ಅಂಕಣ ಸಂಗಾತಿ

ಕಾವ್ಯದರ್ಪಣ

ಕಾವ್ಯ ಪ್ರವೇಶಿಕೆಯ ಮುನ್ನ

 ಒಳಿತು ಮಾಡು ಮನುಸ

 ನೀ ಇರೋದು ಮೂರು ದಿವಸ

 ಉಸಿರು ನಿಂತ ಮೇಲೆ

 ನಿನ್ನ ಹೆಸರು ಹೇಳುತಾರ

ಹೆಣ ಅನ್ನುತಾರ ಮಣ್ಣಾಗ ಹೂಳುತಾರ

 ಚಟ್ಟ ಕಟ್ಟುತಾರ ನಿನ್ನ ಸುಟ್ಟು ಹಾಕುತಾರ

 ಒಳಿತು ಮಾಡು ಮನುಸ

 ನೀ ಇರೋದು ಮೂರು ದಿವಸ

             – ಶ್ರಿ ರಿಷಿ

ತಾಯ ಗರ್ಭದಿಂದ ಧರೆಯ ಮೇಲೆ ಕಾಲಿಟ್ಟ ಪ್ರತಿಯೊಬ್ಬರು ಅಂತಿಮವಾಗಿ ಭೂತಾಯ ಗರ್ಭದೊಳಗೆ ಲೀನವಾಗಲೇಬೇಕು ಇದು ಪ್ರಕೃತಿಯ ನಿಯಮ. ಇದನ್ನು ಮೀರಿ ನಡೆಯುವ ಶಕ್ತಿ ಜಗತ್ತಿನಲ್ಲಿ ಯಾರಿಗೂ ಇಲ್ಲ. ಈ ವಿಷಯ ಮನುಜನಿಗೆ ತಿಳಿಯದ ಮರ್ಮವಲ್ಲ. ಅವನ ಬದುಕಿನ ವಾಸ್ತವ ಕಟು ಸತ್ಯವಿದು. ಆದರೂ ಸ್ವಾರ್ಥ ಲಾಲಸೆ ಗಳ ಪಂಜರದೊಳಗೆ ಬಂಧಿಯಾಗಿ ಅಜ್ಞಾನವೆಂಬ ಅಂಧಕಾರದಲ್ಲಿ ಮುಳುಗಿ ಸುಜ್ಞಾನವೆಂಬ ಬೆಳಕಿಗೆ ಮೋಸ ಕಪಟ ಅನ್ಯಾಯ ವಂಚನೆ ಭ್ರಷ್ಟಾಚಾರಗಳೆಂಬ ಪರದೆ ಹಾಕಿ ಅದನ್ನೇ ಪ್ರಜ್ವಲಿಸುವ ಕಿರಣವೆಂದು ಭಾವಿಸಿ ವಾಸ್ತವಿಕ ಬದುಕಿನ ಮೌಲ್ಯ ಮುಚ್ಚಿಟ್ಟು ಬಾಳುವುದು ಅಸಾಧ್ಯ. ಲೌಕಿಕ ಸುಖಕ್ಕಾಗಿ ಪರಮಾರ್ಥ ಸತ್ಯವನ್ನು ಅರಿಯುತ್ತಾ ಆಧ್ಯಾತ್ಮಿಕ ಚಿಂತನೆಯನ್ನು ಮಾಡುವ ಮನಸ್ಸು ಮಾಡಬೇಕು.

ಸರ್ವ ಸಂಗ ಪರಿತ್ಯಾಗಿಯಾಗಿ ಕೈವಲ್ಯ ಜ್ಞಾನವನ್ನು ಪಡೆದ ನಂತರ ಬುದ್ಧನ ಬಳಿಗೆ ಜೀವನದಲ್ಲಿ ಬೇಸರಗೊಂಡ ರಾಜಮಹಾರಾಜರು ಬರುತ್ತಿದ್ದರು. ಅವರನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಹೆಣ ಸುಡುವುದನ್ನು ತೋರಿಸುವ ಮೂಲಕ ಉಸಿರು ಹೋದ ನಂತರ ಈ ದೇಹ ಈ ರೀತಿಯಾಗಿ ಇರುವುದಿಲ್ಲ. ಸುಟ್ಟು ಬೂದಿಯಾಗುತ್ತದೆ. ಅದಕ್ಕೆ ಅಸ್ಥಿತ್ವವಿರುವುದಿಲ್ಲ. ಆದ್ದರಿಂದ ನಮ್ಮ ನಂತರ ನಮ್ಮ ಹೆಸರಲ್ಲಿ ಉಳಿಯುವುದು ನಮ್ಮ ಸಮಾಜ ಕಲ್ಯಾಣ ಕಾರ್ಯಗಳು ಆದ್ದರಿಂದ ಅವುಗಳಲ್ಲಿ ಕಾರ್ಯತತ್ಪರರಾಗಿ ಎಂಬ ಉಪದೇಶ ನೀಡುತ್ತಿದ್ದರಂತೆ.

ನೀರ ಮೇಲಿನ ಗುಳ್ಳೆ ಈ ದೇಹ. ಈ ದೇಹದ ಬಗ್ಗೆ ಬದುಕಿನ ಬಗ್ಗೆ ಅತಿಯಾದ ವ್ಯಾಮೋಹಿಗಳಾಗದೆ ಹುಟ್ಟಿ ಸಾಧಿಸಬೇಕಾಗುವ ಪರಮ ಪವಿತ್ರ ಕಾರ್ಯಗಳ ಬಗ್ಗೆ ನಮ್ಮ ಮನಸ್ಸನ್ನು ಹರಿ ಬಿಡಬೇಕು. ನಾವು ನಮ್ಮ ಪಂಚೇಂದ್ರಿಯಗಳ ಸುಖವೇ ಸತ್ಯವೆಂದು ನಂಬಿ ಈ ಜಗತ್ತಿನಲ್ಲಿ ನಮ್ಮ ಕರ್ತವ್ಯಗಳನ್ನು ಮರೆತು ಮನಸೋ ಇಚ್ಚೆ ಕಾಲ ಕಳೆಯುತ್ತಾ ಸಮಯವನ್ನು, ಈ ಬದುಕನ್ನು ಅಪಮೌಲ್ಯಕ್ಕೆ ಈಡು ಮಾಡುತ್ತೇವೆ.

ಅಶಾಶ್ವತವಾದ ಬದುಕಲ್ಲಿ ನಮ್ಮ ನಂತರವೂ ನಮಗೆ ಶಾಶ್ವತ ಸ್ಥಾನ ದೊರಕಿಸುವುದು ನಾವು ಮಾಡುವ ಜನಹಿತ ಕಾರ್ಯಗಳು. ಸಾವು ಹೇಗಿದ್ದರೂ ಸಂಭವಿಸುತ್ತದೆ ಅದು ನಮ್ಮನ್ನು ಅಪ್ಪಿಕೊಳ್ಳುವ ಮುನ್ನ ಜನರು ನಮ್ಮನ್ನು ಒಪ್ಪಿಕೊಂಡು ನಮ್ಮ ಬಗ್ಗೆ ನಾಲ್ಕಾರು ಅಭಿಮಾನದ ನುಡಿಗಳನ್ನು ಆಡುವಂತೆ ಬದುಕು ರೂಪಿಸಿಕೊಂಡು ಹುಟ್ಟಿನ ಸಾರ್ಥಕತೆ ಪಡೆಯಬೇಕು.

ಇತ್ತೀಚೆಗೆ ಮನುಜನಿಗೆ ತಮ್ಮ ಬದುಕಿನ ಮೌಲ್ಯ ತಿಳಿಸಿದ್ದು ಕೊರೋನಾ ಮಹಾಮಾರಿ ಎಂದರೆ ತಪ್ಪಾಗಲಾರದು. ಇಡೀ ವಿಶ್ವವೇ ತನ್ನ ಕಪಿಮುಷ್ಟಿಯಲ್ಲಿದೆ. ಆಗಸಕ್ಕೆ ಹಾರಬಲ್ಲ, ಸಮುದ್ರದಾಳಕೆ ಇಳಿಯಬಲ್ಲ, ಬಯಸಿದ್ದನ್ನು ಕ್ಷಣಾರ್ಧದಲ್ಲಿ ಪಡೆಯಬಲ್ಲವನಾಗಿದ್ದ. ಆದರೆ ಇಷ್ಟೆಲ್ಲಾ ಮೆರೆಯುತ್ತಿದ್ದ ಮಾನವನು ಚಂದ್ರಲೋಕದಕ್ಕಿರಲಿ ಮನೆಯ ಮುಂಬಾಗಿಲಿಗೆ ಹೋಗದಂತೆ ಪ್ರಾಣ ಭಯದಲ್ಲಿ ನಿತ್ಯ ನಲುಗುತ್ತಾ ಗುರಿ ಮುದುರಿದ ಹಕ್ಕಿಯಂತೆ ಮನೆಯಲ್ಲಿ ಕೂರುವಂತೆ ಮಾಡಿತು. ತನ್ನ ಪ್ರತಾಪ ತೋರಿ ಸಾಲು ಸಾಲು ಹೆಣಗಳ ಮೆರವಣಿಗೆ, ಬಿಡುವಿಲ್ಲದೆ ಧಗಧಗಿಸುವ ಸ್ಮಶಾನದ ಜ್ವಾಲೆಯ ಮೂಲಕ ಮನುಕುಲವನ್ನು ಬೆಚ್ಚಿ ಬೀಳಿಸಿದೆ‌. ಏನು ಬೇಡ ಪ್ರಾಣವೊಂದು ಉಳಿದರೆ ಸಾಕು ಎನ್ನುವ ಮಟ್ಟಕ್ಕೆ ಕರೆದೊಯ್ದ ಇದು ಮನುಜನಿಗೊಂದು ದೊಡ್ಡ ಪಾಠವಾಗಿದೆ.

