ಅಂಕಣ ಸಂಗಾತಿ

ಬೀಳುವುದು ಸಹಜ.

ಮುಂದುವರೆದು

 ನಾವು ಸಿರಸಿಯಿಂದ ಬರ್ತಾ ಪ್ರವೀಣ ಕೇಳಿದ್ರು ಅಲ್ಲಪಾ ನೀ ಏನರ ವಿಚಾರ ಮಾಡ್ಕೋತ ಹೊರಟಿದ್ದೇನು!?

 ಉಹುಂ.. ಇಲ್ಲ.

ಸ್ಪೀಡ್ ಇದ್ದೇನು!?

ಉಹುಂ ಇಲ್ಲ,

ಅಸಲು ನಾ ಸ್ಲೊ ಇದ್ದೆ ಅಂದೆ.

ನಾಯಕ ಸರ್ ಆಸ್ಪತ್ರೆಲಿ ನಾನಿದ್ದಾಗ್ಲೆ ನಾ ಬಿದ್ದ ಜಾಗ ಹುಡುಕ್ಕೊಂಡು ಹೋಗಿ ಬಂದಿದ್ರು ಅವರೊಂದು ಏಫ್ಆಯ್ಆರ್ ನು ಪ್ರವೀಣಗೆ ಒಪ್ಪಿಸಿದ್ರು. ಅವರ ಪ್ರಾಕಾರ ನಾ ಬಾಳ ಲಕ್ಕಿ ನನ್ನ ಗಾಡಿ ಸ್ಕಿಡ್ ಆದ ಜಾಗಕ್ಕು ನಾನು ಬಿದ್ದ ಜಾಗಕ್ಕು ಗಾಡಿ ಹೋಗಿ ಬಿದ್ದ ಜಾಗಕ್ಕು ಒಂದು ಸೂತ್ರ ಹಾಕಿ ನಕಾಶೆ ಬಿಡಿಸಿ ಅನಾಹುತ ತುಂಬ ಕಡಿಮೆದರಲ್ಲೆ ತಪ್ಪಿದೆ ಅಂದ್ರು. ನಾನೇನು ಮಾತಾಡ್ಲಿಲ್ಲ.

     ನನ್ನ ತಲೆಲಿ ಓಡ್ತಿದ್ದದ್ದು ಒಂದೇ ಪ್ರಶ್ನೆ ಕಾಲು ನೆಲಕ್ಕಿಡಬಾರ್ದು ಅಂದ್ರೆ ನನ್ನ ಬದುಕು ಹ್ಯಾಗೆ ಅಂತಾ, ಮನೆಲಿ ನಮ್ಮ ಎರಡನೆ ಅತ್ತೆ ಕಾಲು ಹಿಂದೊಮ್ಮೆ ಫ್ರ್ಯಾಕ್ಚರ್ ಆಗಿತ್ತು ಅವರು ಕಿಮ್ಸ್ ಲಿ ಒಂದು ತಿಂಗಳಿದ್ದು ಅರಾಮಾಗಿ ಬಂದಿದ್ರು. ಅವರದೊಂದು ಸ್ಟ್ಯಾಂಡ್ ಇತ್ತು ನಾವು ಅವರ ಮನೆ ಮುಂದೆ ಬರೋಷ್ಟರಲ್ಲಿ ಆ ಸ್ಟ್ಯಾಂಡ್ ತೆಗೆದು ಕ್ಲೀನ್ ಮಾಡಿಟ್ಟಿದ್ರು ಅದನ್ನ ಬಳಸೋದನ್ನ ಸಹ ಹೇಳಿ ನಮ್ಮ ಡಿಕ್ಕಿಗೆ ಹಾಕಿ‌ಕಳುಹಿಸಿದ್ರು. ಆದರೆ ಕಾರ್ ಇಳಿದು ಆ ಸ್ಟ್ಯಾಂಡ್ ಉಪಯೋಗಿಸಿ ಮನೆ ಒಳಗೆ ಬಂದು ಬೆಡ್ ರೂಮ್ ಸೇರೊ ಹೊತ್ತಿಗೆ ನನಗೆ ನರಕ ಯಾತನೆ ಅಂದ್ರೇನು ಅಂತ ತಿಳಿದು ಹೋಗಿತ್ತು.‌ಕಾಲು ಮರಗಟ್ಟಿ ಯಾರದೊ ಅಂಗವನ್ನ ನಾನು ಹೊತ್ತು ತಿರುಗೋದರ ಜೊತೆಗೆ ಕಾಲನ್ನ ಒಂದಿಂಚು ಅಲ್ಲಾಡ್ಸಿದ್ರು ಭಯಂಕರ ನೋವಾಗೋದು.

