಹೊಸ ನೀರು ಆ ಜಾಗದಲ್ಲಿ ಸೇರಬೇಕು. ಹಾಗೆಯೇ ಜೀವನ ಹಳೆಯದು ಮಾಸಬೇಕು, ಹೊಸದನ್ನು ಆಹ್ವಾನಿಸಬೇಕು. ಕಬ್ಬಿಣವನ್ನು ಬಳಸದೆ ಒಂದೆಡೆ ಬಿಟ್ಟರೆ ನೀರು ಗಾಳಿಯ ಸಂಪರ್ಕ ಪಡೆದು ತುಕ್ಕು ಹಿಡಿಯುವುದು ಎನ್ನುವ ಕವಿ ಹೊಸತನವಿಲ್ಲದ ಬದುಕಿಗೆ ಹೋಲಿಸಿ ಕವನ ಕಟ್ಟಿದ್ದಾರೆ. ಹಾಗಾಗಿ ಹೊಸತನದ ಮಳೆಗರೆಯಬೇಕು ಎನ್ನುತ್ತಾರೆ ಕವಿಗಳಿಲ್ಲಿ. ನಮ್ಮ ಮನವನ್ನು ಆ ಬದಲಾವಣೆಗೆ ಹೊಂದಿಕೊಳ್ಳಲು ಬಿಡದೆ ನಿಶ್ಚಲವಾಗಿಸಿದರೆ ತುಕ್ಕು ಹಿಡಿದು ಉಪಯೋಗಕ್ಕೆ ಬಾರದ ಯೋಚನೆಗಳಿಗೆ ಎಡೆಯಾಗುತ್ತದೆ. ಆದ್ದರಿಂದ ಬದಲಾವಣೆ ಅನಿವಾರ್ಯ.

ಮನುಜನ ಅವಶ್ಯಕತೆಗಳು ವಿರಳವಾದಂತೆ ಜಗತ್ತು ಹೊಸ ದಿಕ್ಕಿನತ್ತ ಸಾಗಿತು. ಚಲನಶೀಲತೆ ಇಲ್ಲದಿದ್ದರೆ ಯಾವುದೆ ಸೃಜನಶೀಲವಾದ, ಕ್ರಿಯಾತ್ಮಕವಾದ ಚಟುವಟಿಕೆಗಳು ಅನ್ವೆಷಣೆ ಮತ್ತು ಸಂಶೋಧನೆಗಳ ಉಸಾಬರಿಗೆ ಹೋಗುವುದಿಲ್ಲ. ಮಿತಿಮೀರಿದ ಬೇಡಿಕೆಗಳು ಅವುಗಳನ್ನು ಪೂರೈಸಲು ಕೈಗೊಂಡ ಯೋಜನೆಗಳ, ಪ್ರಯತ್ನಗಳ ಫಲವೆ ಪರಿವರ್ತನೆಯಾಗಿದೆ‌.

ಇಷ್ಟೆಲ್ಲಾ ನವ ನವೀನತೆ ಬಂದಿರುವುದು ಮನುಜನ ಅನುಕೂಲಕ್ಕಾಗಿ, ಅವನ ಶ್ರೇಯೋಭಿಲಾಷಿಗಾಗಿ, ಶ್ರಮದ ಸರಳತೆಗಾಗಿ ಎಂಬ ವಿಚಾರವನ್ನು ಮರೆತು ಜನ ಸೌಲಭ್ಯಗಳ ದಾಸರಾಗಿ ,ವ್ಯರ್ಥ ಕಾಲಹರಣ ಮಾಡುತ್ತಾ, ಅಮೂಲ್ಯ ಕ್ಷಣಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಹೊಸ ಹೊಸ ಕೌಶಲ್ಯಗಳನ್ನು ರೂಢಿಸಿಕೊಂಡು ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಅನುದಿನ ಸಾರ್ಥಕ ಬದುಕು ನಡೆಸಬೇಕೆಂದು ಕವಿ ಆಶಿಸುತ್ತಾರೆ.