ನಾವು ಬದುಕಿದ್ದಾಗ ಮಾಡಿದ ಒಳ್ಳೆಯ ಕೆಲಸಗಳು ಸತ್ತಾಗ ನಮ್ಮ ವ್ಯಕ್ತಿತ್ವ ಅಳೆಯುತ್ತವೆ. ಜನಪರ ಕಾಳಜಿ ಇರುವ ವ್ಯಕ್ತಿಯ‌ ಮರಣದಲ್ಲಿ ಸೇರಿದ ಜನರು ಇಂತಹ ಸಹೃದಯ ವ್ಯಕ್ತಿಗೆ ಮಾನವೀಯತೆ ಹರಿಕಾರನಿಗೆ ಇಷ್ಟು ಬೇಗ ಸಾವು ಏಕೆ ಕೊಟ್ಟೆ ಭಗವಂತ ಎಂದು ವಿಧಿಯನ್ನು ಶಪಿಸಿದರೆ, ದುಷ್ಟರು ಸಮಾಜಘಾತುಕರು ಸತ್ತಾಗ ಸದ್ಯ ಪೀಡೆ ತೊಲಗಿತು, ಭೂಮಿಗೆ ಭಾರ ಕಡಿಮೆಯಾಯಿತು ಎಂದು ಕುಟುಕುವ ಚುಚ್ಚು ಮಾತುಗಳನ್ನು ಕೇಳಿದ್ದೇವೆ. ಈ ಘಟನೆಯ ಹಿಂದಿನ ಎರಡು ಸನ್ನಿವೇಷಗಳನ್ನು ನೋಡಿದಾಗ ನಮಗೆ ನಿಜಕ್ಕೂ ನಾವು ಹೇಗೆ ಬದುಕಬೇಕೆಂದು ಪಾಠಮಾಡಲು ಸೈದ್ಧಾಂತಿಕ ಗುರುವಿನ ಅಗತ್ಯಬಾರದು.

ಸ್ನೇಹಿತರೆ ಹುಟ್ಟು ಸಾವುಗಳ ನಿಯಂತ್ರಣ ಮೇಲಿನವನದಾದರೂ ಹುಟ್ಟು ಸಾವುಗಳ ನಡುವಿನ ಜೀವತಾವಧಿ ಮಾತ್ರ ನಮ್ಮ ಕರಗಳಲ್ಲಿದೆ. ಅದನ್ನು ಸಮರ್ಥವಾಗಿ ಸಾರ್ವಜನಿಕವಾಗಿ ಜನಪರವಾಗಿ ಜನಹಿತ ಕೆಲಸಗಳನ್ನು ಮಾಡಲು ಬಳಸಿಕೊಂಡರೆ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯುವುದರಲ್ಲಿ ಎರಡು ಮಾತಿಲ್ಲ. ಅದನ್ನು ಸಾಬೀತುಪಡಿಸುವ ಕವಿತೆಯೊಂದನ್ನು ನಾನಿಂದು ನಿಮ್ಮ ಮುಂದೆ ತೆರೆದಿದ್ದೇನೆ .

ಕವಿ ಪರಿಚಯ

ರಂಗಭೂಮಿ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿವಿಧ ಪ್ರಯೋಗಗಳ ಮೂಲಕ ಹೊಸ ಹೊಸ ಆವಿಷ್ಕಾರಗಳನ್ನು ಅನವರತ ಮಾಡುತ್ತಾ ಬರುತ್ತಿರುವ ಸೃಜನಶೀಲ ಕಲಾವಿದರು ಈ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ ಅವರು. ಇವರು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ. ಪದವಿಯನ್ನು, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಪಿ.ಎ ಮಾಸ್ಟರ್ ಆಫ್ ಪರ್ಫಾರ್ಮೆನ್ಸ್, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವಿಯನ್ನು ಪಡೆದಿದ್ದಾರೆ. 45 ವರ್ಷಗಳಿಂದಲೂ ನಿರಂತರವಾಗಿ ರಂಗಭೂಮಿಯ ವಿಭಿನ್ನ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ನಟರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ ರಂಗಭೂಮಿ ಕ್ಷೇತ್ರದಲ್ಲಿ ವಿಶಿಷ್ಟ ಚಾಪು ಮೂಡಿಸಿದ್ದಾರೆ.

ಕಥೆ, ಕವನ ಹಾಗೂ ಕಾದಂಬರಿಗಳ ಬರಹದಲ್ಲು ಸಾಹಿತ್ಯ ಕೃಷಿ ಮಾಡಿದ್ದಾರೆ‌. “ಆಲಿಕಲ್ಲು” ಎನ್ನುವ ಕವನ ಸಂಕಲನ, “ಬುಡ್ಡಿ ದೀಪದ ಬೆಳಕು” ಎನ್ನುವ ಪ್ರಬಂಧ ಸಂಕಲನ, “ದೇವಗಿರಿಯ ತಾರಾತಿಗಡಿ” ಎಂಬ ಕಾದಂಬರಿ, “ಹೋರಾಟದ ಹೆಜ್ಜೆಗಳು” ಮತ್ತು “ಎಲ್. ಕೃಷ್ಣಪ್ಪ” ಎಂಬ ಅಭಿನಂದನಾ ಗ್ರಂಥಗಳನ್ನುರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಇವರು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಪುಸ್ತಕ ಪ್ರಾಧಿಕಾರದಿಂದ ನೀಡುವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಕುವೆಂಪು ಹೆಸರಿನಲ್ಲಿ ನೀಡುವ ಪ್ರಶಸ್ತಿ ಹಾಗೂ ಸ್ವಾಭಿಮಾನದ ರತ್ನ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿ ಮತ್ತು ಗೌರವಗಳಿಗೆ ಭಾಜನರಾಗಿದ್ದಾರೆ. “ಬೀದಿ” ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಇವರದು.

ದುರದೃಷ್ಟವಶಾತ್ ರಸ್ತೆ ಅಪಘಾತದಲ್ಲಿ ತಮ್ಮ ಮಡದಿ ಗಂಗಾಂಬಿಕೆ ಹಾಗೂ ಮಕ್ಕಳಾದ ಕವಿತ ವರ್ಷ ಮಹಾಮನೆ ಮತ್ತು ಸಿಂಧು ಭಾರತಿ ಮಹಾ ಮನೆ ಅವರನ್ನು ಕಳೆದುಕೊಂಡ ಇವರು ಅವರು ನೆನಪಿಗಾಗಿ ಇವರೇ ಕಟ್ಟಿಸಿರುವ ಸಿವಗಂಗಾ ರಂಗಮಂದಿರದಲ್ಲಿ “ಕವಿತಾ ವಿತ್ ಕಾಫಿ” ಎಂಬ ಶೀರ್ಷಿಕೆಯಡಿಯಲ್ಲಿ ರಾಜ್ಯದ ವಿವಿಧ ಕವಿಗಳ ಕವನ ವಾಚನ ಮಾಡುವ ಮೂಲಕ ಬರಹಗಾರರಿಗೆ ಸ್ಫೂರ್ತಿಯನ್ನು ಮತ್ತು ‌ಪ್ರೋತ್ಸಾಹವನ್ನು ನೀಡುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ.