      ಆ ದಿನ ನಮ್ಮ ಕೊನೆ ಅತ್ತೆ ವಿಜಯಲಕ್ಷ್ಮಿ ಮತ್ತೆ ನಮ್ಮನೆಯವರ ಅಕ್ಕ ಸುಜಾತ ನನ್ನ ಆರೈಕೆಗೆ ಮತ್ತೆ ಅಡುಗೆ ಮನೆ ಮ್ಯಾನೇಜಮೆಂಟ್ ಗೆ ನಿಂತ್ರು. ಮನೆಗೆ ಬಂದ ಹತ್ತು ನಿಮಿಷಕ್ಕೆಲ್ಲ ಜಾತ್ರೆ ನೋಡೊಕೆ ಬರೋ ಜನರ ತರ ನಮ್ಮ ಏರಿಯಾ ಜನ ನಮ್ಮ ಸ್ಟಾಫ್ ನಮ್ಮಾಫಿಸಿನ ಸುತ್ತಮುತ್ತಲಿನ ಆಫಿಸ್ ಸ್ಟಾಫ್ ಎಲ್ಲ ಬಂದು ಅಕ್ಕರೆ, ಪ್ರೀತಿ,ಆಶೀರ್ವಾದ, ಹಣ್ಣು ಕೊಟ್ಟು ಹೋದ್ರು.

          ಇದೆಲ್ಲ ಆಗಿದ್ದು ಶುಕ್ರವಾರ ಶನಿವಾರವು ಜನಜಾತ್ರೆ ಮತ್ತೆ ನೋವಿನ ಜೊತೆ ದಿನ ಕಳೆದುಹೋಯ್ತು. ಸಂಜೆ ಹೊತ್ತಿಗೆ ನಮ್ಮನೆಯೋರು ಮೆಲ್ಲಗೆ ಬಂದು ಸೋಮವಾರಕ್ಕೆನಾರು ವ್ಯಾವಸ್ಥೆ ಮಾಡ್ಕೊಬೇಕು ಸುಜಾತಕ್ಕ ಡ್ಯುಟಿ ಹೋಗ್ತಾಳೆ. ವಿಜು ಕಾಕು ಮನೆಗೆ ಹೋಗ್ತಾರೆ ಅಂದ್ರು. ಸಾಮಾನ್ಯವಾಗಿ ನಾನು ಯಾವುದನ್ನ ನನ್ನ ತವರ ಮನೆಗೆ ತಕ್ಷಣ ತಿಳಿಸಲ್ಲ‌  ಎಲ್ಲ ಮುಗಿದ್ಮೇಲೆ ನಮ್ಮವ್ವಗ ಕಾಲ್ ಮಾಡಿ ಎವ್ವಾ ಮೊನ್ನೆ ಹಿಂಗಿಂಗಾಗಿತ್ತು ಇಂತಾ ಡಾಕ್ಟರ್ ಹತ್ರ ತೋರ್ಸಿದ್ವಿ ಈಗ ಎಲ್ಲ ಅರಾಮ ಅಂತ ಚಿಕ್ಕದಾಗಿ ಚೊಕ್ಕದಾಗಿ ಹೇಳಿ ಮುಗಿಸ್ತಿದ್ದೆ. ರೈತರ ಮನೇಲಿ ಅವರವೆ ನೂರಾ ಎಂಟು ತಾಪತ್ರಯ ನಮ್ಮ ವ್ಯಾಧಿ ಅವರಿಗ್ಯಾಕೆ ಅಂಟಿಸಿ ಉಸಿರು ಹಾಕ್ಸೊದು ಅನ್ನೋ ಕಾರಣಕ್ಕೆ ನಾನು ತವರಿಗೆ ಎಲ್ಲ ವರದಿನು ಒಪ್ಪಿಸಲ್ಲ. ಇಷ್ಟೆ ಹೇಳಿದ್ರು ಸಹ ನಮ್ಮವ್ವ ಅಯ್ಯಯ ಅದಕ್ಕ ಎರಡ್ಮುರ್ದಿನದಿಂದ ಸಂಕಟಾ ಅಂದ್ರೆ ಸಂಕಟ ಅನ್ನಕಿ. ನಾ ವಾಪಸ್ ಟೈಮ್ ಟೈಮಿಗೆ ಊಟಾ ಮಾಡು ಆ್ಯಸಿಡಿಟಿ ಆಗಿರ್ಬೇಕ ನೋಡು ನಿಮ್ಮನ್ಯಾಗ ಹ್ವಾರೆನ ಮುಗೆಂಗಿಲ್ಲ ಇದನ್ನ ಮಾಡಿ ಉಣತನಿ ಅದನ ಮಾಡಿ ಉಣತನಿ ಅಂದು ಜಳಕ ಮಾಡಿ ಉಣ್ಣರಾಗ ನಾಕಕ್ಕತಿ. ಬೆಳ್ಳಬೆಳತನಕ ಗೌಡ್ರ ಮನೆತನಕ ಐತೆ ಐತೆಲ್ಲ ನಿಮ್ಮ ಬಾಳೆವು ಅಂತ ನಮ್ಮವ್ವಗ ಬುದ್ಧಿ ಹೇಳಿ ಫೊನ್ ಇಡ್ತಿದ್ದೆ. ಆದ್ರೆa ಈಗ ಇದು ಎರಡ ದಿನಕ್ಕ ಮುಗಿದೋಗೊ ಜ್ವರ ಕೆಮ್ಮು ಡಿಸೆಂಟ್ರಿ ಆಗಿರ್ಲಿಲ್ಲ. ಧಾರವಾಡದಲ್ಲಿ ಪಿಹೆಚ್ಡಿ ಮಾಡ್ತಿರೊ ತಂಗಿಗೆ ಕಾಲಾಯಿಸಿದೆ ಬಾ ಅಂದೆ. ಅವಳು ಸುದ್ದಿನ ಊರಿಗೆ ಮುಟ್ಟಿಸಿದ್ಲು ರವಿವಾರ ಮುಂಜಾನೆ ಹೊತ್ತಿಗೆ ಅವ್ವ, ಚಿಕ್ಕಮ್ಮ , ಕಾಕಾ ಕಾಕಾನ ಮಕ್ಕಳು ಎಲ್ಲ ಹಾಜರ್.