ಹಣ್ಣೆಲೆ ಉದುರುತ್ತಿರಲು ನೋವು ಹೊಸಚಿಗುರು ತರುವುದು ನಲಿವು ಇಲ್ಲಿ ಅಡಗಿದೆ ಸೃಷ್ಟಿಕರ್ತನ ಸೊಬಗು

 ಹೊಸ ವಿಚಾರವು ಬಾಳಿಗೆ ಮೆರುಗು

ಸೃಷ್ಟಿಯ ಬೆರಗು ಬಿನ್ನಾಣ ವಿಸ್ಮಯಗಳೆಲ್ಲ ಒಂದು ಸೊಗಸು. ಋತುಗಳು ಅದರಲ್ಲೂ ವಸಂತಋತು ಹಚ್ಚ  ಹಸಿರಿನಿಂದ ಕಂಗೊಳಿಸುವ ಸುಂದರ ನೋಟಕ್ಕೆ ಸಾಕ್ಷಿಯಾಗಿದೆ. ಮರದಲ್ಲಿರುವ ಹಣ್ಣೆಲೆ ಉದುರುವಾಗ ಅತಿಯಾದ ನೋವು ತರುತ್ತದೆ. ಆದರೆ ಅದು ಸಹಜ ಕ್ರಿಯೆ .ಸೃಷ್ಟಿಯ ಕಾಲಚಕ್ರದಲ್ಲಿ ಹಳತು ಮಣಿಯಲೇಬೇಕು ಆಗ ಮಾತ್ರ ಹೊಸದು ಜೀವತಳೆಯಲು ಸಾಧ್ಯ. ಗಿಡಮರಗಳ ಎಲೆಗಳು ಹಣ್ಣಾಗಿ ಪರಿಪೂರ್ಣತೆಯನ್ನು ಪಡೆದು ಹೊಸ ಸೃಷ್ಟಿಗೆ ಅನುವು ಮಾಡಿಕೊಡಲು ಗಿಡದಿಂದ ಭೂಮಿಯನ್ನು ಸೇರುತ್ತದೆ. ಆಗಮಾತ್ರ ಮತ್ತೊಂದು ಹೊಸ ಚಿಗುರು ಮೂಡಲು ಸಾಧ್ಯ. ಇದು ಸೃಷ್ಟಿಯ ಸಂದೇಶವಾಗಿದೆ ಎನ್ನುತ್ತಾರೆ. ಕವಿಗಳು ಇಲ್ಲಿ ಮನುಜನ ಬದುಕು ಇದರಿಂದ ಹೊರತಾಗಿಲ್ಲ ಎಂದು ಪ್ರತಿಪಾದಿಸುತ್ತಾ, ಆಯಸ್ಸು ಮುಗಿದ ಮೇಲೆ ತೊಟ್ಟು ಕಳಚಿದ ಹಣ್ಣಿನಂತೆ ಜೀವ ಮಣ್ಣಾಗುವುದು. ಅದಾಗ ಮತ್ತೊಂದು ಜೀವಿಗೆ ಬದುಕಲು ಅವಕಾಶ ಒದಗಿಸುವುದು ಎಂತಹ ವಿಶಿಷ್ಟ ಸೃಷ್ಟಿಕರ್ತನ ಆಟ.

ಹೊಸಚಿಗುರು ಹಳೆಬೇರು

 ಕೂಡಿರಲು ಮರ ಸೊಬಗುll

 ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮl

 ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆll

 ಜಸವು ಜನಜೀವನಕೆಮಂಕುತಿಮ್ಮl”