ಕವಿತೆಯ ಆಶಯ

“ಹುಟ್ಟು ಅನಿವಾರ್ಯ ಸಾವು ಖಚಿತ” ಎಂಬ ಆಧ್ಯಾತ್ಮಿಕ ಸ್ಪರ್ಶದ ನುಡಿಯು ಜೀವಸಂಕುಲಕ್ಕೆ ನಿಸರ್ಗದ ಪಾಠ ಬೋಧೆಯಾಗಿದೆ. ಮನುಷ್ಯ ಬದುಕಿದ್ದಾಗ ಚಿನ್ನದ ತಟ್ಟೆಯಲ್ಲಿ ಉಣ್ಣುತ್ತಾ, ರತ್ನಗಂಬಳಿಯ ಮೇಲೆ ನಡೆದಾಡುತ್ತಾ, ಕೈಗೊಬ್ಬ ಕಾಲ್ಗೊಬ್ಬ ಆಳು ಕಾಳುಗಳನ್ನು ಇಟ್ಟುಕೊಂಡು ಐಷಾರಾಮಿ ಬದುಕು ಸಾಗಿಸುತ್ತಾ, ಎಲ್ಲರನ್ನೂ ಎಲ್ಲವನ್ನೂ ತುಚ್ಚವಾಗಿ ಕಾಣುತ್ತಾ, ತಾನು ಕುಬೇರನ ಕುಲದವರೆಂದು ಮೆರೆಯುತ್ತಾ, ಇತರರನ್ನು ಜರಿಯುತ್ತಾ, ಅಂತಸ್ತು ಪ್ರತಿಷ್ಠೆಗಳ ಬೇಲಿ ಹಾಕಿಕೊಂಡು ಜನಸಾಮಾನ್ಯರಿಂದ ದೂರ ಉಳಿಯುವನು. ಹಾಗೆಂದ ಮಾತ್ರಕ್ಕೆ ಅವನು ಕರೋಡ್ಪತಿ ಎಂದು ವಿಧಿ ಅವನನ್ನು ಚಿರಂಜೀವಿ ಮಾಡುವುದಿಲ್ಲ. ಕಾಲನ ಕರೆಗೆ ಓಗೊಟ್ಟು ಅವನ ಆತ್ಮವು ದೇಹವನ್ನು ತ್ಯಜಿಸಲೇಬೇಕು‌ ಅದು ಎಲ್ಲರಂತೆ ಮೂರಡಿ ಆರಡಿ ಜಾಗದಲ್ಲಿ ಅಂತ್ಯ ಕಾಣಲೇಬೇಕು. ಇದು ಪ್ರಕೃತಿಯ ಸಮತೋಲನ ನಿಯಮ ಎನ್ನುವುದನ್ನು ಕವಿ ಈ ಕವಿತೆಯ ಮೂಲಕ ನಿರೂಪಿಸಿದ್ದಾರೆ. ಇದಕ್ಕೆ ಪೂರಕವಾಗಿ ಸಕಲ ಐಶ್ವರ್ಯ ಒಡೆಯನಾಗಿ ನವಕೋಟಿ ನಾರಾಯಣನಾಗಿ ಮೆರೆಯಬೇಕಿದ್ದ ಶ್ರೀನಿವಾಸ ನಾಯಕರು ಎಲ್ಲವನ್ನೂ ತ್ಯಜಿಸಿ ಪಾಂಡುರಂಗನಿಗೆ ತನ್ನನ್ನು ಅರ್ಪಿಸಿಕೊಂಡು ದಾಸಶ್ರೇಷ್ಠ ಪುರಂದರದಾಸರಾದ ಕಥೆ ಎಲ್ಲರಿಗೂ ಸ್ಫೂರ್ತಿಯಾಗಿದೆ.

ಶರಣರ ಸಾವನ್ನು ಮರಣದಲ್ಲಿ ಕಾಣು ಎಂಬ ಮಾತು ನಮ್ಮ ಸತ್ಕಾರ್ಯಗಳನ್ನು ನೆನಪಿಸುತ್ತದೆ. ಹುಟ್ಟಿದವರು ಸಾಯುತ್ತಾರೆ. ಸಾವಿಗೆ ಲಿಂಗಭೇದವಿಲ್ಲ. ಬಡವ‌ಬಲ್ಲಿದನೆಂಬ ಸ್ತರಗಳ ಜಂಜಾಟವಿಲ್ಲ. ಮೇಲು ಕೀಳೆಂಬ ಭಾವವಿಲ್ಲ. ಎಲ್ಲರನ್ನೂ ಎಲ್ಲವನ್ನೂ ಸಮಾನವಾಗಿ ಅಪ್ಪಿಕೊಳ್ಳುವುದು.

ಗೆಜ್ಜೆ ಕಟ್ಟಿ ಕುಣಿದವರಿಂದ ಹಿಡಿದು ಇನ್ನೊಬ್ಬರಿಗೆ ಕೆಡುಕು ಮಾಡುವ ಮನೋಸ್ಥಿತಿಯ ವ್ಯಕ್ತಿಗಳವರೆಗಿನ ಜನರು ಸಾವಿಗೆ ಖಾದ್ಯವೇ. ಎಷ್ಟು ಮೆರೆದವರು, ಕುಣಿದವರು, ಕುಡಿಯದವರು ಮಸಣಕ್ಕೆ ಹೆಣ ವಾಗುವುದನ್ನು ತಪ್ಪಿಸಲಾಗಿದು ಎಂಬ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಈ ಕವಿತೆ ಹೆಣೆದಿದ್ದಾರೆ.

ಪ್ರಕೃತಿಗೆ ಭೇದವಿಲ್ಲ ಪಂಚಭೂತಗಳಲ್ಲಿ ಭಿನ್ನತೆಯಿಲ್ಲ. ಎಲ್ಲರಿಗೂ ಒಂದೆ ಸಮಾನ ಪ್ರಾತಿನಿಧ್ಯತೆ ನೀಡುವಾಗ ಕ್ಷಣಿಕವಾದ ಈ ಚರ್ಮದ ತೊಗಲಿನ ಮೇಲೆ ನಮಗಿರುವ ವ್ಯಾಮೋಹವನ್ನು ಕವಿಯು ಕಾವ್ಯದಲ್ಲಿ ಬಿಡಿಸಿದ್ದಾರೆ.

ಮನುಷ್ಯನನ್ನು ಪೊರೆಯುವವನು ನಿಸರ್ಗ. ಅದನ್ನು ತನ್ನ ದುರಾಸೆಗೆ ಬಳಸಿಕೊಳ್ಳುತ್ತಾ, ಹಣಗಳಿಕೆ ಮಾಡುತ್ತಾ, ನಾವೇನು ಇಲ್ಲೇ ಶಾಶ್ವತ ನಿವಾಸಿಗಳಾಗಿ ಇರುತ್ತೇವೆ ಎಂಬ ಕುರುಡಿಗೆ ಕವಿ ಈ ಕವಿತೆಯಲ್ಲಿ ಚಾಟಿ ಬೀಸಿದ್ದಾರೆ. ನಮ್ಮವರನ್ನು ಕಳೆದುಕೊಂಡು ಮಸಣದಲ್ಲಿ ಗೋರಿ ಮಾಡಿ ಬಂದರು ಅಥವಾ ಸುಟ್ಟು ಬೂದಿಯನ್ನು ಗಂಗೆಯಲ್ಲಿ ತೇಲಿಬಿಟ್ಟರು ನೆನಪುಗಳು ಮಾತ್ರ ಮಣ್ಣು ಆಗುವುದಿಲ್ಲ ಎಂಬ ಬದುಕಿನ ಕಟು ಸತ್ಯವನ್ನು ಈ ಕವನವು ಹೊತ್ತು ತಂದಿದೆ.

ಕವಿತೆಯ ಶೀರ್ಷಿಕೆ

 ನೆನಪುಗಳು ಮಣ್ಣಾಗುವುದಿಲ್ಲ

ವ್ಯಕ್ತಿ ಹುಟ್ಟಿದ ಮೇಲೆ ಬೆಳೆಯುತ್ತ ಬದುಕುತ್ತಾ ಸಾಧನೆ ಮಾಡುತ್ತಾ ಸಾಗುತ್ತಾನೆ. ದಾರಿಯಲ್ಲಿ ಬರುವ ಕಷ್ಟಗಳನ್ನೆಲ್ಲ ಮೆಟ್ಟಿನಿಂತು ಆಶಾದಾಯಕವಾದ ಭರವಸೆ ಬದುಕು ಸಾಗಿಸುತ್ತಾನೆ. ಈ ಪಯಣದಲ್ಲಿ ಹಲವಾರು ಜನರೊಂದಿಗೆ ಬೆರೆಯುತ್ತಾನೆ ಬೆರಗುಗೊಳಿಸುತ್ತಾನೆ. ನಡೆಯುತ್ತಿರುತ್ತಾನೆ. ಅವನ ಬದುಕು ನೆನಪುಗಳ ಸುಂದರವಾದ ಸರಮಾಲೆ ಯಾಗಿರುತ್ತದೆ. ಒಳಿತು ಕೆಡುಕು, ಸರಿ ತಪ್ಪು, ಸುಖ ಸಂತೋಷ, ನೋವು ನಲಿವುಗಳ ಹೂರಣವಾಗಿರುತ್ತದೆ.