    ಸಂಜೆ ಹೊತ್ತಿಗೆ ಧಾರವಾಡದ ತಂಗಿ. ಇದರೊಟ್ಟಿಗೆ ಬಂಕಾಪುರದ ತಮ್ಮ ಬಿದ್ದ ದಿನವೇ ಸುದ್ದಿ ತಿಳಿದು ಆಫಿಸಿನಿಂದ ಸೀದಾ ಇಲ್ಲಿಗೆ ಬಂದು ಹೋಗಿದ್ದ. ಬರೀ ಬಂದು ಹೋಗಿರ್ಲಿಲ್ಲ ಅವನು ಗಾಡಿಯಿಂದ ಬಿದ್ದು ಬರುವುದರಲ್ಲಿ ಎಕ್ಪರ್ಟ್ “ಏ ನನಗಾದಷ್ಟೇನು ಗಾಯಾಗಿಲ್ಲ ಬಿಡು, ನನ್ನ ಕೈ ಕಾಲ ನೋಡಿದ್ದಿಲ್ಲ ಹೆಂಗ ಕೆತಗೊಂಡ ಹೋಗಿದ್ವು ನಿನಗ ಗಾಯಗಳೇನು ಇಲ್ಲ ಖಾಲಿ ಒಂದ ಕಾಲ ಫ್ರ್ಯಾಕ್ಚರ್” ಅಂತ ಲೇವಡಿ ಮಾಡಿ ಹೋದವ ಭಾನುವಾರ ಹೊತ್ತಿಗೆ ಅವನು ಹೆಂಡತಿ ಸಮೇತ ಬಂದಬಿಟ್ಟಿದ್ದ..