ಈ ಕಗ್ಗದಲ್ಲಿ ಡಿವಿಜಿಯವರು ಹಳತು ಹೊಸದರ ಪ್ರಾಮುಖ್ಯತೆಯನ್ನು ಸಾರುವ ಮೂಲಕ ಕಿರಿಯರು ಹಿರಿಯರಿಗೆ ಮಾರ್ಗದರ್ಶಕರಾಗಬೇಕು ಎಂಬ ಸಂದೇಶ ನೀಡುತ್ತಾರೆ. ಹಣ್ಣೆಲೆ ಉದುರಿ ಚಿಗುರೆಲೆ ಮೇಳೈಸಿದಾಗ ಧರೆಯೆಲ್ಲಾ ಸ್ವರ್ಗದಂತೆ ಭಾಸವಾಗುತ್ತದೆ. ಪ್ರಕೃತಿ ಮಾತೆ ಹಚ್ಚಹಸಿರಿನ ಸೀರೆಯುಟ್ಟ ನಳನಳಿಸುತ್ತಾಳೆ. ಹಕ್ಕಿಗಳ ಇಂಪಾದ ಗಾನ ಕಿವಿಯನ್ನು ತಂಪಾಗಿಸುತ್ತದೆ. ಮನವನು ಮುದಗೊಳಿಸುತ್ತದೆ. ಹಣ್ಣೆಲೆ ಉದುರಿ ಹೊಸ ಚಿಗುರು ಮೂಡಿ ಪ್ರಕೃತಿಗೆ ಮೆರಗು ನೀಡುವಂತೆ ನಮ್ಮಲ್ಲಿರುವ ದುಷ್ಟತನವನ್ನೆಲ್ಲ ಅಳಿಸಿ ಮನದೊಳಗೆ ಸುವಿಚಾರ ತುಂಬಿಕೊಳ್ಳಬೇಕು. ಒಳ್ಳೆಯ ಆಲೋಚನೆಗಳು ಉತ್ತಮ ಚಿಂತನೆಗಳನ್ನು ಮಾಡಬೇಕು ಆಗ ನಮ್ಮ ನಡವಳಿಕೆಯನ್ನು ಎಲ್ಲರೂ ಗೌರವಿಸುತ್ತಾರೆ, ಎಲ್ಲರೂ ಆದರಿಸುತ್ತಾರೆ ಎಂಬುದು ಕವಿಯ ಆಶಯವಾಗಿದೆ.

ಋತುಗಳೆ ಬದಲಾವಣೆಗೆ ಗುರುಗಳು

 ಕಾಲಕ್ಕೆ ತಕ್ಕಂತೆ ಬೆಳೆವರು ಬೆಳೆಗಳು

 ಜ್ಞಾನವು ವಿಜ್ಞಾನಕ್ಕೆ ಮಡಿಲಾಗಲಿ

 ಕತ್ತಲೆಗೆ ಬೆಳಕು ನಾಂದಿ ಹಾಡಲಿ

ಋತುಗಳು ಬದಲಾವಣೆಗೆ ದಾರಿಯಾಗುತ್ತವೆ .ಪ್ರಕೃತಿಯಲ್ಲಿ ನವ ಚೈತನ್ಯ ತುಂಬುತ್ತವೆ. ಸೂರ್ಯನ ಪಥ ಸಂಚಲನೆಯಿಂದ ಪ್ರಕೃತಿಯ ಪರಿವರ್ತನೆಯು ಪ್ರವೃತ್ತಿಯಾಗಿ ಋತುಗಳು ಆಗುತ್ತದೆ. ಈ ಮಾತುಗಳಿಗೆ ಅನುಗುಣವಾಗಿ ಜೀವನ ಕ್ರಮವಿದೆ . ಈ ಋತು ಕಾಲಗಳಲ್ಲಿ ವೈವಿಧ್ಯಮಯವಾದ ಬದಲಾವಣೆಗಳು ಜರುಗುತ್ತವೆ ಎನ್ನುವ ಕವಿ, ಬದಲಾವಣೆಗೆ ಋತುಗಳು  ಕೂಡ ಕಾರಣ ಎನ್ನುತ್ತಾ ಪ್ರಾಕೃತಿಕ ಸಂಚಲನವನ್ನು ವಿವರಿಸಿದ್ದಾರೆ.

ಇನ್ನು ಈ ಋತುವಿಗೆ ಅನುಗುಣವಾಗಿ ಮನುಜನ ಬದುಕಿನಲ್ಲಿ ಪರಿವರ್ತನೆಯಾಗುತ್ತದೆ. ಆಹಾರ ಪದ್ಧತಿಗಳಲ್ಲಿ ಬದಲಾವಣೆ ಕಾಣಬಹುದು. ಆ ಋತುಗಳಿಗೆ ಅನುಸಾರವಾಗಿ ಬೆಳೆಗಳನ್ನು ಬೆಳೆಯುತ್ತೇವೆ ಎಂದು ಕವಿ ನೈಸರ್ಗಿಕ ಬದಲಾವಣೆಯನ್ನು ಕವನದ ಮೂಲಕ ನಿರೂಪಿಸಿದ್ದಾರೆ‌.