ಎಲ್ಲಾ ನೆನಪುಗಳು ಅವನ ಮೆದುಳೊಳಗೆ ಸುತ್ತಿಕೊಂಡು ಸದಾ ಕಾಡುತ್ತಿರುತ್ತವೆ. ನಮ್ಮ ಆತ್ಮೀಯರನ್ನು ನಾವು ಕಳೆದುಕೊಳ್ಳಬಹುದು, ಸಂಬಂಧಿಕರು ದೂರವಾಗಬಹುದು, ಆದರೆ ನಮ್ಮೊಂದಿಗಿನ ಅವರ ಅವಿಸ್ಮರಣೀಯ ಕ್ಷಣಗಳು ಮರೆಯಲು ಅಸಾಧ್ಯ.ಅವು ನಮಗೆ ಜೀವನದ ರಣರಂಗದಾಟದಲ್ಲಿ ಚುಚ್ಚಿ ಕೊಲ್ಲುತ್ತವೆ. ಅವರ. ದೇಹ ಇಹ ಲೋಕ ತ್ಯಜಿಸಿದರು ಅವರೊಂದಿಗಿನ ಭಾವನಾತ್ಮಕ ಮತ್ತು ಮಾನಸಿಕ ಭಾವಗಳು ನೆನಪುಗಳು ಮಾತ್ರ ಸಾಯುವುದಿಲ್ಲ.ಅವು ನಿತ್ಯ ಪ್ರಾರ್ಥನೆ ಗಳಾಗುತ್ತವೆ. ಈ ನಿಟ್ಟಿನಲ್ಲಿ

ಕವಿತೆಯ ಶೀರ್ಷಿಕೆ ನೆನಪುಗಳು ಮಣ್ಣಾಗುವುದಿಲ್ಲ ತುಂಬಾ ಚೆನ್ನಾಗಿ ಒಪ್ಪುತ್ತದೆ.

ಕವಿತೆಯ ವಿಶ್ಲೇಷಣೆ

ನೆನಪುಗಳು ಮಣ್ಣಾಗುವುದಿಲ್ಲ

ನನಗೇನು ಮರಣಗಳು ಹೊಸದಲ್ಲ

ಹೂತು ಬಂದಿದ್ದೇನೆ ನನ್ನವರನೇಕರನ್ನು

 ಅಜ್ಜಪಿರಿಯಜ್ಜರನ್ನು ಪಿಜ್ಜರನ್ನು

 ಕಣ್ಣು ತೆರೆಯುವ ಮುನ್ನವೇ ಮಣ್ಣಾದವರನ್ನು

 ಕರುಳ ಕುಡಿಯ ಕನಸುಗಳನ್ನು

ಇಲ್ಲಿ ಕವಿಯು ಮಸಣದ ಬಗ್ಗೆ ಪ್ರಸ್ತಾಪಿಸುತ್ತಾರೆ‌. ಇದು ಎಲ್ಲರಿಗೂ ಚಿರಪರಿಚಿತವಾದ ಸ್ಥಳ. ಹುಟ್ಟಿದ ಪ್ರತಿಯೊಂದು ಜೀವಿಯು ಮನೆ ಮಠ ಆಸ್ತಿ ಪಾಸ್ತಿಗಳನ್ನು ಸಂಪಾದಿಸಿಕೊಂಡು ವೈಭವೋಪೇತ ಬಂಗಲೆಗಳಲ್ಲಿ ಐಷಾರಾಮಿ ಬದುಕು ಸಾಗಿಸುವವರು. ಅಥವಾ ಒಂದೊತ್ತು ಉಣ್ಣಲು ಅನ್ನವಿಲ್ಲದೆ ಮಾನ ಮುಚ್ಚಿಕೊಳ್ಳಲು ಬಟ್ಟೆ ಇಲ್ಲದೆ ಮಳೆ ಚಳಿಗಾಳಿಗಳಿಂದ ರಕ್ಷಿಸಿಕೊಳ್ಳಲು ತಲೆ ಮೇಲೊಂದು ಸೂರುಯಿಲ್ಲದೆ ಸೊರಗುವರು. ಆದರೂ ಇಬ್ಬರೂ ಅತಿ ಚೆನ್ನಾಗಿ ಬಲ್ಲ ಜಾಗವಿದುವೆ ಈ ಸ್ಮಶಾನ.

ತನ್ನ ಮಗನನ್ನು ಬದುಕಿಸು ಎಂದು ತಾಯಿಯೊಬ್ಬಳು ಬೇಡಿ ಬಂದಾಗ ಬುದ್ಧ ಹೇಳಿದ “ಸಾವಿಲ್ಲದ ಮನೆಯಿಂದ ಸಾಸಿವೆ ತಾ  ನಿನ್ನ ಮಗನನ್ನು ಬದುಕಿಸುವೆ ಎಂದು” ಆಗಿ ತನ್ನ ಮಗನನ್ನು ಬದುಕಿಸಿಕೊಳ್ಳಲು ತಾಯಿ ಮನೆ ಮನೆಗೂ ಅಲೆದು ನಿಮ್ಮ ಮನೆಯಲ್ಲಿ ಸಾವಾಯಾಗಿದೆಯೇ ಎಂದು ಪರಿಶೀಲಿಸುತ್ತ ಬಂದಾಗ ಅಂತಿಮವಾಗಿ ಅವಳಿಗೆ ಸತ್ಯ ದರ್ಶನವಾಗುವುದು‌ ಜಗತ್ತಿನಲ್ಲಿ ಸಾವಿಲ್ಲದ ಮನೆ ಇಲ್ಲ. ಪ್ರತಿಯೊಂದು ಮನೆಯಲ್ಲಿ ಒಬ್ಬರಲ್ಲ ಒಬ್ಬರು ಮರಣ ಹೊಂದಿರುತ್ತಾರೆ ಎಂಬುದು.

ಹೌದು ಮನೆಯಲ್ಲಿ ಅಜ್ಜ ತಾತ ಅಜ್ಜಿ ಅಣ್ಣ ಅಮ್ಮ ಅಪ್ಪ ಚಿಕ್ಕಪ್ಪ ಚಿಕ್ಕಮ್ಮ ದೊಡ್ಡಪ್ಪ ದೊಡ್ಡಮ್ಮ ಹೀಗೆ ಯಾರಾದರೂ ಸಾವಿಗೆ ಶರಣಾಗಿದ್ದಾರೆ. ಆಗ ಅವರನ್ನು ಮನೆಯಲ್ಲಿ ಇಟ್ಟುಕೊಳ್ಳುವುದಿಲ್ಲ ಅವರಿಗೆ ಸಂಸ್ಕಾರ ಮಾಡುವುದು ಅನಿವಾರ್ಯ ಎಂಬ ವಿಚಾರ ವ್ಯಕ್ತಪಡಿಸುತ್ತಾ ಸ್ಮಶಾನ ನನಗೆ ಹೊಸದಲ್ಲ ಅನೇಕ ಬಾರಿ ಇಲ್ಲಿಗೆ ಬಂದಿದ್ದೇನೆ, ನೋಡಿದ್ದೇನೆ‌ ನನ್ನವರನ್ನು ಇಲ್ಲಿ ಹೂತು ಬಂದಿದ್ದೇನೆ ಎಂದು ಗದ್ಗರಿತರಾಗಿ ನೋವು ಹತಾಶೆಯನ್ನು ವ್ಯಕ್ತಪಡಿಸುತ್ತಾರೆ. ಅಜ್ಜ ಅಜ್ಜಿಯಂದಿರನ್ನು ಮಣ್ಣಲ್ಲಿ ಮುಚ್ಚಿ ಬಂದಿರುವೆ ಎನ್ನುವ ಮೂಲಕ ಬದುಕಿನ ಸಾರವನ್ನು ಬಿಂಬಿಸಿದ್ದಾರೆ.