   ‌  ಭಾನುವಾರ ಇಡೀ ತವರಿನ ಸಿರಿಯಲ್ಲಿ ಎಲ್ಲ ನೋವು ಮರೆತು ಹಾಯಾಗಿದ್ದೆ. ಶುಕ್ರವಾರ ಶನಿವಾರ ಇದ್ದು ಆರೈಕೆ ಮಾಡಿದವರು ತಂಗಿ ಅಮೃತಾ ಮತ್ತ ಮಗಳು(ತಮ್ಮನ ಹೆಂಡತಿ) ಅಕ್ಷದಾಗೆ ಚಾರ್ಜ್ ಕೊಟ್ಟು ರಿಲೀವ್ ಆಗಿದ್ರು.

       ಇವರಿಬ್ರು ಈ ಕಾಲದ ಹುಡುಗಿರು ಪಟಾಪಟ್ ನನ್ನ ಮನೆಯ ವ್ಯವಸ್ಥೆಗೆ ಹೊಂದಿಕೊಂಡ್ರು ತಮ್ಮದೆ ಸೈನ್ಸು ಪ್ರಯೋಗಿಸಿ ಒಂದಿಷ್ಟು ಮೊಟ್ಟೆಯ ಅಡುಗೆ ಕಾಲು ಸೂಪ್ ವಿಧವಿಧದ ಅಡುಗೆ ಮಾಡಿ ಬಡಸ್ತಿದ್ರು. ಆದರೆ ನಾನು ಬೆಡ್ ನಿಂದ ಎದ್ದು ಕೂಡಬೇಕಂದ್ರು ಒಬ್ಬರು ಬಂದು ನನ್ನ ರಟ್ಟೆಹಿಡಿದು ಕಾಲು ಅಲ್ಲಾಡದಂತೆ ಮುತುವರ್ಜಿ ವಹಿಸಿ ಎಬ್ಬಿಸಿ ಕೂಡಿಸ್ಬೇಕಿತ್ತು. ಮಾಡ್ತಿದ್ರು. ನಾನು ಇವರು ಅಡುಗೆ ಮಾಡ್ಕೊಂಡು ಉಂಡು ಓಡೊವಾಗ ಕೆಲಸ ಹಂಚ್ಕೊಂಡಿದ್ವಿ ಈ ಹೊಸ ಮನೆಗೆ ಬಂದ ಮೇಲೆ ಕೆಲಸದವರು ಸಿಗೋದು ಕಷ್ಟ ಅಂತ ತಿಳದ ಮೇಲಂತು ಮಾನಸಿಕವಾಗಿ ದೈಹಿಕವಾಗಿ ಹೊಂದ್ಕೊಂಡಬಿಟ್ಟಿದ್ವಿ. ಆದರೆ ಈಗ ಈ ಎರಡು ಹುಡುಗಿರಿಗೆ ನಾನು ನನ್ನ ಆರೈಕೆ ಸಮಯ ಸಮಯಕ್ಕೆ ಕ್ಯಾಲ್ಸಿಯಮ್ ಯುಕ್ತ ಆಹಾರ. ಮನೆಗೆ ಬಂದು ಹೋಗುವವರಿಗೆ ಚಹಾ ಉಟೋಪಚಾರ ಮನೆ ಕ್ಲೀನಿಂಗು ಎಲ್ಲ ಸೇರಿ ನಾಲಕ್ಕಾರು ದಿನದಲ್ಲಿ ಹೈರಾಣಾಗಿ ಹೋದ್ರು.

     ಇಲ್ಲೊಂದಿಷ್ಟು ಇಂಟರೆಸ್ಟಿಂಗ್ ವಿಷ್ಯಗಳನ್ನ ಹೇಳ್ತಿನಿ ಕೇಳಿ.