ಬದಲಾವಣೆಯಿಂದ ನೂತನ ಆಯಾಮಗಳು ಅನಾವರಣಗೊಳ್ಳುತ್ತವೆ. ಜೀವನವು ಕ್ಷಣಕ್ಷಣವೂ ಬದಲಾವಣೆಗೆ ಎಡೆಮಾಡಿಕೊಡುತ್ತದೆ ಎನ್ನುತ್ತಾರೆ ಕವಿಗಳು‌.

ಹಳೆ ಕೊಳೆಯ ಹಸಿಯಿಂದ

 ಕಸಗಂಡು ಕಿತ್ತೇಳು

 ನವಯುಗದ ಹಣೆಬರಹ

 ಬರೆಯೋಣ ಬಾ

 ಎಂಬ ಕವಿವಾಣಿಯಂತೆ ನಾವು ನಮ್ಮಲ್ಲಿರುವ ಋಣಾತ್ಮಕ ಅಂಶಗಳನ್ನು ದೂರಮಾಡಿ ಸಕಾರಾತ್ಮಕ ಅಂಶಗಳನ್ನು ಒಪ್ಪಿಕೊಂಡು ಹೊಸ ಚಿಂತನೆಗಳ ಮೂಲಕ ಬದಲಾವಣೆಗೆ ಸ್ಪಂದಿಸಬೇಕು.

ನಮ್ಮ ಮನದಲ್ಲಿರುವ ದ್ವೇಷ, ಅಸೂಯೆ, ಮದ ,ಮತ್ಸರಗಳನ್ನು ಕಸದಂತೆ ಪಕ್ಕಕ್ಕೆ ಸರಿಸಿ, ಪ್ರೀತಿ ಸ್ನೇಹ ಸೌಹಾರ್ದತೆ ಸಾಮರಸ್ಯಗಳ ಮೂಲಕ ನವಯುಗವನ್ನು ಸ್ವಾಗತಿಸೋಣ ಎನ್ನುವ ಭಾವವನ್ನು ಇಲ್ಲಿ ಕಾಣಬಹುದು.

ಜನರಲ್ಲಿರುವ ಮೂಢನಂಬಿಕೆ ಅಜ್ಞಾನ ಅಂಧಕಾರಗಳಿಗೆ ಬದಲಾವಣೆಯ ಗಾಳಿ ಬೀಸಲಿ, ಅದೆಲ್ಲ ತರಗೆಲೆಗಳಂತೆ ತೂರಿಕೊಂಡು ಹೋಗಿ ಜಗದಲ್ಲಿ ಜ್ಞಾನವೃಕ್ಷ ನೆಡೋಣ ಎನ್ನುವ ಹಂಬಲ ಕವಿತೆಯಾದಾಗಿದೆ. ಅಜ್ಞಾನದ ಮಡಿಲಲ್ಲಿ ಜ್ಞಾನದ ಕೂಸನ್ನು ಮಲಗಿಸಿ ಸರ್ವ ದಿಕ್ಕುಗಳಿಗೂ ಪಸರಿಸುವಂತೆ ಮಾಡಬೇಕೆನ್ನುವುದು ಕವಿಯ ಕಾಳಜಿಯಾಗಿದೆ.