ಇಲ್ಲಿ ಕವಿಯ ನೋವಿಗೆ ಮತ್ತೊಂದು ಕಾರಣವಿದೆ. ವಯೋಸಹಜ ಗುಣದಿಂದ ಸಾವು ಬಂದರೆ ಅದರಿಂದ ಸಹಜವೆನ್ನಬಹುದು. ಆದರೆ ಇನ್ನೂ ಸರಿಯಾಗಿ ಕಣ್ಣು ಬಿಡದ, ಜಗತ್ತನ್ನು ಸರಿಯಾಗಿ ನೋಡದ, ಸಹಸ್ರ ಕನಸುಗಳನ್ನು ನನಸು ಮಾಡಿಕೊಳ್ಳಲು ಹಂಬಲಿಸುವ ಮಕ್ಕಳಿಗೆ ಅನಿವಾರ್ಯವಾಗಿ ಸಾವು ಬಂದರೆ ಆ ಯಾತನೆಯನ್ನು ತಡೆದುಕೊಳ್ಳುವ ಶಕ್ತಿ ಮನುಷ್ಯನಿಗೆ ಇರುವುದಿಲ್ಲ. ಆದರೂ ವಿಧಿಯಾಟದ ಮುಂದೆ ನಮ್ಮದೇನೂ ನಡೆಯದು. ಅಚಾನಕ್ಕಾಗಿ ಘಟಿಸಿದ ಅಪಘಾತಗಳು ಅನಾರೋಗ್ಯಗಳು ನಮ್ಮನು   ಜರ್ಜರಿತರನ್ನಾಗಿಸುತ್ತವೆ. ಈ ಹೂವುಗಳು ಅರಳಿ ಸುಗಂಧ ಸೂಸುವ ಮುನ್ನ ಮುರುಟಿ ಮಣ್ಣು ಸೇರಿದಾಗ ಉಂಟಾಗುವ ನೋವು ಯಾತನೆ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಹಾಗಾಗಿಯೇ ಇಂತಹ ಘಟನೆಗಳು ಕವಿಗೆ ಅತಿ ದುಃಖವನ್ನು ಉಂಟು ಮಾಡುತ್ತವೆ. ಕರುಳ ಕುಡಿಗಳನ್ನು ಕಳೆದುಕೊಂಡ ಹೃದಯದ ಜಿಗುಪ್ಸೆಯ ಸಾಲುಗಳಾಗಿವೆ.

ದೊಡ್ಡವರು ಚಿಕ್ಕವರು ಹೆಣ್ಣು ಗಂಡೆಂಬ

 ಭೇದ ಭಾವವಿಲ್ಲ ಮಣ್ಣಿಗೆ

 ಧಣಿಕ ಧಣಿಗಳು ಶ್ರಮಿಕ ಶೋಷಿತರು

 ತರತಮವಿಲ್ಲ ಮೇಲು ಕೀಳೆಂಬುದಿಲ್ಲ ಭುವಿಗೆ

 ಸೋತು ಗೆದ್ದವರು ಗೆದ್ದು  ಸೋತವರು

 ಇಲ್ಲಿ ತಣ್ಣಗೆ ಮಲಗಿದ್ದಾರೆ

 ಮೆರೆದವರು ಮಣ್ಣಾಗಿದ್ದಾರೆ

 ಎಲ್ಲಾ ತೊರೆದವರು ಮಣ್ಣಾಗಿದ್ದಾರೆ

 ಸಮತೆಯನ್ನು ಸಾರುತ್ತದೆ ಮಣ್ಣು

ಕಣ್ಣು ತೆರೆಯುತ್ತದೆ ಮಣ್ಣು

ಈ ಮಣ್ಣು ಪ್ರಕೃತಿಯ ಕೊಡುಗೆ. ಇದು ಪಂಚಭೂತಗಳಲ್ಲಿ ಒಂದು. ಎಲ್ಲ ಜೀವರಾಶಿಗಳಿಗೂ ಜೀವವಿದ್ದಾಗಲು ಜೀವ ಹೋದ ನಂತರವೂ ಆಶ್ರಯ ನೀಡುತ್ತದೆ. ಯಾರಿಗೂ ಬೇಧಬಾವ ತೋರುವುದಿಲ್ಲ ಈ ಮಣ್ಣು. ಬಾಳಿ ಬದುಕಿದ ವಯಸ್ಸಾದವರನ್ನು, ಬಾಳು ಕಟ್ಟಿಕೊಳ್ಳಬೇಕಾದ ಹಸುಗೂಸು ಗೋಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ ಎಂಬ ವಿಚಾರವನ್ನು ಮಂಡಿಸಿದ್ದಾರೆ ಇದು ಕಹಿಯಾದ ನಿತ್ಯ ಸತ್ಯವಾಗಿದೆ.

ನಮ್ಮ ಸಮಾಜದಲ್ಲಿ ಹೆಣ್ಣು ಗಂಡುಗಳ ನಡುವೆ ತಾರತಮ್ಯವಿದೆ ಹೆಣ್ಣನ್ನು ಅಸಡ್ಡೆಯಿಂದ ನಿರ್ಲಕ್ಷದಿಂದ ಕಾಣುತ್ತಾರೆ. ಹೆಣ್ಣನ್ನು ಒಂದು ಹೊರೆ ಎಂದು ಭಾವಿಸುತ್ತಾರೆ .ಆದರೆ ಗಂಡು ಕುಲ ಪುತ್ರ, ವಂಶೋದ್ಧಾರಕರೆಂದು ವಿಶೇಷ ಮಾನ್ಯತೆಗಳನ್ನು ನೀಡುತ್ತಾರೆ. ಇದು ಮಾನವನ ಸಮತೆ ಎನ್ನುವ ಕವಿಗಳು ಪ್ರಕೃತಿಯ ಅಂಶವಾದ ಮಣ್ಣು ಮಾತ್ರ ಹೆಣ್ಣು ಗಂಡುಗಳು ಪರಿಗಣಿಸದೆ ಎಲ್ಲರನ್ನು ಒಂದೇ ತೆರನಾಗಿ ಹುದುಗಿಸಿ ಕೊಳ್ಳುತ್ತದೆ ಎನ್ನುತ್ತಾರೆ.

ಈ ಮಣ್ಣಿನಲ್ಲಿ ದರ್ಪದಿಂದ ಮೆರೆದ ಧಣಿಗಳು, ಶ್ರಮವಹಿಸಿ ದುಡಿದ ಶ್ರಮಿಕರು, ಯಾವುದೇ ತಾರತಮ್ಯವಿಲ್ಲದೆ ಒಂದೇ ಭೂಗರ್ಭದಲ್ಲಿ ಮಲಗುವರು. ಬದುಕಿದ್ದಾಗ ಇವರುಗಳ ನಡುವೆ ಅದೆಷ್ಟು ವ್ಯತ್ಯಾಸವನ್ನು ಮನುಜ ನಲ್ಲಿ ಅಂತರವನ್ನು ಕಾಯ್ದುಕೊಂಡಿದ್ದರು. ಈಗ ಅದಾವುದೋ ಈ ಮಣ್ಣಿನಲ್ಲಿ ನಡೆಯದು ಎಲ್ಲರು ಒಂದೇ ಭಾವದಲ್ಲಿ ಮುಂದೆ ಮಣ್ಣಲ್ಲಿ ಮಣ್ಣಾಗುವರು.

ತಮ್ಮದೇ ಅಧಿಕಾರದ ಹಮ್ಮಿನಲ್ಲಿ ಜಗತ್ತೇ ತನ್ನದೆಂದು ಮೆರೆದು, ಹಣ ಐಶ್ವರ್ಯಗಳಿದ್ದರೆ ಏನು ಬೇಕಾದರೂ ಗೆಲ್ಲುತ್ತೇನೆಂಬ ಬಿಂಕದಲ್ಲಿ ಭಿನ್ನಾಣ  ಮಾಡುವಾಗ ದೈವ ಸೃಷ್ಟಿಯ ಮುಂದೆ ತೆಪ್ಪಗಾಗಿ ತನ್ನದೇನಿದೆ ಈ ಜಗದಲ್ಲಿ ಎಂಬ ಅರಿವು ಮೂಡುವ ವೇಳೆಗೆ ಮಣ್ಣು ಸೇರಿರುತ್ತಾರೆ. ಈ ಲೋಕದಲ್ಲಿ ನಿರ್ಮೋಹಿಗಳಾಗಿ ಬದುಕುಳಿದ ಜನರು ಈ ನೆಲದಲ್ಲಿ ಲೀನವಾಗುತ್ತಾರೆ.

ಬದುಕಿದ್ದಾಗ ಆರ್ಭಟಿಸಿ ಹೋರಾಡಿದವರು, ಅದರಲ್ಲಿ ಗೆದ್ದು ಬೀಗಿದವರು, ಸೋತು ನಿರಾಶರಾದರ ನಡುವೆಯೂ ಭೇದವಿಲ್ಲ. ಇವರೆಲ್ಲ ಒಂದೇ ತೆರನಾಗಿ ಮಣ್ಣಾಗಿದ್ದಾರೆ. ಇಲ್ಲಿ ಎಲ್ಲರೂ ಜೀವ ಇದ್ದಾಗಿನ ದ್ವೇಷ ಅಸೂಯೆಗಳನ್ನು ಮರೆತು ತಣ್ಣಗೆ ಮಲಗಿದ್ದಾರೆ ಎನ್ನುವ ಸಮರ್ಥನೆ ಮೂಲಕ ಓದುಗರ ಮುಂದಿಡುತ್ತಾರೆ. ಬಾಳಿನ ಸಾರ ತಿಳಿಯದೆ  ನಿಸ್ಸಾರವಾಗಿ ಬದುಕಿದವರಿಗೆ ಕಣ್ಣು ತೆರೆಸುತ್ತದೆ ಈ ಮಣ್ಣು. ಎಂಬ ಕವಿ ಭಾವ‌ ಬಹಳ ನಾಜೂಕಾಗಿ ಮೂಡಿಬಂದಿದೆ.