ನಮ್ಮ ಏರಿಯಾದ ಒಬ್ಬ ಆಂಟಿ ನನ್ನ ನೋಡೊದಕ್ಕೆ ಬಂದಿರ್ಲಿಲ್ವಂತೆ ಆಕೆ ನಾ ಬಿದ್ದ ದಿನ ನಮ್ಮ ಮನೆಗೆ ಬರ್ತಿದ್ದ ಮತ್ತೊಬ್ಬ ಮಹಿಳೆನ ನಿಲ್ಲಿಸಿ “ನಾ ಇವತ್ತ ದೀಪಾ ಮನೆಗೆ ಹೋಗಲ್ರಿ ಎಲ್ಲಿ ಬಿದ್ದಾರೊ ಏನೊ !? ಜಾಗ ಎಂತದೋ!? ಗಾಳಿ ಎಂತಾದೋ”!?  ಇತ್ಯಾದಿ ಇತ್ಯಾದಿ ಹೇಳಿ ಕಳ್ಸಿದಾರೆ. ಈವಮ್ಮ ಬಂದು ಯತಾವತ್ತು ನನ್ನ ಹತ್ರ ಅದನ್ನ ಹೇಳಿದ್ರು. ನಂಗೊಂದಿಷ್ಟು ನಗೆ ಬಂತು ನಕ್ಕು ಸುಮ್ಮನಾದೆ. ಆದರೆ ನಾ ಬಿದ್ದದ್ದು ಬಹಳ ವಿಚಿತ್ರ ಕತೆಗಳನ್ನ ಕೆಳೊಹಾಗೆ ಮಾಡ್ತು. ನಮ್ಮನೆ ಎದುರು ಮನೆಯವರು ಎರಡು ತಿಂಗಳ ಹಿಂದೆ ನೀರ ಬಾಟಲ್ ಗಾಡಿಮೇಲೆ ಇಟ್ಕೊಂಡ ಬರೋವಾಗ ಎಕ್ಸಾಟ್ಲಿ ಅಲ್ಲೆ ಬಿದ್ದಿದ್ರಂತೆ. ನಮ್ಮ ಹಳೆ ಓನರ್ ಲಾರಿ ಅಲ್ಲೆ ಉರುಳಿ ಆರು ತಿಂಗಳ ಹಿಂದೆ ಅವರ ಡ್ರೈವರ್ ಸ್ಪಾಟ್ ಔಟ್ ಅಂತೆ‌. ನಮ್ಮನೆಯವರು ಹೊರಗೋದಾಗೆಲ್ಲ ಕೆಸೆದಾಗ ಇಂತಾದೊಂದ ಕತೆ ಇಟ್ಕೊಂಡ ಬರೋರು.

    ಮನೆಗೆ ಬಂದ ತಂಗಿ ನ್ಯುಟ್ರಿಷಿಯನ್ ಸೈನ್ಸ್ ಓದ್ದೋಳು ಅವಳ ಪ್ರಾಕಾರ ” ಲೇ ನಿನಗ ಹಿಮೊಗ್ಲೊಬಿನ್ ಲೆವೆಲ್ ಕಡಿಮೆ ಐತಿ ಗಿಡ್ಡಿನೆಸ್ ಬಂದ ಬಿದ್ದಿ ನೀ ಅಂದ್ಲು. ತಮ್ಮನ ಹೆಂಡ್ತಿ ಮಾಸುಮ್ ಬಚ್ಚಿ ಅದು “ಅರಾಮ್ ರೆಸ್ಟ್ ಕರಾ ತುಮಾಲಾ ಪೆಹುಲುನ ರಜಾ ಮಿಳತ್ ನೈ ಅತ್ತಾ ಗಪ್ ರಾವಾ ಅರಾಮ್” ಅಂದ್ಲು. ಇವಳು ಮಹರಾಷ್ಟ್ರದವಳು ಕನ್ನಡ ಜರಾಜರಾ.

ಅಂತು ಈ ಕತೆಗಳು ನನ್ನ ನೋವು ಎಲ್ಲದರೊಟ್ಟಿಗೆ ನಾ ಒಂದಷ್ಟು ದಿನ ತೆಗದೆ.

   ಇನ್ಮುಂದೆ ಹೇಳಬೇಕಿರೋದು ಒಬ್ಬ ಕೆಲಸದಾಕೆಯ ಅನ್ವೇಷಣೆಯ ಕುರಿತು.

ಮುಂದೆ ಹೇಳ್ತೀನಿ


ದೀಪಾ ಗೋನಾಳ

ಕವಯಿತ್ರಿ-
ತಂತಿ ತಂತಿಗೆ ತಾಗಿ ಪ್ರಕಟಿತ ಸಂಕಲನ
ಅಂಚೆ ಇಲಾಖೆಯಲ್ಲಿ ಕರ್ತವ್ಯ.
ಊರು‌ಕೇರಿ-ಹಾನಗಲ್ – ಹಾವೇರಿ

Leave a Reply

Back To Top