ಕತ್ತಲೆ ಅನಿವಾರ್ಯ ಅದು ಪ್ರಕೃತಿಯ ವಿಸ್ಮಯ. ಅದು ಹಗಲು ರಾತ್ರಿಗಳ ಸಂಭ್ರಮ. ಶ್ರಮ ವಿಶ್ರಾಂತಿಗಳ ನೆಲೆ. ಆದರೆ ಅದು ನಮ್ಮ ನೈಸರ್ಗಿಕತೆಗೆ ಮಾತ್ರ ಸೀಮಿತವಾಗಿರಬೇಕು. ಈ ತಮ ನಮ್ಮ ಮನವನಾವರಿಸಬಾರದು  ನಮ್ಮ ಆಚರಣೆಗಳನ್ನು ಕುರುಡಾಗಿಸಬಾರದು. ಕಣ್ಣಿಗೆ ಒಳಿತು-ಕೆಡುಕು ನಿರ್ಧರಿಸಲು ಆಗದಂತೆ ಪರದೆಯಾಗಬಾರದು ಹೇಳಿದ್ದೆಲ್ಲವನ್ನೂ ನಂಬಬಾರದು. ಸತ್ಯಾಸತ್ಯತೆಗಳನ್ನು ಪ್ರವೇಶಿಸುವ ಮೂಲಕ ಕತ್ತಲಿನಿಂದ ಬೆಳಕಿನೆಡೆಗೆ ಪರಿವರ್ತನೆಯಾಗಬೇಕು ಎಂದು ಪ್ರತಿಪಾದಿಸುತ್ತಾರೆ.

ಕವಿತೆಯಲ್ಲಿ ನಾ ಕಂಡ ಕವಿ ಭಾವ

ಇಲ್ಲಿ ಕವಿಯು ಮಾನವನ ಮಿತಿಗೆ ನಿಲುಕದ ಮತ್ತು ನಮ್ಮಿಂದ ಮಾಡಲಾಗದ ಪರಿವರ್ತನೆಗಳು ಎರಡನ್ನು ಚರ್ಚಿಸುತ್ತಾ ಸಾಗಿದ್ದಾರೆ. ಜಗತ್ತು ಸೃಷ್ಟಿಯ ಸಂಚಲನಗಳಲ್ಲಿ ಹಗಲು ರಾತ್ರಿಗಳು, ಭೂವೈಪರಿತ್ಯಗಳು, ಋತುಮಾನಗಳಲ್ಲಿ ಆಗುವ ಬದಲಾವಣೆಗಳು. ಉಳಿದ ಕೆಲವು ಬದಲಾವಣೆಗಳು ಮನುಷ್ಯನಿಂದಲೇ ಸೃಷ್ಟಿಯಾಗುತ್ತವೆ. ಎಲ್ಲವನ್ನೂ ತನ್ನಲ್ಲಿ ದೃಷ್ಟಿಕೋನದಲ್ಲಿ ಕಾವ್ಯವಾಗಿಸಿದ್ದಾರೆ.

ಪ್ರಾಸ ಪ್ರಧಾನವಾಗಿ ತ್ರಾಸವಿಲ್ಲದೆ ಪದಭಾವಗಳ ಸಂಯೋಜಿಸಿ ಸುಂದರವಾದ ಕಾವ್ಯವನ್ನು ರಚಿಸಿದ್ದಾರೆ. ಕಾವ್ಯ ರಚನಾ ಶೈಲಿ ಸುಂದರವಾಗಿ ಮತ್ತು ಅರ್ಥಪೂರ್ಣವಾಗಿ ಮೂಡಿಬಂದಿದೆ. ಇವರು ಒಂದೇ ದೃಷ್ಟಿಕೋನದಲ್ಲಿ ವಿಷಯವನ್ನು ನೋಡದೆ ಬಹುಮುಖ್ಯ ಸ್ವರೂಪದಲ್ಲಿ ಕಾವ್ಯವನ್ನು ನಿರೂಪಿಸುತ್ತಾ ಹೋಗಿದ್ದಾರೆ.

ಇಲ್ಲಿ ಕವಿಯು ಕಲ್ಪನೆಗಳ ಬೆನ್ನು ಹತ್ತದೇ ರೂಪಕ ಸಾಮ್ರಾಜ್ಯವನ್ನು ಕಟ್ಟದೇ ವಾಸ್ತವಿಕತೆಯ ನೆಲೆಯಲ್ಲಿ ಸರಳ ಪದಗಳನ್ನು ಬಳಸಿಕೊಂಡು ನೈಜತೆಯನ್ನು ತಮ್ಮ ಕಾವ್ಯದಲ್ಲಿ ಬಿತ್ತರಿಸುತ್ತ ಹೋಗಿದ್ದಾರೆ. ಕವಿಯು ಕಂಡು ಕೊಂಡ ವಿಚಾರವನ್ನು ನೇರವಾಗಿ ಪರಿಚಿತ ಪದಗಳ ಮೂಲಕ ಮುಂದಿಡುತ್ತಾರೆ. ಪ್ರಕೃತಿಯ ಆಗುಹೋಗುಗಳ ಬಗ್ಗೆ ಮತ್ತು ಪರಿವರ್ತನೆಗಳ ಹೊಳಹುಗಳನ್ನು ತುಂಬಾ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