ಆದರೂ ಕತ್ತಿ ಮಸೆಯುತ್ತೇವೆ

 ಕೆಣಕುತ್ತೇವೆ ಸೆಣೆಸುತ್ತೇವೆ

 ಸೆಡ್ಡು ಹೊಡೆದು ತೊಡೆ ತಟ್ಟಿ ತಟ್ಟಿ

 ಅಟ್ಟಹಾಸಗೈದ ಜಕ್ಕುಣಕ ಜಕ್ಕುಣಕ

 ಜಗ್ಗಿ ಜಗ್ಗಿ ಜಗ್ಗಿ ಕುಣಿ ಕುಣಿದು

 ಝೇಂಕರಿಸಿ ಕೇಕೆ ಹಾಕುತ್ತೇವೆ

 ಮದವೇರಿ ಹೂಂಕರಿಸಿ ಬೊಬ್ಬಿರಿಯುತ್ತೇವೆ

ಬದುಕೋ ಕ್ಷಣಿಕವೆಂದು ತಿಳಿದಿದ್ದರೂ ಪ್ರೀತಿ ಸ್ನೇಹ ಸೌಹಾರ್ದತೆಯಿಂದ ಕೂಡಿ ಬಾಳುವ ಮನಸ್ಸು ಮಾಡುವುದಿಲ್ಲ. ಪ್ರಾಣಿಗಳಲ್ಲಿರುವಷ್ಟು ಸಾಮರಸ್ಯವು ಮಾನವನಲ್ಲ. ಒಬ್ಬರ ಮೇಲೆ ಮತ್ತೊಬ್ಬರಿಗೆ ಹಗೆತನ,ಒಬ್ಬರನ್ನು ಮತ್ತೊಬ್ಬರು ಕಾಲು ಎಳೆಯುವುದು, ಚೆನ್ನಾಗಿದ್ದರೆ ಸಹಿಸಲ್ಲ, ಅವರ ಮೇಲೆ ಕತ್ತಿ ಮಸೆಯುತ್ತೇವೆ, ಕಾಲ್ಕೆರೆದು ಜಗಳಕ್ಕಿಳಿಯುತ್ತೇವೆ.ಕೆಣಕುತ್ತೇವೆ, ಅವರೊಂದಿಗೆ ಸೆಣಸಾಡುತ್ತೇವೆ, ಕೈಲಾಗದವರ ಮೇಲೆ, ಅಸಹಾಯಕರ ಮೇಲೆ ಅಟ್ಟಹಾಸ ತೋರಿ, ಕಾಲಿಗೆ ಗೆಜ್ಜೆ ಕಟ್ಟಿ ಕುಣಿದು ಕೇಕೆ ಹಾಕಿ ಸಂಭ್ರಮಿಸುತ್ತಾರೆ.

ಇದೆಲ್ಲ ಶಾಶ್ವತವೇ ನಾವೇನು ಇಲ್ಲೇ ಗೂಟ ಬಡಿಸಿಕೊಂಡು ಬದುಕುತ್ತೇವೆಯೆ .ನಮ್ಮ ಅವಧಿ ಮುಗಿದ ಕೂಡಲೇ ನಾವು ಅವನಲ್ಲಿ ಹೋಗಲೇಬೇಕು ಆದರೂ ಕೌರ್ಯ ಮೆರೆದು ರಕ್ತಪಾತದಲ್ಲಿ ಮುಳುಗಿ ಜನಸಾಮಾನ್ಯರಿಗೆ ತೊಂದರೆ ಕೊಟ್ಟು ರಕ್ತಸಿಕ್ತ ಸಮಾಜದ ಕಪ್ಪುಕಲೆಗಳನ್ನು ಸೃಷ್ಟಿಸುವುದು ಬೇಕೆ ಎಂಬ ಪ್ರಶ್ನೆಯು ಕವಿಗೆ ಬಹುವಾಗಿ ಕಾಡಿದೆ.

ಈ ಭೂಮಿಯ ಮೇಲೆ ಅನೇಕ ರಾಜಮಹಾರಾಜರು ಬದುಕಿ ಹೋಗಿದ್ದರೆ. ಸರ್ಕಾರಗಳು ಆಡಳಿತ ನಡೆಸಿವೆ. ಅಧಿಕಾರ ಇದ್ದರೇನು, ಇಲ್ಲದಿದ್ದರೇನು ಇದರ ಮೇಲೆ ತಮ್ಮ ಪ್ರಭುತ್ವವನ್ನು ಶಾಶ್ವತವಾಗಿ ಸ್ಥಾಪಿಸಲಾಗುತ್ತದೆಯೆ ಎಂಬ ಒಂದು ಸಣ್ಣ ಜಾಗೃತಿ  ಜನರಲ್ಲಿ ಮೂಡಿಸಬೆಕೆಂಬ ಮಹದಾಶಯ ಕವಿಯದಾಗಿದೆ.

ಸರ್ವಸ್ವವನ್ನು ನಾಶ ಮಾಡಿದವರು

 ತಿಂದುಂಡು ತೇಗಿದವರು

 ಬೀಡಾಡಿ ಭೋಗಿಗಳು

 ಗೆದ್ದೆವೆಂದು ಗರ್ವದಿಂದ ಬೀಗಿದವರು

 ಸರ್ವವನ್ನು ತೊರೆದು ಬರಲೇಬೇಕು

ತಾನು ಮಾತ್ರ ಬದುಕಬೇಕೆಂದು ಸ್ವಾರ್ಥಕ್ಕೆ ಬಿದ್ದು, ಪ್ರಕೃತಿಯನ್ನು ಕೊಳ್ಳೆಹೊಡೆದು, ಸರ್ವಸ್ವವನ್ನು ಲೂಟಿಮಾಡಿ ಹಣ ಗಳಿಸಿದವರೇನು ಧರೆಯ ಮೇಲೆ ಶಾಶ್ವತವಾಗಿ ಉಳಿಯುವ ಜನರಿಗೆ ಸೇರಬೇಕಾದದ್ದು, ಸೌಲಭ್ಯಗಳನ್ನು ಕೊಳ್ಳೆಹೊಡೆದು ಎಲ್ಲರ ಪಾಲನ್ನು ತಾವೆ ತಿಂದು ತೇಗಿದವರು ಬಹಳ ಜನರಿದ್ದಾರೆ ಅವರೆಲ್ಲ ಈ ಭುವಿಯಲ್ಲಿ ಝಂಡಾ ಹೂಡಲಾಗದು.

ತನ್ನ ಬದುಕಿಗೆ ಸಾಕಷ್ಟು ಇದ್ದರೂ ಮತ್ತಷ್ಟು ಬೇಕು, ಮಗದಷ್ಟು ಬೇಕೆಂದು,ಲೋಭಕ್ಕೆ ಒಳಗಾಗಿ ಕೂಡಿಟ್ಟವರು, ಎಲ್ಲವನ್ನು ನಾವೇ ಗೆದ್ದೆವೆಂದು ನಮಗಾರು ಸರಿಸಾಟಿ ಇಲ್ಲವೆಂದು ಜಂಬ ಪಡುವವರು, ತಾವು ಹೂತಿಟ್ಟ ಐಶ್ವರ್ಯ ಸುಖ ಭೋಗಗಳನ್ನು ತನ್ನೊಂದಿಗೆ ಒಯ್ಯಲಾರರು. ಈ ಬದುಕಿಗೆ ಈ ಜನ್ಮದಲ್ಲಿ ಆ ಭಗವಂತ ಎಷ್ಟನ್ನು ನಮ್ಮ ಪಾಲಿಗೆ ನೀಡುತ್ತಾನೆ ಅಷ್ಟೇನ್ನು ಅನುಭವಿಸಬೇಕು.

ತನ್ನ ದೇಹವನ್ನು ಉಸಿರು ತೊರೆದು ಹೋಗುವಾಗ ತನ್ನ ಸಂಪಾದನೆ, ಗಳಿಸಿದ್ದು ಎಲ್ಲವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುವುದು ಅಸಾಧ್ಯ ಎನ್ನುವುದು ತಿಳಿದು ವಿಷಯ. ಎಲ್ಲವನ್ನು ಇಲ್ಲೇ ಬಿಟ್ಟಿ ಬಂದ ದಾರಿಗೆ ಸುಂಕವಿಲ್ಲವೆಂದು ಬರಿಗೈಲಿ ಹೋಗಬೇಕು. ಇದಕ್ಕೆ ನಾವು ಅಲೆಕ್ಸಾಂಡರನನ್ನು ಇಲ್ಲಿ ಸ್ಮರಿಸಬಹುದು. ಅಲೆಕ್ಸಾಂಡರ್ ಇಡೀ ವಿಶ್ವವನ್ನೇ ಗೆಲ್ಲುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದು ಅದಕ್ಕಾಗಿ ದಿಗ್ವಿಜಯದ ಮೇಲೆ ದಿಗ್ವಿಜಯವನ್ನು ಸಾಧಿಸುತ್ತಾ, ಹಲವಾರು ಸಾವು ನೋವುಗಳಿಗೆ ಕಾರಣೀಭೂತನಾದ. ರಾಜ್ಯ ಕೋಶಾದಿ, ವಜ್ರ ವೈಡೂರ್ಯ ಮುತ್ತುರತ್ನ ಹಣಗಳನ್ನು ಸಂಪಾದಿಸಿದನು. ಆದರೆ ಅವನು ಸಾಯುವಾಗ ಅವನಿಗೆ ಜೀವನದ ನಿಜವಾದ ಸಾರ ಅರ್ಥವಾಯಿತು. ಅದಕ್ಕಾಗಿ ಅವನು ನಾನು ಇಷ್ಟೆಲ್ಲಾ ಸಾಧಿಸಿದರೂ ಹೋಗುವಾಗ ಬರಿಗೈಯಲ್ಲಿ ಹೋಗುತ್ತೇನೆ ಎಂಬ ಸಂದೇಶವನ್ನು ಬಿಟ್ಟು ಸನ್ಮಾರ್ಗದಲ್ಲಿ ನಡೆಯಲು ಶಾಂತಿಯನ್ನು ಅನುಸರಿಸಲಿ ಎಂದು ಅವನನ್ನು ಹೊತ್ತೊಯ್ಯುವ ಶವಪೆಟ್ಟಿಗೆಯಿಂದ ಎರಡು ಕೈಗಳು ಮೇಲೆ ಕಾಣುತ್ತಿರಲಿ. ಅದು ಜನರಿಗೆ ಅರಿವಾಗಬೇಕು. ಅಷ್ಟೆಲ್ಲಾ ಸಂಪಾದಿಸಿದವನು ಕೊನೆಗೆ ಬರಿಗೈಯಿಂದ ಹೋಗುತ್ತಿದ್ದಾನೆ ಎಂಬ ಅರಿವು ಜನತೆಗೆ ಆಗಲಿ ಎಂಬ ವಿಚಾರಧಾರೆಯನ್ನು ನಾವಿಲ್ಲಿ ಸ್ಮರಿಸಬಹುದು.

ಇಲ್ಲದವನು ಇರುವವನು ಮೆರೆದವನು ತಿರಿದುಂದವನು

ಬೋನಾಸಿ ಹಿಡಿದು ಬೇಡಿದವರು

 ಎಲ್ಲರಿಗೂ ಇಲ್ಲಿ ಮಣ್ಣಲ್ಲಿ

 ಸದ್ದಿಲ್ಲದಂತೆ ಮಲಗಬೇಕು

ಮಣ್ಣು ಸಮಾನತೆಯ ಸಾರುತ್ತದೆ

ಈ ಮಣ್ಣಿಗೆ ಚಿನ್ನವು ಒಂದೇ ಕಬ್ಬಿಣ ಒಂದೆ. ಎರಡನ್ನು ತನ್ನ ಆಳದಲ್ಲಿ ಹುದುಗಿಸಿಕೊಂಡಿದೆ. ಅದರಂತೆ ಏನು ಇಲ್ಲದ ನಿರ್ಗತಿಕರು, ಸಕಲೈಶ್ವರ್ಯ ಗಳನ್ನು ಪಡೆದು ರಾಜಯೋಗ ನಡೆಸುತ್ತಾ ಮೃಷ್ಟಾನ್ನ ಭೋಜನ ಮಾಡುತ್ತ ಬದುಕಿದವರಿಬ್ಬರೂ ಈ ಮಣ್ಣಿಗೆ ಸೇರಿ ಒಟ್ಟಿಗೆ ಮಲಗಬೇಕು.

ಎಲ್ಲಾ ಸೌಲಭ್ಯಗಳನ್ನು ಪಡೆದು ಬದುಕು ಅನುಭವಿಸಿ ಬಿಳು ಸವೆಸಿದವನು, ತನ್ನದೇನು ಇಲ್ಲದೆ  ಉಳ್ಳವರಿಂದ ಬೇಡಿ ತಿಂದು ಬದುಕಿದವನು, ಮನೆಮನೆ ತಿರುಗಿ ಉಂಡವನು ಎಲ್ಲರೂ ಇದೇ ಮಣ್ಣಲ್ಲಿ ಮಲಗಬೇಕು ಎನ್ನುತ್ತಾರೆ ಕವಿ.

ನಮ್ಮಗಳ ನಡುವೆಯೇ ವ್ಯತ್ಯಾಸಗಳಿದ್ದರೂ, ಅಂತರ ಗಳಿದ್ದರೂ ಅವೆಲ್ಲ ಮನುಜ ನಿರ್ಮಿತ ಕಟ್ಟಳೆಗಳಷ್ಟೇ. ಆದರೆ ನಿಸರ್ಗ ಎಲ್ಲರನ್ನು ಒಂದೇ ತೆರನಾಗಿ ಸ್ವೀಕರಿಸುತ್ತದೆ ಎಲ್ಲರನ್ನು ಸಮಾನವಾಗಿ ಕಾಣುತ್ತದೆ. ಅದಕ್ಕೆ ನಮ್ಮಂತೆ ಜಾತಿಭೇದ ಗೊತ್ತಿಲ್ಲ, ಲಿಂಗತಾರತಮ್ಯ ಮಾಡಲ್ಲ, ಸಿರಿವಂತ ಬಡವನೆಂದು ವಿಂಗಡಿಸಿಲ್ಲ, ಎಲ್ಲರನ್ನು ಒಂದೇ ಎಂಬ ಭಾವದಲ್ಲಿ ಕಂಡು, ಎಲ್ಲರನ್ನು ಒಂದೇ ಮಣ್ಣಲ್ಲಿ ಹುದುಗಿಸುತ್ತದೆ ಎನ್ನುವ ಸಂದೇಶವನ್ನು ಈ ಮೂಲಕ ಕವಿತೆಯಲ್ಲಿ ಸಾರಿದ್ದಾರೆ.

ಕವಿತೆಯಲ್ಲಿ ನಾ ಕಂಡ ಕವಿ ಬಾವ

ಒಬ್ಬ ಕವಿಯ ಮನೋಗತವು ಅವರ ಕಾವ್ಯಗಳಲ್ಲಿ ಅಭಿವ್ಯಕ್ತವಾಗುತ್ತದೆ. ಈ ಕವಿತೆಯಲ್ಲಿ ಕವಿಯ ಸಂವೇದನಾಶೀಲ ಗುಣವು ಜೀವನಾನುಭವವೂ ಕಾವ್ಯಧಾರೆ ಯಾಗಿ ಹರಿದು ಓದುಗರನ್ನು ತಾತ್ವಿಕ ಚಿಂತನೆಯಲ್ಲಿ ಮುಳುಗಿಸುತ್ತದೆ. ಇಲ್ಲಿ ಕವಿಯ ಬದುಕಿನ ವಿವಿಧ ಮಜಲುಗಳನ್ನು, ತನ್ನ ಉಳಿವಿಗಾಗಿ ಮನುಷ್ಯ ಮಾಡುವ ಹಿಂಬಾಗಿಲಿನ ಹೋರಾಟವನ್ನು ಕವಿತೆಯಾಗಿ ಸಿದ್ದಾರೆ‌.

ಇಲ್ಲಿ ಕವಿಗೆ ಅಧ್ಯಾತ್ಮಿಕ ಆಲೋಚನೆ ಬಹಳ ಕಾಡಿದೆ ಎಷ್ಟೇ ಹೋರಾಡಿದರು ಮನುಜ ಕೊನೆಗೆ ಮಣ್ಣಿಗೆ ಹೋಗುವುದು ಎಂಬ ಕಹಿಸತ್ಯವನ್ನು ಜನತೆ ಮುಂದೆ ಇಡುತ್ತಾರೆ. ಈ ಧರೆಯನ್ನು ತೊರೆದು ಹೋಗುವ ಮುನ್ನ ಏನಾದರೂ ಬಿಟ್ಟು ಹೋಗಬೇಕು. ಬಿಟ್ಟು  ಹೋಗಬೇಕಾಗಿರುವುದು ಮುಂದಿನ ತಲೆಮಾರಿಗೆ ಉಪಯೋಗಕಾರಿ ಆಗಲಿ ಅಥವಾ ಮಾರ್ಗದರ್ಶಿ ದೀವಿಗೆಯಾಗಲಿ ಎಂಬ ಸಂದೇಶ ಕವಿತೆಯ ಮೂಲಕ ನೀಡಿದ್ದಾರೆ.