ಓದುಗರಲ್ಲಿ ಒಂದು ಹೊಸ ಪರಿವರ್ತನೆ ತರುವ ದಿಸೆಯಲ್ಲಿ ಈ ಕವಿತೆ ಕವಿತೆ ಅಮೋಘವಾಗಿ ದುಡಿಸಿಕೊಂಡಿದೆ. ಅಸ್ತಿತ್ವದ ಕಾಲಗತಿ ಮತ್ತು ಪರಿವರ್ತನೆಯ ದೆಸೆಯಲ್ಲಿ ಈ ಕವಿತೆ ಹೊಸತನದಿಂದ ಮೂಡಿಬಂದಿದೆ.

ಹೊರನೋಟದಲ್ಲಿ ಪ್ರಕೃತಿಯ ಪರಿವರ್ತನೆಯ ಪ್ರಧಾನ ಆಶಯವಾಗಿ ಕಂಡರೂ ಆಂತರ್ಯದಲ್ಲಿ ಮನುಜನ ಎಲ್ಲ ರೀತಿ ರಿವಾಜುಗಳಿಗೆ ಸಂಬಂಧಿಸಿದ ಬದಲಾವಣೆಗಳನ್ನು ಇಲ್ಲಿ ವ್ಯಕ್ತಪಡಿಸುತ್ತಾರೆ .ಈ ಕಾವ್ಯದಲ್ಲಿ ಕಲ್ಪನೆಗೆ ಅವಕಾಶವಿಲ್ಲ ಇದು ಕಾಲಚಕ್ರದಲ್ಲಿ ವೇಗವನ್ನು ವಿಧಾನವನ್ನು ಸೂಚಿಸುತ್ತದೆ.

ಒಟ್ಟಾರೆ ಕವಿ ಶರಣು ಕುಂಬಾರ್ ಅವರು ಒಂದು ಒಳ್ಳೆಯ ತಿರುಳುಳ್ಳ ಕವನವನ್ನು ರಚಿಸಿ ಪರಿವರ್ತನೆಯ ದಾರಿಯಲ್ಲಿ ಸಾಗುತಿದ್ದಾರೆ.ಪ್ರಿಯ ಓದುಗರೇ ನನ್ನ ಈ ಕವಿತೆಯ ವಿಶ್ಲೇಷಣೆ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತಾ ಮುಂದಿನ ವಾರ ಮತ್ತೊಂದು ಹೊಸ‌ ಕವಿ  ಕಾವ್ಯದ ಜೊತೆಗೆ ಬರುವೆನು. ನಿಮ್ಮ ಓದಿನ ನಿರೀಕ್ಷೆಯಲ್ಲಿ‌ ನಾ ಇರುವೆ.


ಅನುಸೂಯ ಯತೀಶ್

ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ

One thought on “

  1. ಜಗದೊಳು ಪರಿವರ್ತನೆ ಅತ್ಯವಶ್ಯಕ ಎಂಬುದನ್ನು ಕವಿಗಳು ಸುಸ್ಪಷ್ಟವಾಗಿ ಬಹಳ ಸರಳವಾಗಿ ಓದುಗರಿಗೆ ಮನಮುಟ್ಟುವಂತೆ ತಿಳಿಸಿದ್ದಾರೆ. ಕವಿತೆಯ ವಿಚಾರ ಧಾರೆಗಳನ್ನು ಅಷ್ಟೇ ಕಳಿತ ಬಾಳೆಹಣ್ಣು ಸುಲಿದಂತೆ ಸುಲಿದು ಉಣಬಡಿಸಿದ್ದಾರೆ ಶ್ರೀಮತಿ ಅನುಸೂಯ್ ಯತೀಶ್ ಮೇಡಂ ಈರ್ವರಿಗೂ ಅಭಿನಂದನೆಗಳು.

Leave a Reply

Back To Top