ಇವರ ಅನುಭವ ಸಾಂದ್ರತೆಯ ಹರಳನ್ನು ಓದುವ ಸುಲಭವಾಗಿ ಗುರುತಿಸಬಹುದು. ಇಲ್ಲಿ ಕವಿ ಒಂದೊಂದು ಚರಣಗಳಲ್ಲೂ ಒಂದೊಂದು ತಪ್ಪುಗಳನ್ನು ತಿದ್ದುತ್ತಾ ಜೀವನಕ್ಕೆ ಮುಖ್ಯವಾಗಿ ಬೇಕಾಗಿರುವ ಹುಡುಕಾಟವನ್ನು ನಡೆಸುತ್ತಾರೆ. ತಾತ್ವಿಕತೆ ಸೈದ್ಧಾಂತಿಕತೆ ಆಧ್ಯಾತ್ಮಿಕತೆ ಇಲ್ಲದ ಜೀವನ ಭ್ರಮೆ ಇದ್ದಂತೆ ಎನ್ನುತ್ತಾರೆ.

ಇಲ್ಲಿ ಕವಿ ಮಾನವನ ಗುಣಗಳಲ್ಲಿ ಸಹಜತೆಯನ್ನು ಬಯಸುತ್ತಾರೆ. ನೈತಿಕ ಮೌಲ್ಯಗಳಿಗೆ ಜೀವ ತುಂಬುವ ಪ್ರಯತ್ನ ಸಾಗಿದೆ.ಆ ಮೂಲಕ ಸಮಾಜವನ್ನು ಸ್ವಸ್ಥವಾಗಿ ಇಡಲು ಆರೋಗ್ಯಕರ ವೇದಿಕೆಯನ್ನು ಬದುಕಿಗೆ‌ ಒದಗಿಸುವ ದಾರಿಯಲ್ಲಿ ಸಾಗಿದ್ದಾರೆ. ಪ್ರತಿಯೊಬ್ಬ ಮನುಷ್ಯನು ತಿಳಿದು ಅನುಕರಿಸಬೇಕಾದ ಅನುಕರಣೀಯ ನೀತಿಬೋಧೆಯನ್ನುಕವಿ ತನ್ನ ಅರ್ಥಪೂರ್ಣ ಕಾವ್ಯಾಭಿವ್ಯಕ್ತಿ ಮೂಲಕ ಹೊರ ಹಾಕಿದ್ದಾರೆ.

ಇಲ್ಲಿ ಕವಿಯ ಅದ್ಭುತವಾದ ಶಬ್ದಚಮತ್ಕಾರಿಕೆಯ ತಂತ್ರಗಳ ಮೂಲಕ ಮಾರ್ಮಿಕವಾಗಿ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮನುಜನ ತಪ್ಪುಗಳನ್ನು ತಿದ್ದಲು ಹೊರಟಿದ್ದಾರೆ. ನಮ್ಮ ಬದುಕು ಗಟ್ಟಿಯಾದ ಸತ್ವಯುತವಾದ ಕಾಳುಗಳನ್ನು ಹೊತ್ತಿರುವ ಬತ್ತದ ಪೈರಾಗಬೇಕೆ ವಿನಃ ಜೊಳ್ಳುಗಳಿಂದ ತುಂಬಿ ಬಣಗುಡುವ ಗದ್ದೆ ಆಗಬಾರದೆಂದು ಕಿವಿಮಾತು ಹೇಳಿದ್ದಾರೆ. ಮೇಲ್ನೋಟಕ್ಕೆ ಅವರು ಹೇಳಿರುವ ಅಂಶಗಳ ಪಾಲನೆ ವಾಸ್ತವಿಕ ಬದುಕಿನಲ್ಲಿ ಪಾಲಿಸುವುದು ಅಸಾಧ್ಯವೆನಿಸಿದರೂ, ಕಠಿಣ ವೆನಿಸಿದರೂ ಅದರ ಕಾರ್ಯ ರೂಪದಿಂದ ದೊರೆವ ಫಲಿತ ಯೋಗ್ಯ ವ್ಯಕ್ತಿಗಳ ನಿರ್ಮಾಣಕ್ಕೆ ನಾಂದಿ ಆಗುತ್ತದೆ. ಎನ್ನುವುದರಲ್ಲಿ ಸಂಶಯವಿಲ್ಲ.

“ಸಾಹಿತ್ಯದಿಂದ ಸಮಾಜ ಸುಧಾರಣೆ ಸಾಧ್ಯವೇ ಎಂದು ನಮಗೆ ಅನಿಸಬಹುದು, ಸಾಹಿತ್ಯದಿಂದ ದಿಡೀರನೆ ಸಮಾಜ ಸುಧಾರಣೆ ಸಾಧ್ಯವಿಲ್ಲ ಆದರೆ ಆ ಸುಧಾರಣೆಗೆ ಅಗತ್ಯ ಭಾವ ಪರಿಸರವನ್ನು ಸಾಹಿತ್ಯ ನಿರ್ಮಿಸಬಹುದು”ಕಯ್ಯಾರ ಕಿಞ್ಞಣ್ಣ ರೈ ಮಾತು ಖಂಡಿತ ಸಾಹಿತ್ಯದಿಂದ ಎಲ್ಲವೂ ಸಾಧ್ಯ ಎಂಬುದನ್ನು ಸಾಬೀತು ಪಡಿಸುತ್ತದೆ.

ಮಾನವನ ಕ್ರೌರ್ಯ ಸ್ವಾರ್ಥ ಆತ್ಮವಂಚನೆ ಮೋಸ ಅಪ್ರಮಾಣಿಕತೆ ಗೋಸುಂಬೆತನ ಮುಖವಾಡ ಮುಂತಾದವುಗಳನ್ನು ಮೆಟ್ಟಿನಿಂತು ಅದರಾಚೆಗಿನ ಹೊಸ ಜಗತ್ತನ್ನು ಕಾಣಲು ಇವರ ಕವನ ಕರೆ ನೀಡುತ್ತದೆ.  ಮನುಜನ ಗುಣಗಳನ್ನು ಒಡೆದು ಕಟ್ಟುವ ಮೂಲಕ ನವ ಸಮಾಜ ನಿರ್ಮಾಣದ ಕನಸಿನ್ನು ಕವಿ ಕಾಣುತ್ತಾರೆ. ಮಂಜುಗಡ್ಡೆಯಂತ ತಂಪಾದ  ಬರಹದ ಉದ್ದೇಶ ತಣ್ಣನೆಯ ಗುಣಗಳನ್ನು ಪ್ರತಿಪಾದಿಸುವುದು ಆಗಿದೆ.

ಒಟ್ಟಾರೆ ಸಮಾಜ ಸುಧಾರಣೆಯ ಜೊತೆ ಜೊತೆಗೆ ವೈಯಕ್ತಿಕವಾದ ಮನುಷ್ಯನನ್ನು ಚಾರಿತ್ರಿಕಗೊಳಿಸಿ ಸನ್ಮಾರ್ಗದಲ್ಲಿ ನಡೆಸುವ ಮೂಲಕ ಬದುಕಿಗೊಂದು ಅರ್ಥ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನಕ್ಕೆ ಕವಿ ಅಭಿನಂದಿಸಲೇಬೇಕು. ಕನಸುಗಳು ನನಸಾಗಿ ಮನುಷ್ಯನಲ್ಲಿ ಸದ್ಗುಣಗಳ ಫಸಲು ನೀಡಲಿ ಎಂದು ಆಶಿಸೋಣ.

ಸ್ನೇಹಿತರೆ ನಿಮಗೆ ಈ ಕವಿತೆ‌ಯ ವಿಶ್ಲೇಷಣೆ ಇಷ್ಟವಾಗಿದೆ ಎಂದು ಭಾವಿಸಿ ನನ್ನ ಮುಂದಿನ ಕವನದ ಕಡೆಗೆ ತೆರಳುವೆ. ನಿರೀಕ್ಷಿಸುತ್ತಿರಿ ಹೊಸ ಕವಿತೆಯ ರಸದೂಟವನ್ನು . ಅಲ್ಲಿಯವರೆಗೂ ಎಲ್ಲರಿಗೂ ನಮಸ್ಕಾರ .


ಅನುಸೂಯ ಯತೀಶ್

ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ

Leave a Reply

Back To Top